ಪುಸ್ತಕ ಸಂಗಾತಿ
ಶೋಭಾ.ಬಿ
ಡಾ. ನೀ. ಗೂ ರಮೇಶ್
“ಗಾಂಧೀಮರ”
ನಿರಾಶ್ರಿತ ಮನಗಳಿಗೆ ನೆರಳನ್ನು ನೀಡುವ ಗಾಂಧೀಮರ


ಡಾ. ನೀ. ಗೂ ರಮೇಶ್ ಅವರ ಗಾಂಧೀಮರ ಕವಿತೆಯು ಜಗತ್ತಿಗೆ ಗಾಂಧಿ ತತ್ವಗಳ ಅವಶ್ಯಕತೆಯನ್ನು ತನ್ನೊಳಗೆ ಬಹಳ ಗೌಣವಾಗಿಸಿಕೊಂಡು ಸಹೃದಯನ ಚಿತ್ತವನ್ನು ಹಿಡಿದಿಟ್ಟುಕೊಳ್ಳುವ ಒಂದು ಕವಿತೆ. ಶೀರ್ಷಿಕೆಯೇ ನಮ್ಮನ್ನು ಹಲವಾರು ಚಿಂತನೆಗಳಿಗೆ ಒಳಪಡುವಂತೆ ಮಾಡುತ್ತದೆ. ಹಾಗೆಯೇ ಗಾಂಧೀಮರ ಕೃತಿಯೂ ಕೂಡ ವಿವಿಧ ಶೀರ್ಷಿಕೆಗಳ ಕವಿತೆಗಳ ರಸದೌತಣವನ್ನು ಉಣಬಡಿಸುತ್ತದೆ. ಕಾವ್ಯ ಎನ್ನುವುದು ಕವಿಯ ಸುಪ್ತಭಾವಗಳ ಅಕ್ಷರ ರೂಪದ ಅಭಿವ್ಯಕ್ತಿ. ಭಾವಗಳು ಕೇವಲ ಭಾವನಾತ್ಮಕವಾದವುಗಳಲ್ಲ ಅಥವಾ ವೈಯಕ್ತಿಕ ಪ್ರೀತಿ ಪ್ರೇಮದ ಕಾವ್ಯಗಳಲ್ಲ. ಅವು ಸಮಾಜಮುಖಿಯೂ ಆಗಿರಬೇಕು. ಅಂತಹ ಅಮೂಲ್ಯವಾದ ಸಮಾಜದ ಓರೆಕೋರೆಗಳಿಗೆ ಕೈಗನ್ನಡಿಯಂತಿವೆ ಗಾಂಧೀಮರ ಕೃತಿಯಲ್ಲಿನ ಕವನಗಳು. ಇದರಲ್ಲಿರುವ ೭೭ ಕವಿತೆಗಳು ಒಂದಕ್ಕೊAದು ವಿಭಿನ್ನ ಚಿತ್ರಣವನ್ನು ನೀಡುತ್ತವೆ. ಇದರ ಮೂಲಕ ಡಾ. ನಿ ಗೂ ರಮೇಶ್ ಅವರ ಕಾವ್ಯ ಪ್ರತಿಭೆಯು ಉತ್ತುಂಗಕ್ಕೇರಿದೆ.
ಇವರ ಗಾಂಧೀಮರ ಕವಿತೆಯಲ್ಲಿಯೇ ಗುಲಾಮಗಿರಿಯಿಂದ ಭಾರತವನ್ನು ತಪ್ಪಿಸಲು ಮಹಾತ್ಮರ ಅವಶ್ಯಕತೆ ಎಷ್ಟಿತ್ತು , ಮಹಾತ್ಮರ ಹೆಮ್ಮರದ ನೆರಳು ದೇಶದಗಲ ಹರಡಿ ಶಾಂತಿ, ಅಹಿಂಸೆಗಳಿAದ ಹಾರಾಡುತ್ತಿದ್ದ ಸ್ವಾತಂತ್ರದ ಹಕ್ಕಿಯು ದೇಶಕ್ಕೆ ಬಿಡುಗಡೆಯ ಸನ್ಮಾನವನ್ನು ಸಲ್ಲಿಸಿದ ಗಾಂಧಿಯ ಅವಶ್ಯಕತೆ ಎಷ್ಟಿತ್ತು ಎನ್ನುವುದನ್ನು ಬಿಂಬಿಸುವ ಕವನವಾಗಿದೆ. ಅದೇ ರೀತಿ ಆ ಗಾಂಧಿಮರದ ಬುಡಕ್ಕೆ ಕೋವಿಯ ಕೊಡಲಿಯಿಟ್ಟು ಭಾವೈಕ್ಯತೆಯ ಭಾವ ಕೆರಳಿಸಿ ಜಗ ಮರುಗುವಂತೆ ಮಾಡಿದ್ದನ್ನು ಕಣ್ಣಿನ ಮುಂದೆ ಕಟ್ಟಿಡುತ್ತದೆ ಈ ಕವನ ಹಾಗೆಯೇ ಕೆಳಗುರುಳಿದರೂ ಅಂತಹ ಎಷ್ಟೋ ಗಾಂಧಿಮರಗಳು ಪಸರಿಸಿದರೂ ಮರಗಳನ್ನು ಉರುಳಿಸುವ ಪ್ರಯತ್ನ ಮಾತ್ರ ನಿಲ್ಲುತ್ತಿಲ್ಲ ಎನ್ನುವ ವಿಷಾದ ಕಾವ್ಯದಲ್ಲಿ ಅಡಗಿದೆ.
ಹಾಗೆಯೇ ಸಹೃದಯನನ್ನು ಸೆಳೆಯುವ ಹಲವು ಕವನಗಳು ಇಲ್ಲಿವೆ.
ಬೇಲಿ ಹಾಕಬೇಡಿ
ಮಹಾಚೇತನಗಳಿಗೆ
ಜಾತಿ, ಮತ, ಧರ್ಮಗಳೆಂಬ
ಇದ್ದತೆಯೇ ಇರಲಿ ಬಿಡಿ
ಹೇಗೆ ಇದ್ದರೂ
ಅವು ದೀಪ ಸ್ತಂಭ
ಇಂದು ಜಗತ್ತು ಎಷ್ಟೇ ಅಬಿವೃದ್ಧಿ ಹೊಂದುತ್ತಿದ್ದರೂ ಸಹ ಸಾಧಕನ ಸಾಧನೆಯನ್ನಷ್ಟೇ ಪುರಸ್ಕರಿಸದೆ ಅವನ ಜಾತಿ ಧರ್ಮವನ್ನು ಹಿಡಿದು ಜರಿಯುವುದರ ವಿರುದ್ಧ ಧ್ವನಿ ಇದಾಗಿದೆ.
ಕಿಟಕಿ ಮತ್ತು ಕನ್ನಡಿ ಕವಿತೆಯಲ್ಲಿ
ಈ ನಾಡಿಗೊಂದು ಕಿಟಕಿ ಇದೆ
ಭಾಷೆ ಗಡಿ ಗೋಡೆಗಳ ಕಟ್ಟಿ ಬೀಗಲು
ಇರುವ ಕಿಟಕಿಯ ಮುಚ್ಚಿ
ಧರ್ಮ ಜಾತಿಗಳ ಬೇರು ಹುಡುಕಲು
ಕತ್ತಲಲ್ಲಿ ಕಣ್ಣು ಕಟ್ಟಿ
ಗೌಪ್ಯವಾಗಿ ಗುದ್ದಾಡಲು
ಎನ್ನುವ ಸಾಲುಗಳಲ್ಲಿ ಮತ್ತೆ ಮತ್ತೆ ಜಾತಿಧರ್ಮಗಳ ಬಗೆಗೆ ಜಗತ್ತಿನ ನಿಲುವನ್ನು ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಇಂದು ಹಸುಳೆಗಳ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು ಹತ್ತಿಕ್ಕಲು, ಅಲ್ಪ ಸುಖಕ್ಕಾಗಿ ಅಡ್ಡದಾರಿಗಳನ್ನು ಹುಡುಕುತ್ತಿರುವ ಜನರನ್ನು ಬದಲಿಸಲು ಹೊಸ ಕಿಟಕಿಯೊಂದು ಬೇಕಾಗಿದೆ. ಅದಕ್ಕಾಗಿ ನಾನೇಒಂದು ಕಿಟಕಿಯಾಗಬೇಕಾಗಿದೆ ಎನ್ನುವ ಕವಿಯ ಕಾಳಜಿ ನಿಜಕ್ಕೂ ಶ್ಲಾಘನೀಯವಾದದ್ದು.
ಹಾಗೆಯೇ ಕ್ಷಮಿಸಿ ಬಿಡಿ ಬಸವಣ್ಣ ಕವಿತೆಯಲ್ಲಿ
ಲೋಕದ ಡೊಂಕು ತಿದ್ದಿ
ಸಮತೆಯ ಕನಸು ಬಿತ್ತಿ
ಎಚ್ಚರಿಸಿದ ನುಡಿ ಕಿಡಿಗಳು
ಕಪಟಭಕ್ತನ ಸರಕಾದವು!
ಎನ್ನುತ್ತಾ ಕವಿಯು ಬಸವ ತತ್ವವನ್ನು ಜನತೆ ತಪ್ಪಾಗಿ ಅರ್ಥೈಸಿಕೊಂಡಿರುವ ಜನತೆಯ ಪರವಾಗಿ ಬಸವಣ್ಣನಲ್ಲಿ ಕ್ಷಮೆಯನ್ನು ಯಾಚಿಸಿದ್ದಾರೆ. ನಮಗೇನೂ ಅನಿಸುವುದೇ ಇಲ್ಲ ಕವಿತೆಯಲ್ಲಿ
ದೇವರಿಗಿಂತ ಪೂಜಾರಿಯ ನಂಬಿ
ಮಣ್ಣಿಗಿಂತ ಮಾರುಕಟ್ಟೆಯ ನಂಬಿ
ಆಹಾರಕ್ಕಿಂತ ಔಷಧಿಯ ನಂಬಿ
ನೆಮ್ಮದಿ ಕಳೆದುಕೊಳ್ಳುತ್ತೇನೆ
ನಮಗೇನೂ ಅನಿಸುವುದೇ ಇಲ್ಲ!
ಎನ್ನುತ್ತಾ ಇಂದಿನ ಜನರ ಮನಸ್ಥಿತಿಯನ್ನು ಇಡೀ ಕವಿತೆಯಲ್ಲಿ ಅರ್ಥಪೂರ್ಣವಾಗಿ ಹೆಣೆದಿದ್ದಾರೆ. ಜಗತ್ತಿನಲ್ಲಿ ಅಕ್ರಮ ಅತ್ಯಾಚಾರ, ಕೊಲೆ ಸುಲಿಗೆ ಮೋಸ ಮಾಡಿದವರನ್ನೇ ಮೆರೆಸುವವರಿಗೆ ಶಾಲು ಸುತ್ತಿ ಹೊಡೆದಂತೆ ಬಡಿದೆಚ್ಚರಿಸಿದ್ದಾರೆ. ಸಮಾಜದಲ್ಲಿ ಆಗುವ ಅಥವಾ ನಡೆಯುವ ಅದೆಷ್ಟೋ ಸಂಗತಿಗಳಿಗೆ, ಅಪಘಾತ ಅವಘಡಗಳಿಗೆ ತಲೆಕೆಡಿಸಿಕೊಳ್ಳದೇ ವ್ಯವಸ್ಥೆಯನ್ನೇ ಕಾನೂನನ್ನೇ ನಿಂದಿಸುವವರನ್ನು ಹೀಗಳೆದು ವಿಡಂಬಿಸಿದ್ದಾರೆ.
ಇAತಹ ಅದೆಷ್ಟೋ ವಿಚಾರಗಳನ್ನು ಹೊತ್ತ ಗಾಂಧೀಮರ ಕೃತಿಯು ಕನ್ನಡ ಸಾಹಿತ್ಯ ಲೋಕಕ್ಕೆ ಅಪರೂಪದ ಕೊಡುಗೆಯಾಗಿದೆ. ಈ ಕೃತಿಯನ್ನು ಕನ್ನಡಿಗರ ಚಿಂತನಾ ಲೋಕಕ್ಕೆ ಅರ್ಪಿಸಿದ್ದಕ್ಕಾಗಿ ಅಪ್ರತಿಮ ಕವಿಗಳಾದ ಡಾ. ನಿ.ಗೂ ರಮೇಶ್ ಅವರಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಶೋಭಾ ಬಿ




