ಕಾವ್ಯ ಸಂಗಾತಿ
ಡಾ.ಗೀತಾ ದಾನಶೆಟ್ಟಿ ಬಾಗಲಕೋಟ
“ಗುಬ್ಬಿಗೂಡು”


ಅದೆಲ್ಲಿಂದ ವಲಸೆ ಬಂದ ಹಕ್ಕಿ
ಮನೆಯ ಮೂಲೆಯ
ಮರದ ರೆಂಬೆಗೆ
ಕನಸಿನ ಗೂಡು ಕಟ್ಟಿ
ಹಾರಿ ಹೋಗಿ ಅಲ್ಲಲ್ಲಿ ಸಿಕ್ಕ
ಹುಲ್ಲು ತಂತುಗಳನು ತಂದು
ಬೆಚ್ಚನೆಯ ಗೂಡು ಹೆಣೆದು
ಮರಿ ನಿರೀಕ್ಷೆಯ ನಿರಾಳತೆ
ಮಮತೆಯ ಮಡಿಲಲ್ಲಿ
ಮುದ್ದು ಜೀವಕೆ
ಪ್ರೀತಿಯ ಧಾರೆ ಎರೆಯುತ
ಜಗವ ತೋರುವ ಆಸೆ
ಪಿಳಿಪಿಳಿ ಬಿಡಲು ಕಣ್ಣು
ಚಿಲಿಪಿಲಿ ಧ್ವನಿಯ ನಾದ
ಹಾರಾಟದ ಹೊಸ ಮಾತು
ಮನದೊಳಗೆ ಮಧುರ ಭಾವ
ಗೂಡಿನ ಗಡಿಯನು ಮೀರಿ
ಬಾಳಿನ ಹೊಸ ಅಧ್ಯಾಯಕೆ ನಾಂದಿ
ಬೀಳುವ ಭಯವಿಲ್ಲದ ಮನ
ಬಾನಿಗೆ ಹಾರುವ ಮೊದಲ ಹೆಜ್ಜೆ
ಚಿಕ್ಕ ರೆಕ್ಕೆಗಳನು ಬಿಚ್ಚಿ
ಭರವಸೆಯ ಹಾದಿಯಲ್ಲಿ
ಧೈರ್ಯದಿಂದ ಹೆಜ್ಜೆ ಇಟ್ಟು
ಜಗವ ಸುತ್ತುವ ಸಂತಸ
ಡಾ.ಗೀತಾ ದಾನಶೆಟ್ಟಿ ಬಾಗಲಕೋಟ



