ಧಾರಾವಾಹಿ ಸಂಗಾತಿ-12
ಜಯದೇವಿತಾಯಿ ಲಿಗಾಡೆ
ಜೀವನಗಾಥೆ
ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ


*೧೯೪೪-೪೫*ರ ಸಮಯ…..
ಸೋಲ್ಲಾಪುರದಲ್ಲಿ ಕಾಲರಾ ರೋಗ ಭೀಕರವಾಗಿ ಹರಡಲಾರಂಭಿಸಿತು…
ಜನರು ಭಯದಿಂದ ನಡುಗುತ್ತಿದ್ದರು. ಮನೆಮನೆಯಲೂ ಅಳಲು, ಆತಂಕ, ನಿರಾಶೆಯ ಕತ್ತಲೆ ಆವರಿಸಿತ್ತು.
ಜಯದೇವಿ ತಾಯಿಯವರು ಮತ್ತು ಅವರ ತಾಯಿ ಸಂಗವ್ವ ಬಾಯಿಯವರು ಇನ್ನುಳಿದ ಮಹಿಳೆಯರನ್ನು ಕರೆದುಕೊಂಡು ರೋಗ ಪೀಡಿತರಿಗೆ ಸಹಾಯ ಹಸ್ತ ಚಾಚಲಾರಂಭೀಸಿದರು. ಅವರ ಸಹಾಯಕ್ಕಾಗಿ ಅಕ್ಕನ ಬಳಗದ ಹೆಣ್ಣು ಮಕ್ಕಳನ್ನೆಲ್ಲ ಕರೆದುಕೊಂಡು ಹೋಗುತ್ತಿದ್ದರು.
ಅಂಥ ಸಮಯದಲ್ಲಿ ಜಯದೇವಿತಾಯಿಯವರು ಮಾಡಿದ ಸೇವೆ ಕೇವಲ ಸಹಾಯವಲ್ಲ… ಅದು ಮಾನವೀಯತೆಯ ಜೀವಂತ ರೂಪ.
ರೋಗಿಗಳ ಬಳಿ ಹೋಗುವುದಕ್ಕೂ ಜನ ಹೆದರುತ್ತಿದ್ದಾಗ…ಜಯದೇವಿ ತಾಯಿಯವರು…. ಅವರ ಮನೆಗಳಿಗೆ ಹೋಗಿ ಧೈರ್ಯ ತುಂಬಿದವರು.
ಅವರು ತಮ್ಮ ಕೈಯಿಂದಲೇ ಔಷಧಿ ಕೊಡುತ್ತಿದ್ದರು, ಪೌಷ್ಟಿಕ ಆಹಾರ ರೋಗಿಗಳಿಗೆ ಒದಗಿಸುತಿದ್ದರು.
ಕಾಲರಾ ಹರಡುವುದನ್ನು ತಡೆಯಲು ಸ್ವಚ್ಛತೆಯ ಮಹತ್ವವನ್ನು ಜನರಿಗೆ ತಿಳಿಸುತ್ತಿದ್ದರು.
ನೀರನ್ನು ಕುದಿಸಿ ಕುಡಿಯಬೇಕು, ಪರಿಸರ ಸ್ವಚ್ಛವಾಗಿರಬೇಕು ಎಂದೆಲ್ಲಿ ತಿಳಿಸಿ ಹೇಳುತಿದ್ದರು.
ಈ ರೋಗದಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳನ್ನು ಅವರು ಒಬ್ಬ ತಾಯಿಯಾಗಿ ಅಪ್ಪಿಕೊಂಡರು. ರೋಗದ ಬಗ್ಗೆ ಭಯಾನಕವಾದ ಆತಂಕವು ಎಲ್ಲರಲ್ಲಿ ನೆಲ ಮಾಡಿತು.ಆ ಕರಾಳ
ಭಯ ನೀಗಿಸಿ ಧೈರ್ಯ ಹೇಳಿದವರು.
ಅನಾಥ ಮಕ್ಕಳಿಗೆ ಇರಲು ವ್ಯವಸ್ಥೆ ಮಾಡಿ ಬಟ್ಟೆ ಪುಸ್ತಕವನ್ನು ಕೊಟ್ಟು ಶಾಲೆ ಕಲಿಸಿದರು.
ರೋಗ ಪೀಡೆತರಿಗಾಗಿ ,ಬಡ ಮಕ್ಕಳಿಗಾಗಿ, ಅನಾಥರಿಗಾಗಿ ಸಿದ್ದರಾಮನ ದೇವಸ್ಥಾನಕ್ಕೆ ಹೋಗಿ ಬೇಡಿಕೊಂಡು ಬರುತ್ತಿದ್ದರು.
*ಬಡ ಮಕ್ಕಳಿಗೆ ಹಾಲು,ಉಡಲು ತಾಯಿಗೆ ಸೀರೆ, ಒಡಲ ತುಂಬ ಅನ್ನ ನೀಡುತ್ತ, ರೋಗಗಳ
ಓಡಿಸಲು ಕರುಣಿಸ ಬೇಕಯ್ಯ ಸಿದ್ದೇಶ!!*
ಎಂದು ಹಾಡಿ ಕಳಕಳಿಯಿಂದ ಪ್ರಾರ್ಥನೆ ಮಾಡಿದವರು..
“ನಾವು ಒಟ್ಟಿಗೆ ಇದನ್ನು ಎದುರಿಸೋಣ” ಎಂದು ಜನರಿಗೆ ಮನೋಬಲ ತುಂಬುತ್ತಿದ್ದರು.
ಆ ದಿನಗಳಲ್ಲಿ… ತಮ್ಮ ವೈಯುಕ್ತಿಕ ಜೀವದ ಹಂಗು ಹರಿದು… ಇತರರ ಜೀವ ಉಳಿಸಲು ಓಡಾಡುತ್ತಿದ್ದರು.ರಾತ್ರಿ-ಹಗಲು ಎನ್ನದೆ…ಅವರ ಕಣ್ಣುಗಳಲ್ಲಿ ನಿದ್ರೆ ಮರೆತರು…ಹೃದಯದಲ್ಲಿ ಒಂದೇ ಉದ್ದೇಶವಿತ್ತು.
“ಯಾರೂ ಸಹಾಯವಿಲ್ಲದೆ ನಿಸ್ಸಾಯಕರು ನಿರ್ಗತಿಕರಾಗಿ ರೋಗಿಗಳುಸಾಯಬಾರದೆಂದು …!!!
ಸೋಲಾಪುರದ ಜನರು ನಂತರ ಹೇಳುತ್ತಿದ್ದರು…
“ಆ ಕಾಲರಾ ಕಾಲದಲ್ಲಿ… ದೇವರು ನಮ್ಮನ್ನು ಕಾಪಾಡಲು ಜಯದೇವಿಯವರನ್ನು ತಾಯಿ ರೂಪದಲ್ಲಿ…ಕಳುಹಿಸಿದನೆಂದು…
ಅವರ ಸೇವೆ ಕೇವಲ ರೋಗವನ್ನು ಎದುರಿಸುವುದು ಅಷ್ಟೇ ಅಲ್ಲ..ಅದರ ಜೊತೆಗೆ ಉದ್ಭವಿಸುತ್ತಿರುವ ಅನೇಕ ಸಮಸ್ಯೆಗಳನ್ನು ಪರಿಹರಿಸಿದರು.!!
ಆದರೂ ಅದೆಷ್ಟೋ ಜನರ ಜೀವವನ್ನು ಉಳಿಸಲು ಆಗಲಿಲ್ಲ. ಅನ್ನುವ ಕಳವಳ ಅವರಲ್ಲಿ ಇತ್ತು.
ಮನೆಯಲ್ಲಿ ಪತಿಯ ಆರೋಗ್ಯ ಕೂಡ ಸರಿ ಇರಲಿಲ್ಲ ಆದರೂ ಅಂಥ ನೋವಿನಲ್ಲಿಯೂ ಇನ್ನೊಬ್ಬರ ಕಣ್ಣೀರನ್ನು ಒರಿಸಲು ತಾಯಿಯವರು ಸದಾ ಬದ್ಧರಾಗಿರುತ್ತಿದ್ದರು. ಇದು ಒಂದು ಮಾನವೀಯ ಐತಿಹಾಸಿಕ ಪುಟದಲ್ಲಿ ಮರೆಯಲಾಗದ ಘಟನೆ.
*೧೯೪೬ ರ *ಸಮಯದಲ್ಲಿ ಕಾಂಗ್ರೆಸ್ಸಿಗರು ಕರ್ನಾಟಕ ಪರಿಷತ್ತು, ಮಹಾರಾಷ್ಟ್ರ ಪರಿಷತ್ತು ಮತ್ತು ಆಂಧ್ರ ಸಭೆಗಳು ಸೇರಿ ಸ್ಥಳೀಯವಾಗಿ ಪ್ರಬಲವಾಗಿ ರಾಜಕಿಯೇತರ ಸಂಘಟನೆಗಳಾಗಿ ಬೆಳೆದು ನಿಂತಿದ್ದವು.ಗಾಂಧಿ ತತ್ವ ಆದರ್ಶಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರಾಂತೀಯ ಸರ್ಕಾರಗಳು ರಚನೆಗೊಂಡಿತು. ಇದನ್ನೆಲ್ಲಾ ಗಮನಿಸುತ್ತಿದ್ದ ಆಗಿನ ನಿರಂಕುಶ ರಾಜನಾದ ನಿಜಾಮನಲ್ಲಿ ಭಯವ ಹುಟ್ಟಿಸಿದ್ದವು.
ಕಾಂಗ್ರೆಸ್ ಚಳುವಳಿಗಳು ಹೈದರಾಬಾದ್ ಪ್ರಾಂತದ ಮೇಲೆ ಹೆಚ್ಚು ಪರಿಣಾಮ ಬೀರಲಾರಂಭಿಸಿದ್ದು ನಿಜಾಮನಿಗೆ ಸಹನೆ ಆಗಲಿಲ್ಲ. ಹೈದರಾಬಾದ್ ನಿಜಾಮ ಸರ್ಕಾರವು ಕಾಂಗ್ರೆಸ್ ಚಟುವಟಿಕೆಗಳನ್ನು ವಿರೋಧಿಸುತ್ತಿತ್ತು.
ಭಾರತದ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಗಾಂಧೀಜಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಹೈದರಾಬಾದ್ ಪ್ರಾಂಥದಲ್ಲಿ ತನ್ನದೇ ಆದ ಅಸ್ತಿತ್ವವನ್ನು ಕಂಡುಕೊಂಡಿತ್ತು. ಅಲ್ಲಿ ಹೈದರಾಬಾದ್ ಸ್ಟೇಟ್ ಕಾಂಗ್ರೆಸ್ ಆರಂಭವಾಗಿತ್ತು ಇದಕ್ಕೆ ಸ್ವಾಮಿ *ರಮಾನಂದ ತೀರ್ಥರು* ಅಧ್ಯಕ್ಷರಾಗಿದ್ದರು.
ಬ್ರಿಟಿಷರ ಪರವಾಗಿದ್ದ ನಿಜಾಮನು ತನ್ನ ಜನತೆ ಕಾಂಗ್ರೆಸ್ ಜೊತೆಗೆ ಬಲವಾದ ಯಾವ ರೀತಿಯ ವ್ಯವಹಾರಗಳನ್ನಾಗಲಿ ಅಥವಾ ಸಂಬಂಧವನ್ನಾಗಿ ಇಟ್ಟುಕೊಳ್ಳಬಾರದೆಂದು ಅದಕ್ಕೆ ಬದಲಾಗಿ *ಇಂಡಿಯನ್ ಪೆಟ್ರಿಯಾಟಿಕ್ ಅಸೋಶಿಯೇಶನ್* ಜೊತೆ ಸಹಕರಿಸಬೇಕೆಂದು ತಿಳಿಸಿದಾ. ಅದರಂತೆ ನಿಜಾಮನು ತನ್ನ ಪ್ರಾಂತ್ಯದಲ್ಲಿ ತಿಲಕರು ಜಾರಿಗೆ ತಂದಿದ್ದ ಗಣೇಶ ಶಿವಾಜಿ ಉತ್ಸವವನ್ನು ನಿಶೇಸಿದ್ದ…
ಯಾವುದೇ ಚಟುವಟಿಕೆಗಳು ನಡೆಯಬಾರದೆಂದು ಕಟ್ಟಪ್ಪಣೆ ಮಾಡಿದ್ದ…..
ನಿಜಾಮನ ನಿರಂಕುಶ ಪ್ರಭುತ್ವದ ವಿರುದ್ಧ ಮಾತನಾಡುವದು, ಹೋರಾಡುವುದು ಅವಶ್ಯಕವಾಗಿತ್ತು…
ಜಯದೇವಿ ತಾಯಿಯವರು ಕಾಂಗ್ರೆಸ್ ಸದಸ್ಯರಾಗಿದ್ದರು.ತಮ್ಮ ವಿಚಾರಗಳನ್ನು ಮುಕ್ತವಾಗಿ ಯಾರ ಭಯವಿಲ್ಲದೆ ಪ್ರಸ್ತಾಪಿಸುತ್ತಿದ್ದರು.
ಆಗಿನ ಕಾಲದಲ್ಲಿ ಮಹಿಳೆಯರು ತಮ್ಮ ಧ್ವನಿಯನ್ನು ಎತ್ತುವುದು ಅಷ್ಟು ಸುಲಭದ ವಿಷಯವಾಗಿರಲಿಲ್ಲ. ಆದರೆ ಜಯದೇವಿ ತಾಯಿಯವರು ಅನ್ಯಾಯವನ್ನು ಸಹಿಸುವ ಮೌನವನ್ನು ಒಪ್ಪಿಕೊಂಡವರಲ್ಲ, ಸತ್ಯವನ್ನು ನಿಂತು ಹೇಳುವ ಶಕ್ತಿಯುಳ್ಳವರಾಗಿದ್ದರು.
ಕಾಂಗ್ರೆಸಿನ ಸದಸ್ಯೆಯಾಗಿದ್ದ .. ಹೆಸರಿಗಾಗಿ ಅಲ್ಲ ಮನಸ್ಸಿನ ಆಳದಿಂದ ನಂಬಿದ ಮೌಲ್ಯಗಳಿಗಾಗಿ ಆ ಸಂಘಟನೆಯೊಂದಿಗಿದ್ದರು.
ದೇಶದ ಸ್ವಾತಂತ್ರ್ಯ, ಸಮಾನತೆ, ಹಾಗೂ ಸಾಮಾಜಿಕ ನ್ಯಾಯ ಎಂಬ ತತ್ವಗಳು ಅವರ ಹೃದಯದಲ್ಲಿ ಬೆಳೆದ ಮರದಂತೆ ಬೇರೂರಿದ್ದವು.
ಯಾರೇ ಎದುರು ಬಂದರೂ, ಯಾವ ಪರಿಸ್ಥಿತಿ ಬಂದರೂ, ತಮ್ಮ ಮಾತು ಹೇಳಲು ಅವರು ಹೆದರಲಿಲ್ಲ. ಅವರ ಧ್ವನಿಯಲ್ಲಿ ತಾಳ್ಮೆ ಇತ್ತಾದರು ಹೆಚ್ಚು ದೃಢತೆ ಇತ್ತು…..“ಸತ್ಯದ ಮಾರ್ಗದಲ್ಲಿ ನಡೆಯುವವನಿಗೆ ಭಯವೇ ಇಲ್ಲ” ಎಂಬ ನಂಬಿಕೆ ಅವರ ಜೀವನದ ದೀವಿಗೆಯಾಗಿತ್ತು.
ಸಮಾಜದಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ನೋಡಿ ಕಣ್ಣೀರಿಟ್ಟು ಕುಳಿತುಕೊಳ್ಳುವವರಲ್ಲ ಅವರು. ಅದರ ವಿರುದ್ಧ ನಿಲ್ಲುವ ಧೈರ್ಯ ಅವರ ರಕ್ತದಲ್ಲೇ ಹರಿಯುತ್ತಿತ್ತು.
ತಮ್ಮ ನಂಬಿಕೆಗಳಿಗಾಗಿ ಹೋರಾಡುವುದು ಅವರಿಗೊಂದು ಕರ್ತವ್ಯವಾಗಿತ್ತು…
ಅವರ ಮನಸ್ಸು ಒಂದು ಹೋರಾಟದ ಮೈದಾನವಾಗಿತ್ತು .
ಯಾವ ಸಂಕಷ್ಟ ಬಂದರೂ, “ನಾನು ನನ್ನ-ಸತ್ಯ ನನ್ನ ಜೊತೆ ಇದೆ” ಎಂಬ ಆತ್ಮವಿಶ್ವಾಸದಿಂದ ಮುಂದೆ ಸಾಗುತ್ತಿದ್ದವರು ಜಯದೇವಿ ತಾಯಿಯವರು.
ಅವರ ಜೀವನವೇ ಒಂದು ಸಂದೇಶ: “ದಿಟ್ಟತನದಿ ಮಾತನಾಡಿ, ನಂಬಿಕೆಯೊಂದಿಗೆ ಹೋರಾಡಿ, ಸತ್ಯದೊಂದಿಗೆ ಸ್ಥಿರವಾಗಿ ನಿಲ್ಲಿರಿ ಅನ್ನುವ ಕರೆ ಕೊಡುತ್ತಿದ್ದರು.
ಇಂತಹ ದೈರ್ಯ ಮತ್ತು ದೃಢ ನಂಬಿಕೆ ಅವರ ವ್ಯಕ್ತಿತ್ವವನ್ನು ಅಸಾಧಾರಣವಾಗಿಸಿದೆ.
ಈ ಕಾರಣಕ್ಕಾಗಿ 1946ರಲ್ಲಿ ಜಹೀರಾಬಾದಿನ ಕಾಂಗ್ರೆಸ್ ಪ್ರಾಂತೀಯ ಪರಿಷತ್ತಿನ ಮೂರನೆ ಅಧೀವೇಶನಕ್ಕೆ ಜಯದೇವಿ ತಾಯಿಯವರನ್ನು ಆಹ್ವಾನಿಸಿದ್ದರು. ಅಧಿವೇಶನದ ದ್ವಾರಕ್ಕೆ” ಜಯದೇವಿ ತಾಯಿ ದ್ವಾರ “ಅಂತ ಹೆಸರಿಡಲಾಯಿತು.
ಜಯದೇವಿ ತಾಯಿಯವರು ಆ ಸಮಾರಂಭಕ್ಕೆ ಬರುತ್ತಿರುವರು ಎನ್ನುವದ ಕೇಳಿದ ನಿಜಾಮನು ಕೋಪದಿಂದ ಜಯದೇವಿತಾಯಿಯವರು ತನ್ನ ಭೂಮಿಯಲ್ಲಿ ಬರೆದಿದ್ದಂತೆ ಫರ್ಮಾನ್ ಹೊರಡಿಸಿದ್ದ.ಅವರು ಬರಬಾರದು” ಎಂಬುದೇ ಆ ಆದೇಶದ ಅರ್ಥ. ನಿಜಾಮನ ಆದೇಶ“ಪರ್ಮಾನ್”—ಎಂದರೆ ಸಾಮಾನ್ಯರಿಗೆ ಅದು ಒಂದು ಗಡಿ, ಒಂದು ಭೀತಿ, ಒಂದು ತಡೆಯ ಗೋಡೆ. ಆ ಮಣ್ಣಿನಲ್ಲಿ ಕಾಲಿಡುವುದು ಎಂದರೆ ಆ ಆದೇಶವನ್ನು ಮೀರಿ ನಿಲ್ಲುವವರಿಗೆ ಎಂಟೆದೆಯ ಧೈರ್ಯ ಬೇಕಾಗಿತ್ತು.
ಆದರೆ ಜಯದೇವಿ ತಾಯಿಯವರಿಗೆ ಭಯ ಎನ್ನುವುದು ಅಡ್ಡಿಯಾಗಲಿಲ್ಲ… ಅದು ಅವರ ಹೆಜ್ಜೆಗಳ ಕೆಳಗೆ ಬಿದ್ದ ನೆರಳಷ್ಟೇ….. ಸರಳವಾಗಿ ಆ ಭೂವಿಯಲ್ಲಿ ಕಾಲಿಟ್ಟರು.
ಸತ್ಯದ ದಾರಿಯಲ್ಲಿ ನಡೆಯುವವರನ್ನು ಯಾರ ಆದೇಶ ತಡೆಯಬಲ್ಲದು?
ಅಂದು… ಆ ಬೆಳಗಿನ ಹೊತ್ತಿನಲ್ಲಿ, ಹೈದರಾಬಾದಿನ ಜೈರಾಬಾದಿನ ಮಣ್ಣಿನ ಮೇಲೆ ಮೊದಲ ಹೆಜ್ಜೆಯನ್ನು ಇಡುವಾಗ, ಜಯದೇವಿ ತಾಯಿಯವರ ಕಾಲುಗಳು ನಡುಗಲಿಲ್ಲ ಇನ್ನಷ್ಟು ದೃಢತೆ ಇತ್ತು, ಧೈರ್ಯ ಇತ್ತು, ನಂಬಿಕೆಯ ಶಕ್ತಿ ಇತ್ತು.
ಅವರ ಹೆಜ್ಜೆಗಳು ನಿಧಾನವಾಗಿರಲಿಲ್ಲ… ಪ್ರತಿ ಹೆಜ್ಜೆಯೂ ಒಂದು ಘೋಷಣೆಯಂತಿತ್ತು. “ನ್ಯಾಯಕ್ಕಾಗಿ ನಾನು ಬಂದಿದ್ದೇನೆ” ಎಂದು.
ಅಲ್ಲಿ ನೆರೆದಂಥ ಜನರ ಕಣ್ಣುಗಳಲ್ಲಿ ಆಶ್ಚರ್ಯ, ಭಯ, ಮತ್ತು ಗೌರವ ಮಿಶ್ರವಾಗಿತ್ತು. ಆದರೆ ತಾಯಿಯವರ ಮುಖದಲ್ಲಿ ಮಾತ್ರ ಶಾಂತಿ ಹೊಳೆಯುತ್ತಿತ್ತು ಒಂದು ಸಣ್ಣ ನಗು, ಆದರೆ ಅದರಲ್ಲಿ ಅನೇಕ ಹೋರಾಟಗಳ ಶಕ್ತಿ ಅಡಗಿತ್ತು.
ಪರ್ಮಾನ್ ಎಂಬುದು ಕಾಗದದ ಮೇಲೆ ಬರೆದ ಅಕ್ಷರ ಮಾತ್ರ… ಆದರೆ ಅವರ ನಂಬಿಕೆ ಕಲ್ಲಿನಂತೆ ಗಟ್ಟಿತನ ಹೊಂದಿತ್ತು.
ಆ ಕ್ಷಣದಲ್ಲಿ, ಜ್ಯೆರಾಬಾದ್‌ನ ಮಣ್ಣು ಕೂಡ ಅವರ ಹೆಜ್ಜೆಗಳಿಗೆ ಹೆಮ್ಮೆಪಟ್ಟಂತೆ ಕಾಣಿಸಿತು… ಯಾಕೆಂದರೆ ಅದು ಸಾಮಾನ್ಯ ಹೆಜ್ಜೆಯಲ್ಲ, ಒಬ್ಬ ಧೈರ್ಯಶಾಲಿ ಮಹಿಳೆಯು ಇಟ್ಟ ಹೆಜ್ಜೆಯಾಗಿತ್ತು.
*ಆ ಸನ್ನಿವೇಶವೇ ಒಂದು ಇತಿಹಾಸ* ಒಬ್ಬ ಮಹಿಳೆ, ಒಂದು ಆದೇಶವನ್ನು ಅಲ್ಲ, ಒಂದು ಅನ್ಯಾಯವನ್ನು ಮೀರಿ ನಿಂತ ಕ್ಷಣ…..
ಜಯದೇವಿ ತಾಯಿಯವರು ಆ ದಿನ ಹೈದರಾಬಾದ್‌ಗೆ ಬಂದಿದ್ದು ಭಾರತ ಮಾತೆಯ ವೀರ ಮಹಿಳೆಯ ಧೈರ್ಯ ಸಾಹಸದ ಪತಾಕೆ ಹಾರಿಸಿದ್ದರು. ಸಬಲೆಯರ ವ್ಯಕ್ತಿತ್ವಕ್ಕೆ ಹೊಸ ಅರ್ಥ ಕೊಟ್ಟರು.
ಜಯದೇವಿ ತಾಯಿಯವರು ಜೇಹರಾಬಾದ್ ನಿಜಾಮನ “ಪರ್ಮನ್” (ಅಂದರೆ ನಿರ್ಬಂಧ ಆದೇಶ) ವನ್ನು ಲೆಕ್ಕಿಸದೇ ಹೈದರಾಬಾದ್‌ನ ಮಣ್ಣಿನಲ್ಲಿ ಕಾಲಿಟ್ಟ ಘಟನೆ ಧೀಮಂತ ಮಹಿಳೆಯ ಮನೋಬಲವನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಆ ಕಾಲದಲ್ಲಿ ನಿಜಾಮನ ಆಡಳಿತದಲ್ಲಿ ಇಂತಹ ನಿರ್ಬಂಧವನ್ನು ಉಲ್ಲಂಘಿಸುವುದು ಅತಿ ದೊಡ್ಡ ಅಪಾಯದ ಮುನ್ಸೂಚನೆಯಾಗಿತ್ತು ನಿಜಾಮನು ಯಾವ ಕಾಲಕ್ಕಾದರೂ ಬಂಧನ, ಶಿಕ್ಷೆ, ಅಥವಾ ಜೀವ ಹಾನಿಯೂ ಎಡೆ ಮಾಡಬಹುದಾಗಿತ್ತು. ಯಾವುದನ್ನು ಲೆಕ್ಕಿಸದೆ ಅವರು ಮುಂದುವರಿದದ್ದು ಅವರ ಧೀರೋದ್ಯಾಥ್ಯ ವ್ಯಕ್ತಿತ್ವದ ಮೆರಗಿನ ಮಹತ್ವವನ್ನು ತೋರಿಸುತ್ತದೆ.
ಜಯದೇವಿ ತಾಯಿಯವರ ಅಚಲ ಧೈರ್ಯದಲಿ
ನಿಜಾಮನ ಭಯದ ನೆರಳು ಕೂಡ ಅವರನ್ನು ತಟ್ಟಲಿಲ್ಲ. ಸತ್ಯ ಮತ್ತು ನ್ಯಾಯಕ್ಕಾಗಿ ಅವರು ಯಾವ ಅಪಾಯವನ್ನೂ ಎದುರಿಸಲು ಸಿದ್ಧರಾಗಿದ್ದರು.
*ಅವರಲ್ಲಿದ್ದ ರಾಷ್ಟ್ರಪ್ರೇಮ,ಹೃದಯದಲ್ಲಿ ದೇಶದ ಮೇಲೆದ್ದ ಅಪಾರ ಪ್ರೀತಿ,. ದೇಶದ ಸ್ವಾತಂತ್ರ್ಯ ಮತ್ತು ಜನರ ಹಕ್ಕುಗಳಿಗಾಗಿ ತಮ್ಮ ವೈಯಕ್ತಿಕ ಭದ್ರತೆಯನ್ನೇ ತ್ಯಜಿಸಿದರು.*
ಒಮ್ಮೆ ತೀರ್ಮಾನ ಮಾಡಿದ ಮೇಲೆ ಹಿಂದಿರುಗುವ ಸ್ವಭಾವ ಅವರದಾಗಿರಲಿಲ್ಲ… ನಿರ್ಧಾರಾತ್ಮಕತೆ ಎಂಥದ್ದು ಅಂದರೆ ನಿಜಾಮನ ಆದೇಶವೂ ಅವರ ನಿರ್ಧಾರವನ್ನು ತಡೆಯಲಿಲ್ಲ….!!
ರಜಾಕಾರರ ನಿರಂತರ ಶೋಷಣೆಯಿಂದ ಜನರನ್ನು ಮುಕ್ತಗೊಳಿಸಲು ಅಲ್ಲಿಯ ಸಮಸ್ಯೆ ಮತ್ತು ಪರಿಹಾರವನ್ನು ಕುರಿತು ಚರ್ಚಿಸುವ ಸಮಾವೇಶ ಅದಾಗಿತ್ತು .ಅಲ್ಲಿ ಹತ್ತರಿಂದ ಹನ್ನೆರಡು ಸಾವಿರ ಜನ ಪಾಲ್ಗೊಂಡಿದ್ದರು. ಜಯದೇವಿ ತಾಯಿಯವರು. ಸಭಾಮಂಟಪವನ್ನು ಪ್ರವೇಶಿಸಿ ಭಾಷಣ ಮಾಡಿದರು….
ಅವರ ವ್ಯಕ್ತಿತ್ವ ಎಂಥ ಮೆರಗುಗೊಳಿಸುವಂಥದ್ದು ಅಂದರೆ ಅವರನ್ನು ನೋಡುತ್ತಿದ್ದಂತೆ ಜನರೆಲ್ಲರೂ ಮಂತ್ರ ಮುಗ್ಧರಾಗುತ್ತಿದ್ದರು.ಕಣ್ಣು ಕಿವಿಗಳು ಅರಳಿಸಿ ಎಚ್ಚೆತ್ತು ತದೇಕಚಿತದಿಂದ ಭಾಷಣ ಕೇಳಲು ಅಣಿಯಾಗುತ್ತಿದ್ದರು. ಜಯದೇವಿ ತಾಯಿಯವರು ಭಾಷಣವನ್ನು ಕೇಳಿದವರು ಹೇಳುತ್ತಿದ್ದರು…. ತಾಯಿಯವರ ಭಾಷಣಕ್ಕೆ ಎದ್ದು ನಿಂತರೆ ಸಭಾಂಗಣದಲ್ಲಿ ಅದೆಂಥ ಶಾಂತಿ ನೆಲೆಗೊಳ್ಳುತ್ತಿತು ಅಂದರೆ ಜನಜಂಗುಳಿಯ ಮಧ್ಯದಲ್ಲಿ ಒಂದು ಸೂಜಿ ಕೂಡ ಬಿದ್ದರೂ ಅದರ ಸಪ್ಪಳ ಕೇಳಬಹುದಾಗಿತ್ತು. ಅನ್ನುವ ಮಟ್ಟಿಗೆ ಜನರು ಮೈ ಮನ ಮರೆತು ಕುಳಿತುಕೊಳ್ಳುತ್ತಿದ್ದರು ಅಂತ ಹೇಳುತಿದ್ದರು.
ನಿಜಾಮನ ನಿರಂಕುಶ ಆಡಳಿತದ ವಿರುದ್ಧ ಜ್ವಾಲಾಮುಖಿಯಂತೆ ಉಕ್ಕಿ ಬಂದ ಜಯದೇವಿ ತಾಯಿಯವರ ಧ್ವನಿ ಕೇವಲ ವಿರೋಧದ ಧ್ವನಿ ಮಾತ್ರವಲ್ಲ ಅದು ಸ್ವಾತಂತ್ರ್ಯದ ಕಿರುಚಾಟ, ನ್ಯಾಯದ ಹೋರಾಟ, ದೇಶಭಕ್ತಿಯ ಮಹಾ ಘೋಷವಾಗಿತ್ತು.
ದೇಶಭಕ್ತಿಯ ಘೋಷಣೆದಂತೆ ಜಯದೇವಿ ತಾಯಿಯವರ ಭಾಷಣ…
ಮೊಟ್ಟ ಮೊದಲಿಗೆ ಶಿವಯೋಗಿ ಸಿದ್ದರಾಮನನ್ನು ನೆನೆಯುವುದು,
“ಯೋಗಿ ಬಂದಿದಾರೇನ…..ಯೋಗದ ಕೀಲ ತಿಳಿಸುವರೇನ ಯೋಗಿ ಬಂದಿದಾರೇನ….!!
ರಾಗಭೋಗದ ಆಚೆ ಒಯ್ಯುವರೇನಾ…
ಯೋಗಿ ಬಂದಿದಾರೇನ …!!”
“ನನ್ನ ಪ್ರಿಯ ಸಹೋದರ ಸಹೋದರಿಯರೇ…
ನಾನು ವೀರ ಗಣಾಚಾರಿ ಶ್ರೀ ಯೋಗಿ ಸಿದ್ದರಾಮನ ಭೂಮಿಯ ಅಲ್ಲಿ ಹುಟ್ಟಿದವಳು ಸಿದ್ದರಾಮನ ಕರುವೆಯ ಕೂಸಾಗಿ ನಿಮ್ಮೊಂದಿಗೆ ಜೊತೆಯಾಗಲು ಬಂದಿದ್ದೇನೆ ಈ ಭಾರತದ ಮಣ್ಣಿನಲ್ಲಿ ಹುಟ್ಟಿದ ನಾವು, ಈ ಮಣ್ಣೇ ನಮ್ಮ ತಂದೆ ತಾಯಿಯೆಂದು ಬದುಕುತ್ತಿರುವ ನಾವು, ಯಾವ ಕಾರಣಕ್ಕೂ ದಾಸ್ಯವನ್ನು ಒಪ್ಪಿಕೊಳ್ಳಲಾರೆವು!
ನಿಜಾಮನ ನಿರಂಕುಶ ಪ್ರಭುತ್ವದ ಉಚ್ಛಾಟನೆ ಆಗಲೇಬೇಕು!
ಇದು ಕೇವಲ ನಮ್ಮ ಬೇಡಿಕೆ ಅಲ್ಲ….ಇದು ನಮ್ಮ ಹಕ್ಕು!
ಬಹು ಸಂಖ್ಯಾತರಾದ ಹಿಂದೂ ಪ್ರಜೆಗಳು ಜಾತ್ಯಾಂಧತೆಯ ಜುಗ್ಗಿನಲ್ಲಿ ಬದುಕುವುದನ್ನು ಇನ್ನೂ ಸಹಿಸಲಾರರು.
ಧರ್ಮದ ಹೆಸರಿನಲ್ಲಿ ದಬ್ಬಾಳಿಕೆ, ಅಧಿಕಾರದ ಹೆಸರಿನಲ್ಲಿ ಅನ್ಯಾಯ….ಇವು ನಮ್ಮ ಭೂಮಿಯಲ್ಲಿ ಮುಂದುವರಿಯಲಾರವು!
ನಾವು ಶಾಂತಿಯ ಪ್ರಜೆಯಾದರೂ, ನಮ್ಮ ಸಹನೆಯನ್ನು ದುರ್ಬಲತೆ ಎಂದು ಯಾರೂ ಭಾವಿಸಬಾರದು.
ನಮ್ಮ ಸಹನೆಗೆ ಒಂದು ಮಿತಿ ಇದೆ… ಆ ಮಿತಿಯನ್ನು ದಾಟಿದಾಗ, ನಮ್ಮ ಪ್ರತಿಯೊಂದು ಉಸಿರು ಕ್ರಾಂತಿಯ ಕಿಡಿಯಾಗುತ್ತದೆ!
ಈ ಮಣ್ಣಿನಲ್ಲಿ ಸ್ವಾತಂತ್ರ್ಯವೇ ನಮ್ಮ ಉಸಿರು, ಸಮಾನತೆಯೇ ನಮ್ಮ ಹಕ್ಕು!
ನಾವು ಯಾರಿಗೂ ದಾಸರಲ್ಲ… ನಾವು ಈ ದೇಶದ ಯಜಮಾನರು!
ನಾವು ಒಂದಾಗಿ ನಿಂತರೆ, ಯಾವ ಶಕ್ತಿ ನಮ್ಮನ್ನು ತಡೆಯಲು ಸಾಧ್ಯವಿಲ್ಲ!
ನಮ್ಮ ಏಕತೆಯೇ ನಮ್ಮ ಬಲ, ನಮ್ಮ ಧೈರ್ಯವೇ ನಮ್ಮ ಶಕ್ತಿ!
ಇಂದು ನಾನು ನಿಮ್ಮ ಮುಂದೆ ಒಂದು ಮಾತು ಮಾತ್ರ ಹೇಳುತ್ತೇನೆ……!!!!
ಭಯವನ್ನು ತಳ್ಳಿ ಹಾಕಿ, ಧೈರ್ಯವನ್ನು ಅಪ್ಪಿಕೊಳ್ಳಿ!
ಅನ್ಯಾಯದ ವಿರುದ್ಧ ನಿಲ್ಲಿ, ನ್ಯಾಯಕ್ಕಾಗಿ ಹೋರಾಡಿ!
“ಈ ರಜಾಕಾರರ ಕ್ರೂರತೆಗೆ ಇನ್ನು ತೆರೆ ಬೀಳಬೇಕು!
ನಮ್ಮ ಜನರ ಕಣ್ಣೀರನ್ನು ನಾವು ಇನ್ನೂ ನೋಡುತ್ತಾ ಕುಳಿತಿರಲಾರೆವು!
ಪ್ರತಿ ಮನೆಗೂ ಭಯ ಮುಕ್ತ ಮನೆಯಾಗಿ ಬೇಕು …
ಪ್ರತಿ ಹೆಣ್ಣಿಗೂ ಗೌರವ, ಪ್ರತಿ ಮಗುವಿಗೂ ಭದ್ರತೆ ಸಿಗಬೇಕು!
ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ… ನಿಮ್ಮ ರಕ್ಷಣೆಗಾಗಿ ಹೋರಾಡುತ್ತೇನೆ!
ನಿಮ್ಮ ಮೇಲೆ ಆಗುವ ಪ್ರತಿಯೊಂದು ಅನ್ಯಾಯಕ್ಕೂ ನಾನು ಕವಚವಾಗುತ್ತೇನೆ!
ನಾವು ಒಂದಾಗಿ ಹೋರಾಡಿದರೆ ಯಾವ ಶೋಷಣೆಯೂ ನಮ್ಮ ಮೇಲೆ ಉಳಿಯಬಾರದು!”
ಈ ಕ್ಷಣದಲ್ಲೇ ನಿಜಾಮನು ನನ್ನ ಮೇಲೆ ಹಲ್ಲೆ ಮಾಡಿದ್ದರು…ನಾನು ಅಂಜಲಾರೆ ಅಲಕಲಾರೆ ಏಕೆಂದರೆ….
೧೮೨೮ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮಳು ಸ್ವಾತಂತ್ರ ಹೋರಾಟದ ಮೊದಲ ಕಹಳೆಯನ್ನು ಊದಿದಂತೆ ನಂತರ ಬರುವ ಝಾಶಿರಾಣಿ ಲಕ್ಷ್ಮೀಬಾಯಿಯಂತೆ ನನ್ನ ನೆತ್ತರವು ಈ ಭೂಮಿಯಲ್ಲಿ ಒಂದಾದರೂ ನಾನು ಸಂತಸದಿಂದ ಸಿದ್ದರಾಮನ ಅಡಿಗಳಿಗೆ ಅರ್ಪಣೆಯಾಗುವೆ.
“ನನ್ನ ಶರೀರದಲ್ಲಿರುವ ಒಂದೊಂದು ರಕ್ತದ ಹನಿಯೂ ಈ ಮಾತೆಗೆ ಅರ್ಪಣೆಯಾಗಲಿ…
ನನ್ನ ಪ್ರಾಣವೇ ಹೋದರೂ ಪರವಾಗಿಲ್ಲ…
ನನ್ನ ದೇಹವನ್ನು ಅವರು ಗಾಯಗೊಳಿಸಬಹುದು…
ಆದರೆ ನನ್ನ ಆತ್ಮದ ಜ್ವಾಲೆಯನ್ನು ನಂದಿಸಲು ಯಾರಿಗೂ ಸಾಧ್ಯವಿಲ್ಲ!
ಈ ಮಣ್ಣಿನ ಪ್ರತಿಯೊಂದು ಧೂಳಿನ ಕಣವೂ ನನಗೆ ಪವಿತ್ರ…
ಅದಕ್ಕಾಗಿ ಬೇಕಾದರೆ ನನ್ನ ಜೀವವನ್ನೇ
ಅರ್ಪಿಸುತ್ತೇನೆ! ನನ್ನ ಮೇಲೆ ಹಲ್ಲೆ ಮಾಡಿದರು
… ನನ್ನ ರಕ್ತದ ಪ್ರತಿಯೊಂದು ಹನಿ
ಈ ನೆಲದಲ್ಲಿ ಸಾವಿರಾರು ಧೈರ್ಯಶಾಲಿಗಳನ್ನು ಹುಟ್ಟಿಸುತ್ತದೆ!
ನಾನು ಹೆದರಿ… ನಾನು ಹಿಂತಿರುಗೋದಿಲ್ಲ…
ನಾನು ಈ ಭೂಮಿಗೆ ಅರ್ಪಣೆಯಾಗುವೆ…
ಸ್ವಾತಂತ್ರ್ಯದ ಹಾದಿಯಲ್ಲಿ ಕೊನೆಯ ಉಸಿರಿನವರೆಗೂ ಹೋರಾಡುವೆ!
ಜೈ ಭಾರತ್! ಜೈ ಸ್ವಾತಂತ್ರ್ಯ!”
“ನಿಜಾಮನ ನಿರಂಕುಶ ಪ್ರಭುತ್ವದ ಉಚ್ಛಾಟನೆ ಯಾಗಬೇಕು. ಬಹು ಸಂಖ್ಯಾತರಾದ ಹಿಂದೂ ಪ್ರಜೆಗಳು ಜಾತ್ಯಾಂಧನಾದ ಮುಸಲ್ಮಾನ ಅರಸಸೊತ್ತಿಗೆಯನ್ನು ಸಹಿಸಲಾರರು… ಎಂದು ಸ್ಪಷ್ಟವಾಗಿ ನಿರ್ಭಯದಿಂದ ಸಾರಿದರು……”
ಅಲ್ಲಿ ಕುಳಿತವರ ಕಣ್ಣು ನೀರಾಡಿದವು ಒಬ್ಬ ಸಾಮಾನ್ಯ ಗೃಹಿಣಿ ವೀರಾ ರೋಷದಿಂದ ಸಿಂಹದಂತೆ ಗರ್ಜಿಸಿದ ಧ್ವನಿಯ ಕೇಳಿ ಅಚ್ಚರಿಕೊಂಡರು ಎಲ್ಲರ ಎದೆಯಲ್ಲಿ ದೇಶಸ್ವಾಭಿಮಾನ ತುಂಬಿ ತುಳುಕಿತು.
ಅವರ ಮಾತುಗಳು ಕೇವಲ ಭಾಷಣವಾಗಿರಲಿಲ್ಲ…
ಅವು ಜನರ ಹೃದಯದಲ್ಲಿ ಹಚ್ಚಿದ ಭರವಸೆಯ ದೀಪವಾಗಿತ್ತು.
ನಿಜಾಮನ ಪೊಲೀಸರು ಅವರನ್ನು ದಸ್ತಗಿರಿ ಮಾಡಲು ಮುಂದಾದರು ಆಗ ಅಲ್ಲಿ ನೆರದಿದ್ದ ಸುಮಾರು ಐದು ಸಾವಿರ ಜನ ಸಮವಸ್ತ್ರ ಧರಿಸಿ ಕುದುರೆಯನ್ನೇರಿ ಮಂಟಪವನ್ನು ಸುತ್ತುವರಿದರು. ನಿಜಾಮನ ಪೊಲೀಸರನ್ನು ತಡೆದರು ಜಯದೇವಿ ತಾಯಿಯವರು….. ಈ ಸ್ಥಿತಿಯನ್ನು ತಮ್ಮ ಒಂದು ಕವನದಲ್ಲಿ ಹೀಗೆ ಹೇಳುತ್ತಾರೆ
*ಕಲ್ಯಾಣದ ಭೂಮಿಯ ಸೀಮೆಯೊಳಗ ನಾ
ಕಾಲಿಡ ಕೂಡದು ಕಾಯ್ದೆ ತೆಗೆದಾನ,ನಿಜಾಮ ಆಲಿಸಿದೆ ಸೀಮೆಯ ದಾಟೀದೆ”
ಎಂದು ಹೇಳುತ್ತಾರೆ
ಈ ಸಮ್ಮೇಳನವನ್ನು ಪ್ರಭುರಾಜ್ ವಕೀಲರು, ಚಂದ್ರಶೇಖರ್ ಪಾಟೀಲ್, ಅನ್ನಪೂರ್ಣಯ್ಯ ಸ್ವಾಮಿ, ಅಡಿವೆಪ್ಪ ಚಂದ್ರಿ, ಭೀಮಣ್ಣ ಖಂಡ್ರೆ ಅವರು ಸೇರಿಕೊಂಡು ನಡೆಸಿದ್ದರು.
ಈ ರೀತಿಯಾಗಿ ಜಯದೇವಿತಾಯಿಯವರು ಯಾವುದೇ ರೀತಿಯ ಅಧಿಕಾರಿಗಳಿಗೆ, ದರ್ಪದ ದುಷ್ಟರಿಗೆ ಭಯಪಡುತ್ತಿರಲಿಲ್ಲ.
ಆ ಕಾಲಕ್ಕೆ ಅವರು ನಿಜಾಮನ ವಿರುದ್ಧವಾಗಿ ಭಾಷಣ ಮಾಡುವ ದಿಟ್ಟತನ ಅವರ ಧೈರ್ಯವನ್ನು ಅರಿತು ಅಲ್ಲಿಯ ಮುಖಂಡರು ನಿಜಾಮನ ವಿರುದ್ಧ ಅಧಿವೇಶನವನ್ನು ಆಯೋಜಿಸಿ ಅದಕ್ಕೆ ಜಯದೇವಿತಾಯಿ ಅಂಥ ದಿಟ್ಟ ಮಹಿಳೆಯನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಇದರ ನೆನಪಿಗಾಗಿ ಮಂಟಪಕ್ಕೆ *ಜಯದೇವಿತಾಯಿ ದ್ವಾರ* ಎಂದು ಹೆಸರಿಟ್ಟಿದ್ದರು .
ಜನತೆ ಅವರ ಮೇಲೆ ಇಟ್ಟ ಅಪಾರವಾದ ನಂಬಿಕೆಯ ದ್ಯೋತಕವಾಗಿತ್ತು .
ಆ ಕಾಲದಲ್ಲಿ ಮಹಿಳೆಯರು ಇಂತಹ ಸಾಹಸಗಳಿಗೆ ಮುಂದೆ ಬರೋದು ಅಪರೂಪ. ಆದರೆ ಜಯದೇವಿ ತಾಯಿಯವರು ಸಮಾಜಕ್ಕೆ “ಸ್ತ್ರೀ ದುರ್ಬಲಳಲ್ಲ”. ಸ್ತ್ರೀಶಕ್ತಿ -ಸಮಯ ಬಂದರೆ ದುರ್ಗೆಯು ಚಾಮುಂಡಿಯು ಆಗಬಹುದು ಎಂಬ ಸಂದೇಶ ನೀಡಿದರು.
ಅವರ ಈ ಸಾಹಸದಿಂದ ಅನೇಕರು ಪ್ರೇರಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು.. ಪ್ರೇರಣೆಯ ಮೂಲವಾಗಿ ನಿಂತರು.
ಈ ಘಟನೆ ಕೇವಲ ಒಂದು ನಿಯಮ ಉಲ್ಲಂಘನೆ ಅಲ್ಲ…!!!ಅದು ಒಂದು ಮಹಿಳೆಯ ಅಜೇಯ ಆತ್ಮಶಕ್ತಿಯ, ಧೈರ್ಯದ ಮತ್ತು ದೇಶಭಕ್ತಿಯ ಜೀವಂತ ಸಾಕ್ಷಿ. ಜಯದೇವಿ ತಾಯಿಯವರ ಜೀವನವೇ ಒಂದು ಪಾಠ .
*ಭಯವನ್ನು ಗೆದ್ದವರು ಇತಿಹಾಸವನ್ನು ರಚಿಸುತ್ತಾರೆ.” ಎನ್ನುವ ಮಾತು ಸುಳ್ಳಲ್ಲ.*
ಸವಿತಾ ದೇಶಮುಖ




