ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಲೋಟದ ತುಂಬಾ ನೀರನ್ನು ತುಂಬಿಕೊಂಡು ಬಂದು ಆ ಹುಡುಗಿ ಸುಮತಿಯ ಕೈಕೆ ಕೊಟ್ಟಳು. ಸುಮತಿ ನೀರನ್ನು ಗಟಗಟನೆ ಕುಡಿದಳು ಆದರೆ ಒಮ್ಮೆಲೇ ವಾಕರಿಕೆ ಬಂದಂತಾಗಿ ಮುಖ ಕಿವುಚಿಕೊಂಡಳು. ಒಂದೇ ಸಮನೆ ನೀರನ್ನು ಕುಡಿದಿದ್ದಕ್ಕಾಗಿ ತಾಯಿಗೆ ಹೀಗೆ ಆಗುತ್ತಿರಬೇಕು ಎಂದು ಮಗಳು ತಾಯಿಯ ಬೆನ್ನನ್ನು ಮೆತ್ತಗೆ ಸವರಿದಳು. ಸುಮತಿಯ ಪರಿಸ್ಥಿತಿಯನ್ನು ಕಂಡು ಮಗಳಿಗೆ ಒಳಗೊಳಗೆ ಏನೋ ಚಿಂತೆ. ಅಮ್ಮನಿಗೆ ಆರೋಗ್ಯದಲ್ಲಿ ಏನೋ ವ್ಯತ್ಯಾಸವಾಗಿದೆ ಎಂದು ಮಗಳಿಗೆ ಅನಿಸಿತು. ಸುಮತಿಯನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದಳು. ಮುಖ ಸ್ವಲ್ಪ ಊದಿರುವಂತೆ ಕಾಣಿಸಿತು. ಕಣ್ಣಿನ ಸುತ್ತಲೂ ಸ್ವಲ್ಪ ಬಾತು ಕೊಂಡಂತೆ ಇದೆ. ಕೈಕಾಲು ಸಹ ಸ್ವಲ್ಪ ಊದಿಕೊಂಡಿದೆ. ಆದಷ್ಟು ಬೇಗ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆಂದು ತೀರ್ಮಾನಿಸಿ.,…. ಅಮ್ಮ ನಾನು ಬೇಗ ಸ್ನಾನ ಮುಗಿಸಿ ಬರುತ್ತೇನೆ…. ಎಂದು ಹೇಳಿ, ಹತ್ತನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳನ್ನು ಕರೆದು….”ಬೇಗ ತಿಂಡಿ ಮಾಡಿ, ನಾನು ನನ್ನ ತಾಯಿಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಬೇಕಿದೆ”…. ಎಂದಳು. ಮಕ್ಕಳು ಸರಿ ಎಂದು ತಲೆ ಆಡಿಸಿ ತಿಂಡಿ ಮಾಡಲು ಅಡುಗೆ ಮನೆಗೆ ಹೋದರು. ಅಡುಗೆಯವರು ಊರಿಗೆ ಹೋಗಿದ್ದ ಕಾರಣ ಸದ್ಯಕ್ಕೆ ಮಕ್ಕಳೇ ತಿಂಡಿ ಮಧ್ಯಾಹ್ನಕ್ಕೆ ಅಡುಗೆ ಮಾಡಿಕೊಳ್ಳುತ್ತಿದ್ದರು. ಜೊತೆಗೆ ಸುಮತಿ ಮಗಳು ಸಹಾಯ ಕೂಡ ಸಹಾಯ ಮಾಡುತ್ತಿದ್ದಳು. ಮನಸ್ಸಿನಲ್ಲಿ ಸ್ವಲ್ಪ ಆತಂಕವನ್ನು ತುಂಬಿಕೊಂಡೇ ಮಗಳು ಬೇಗನೆ ಸ್ನಾನ ಮುಗಿಸಿದಳು. ಅನಾಥಾಶ್ರಮದ ಮಕ್ಕಳು ತಾಯಿ ಮಗಳು ಇಬ್ಬರಿಗೂ ಚಪಾತಿ ಟೊಮೇಟೊ ಚಟ್ನಿ ಮಾಡಿ ತಿನ್ನಲು ಕೊಟ್ಟರು.

ಸುಮತಿಗೆ ಹೆಚ್ಚು ನಡೆಯಲು ಸಾಧ್ಯವಿಲ್ಲ ಎಂದು ಮಗಳಿಗೆ ಅನಿಸಿತು. ಅನಾಥಾಶ್ರಮದ ಹುಡುಗನೊಬ್ಬನನ್ನು ಕರೆದು ದಾರಿಯಲ್ಲಿ ಹೋಗುವ ಯಾವುದಾದರೂ ಆಟೋರಿಕ್ಷಾವನ್ನು ನಿಲ್ಲಿಸಿ ಅನಾಥಾಶ್ರಮ ಅಂಗಳಕ್ಕೆ ಕರೆದುಕೊಂಡು ಬರುವಂತೆ ಹೇಳಿದಳು. ಸ್ವಲ್ಪ ಹೊತ್ತಿನಲ್ಲೇ ಆಟೋ ಬಂದಿತು. ತಾಯಿಯನ್ನು ಕರೆದುಕೊಂಡು ಮಗಳು ಆಟೋ ಹತ್ತಿದಳು. ದೊಡ್ಡ ಮಕ್ಕಳನ್ನು ಉದ್ದೇಶಿಸಿ…. “ಎಲ್ಲರಿಗೂ ತಿಂಡಿಯನ್ನು ಕೊಟ್ಟು ರೆಡಿಯಾಗಿ, ಬಾಗಿಲಿಗೆ ಬೀಗ ಹಾಕಿಕೊಂಡು ಹತ್ತಿರದಲ್ಲಿರುವ ಡಮ್ ಅಂಡ್ ಢಫ್ ಶಾಲೆಯ ಮೇಲ್ವಿಚಾರಕರ ಕೈಲಿ ಕೀಲಿಯನ್ನು ಕೊಟ್ಟು ಶಾಲೆಗೆ ಹೋಗಿ”…. ಎಂದು ತಿಳಿಸಿದಳು. ಹತ್ತಿರದಲ್ಲಿಯೇ ಸಕಲೇಶಪುರದ ಸರ್ಕಾರಿ ಆಸ್ಪತ್ರೆ ಇದ್ದ ಕಾರಣ ಆಟೋ ಬೇಗನೆ ಆಸ್ಪತ್ರೆಯನ್ನು ತಲುಪಿತು. ಸುಮತಿಯನ್ನು ಆಟೋದಿಂದ ನಿಧಾನವಾಗಿ ಇಳಿಸಿ, ಆಸ್ಪತ್ರೆಯ ವರಾಂಡದ ಬೆಂಚಿನ ಮೇಲೆ ಕುಳ್ಳಿರಿಸಿ, ಕಂಪೌಂಡರ್ ಹತ್ತಿರ ಹೋಗಿ ಚೀಟಿಯನ್ನು ಬರೆಸಿಕೊಂಡು ಬಂದಳು. ನಂತರ ಸುಮತಿಯ ಕೈ ಹಿಡಿದು ನಿಧಾನವಾಗಿ ನಡೆಸಿಕೊಂಡು ಫಿಜಿಷಿಯನ್ ವೈದ್ಯರ ಕೊಠಡಿಯ ಬಳಿಗೆ ಹೋದಳು. ಅಲ್ಲಿಯೇ ಇದ್ದ ಬೆಂಚಿನ ಮೇಲೆ ಸುಮತಿಗೆ ಕುಳಿತುಕೊಳ್ಳಲು ಹೇಳಿ ಸರತಿಯ ಸಾರಿನಲ್ಲಿ ತಾನು ನಿಂತಳು. ಅಟೆಂಡರ್ ಕರೆದಾಗ ತಾಯಿಯನ್ನು ನಿಧಾನವಾಗಿ ಎಬ್ಬಿಸಿ ಒಳಗೆ ಕರೆದುಕೊಂಡು ಹೋದಳು. ಸುಮತಿಯನ್ನು ಕಂಡ ಕೂಡಲೇ ವೈದ್ಯರು…. “ಏನು ಸುಮತಿಯವರೇ ಹೇಗಿದ್ದೀರಾ?… ಎಂದು ಕೇಳಿದರು. ಸುಮತಿ ವೈದ್ಯರ ಮುಖವನ್ನು ನೋಡಿದಳು. ಅವಳಿಗೆ ವೈದ್ಯರ ಮುಖ ಅಸ್ಪಷ್ಟವಾಗಿ ಕಾಣಿಸಿತು. ಕನ್ನಡಕವನ್ನು ತೆಗೆದು ಸೀರೆಯ ಸರಗಿನಿಂದ ಒರಸಿಕೊಂಡು ಪುನಃ ಹಾಕಿಕೊಂಡಳು… “ಸರ್ ಕೆಲವು ದಿನಗಳಿಂದ ನನ್ನ ಆರೋಗ್ಯ ಸರಿ ಇಲ್ಲ…. ತುಂಬಾ ಆಯಾಸವಾಗುತ್ತಿದೆ… ಏನನ್ನೂ ತಿನ್ನಲು ಸಾಧ್ಯವಾಗುತ್ತಿಲ್ಲ…. ಆಹಾರವನ್ನು ತಿಂದರೆ, ನೀರು ಕುಡಿದರೆ ವಾಂತಿ ಬರುವ ಹಾಗೆ ಆಗುತ್ತಿದೆ”…. ಎಂದಳು.

ಸುಮತಿಯನ್ನು ಪರಿಶೀಲಿಸಿದ ವೈದ್ಯರು ಮಗಳನ್ನು ನೋಡುತ್ತಾ…. “ನಾನು ಕೆಲವು ರಕ್ತ ಪರೀಕ್ಷೆ ಹಾಗೂ ಎಕ್ಸರೇ ಪರೀಕ್ಷೆಗೆ ಈ ಚೀಟಿಯಲ್ಲಿ ಬರೆದು ಕೊಡುತ್ತೇನೆ…. ಅಮ್ಮನನ್ನು ಕರೆದುಕೊಂಡು ಹೋಗಿ ಈ ಪರೀಕ್ಷೆಗಳನ್ನು ಮಾಡಿಸಿಕೊಂಡು ಅವುಗಳ ವರದಿಯನ್ನು ತಂದು ನನಗೆ ತೋರಿಸಮ್ಮ”….. ಎಂದು ಹೇಳಿದರು. ಮಗಳು…”ಸರಿ ಸರ್”…. ಎಂದು ಹೇಳುತ್ತಾ ಸುಮತಿಯ ಕೈ ಹಿಡಿದುಕೊಂಡು ನಿಧಾನವಾಗಿ ನಡೆಸಿಕೊಂಡು ರಕ್ತ ಪರೀಕ್ಷೆ ಕೇಂದ್ರದ ಬಳಿಗೆ ಕರೆದುಕೊಂಡು ಹೋದಳು. ರಕ್ತ ಪರೀಕ್ಷೆ ಮಾಡಿಸಿದ ನಂತರ ಎಕ್ಸರೇ ಪರೀಕ್ಷೆ ಮಾಡುವಲ್ಲಿಗೆ ಕರೆದುಕೊಂಡು ಹೋದಳು. ಎಕ್ಸರೇ ಪರೀಕ್ಷಿಸುವಾತ ಎಕ್ಸರೇ ಯಂತ್ರದ ಮುಂದೆ ಸುಮತಿಯನ್ನು ನಿಲ್ಲಿಸಿ, ಪರೀಕ್ಷೆ ಮಾಡಲು ಪ್ರಾರಂಭಿಸಿದರು…. “ಅಮ್ಮಾ ನೀವು ಸೀರೆಯ ಸೆರಗಲ್ಲಿ ಏನನ್ನು ಇಟ್ಟುಕೊಂಡಿದ್ದೀರಿ?…. ಅದನ್ನು ಮಗಳ ಕೈಗೆ ಕೊಡಿ”…. ಎಂದರು. ಆತನ ಮಾತನ್ನು ಕೇಳಿ ಸುಮತಿ…” ಸರ್ ನನ್ನ ಕೈಲಿ ಏನೂ ಇಲ್ಲ”… ಎಂದಳು. ಎಕ್ಸರೇ ಪರೀಕ್ಷಿಸುವಾತ ಸಂಶಯ ಬಂದು ಮತ್ತೆ ಪರೀಕ್ಷಿಸಿದನು. ಏಕೆ ಏನೋ ಅಡ್ಡ ಇರುವಂತೆ ಕಾಣಿಸುತ್ತಿದೆಯಲ್ಲಾ ಎಂದುಕೊಳ್ಳುತ್ತಾ ಮತ್ತೆ ಮತ್ತೆ ಪರೀಕ್ಷಿಸಿದನು. ಎಕ್ಸರೇ ಪರೀಕ್ಷೆ ಮುಗಿದ ನಂತರ ಸ್ವಲ್ಪ ಹೊತ್ತು ಅಲ್ಲಿಯೇ ಹೊರಗೆ ಕಾದು ಕುಳಿತುಕೊಳ್ಳಲು ಹೇಳಿದರು. ಎಕ್ಸರೇ ಪರೀಕ್ಷಿಸುವಾತ ಹೇಳಿದ ಮಾತೇ ಮಗಳ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು. ಆತ ಏಕೆ ಹಾಗೆ ಹೇಳಿರಬಹುದು? ಎಂದು ಯೋಚಿಸುತ್ತಾ ತಾಯಿಯ ಕೈ ಮೇಲೆ ಕೈ ಇಟ್ಟು…. ಏನು ಇರೋದಿಲ್ಲ ಅಮ್ಮಾ…. ಎಂದು ಹೇಳಿ, ಆತ ಏಕೆ ಹಾಗೆ ಹೇಳಿರಬಹುದು? ಎಂದು ಆಲೋಚಿಸುತ್ತಾ ಕುಳಿತಳು.

ಸ್ವಲ್ಪ ಹೊತ್ತು ಕಾದು ಕುಳಿತ ನಂತರ ಎಕ್ಸರೇ ವರದಿ ಬಂದಿತು. ಆತ ಮಗಳನ್ನು ಒಳಗೆ ಕರೆದು…. “ಆದಷ್ಟು ಬೇಗ ನಿನ್ನ ಅಮ್ಮನ ವರದಿಯನ್ನು ವೈದ್ಯರಿಗೆ ತೋರಿಸು… ಹೆಚ್ಚು ತಡ ಮಾಡಬೇಡ”…. ಎಂದು ಹೇಳಿದರು. ಅವರು ಹೇಳಿದ ಮಾತಿನಿಂದ ಮಗಳಿಗೆ ಆತಂಕವಾಯಿತು. ಎಕ್ಸರೇ ಪರೀಕ್ಷಿಸುವವನ ಮುಖವನ್ನು ನೋಡಿದಳು…. “ನಾನು ಇಲ್ಲಿ ಏನನ್ನು ಹೇಳಲು ಸಾಧ್ಯವಿಲ್ಲ…. ಬೇಗ ತೆಗೆದುಕೊಂಡು ಹೋಗಿ ವೈದ್ಯರಿಗೆ ತೋರಿಸು ಅವರು ಎಲ್ಲವನ್ನೂ ನಿಮಗೆ ತಿಳಿಸುತ್ತಾರೆ”…. ಎಂದರು. ಅವರು ಹೇಳಿದ ಮಾತನ್ನು ಕೇಳಿ ಆತಂಕದಿಂದಲೇ ತಾಯಿಯ ಕೈಯನ್ನು ಹಿಡಿದು ನಿಧಾನವಾಗಿ ಎಬ್ಬಿಸಿ ವೈದ್ಯರ ಕೊಠಡಿಯ ಬಳಿಗೆ ಕರೆದುಕೊಂಡು ಹೋದಳು. ಅಟೆಂಡರ್ ಕೈಲಿ ವರದಿಯನ್ನು ಕೊಟ್ಟಾಗ ಆತ ಆ ವರದಿಯನ್ನು ತೆಗೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿದನು. ಅಟೆಂಡರ್ ಹೊರಗೆ ಬಂದು ತಾಯಿ ಮಗಳು ಇಬ್ಬರನ್ನೂ ವೈದ್ಯರು ಕರೆಯುತ್ತಿದ್ದಾರೆ ಎಂದು ತಿಳಿಸಿದನು. ಇಬ್ಬರೂ ವೈದ್ಯರ ಕೊಠಡಿಯ ಒಳಗೆ ಪ್ರವೇಶಸಿದರು. ಒಳಗೆ ಹೋದಾಗ ವೈದ್ಯರು ಎಕ್ಸರೇ ಫಿಲಂ ಅನ್ನು ಕೂಲಂಕುಶವಾಗಿ ಪರೀಕ್ಷಿಸಿ ನೋಡುತ್ತಿದ್ದರು.
ತಾಯಿ ಮತ್ತು ಮಗಳು ಒಳಗೆ ಬಂದಾಗ ಕುಳಿತುಕೊಳ್ಳುವಂತೆ ಹೇಳಿ, ಸುಮತಿಯನ್ನು ಉದ್ದೇಶಿಸಿ…. “ಸುಮತಿ…ಯಾವಾಗನಿಂದ ನಿಮಗೆ ಅಸ್ವಸ್ಥತೆ ಅನಿಸುತ್ತಿತ್ತು? ಎಂದು ಕೇಳಿದರು…. “ಬಹಳ ದಿನಗಳಿಂದ ನನ್ನನ್ನು ಸ್ವಲ್ಪ ಅಸ್ವಸ್ಥತೆ ಕಾಡುತ್ತಿದೆ…. ನಿಮ್ಮ ಸೂಚನೆಯಂತೆ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ…. ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದೇನೆ…. ಕೆಲವೊಮ್ಮೆ ಊಟದಲ್ಲಿ ಪಥ್ಯ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ”…. ಎಂದಳು.


About The Author

Leave a Reply

You cannot copy content of this page

Scroll to Top