ಧಾರಾವಾಹಿ ಸಂಗಾತಿ-11
ಜಯದೇವಿತಾಯಿ ಲಿಗಾಡೆ
ಜೀವನಗಾಥೆ
ಸವಿತಾ ದೇಶಮುಖ
ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆಗಣನೀಯಕೊಡುಗೆ ನೀಡಿದ ಹಿರಿಯ ಚೇತನ

ಜಯದೇವಿ ತಾಯಿಯವರ ಜೀವನ ತ್ಯಾಗದ ಮತ್ತೊಂದು ಹೆಸರು.
ಸಮಾಜ ಸೇವೆಯ ಪಥದಲ್ಲಿ ನಡೆದುಹೋಗುತ್ತಿದ್ದ ಅವರ ಹೆಜ್ಜೆಗಳು ಎಷ್ಟು ದೃಢವಾಗಿದ್ದವೋ, ಅಷ್ಟೇ ಮನೆಯ ಹೊಣೆಗಾರಿಕೆಯನ್ನು ಹೊತ್ತಿದ್ದ ಹೃದಯ ಅಷ್ಟೇ ಮೃದುವಾಗಿತ್ತು.
೧೯೪೨ರ ವೇಳೆ ಅಷ್ಟರಲ್ಲಿ ತಾಯಿಯವರು ಇನ್ನೂ ಮೂರು ಮಕ್ಕಳಿಗೆ ಜನ್ಮ ನೀಡಿದರು…ಇಗ ತಾಯಿಯವರಿಗೆ ಐದು ಜನ ಮಕ್ಕಳಾದರು…
ಅತ್ಯಂತ ಸದೃಢ ಸದ್ೃಪಿ ಎರಡು ಗಂಡು ಮಕ್ಕಳು ಪ್ರಭುರಾಜ ಹಾಗು ಬಸವರಾಜ ಜನಿಸಿದರು. ನಂತರ ಒಂದು ಸುಂದರ ಹೆಣ್ಣು ಮಗು ಲಲ್ಲೇಶ್ವರಿ(ನನ್ನ ತಾಯಿ )ಜನ್ಮ ಕೊಟ್ಟರು.
ಒಂದೆಡೆ ಸಮಾಜದ ನೋವುಗಳನ್ನು ಕೇಳಿ ಪರಿಹರಿಸಲು ಓಡಾಡುತ್ತಿದ್ದ ತಾಯಿಯವರು, ಮತ್ತೊಂದೆಡೆ ತಮ್ಮ ಪುಟ್ಟ ಮಕ್ಕಳ ಅಳುವಿನಲ್ಲೂ, -ನಗುಮುಖದಲ್ಲೂ ಜೀವನದ ಅರ್ಥವನ್ನು ಕಂಡುಕೊಳ್ಳುತ್ತಿದ್ದರು.
ಹಗಲು ಜನರ ನಡುವೆ ತಿರುಗಿ, ರಾತ್ರಿ ಮಕ್ಕಳೊಡನೆ ಸಮಯ ತೆಗೆಯುತ್ತಿದ್ದರು.ಅವರಿಗೆ ವಿಶ್ರಾಂತಿ ಅನ್ನುವುದು ಇರಲಿಲ್ಲ. ಸಮಾಜ ಸೇವೆಎಂಥ ಪವಿತ್ರ ದಾರಿ ಒಂದೆಡೆ ಇದ್ದರೆ, ತಾಯಿಯ ಹೃದಯದ ಕರ್ತವ್ಯ ಮತ್ತೊಂದೆಡೆ ಇತ್ತು. ಆದರೆ ಜಯದೇವಿ ತಾಯಿಯವರು ಯಾವತ್ತೂ ದಣಿಯಲಿಲ್ಲ.
ಸಮಾಜದ ಸೇವೆಯ ಜೊತೆಗೆ ಕುಟುಂಬದ ಪ್ರೀತಿಯನ್ನೂ ಸಮಾನವಾಗಿ ಪಾಲಿಸಿಕೊಂಡು ಹೋಗುತ್ತಿದ್ದ ಅವರ ಜೀವನ ನಿಜಕ್ಕೂ ಆದರ್ಶಮಯವಾಗಿತ್ತು.
ಒಂದೇ ಸಮಯದಲ್ಲಿ ಸಮಾಜಕ್ಕೆ ದೀಪವಾಗಿಯೂ, ತಮ್ಮ ಮಕ್ಕಳಿಗೆ ಮಮತೆಯ ನೆರಳಾಗಿಯೂ ಬದುಕಿದ ಜಯದೇವಿ ತಾಯಿಯವರ ಜೀವನಗಾಥೆ ತಾಯಿತನದ ಮಹತ್ವವನ್ನು ಹೇಳುವ ಅಮರ ಕಥೆಯಾಗಿದೆ.
ಯಾಕೆಂದರೆ ಅವರ ಗಂಡ ಚನ್ನ ಮಲ್ಲಪ್ಪನವರ ಆರೋಗ್ಯವು ಆಗಲೇ ಹದಗೆಡಲಾರಂಭಿಸಿತ್ತು.
ಮಧ್ಯ ಮಧ್ಯದಲ್ಲಿ ತಾಯಿಯವರ ಆರೋಗ್ಯವು ಕೈಕೊಡುತ್ತಿತ್ತು.
ಗಂಡನ ಸೇವೆ, ಮಕ್ಕಳ ಪೋಷಣೆ,ಸಮಾಜ ಪರ ಕೆಲಸಗಳು, ಸಾಹಿತ್ಯದ ಸೇವೆ, ಸಿದ್ದರಾಮನ ಆರಾಧನೆಯು ಸತತವಾಗಿ ನಡೆದಿರುತ್ತಿತ್ತು.
ಎಲ್ಲ ಮನೆಗಳಲ್ಲಿ ಕಂಡುಬರುವಂತೆ, ಜಯದೇವಿ ತಾಯಿಯವರ ಮನೆಯಲ್ಲಿಯೂ ಅಣ್ಣತಮ್ಮಂದಿರ ಮನಸ್ತಾಪಗಳು ಬೆಳೆಯುತ್ತಾ ನಡೆದವು.ಸಣ್ಣಸಣ್ಣ ಮಾತುಗಳಿಂದ ಆರಂಭವಾದ ಭಿನ್ನಾಭಿಪ್ರಾಯಗಳು. ಅಣ್ಣ ತಮ್ಮಂದಿರು ಬೇರೆಯಾಗುವ ಸಂದರ್ಭ ಬಂದಿತು. ಪಾಲು ಮಾಡಲಾಗಿ ಲಿಗಾಡೆಯವರ ದೊಡ್ಡವಾಡಿಯು ಸಣ್ಣ ತಮ್ಮನ ಪಾಲಿಗೆ ಬಂದಿತ್ತು. ಮನೆಯ ಶಾಂತಿ ನಿಧಾನವಾಗಿ ಕರಗುತ್ತ ಹೋಗಿತು.
ಒಂದು ದಿನ ಆ ಮನೆಯ ಮೌನವೇ ಹೃದಯವನ್ನು ಕಲುಕುವಂತಾಯಿತು…….
ಅತ್ತೆ ಪ್ರಯಾಗಬಾಯಿಯು ಯಾವುದೋ ಕೆಲಸಕ್ಕೆ ಬೇರೆ ಊರಿಗೆ ಹೋಗಿದ್ದರು. ಹಾಗೆ ಗಂಡ ವೈದ್ಯರಿಗೆ ತೋರಿಸಿಕೊಂಡು ಬರಲು ಕೋಲ್ಕತ್ತಾಗೆ ಹೋಗಿದ್ದರು,
ಜಯದೇವಿ ತಾಯಿಯವರ ಪುಟ್ಟ ಮಗು ಜ್ವರದಿಂದ ಕಂಗೆಟ್ಟು ಮಲಗಿತ್ತು. ತಾಯಿಯ ಕಣ್ಣುಗಳಲ್ಲಿ ಆತಂಕ, ಹೃದಯದಲ್ಲಿ ಕಳವಳ. ಮಗು ಜ್ವರದಲ್ಲಿ ಮೈ ಸುಡುತ್ತಿತ್ತು……
ಆದರೆ ಆ ಮನೆಯಲ್ಲಿದ್ದ ಕೆಲವು ಹೃದಯಗಳು ಆ ನೋವನ್ನು ಅರ್ಥಮಾಡಿಕೊಳ್ಳಲಿಲ್ಲ. ಜ್ವರದಿಂದ ನರಳುತ್ತಿದ್ದ ಆ ಮಗುವಿನ ಕಡೆಗೆ ನಿರ್ಲಕ್ಷ್ಯದ ಕಣ್ಣುಗಳು ತಿರುಗಿದವೇ…….. ಹೊರತು ಮಗುವಿಗೇನು ಆಗಿದೆ ಅಂತ ಕೇಳದೇ ಹೊರಗಡೆ ಹೊರಟು ಹೋದರು.
ತಾಯಿಯವರಿಗೆ ಏನು ಮಾಡಬೇಕು ಅನ್ನುವುದು ತಿಳಿಯಲಿಲ್ಲ…. ಹೀಗಾಗಿ ಮನೆಯಲ್ಲಿ ಯಾವುದಾದರೂ ಔಷದವನ್ನು ತರಬೇಕು ಎಂದು ಮೇಲೆಗಡೆ ಕೋಣೆಗೆ ಹೋದಾಗ ಆ ಕೋಣೆಗಳಿಗೆಲ್ಲ ಬೀಗ ಹಾಕಿದ್ದು ನೋಡಿ ಎದೆ ಝಲ್ಲೆಂದಿತ್ತು…….!!??
ತಾಯಿಗೆ ಆ ಕ್ಷಣ ಸ್ಪಷ್ಟವಾಯಿತು — ಇಲ್ಲಿ ಉಳಿದರೆ ತನ್ನ ಮಕ್ಕಳಿಗೆ ಬೇಕಾದ ಮಮತೆ ಮತ್ತು ಆರೈಕೆ ಸಿಗುವುದಿಲ್ಲ ಎಂಬ ಸತ್ಯತಿಳಿದು ಕಣ್ಣೀರು ತಡೆದುಕೊಂಡು, ತನ್ನ ಮಕ್ಕಳನ್ನು ಮುದ್ದಾಗಿ ತಬ್ಬಿಕೊಂಡರು, ಹೊಸ ನಿರ್ಧಾರವನ್ನು ತೆಗೆದುಕೊಂಡರು. ತನ್ನ ಮಕ್ಕಳಿಗಾಗಿ ಒಂದು ಬೇರೆ ಮನೆ ಕಟ್ಟಬೇಕೆಂಬ ಮನಸ್ಸು ಮಾಡಿದರು.
ಆ ನಿರ್ಧಾರದಲ್ಲಿ ನೋವು ಇತ್ತು…
ಕುಟುಂಬದವರೆಲ್ಲರೂ ಒಂದಾಗಿ ಒಂದು ಕಡೆ ಸಂತೋಷದಿಂದ ನಗುನಗುತ ನಲುವಿನಲಿ ನಲಿಯುತ ಬಾಳಬೇಕೆಂಬುವ ಆಶೆಯಗಳ ವಿಚ್ಛೇದನೆಯ ವೇದನೆ ಅದಾಗಿತ್ತು…….!!!
ಹೀಗಾಗಿ ಜಯದೇವಿ ತಾಯಿಯವರು ತಮ್ಮ ನೋವನ್ನು ಮನದಾಳದಲ್ಲಿ ಮರೆಮಾಡಿಕೊಂಡು, ಮಕ್ಕಳ ಭವಿಷ್ಯಕ್ಕಾಗಿ ಹೊಸ ಜೀವನದ ದಾರಿಯನ್ನು ಆರಿಸಿಕೊಂಡರು.
ಜ್ವರದಲ್ಲಿದ್ದ ಮಗುವನ್ನು ಎತ್ತಿಕೊಂಡು ತವರು ಮನೆ ಕಡೆ ಹೆಜ್ಜೆ ಹಾಕಿದರು.
ಆ ದಿನದಿಂದ ಅವರ ಜೀವನದಲ್ಲಿ ಮತ್ತೊಂದು ಹೊಸ ಹೋರಾಟ ಪ್ರಾರಂಭವಾಯಿತು… ಆದರೆ ಆ ಹೋರಾಟದ ಹಿಂದಿದ್ದ ಶಕ್ತಿ — ತಾಯಿತನದಾಗಿತ್ತು.
ತವರು ಮನೆಯಲ್ಲಿ ತಂದೆ ತಾಯಿ ಅತ್ಯಂತ ಆತ್ಮೀಯತೆಯಿಂದ ಬರಮಾಡಿಕೊಂಡು. ಅವರನ್ನು ಸಂತೈಸಿ ಅಳಿಯ ಬಂದ ಮೇಲೆ ಬೇರೆ ಮನೆಗೆ ಹೋಗಲು ಬಿಡದೆ ತಮ್ಮ ಮನೆಯಲ್ಲಿಯೇ ಕೆಳಗಡೆ ಇರಲು ಅನು ಮಾಡಿಕೊಟ್ಟರು. ಅವರ ಮನೆಯ ಎದುರುಗಡೆ ವಾರದ ಮಲ್ಲಪ್ಪನವರ ಮನೆಯಿತ್ತು. ಅವರ ವಾಡೆಯ ಎದುರುಗಡೆ ಜಗ ಖಾಲಿ ಇತ್ತು. ಆ ಜಗವನ್ನು ಖರೀದಿ ಮಾಡಿ ಅಲ್ಲಿಯೇ ಮನೆ ಕಟ್ಟಲು ಪ್ರಾರಂಭಿಸಿದರು.
ಆ ಮನೆಗೆ ಅತ್ಯಂತ ಪ್ರೀತಿಯಿಂದ *ಜಯನೀಕೆತನ* ಅಂತ ತಾಯಿಯವರ ಹೆಸರಲ್ಲಿ ಗಂಡ ಚೆನ್ನಮಲ್ಲಪ್ಪನವರು ಮನೆ ಕಟ್ಟಿಸಿದರು.
ಇಪ್ಪತ್ತೆರಡು ಕೋಣೆಗಳನ್ನು ಹೊಂದಿರುವ ಭವ್ಯವಾದ ಮನೆ…. ಅರಮನೆಯಂತೆ ವಿಶಾಲವಾಗಿ ಕಟ್ಟಿದರು. ದೂರದಿಂದ ನೋಡಿದವರಿಗೆ ಅದು ಸಾಮಾನ್ಯ ಮನೆ ಅಲ್ಲ, ಒಂದು ದೊಡ್ಡ ಸಂಸ್ಕೃತಿಯ ಸಂಕೇತದಂತೆ ಕಾಣುತ್ತಿತ್ತು.
ಮನೆಯ ಒಳಗೆ ಕಾಲಿಟ್ಟ ತಕ್ಷಣ ದೊಡ್ಡ ವಿಶಾಲವಾದ ಶಿವಯೋಗಿ ಸಿದ್ದರಾಮನ ಭಾವಚಿತ್ರದ ದರ್ಶನ ಮಾಡಿ ಒಳಗೆ ಹೋಗಬೇಕಾಗುತಿತ್ತು…..
_
ಸಿದ್ದರಾಮನ ಭಾವ ಚಿತ್ರ

ಒಳಗೆ ಹೋದರೆ ವಿಶಾಲವಾದ ಅಂಗಳ ಕಣ್ಣಿಗೆ ಬೀಳುತ್ತಿತ್ತು . ಮನೆಯಲ್ಲಿ ಚೆನ್ನಾಗಿ ಬೆಳಕು ಗಾಳಿ ಆಡಲೆಂದು ಮಧ್ಯದಲ್ಲಿ ತೆರೆದ ಅಂಗಳವಿತ್ತು.ಮನೆಯ ವಿವಿಧ ದಿಕ್ಕುಗಳಿಗೆ ಕೊಣೆಗಳು. ಪ್ರತಿಯೊಂದು ಕೋಣೆಯೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿತ್ತು—ಕೆಲವು ವಿಶ್ರಾಂತಿಗಾಗಿ, ಕೆಲವು ಅತಿಥಿಗಳಿಗಾಗಿ,
ಇನ್ನೊಂದು ದೇವರ ಮನೆಗಾಗಿ ಮೀಸಲಿದ್ದರೆ ಒಂದು ದೊಡ್ಡ ಅಡಿಗೆಯ ಮನೆ ಇನ್ನೊಂದು ಚಿಕ್ಕ ಅಡಿಗೆ ಮನೆ ಇತ್ತು .ಇನ್ನೊಂದು ಕಾಳುಗಳ ಸಂಗ್ರಹಣೆ ಮಾಡುವ ಕೋಣೆ, ಊಟದ ಮನೆ ಇನ್ನೊಂದು ಮನೆಯ ವಸ್ತ ಒಡವೆಗಳನ್ನು ಕಾಗದ ಪತ್ರಗಳನ್ನು ಬಂಗಾರ ಬೆಳ್ಳಿಯ ಸಾಮಗ್ರಿಗಳನ್ನು ಇಡುವ ಟ್ರೆಝರಿ ಕೋಣೆ ಬೇರೆಯಾಗಿತ್ತು.
ಒಂದು ವಿಶಾಲವಾದ ಕೋಣೆ ಬಡ್ಡಿ ವ್ಯವಹಾರದಲ್ಲಿ ಅಡವಿ ಇಟ್ಟುಕೊಂಡ ಸಾಮಗ್ರಿಗಳದ್ದು.(ಈ ಕೋಣೆ ತಾಯಿಯವರಿಗೆ ಇಷ್ಟವಾಗುತ್ತಿರಲಿಲ್ಲ ಏಕೆಂದರೆ ಜನರು ಅನಿವಾರ್ಯತೆಯಲ್ಲಿ ತಂದಿಡುವ ಸಾಮಗ್ರಿಗಳನ್ನು ನೋಡಿದರೆ ಅವರಿಗೆ ಬಹಳ ಕಳಗಳಾಗುತ್ತಿತ್ತು)
ಹಾಗೇ ನೆಲಮನೆಯಲ್ಲಿ ಸುಮಾರು 14 ಮುನಿಮರು(ಕಾರಭಾರಿಗಳು )ಕುಳಿತುಕೊಂಡು ಇಡೀ ಆಸ್ತಿಯ ವಹಿವಾಟದ ಲೆಕ್ಕಾಚಾರವನ್ನು ಇಡಲು ಬರುತ್ತಿದ್ದರು .ಅವರಿಗಾಗಿ ಕೆಳಮನೆಯಲ್ಲಿ ಒಂದು ದೊಡ್ಡ ಮನೆ ಕಟ್ಟಲಾಗಿತ್ತು. ಅದರ ಮೇಲ್ಗಡೆ ಇನ್ನೊಂದು ರೂಮು ಹೊರಗಡೆಯಿಂದ ಬಂದು ಹೋಗುವರಿಗಾಗಿ ಆಫೀಸ್ ರೂಮ್ ಅನ್ನು ಮಾಡಲಾಗಿತ್ತು.
ಮೊದಲನೇ ಅಂತಸ್ತಿನ ಕೋಣೆಗಳೆಲ್ಲ ಮಕ್ಕಳು- ಸೊಸೆಯಂದಿರಗಾಗಿ ತಮಗಾಗಿ ಮೀಸಲಿದ್ದವು .ಅಲ್ಲಿ ಒಂದು ದೊಡ್ಡ ಹಾಲ್ ಕಟ್ಟಲಾಗಿತ್ತು. ಕೆಳಗಡೆ ಒಂದು ಕೂಡಾ ದೊಡ್ಡ ಹಾಲ್ ಇತ್ತು……ಮನೆಗೆ ಬಂದು ಹೋಗುವ ಅತಿಥಿಗಳಾಗಿ …
ಸಂಪತ್ ಭರಿತವಾದ ಮನೆ……..!!

ಜಯದೇವ ತಾಯಿಯವರ ವಾಡೆ
ಮೊದಲನೇ ಅಂತಸ್ತಿಗೆ ಹೋದರೆ ಎದುರುಗಡೆ ಜಯದೇವಿ ತಾಯಿಯವರ ಕೋಣೆ, ಎಡ ಭಾಗಕ್ಕೆ ಚಿಕ್ಕದೊಂದು ಹೂವೂ ತೋಟವನ್ನು ನಿರ್ಮಿಸಿಕೊಂಡಿದ್ದರು. ಅದಕ್ಕಾಗಿ ಗಾಳಿ ಬೆಳಕು ಆಡಲೆಂದು ಮೇಲೆ ಸ್ಥಳ ಬಿಟ್ಟಿದ್ದರು. ಸುಂದರ ಚಿಕ್ಕ ತೋಟದಲಿ ಹಸಿರು ಗಿಡಗಳು, ಬಣ್ಣ ಬಣ್ಣದ ಹೂಗಳು ಅವುಗಳಲ್ಲಿ ಮುಖ್ಯವಾಗಿ ಟ್ಯೂಬ್ ರೊಜ ಅಂದರೆ ನಿಶಿಗಂಧ ಹೂಗಳು ಬಹಳ ಪ್ರಿಯವಾದ ಹೂಗಳು ತಾಯಿಯವರಿಗೆ … ಇನ್ನೂ ‘ರಾತರಾಣಿ’ಹೂವುಗಳು ‘..ರಾತ್ರಿ ಸುಗಂಧ ಸುಸೂವ ಗಿಡಗಳಿದ್ದವು. ರಾತ್ರಿ ಪರಿಮಳವು ಗಾಳಿಯಲ್ಲಿ ಹರಡಿ ಮನೆಯ ವಾತಾವರಣವನ್ನು ಇನ್ನಷ್ಟು ಮನಮೋಹರ ವಾಗಿಸುತ್ತಿತ್ತು. ‘ಜಯನಿಕೇತನವು’ ಕೇವಲ ಸುಂದರ ಕಟ್ಟಡ ಮಾತ್ರವಲ್ಲ;
ಅದು ವೈಭವ, ಸಂಸ್ಕೃತಿ ಮತ್ತು ಆತಿಥ್ಯವನ್ನು ಹೊತ್ತು ನಿಂತಿರುವ ಒಂದು ಜೀವಂತ ಅರಮನೆ ಎಂಬ ಭಾವನೆಯನ್ನು ಮೂಡಿಸುತ್ತಿತ್ತು.
*ಜಯನಿಕೇತನ್*ಒಂದು ನಂದನ ವನದಂತೆ ರಾರಾಜಿಸಲಾರಂಭಿಸಿತ್ತು.

ಜಯದೇವಿ ತಾಯಿಯವರು ಬಳಸುತ್ತಿದ್ದ ಕನ್ನ
ಹಿರಿಯ ಮಗಳು ಮತ್ತು ತಂಗಿಯಂದಿರೇಲ್ಲ ಸೇರಿ ಶಾಲೆಗೆ ಹೋಗಿ ಬರುತ್ತಿದ್ದರು. ಹಿರಿಯ ಮಗಳು ಶಶಿಕಲಾ ತುಂಬಾ ಸುಂದರ ಹಾಗೂ ಜಾಣ ತಾಯಿಯಂತೆ ನಿರ್ಗಳವಾಗಿ ಹಾಡುವ ಹಾಗೂ ಭಾಷಣ ಮಾಡುತ್ತಿದ್ದರು.
ಜಯದೇವಿ ತಾಯಿಯವರು ಬಾಲ ಸಿದ್ದರಾಮ ಅಕ್ಕಮಹಾದೇವಿ ಮುಂತಾದ ಶರಣರ ನಾಟಕಗಳನ್ನು ತಾವೇ ಬರೆದು ಮಕ್ಕಳ ಕೈಯಲ್ಲಿ ನಾಡಹಬ್ಬದಲ್ಲಿ ನಟನೆ ಮಾಡಿಸುತ್ತಿದ್ದರು ಮುಖ್ಯ ಪಾತ್ರದಲ್ಲಿ ಮಗಳು ಶಶಿಕಲಾ ಭಾಗವಹಿಸುತಿದ್ದರು.
ಸಿದ್ದರಾಮನು ಮಲ್ಲಯ್ಯ ನೀನು ಎಲ್ಲಿ ಅಡಗಿದಿಯಾ ಎಂದು ಪರಿಪರಿಯಾಗಿ ಹಂಬಲಿಸಿ….ನಟನೆ ಮಾಡುತ್ತಿದ್ದ ದೃಶ್ಯವನ್ನು ನೋಡಿ ಧಾರಾಕಾರವಾಗಿ ತಾಯಿಯವರ ಕಣ್ಣೀರು ಹರಿಯಲಾರಂಭಿಸುತ್ತಿತ್ತು. ಭಾವುಕರಾಗುತ್ತಿದ್ದರು.
ಅಕ್ಕನ ಪಾತ್ರದಲ್ಲಿ ಮಗಳು…….
“ಅಳಿಸಂಕುಲವೇ ಮಾಮರವೇ ನೀವು ಕಣ್ಣಂಡಿರಾ ಎನ್ನ ಚೆನ್ನಮಲ್ಲಿಕಾರ್ಜುನನ್ನು ನೀವು ಕಂಡಿರಾ” ಅಂತ ಅತ್ಯಂತ ಭಾವಕಳಾಗಿ ಮಗಳು ನಟಿಸುತ್ತಿರುವದ ನೋಡಿ ಶರಣೆ ಅಕ್ಕನನ್ನು ನೆನೆದು ಹನಿಗಣ್ಣ ಆಗುತ್ತಿದ್ದರು.
ಮಗಳನ್ನು ಅತ್ಯಂತ ಅಭಿಮಾನದಿಂದ ಎದೆಗಪ್ಪಿ ಕೊಳ್ಳುತ್ತಿದ್ದರು.ತಮ್ಮ ಸಂಸ್ಕಾಗಳ ಗೂಡಿನಲಿ ಮಕ್ಕಳಿಗೆ ಬೆಳಿಸಲಾರಂಭೀಸಿದರು.
ಜಯದೇವಿ ತಾಯಿಯವರು ತಮ್ಮ ಬದುಕಿನ ಅನುಭವಗಳಿಂದ ಒಂದು ಮಹತ್ವದ ಸತ್ಯವನ್ನು ಅರಿತುಕೊಂಡಿದ್ದರು – ಸಮಾಜದ ಬದಲಾವಣೆ ಮನೆಯೊಳಗೇ ಆರಂಭವಾಗಬೇಕು ಎಂದು. ಅದಕ್ಕಾಗಿಯೇ ಅವರು ತಮ್ಮ ಮಕ್ಕಳನ್ನು ಶರಣ ಸಂಸ್ಕೃತಿಯ ಮೌಲ್ಯಗಳಲ್ಲಿ ಬೆಳೆಸಲು ಆರಂಭಿಸಿದರು.
ಮನೆಯೊಳಗೆ ಒಮ್ಮೆ ಇದ್ದ ಮೂಢನಂಬಿಕೆಗಳು, ಅನಾವಶ್ಯಕ ಆಚರಣೆಗಳು ನಿಧಾನವಾಗಿ ಕಣ್ಮರೆಯಾಗಲು ಆರಂಭಿಸಿದವು. ಜಯದೇವಿ ತಾಯಿಯವರು ಯಾವ ಮಡಿ ಮೈಲಿಗೆಯನ್ನು ಒಪ್ಪುತ್ತಿರಲಿಲ್ಲ…. ಜಾತಿ ಧರ್ಮ ನೀಚ ಸಂಕೋಲನದಿಂದ ಹೊರಗಿದ್ದರು.
“ಮನುಷ್ಯನಿಗೆ ಮಾನವೀಯತೆಯೇ ದೊಡ್ಡ ಧರ್ಮ” ಎಂದು ತಾಯಿ ಮಕ್ಕಳಿಗೆ ಹೇಳುತ್ತಿದ್ದರು.
ಹೆಣ್ಣು ಗಂಡೆಂದು ದೇವರು ಭೇಧ ತೋರಲಾರ ಎನ್ನುತ್ತಿದ್ದರು. ಮುಟ್ಟಾದರೆ ಹೆಣ್ಣನ್ನು ಕೀಳಾಗಿ ನೋಡುವುದು ಖಂಡಿಸುತ್ತಿದ್ದರು ಏಕೆಂದರೆ ತಾಯಿ ಜಗದಂಬೆಯು ಕೂಡ ಹೆಣ್ಣಲ್ಲವೇ ಅಂತ ಕೇಳುತ್ತಿದ್ದರು. ಅದಕ್ಕೆ ದೇವರನ್ನು ಆ ಸಮಯದಲ್ಲಿ ಯಾಕೆ ಮುಟ್ಟಬಾರದು ಅನ್ನುವ ಪ್ರಶ್ನೆ ಅವರದಾಗಿತ್ತು…!!???
ಅವರ ಮಾತುಗಳಲ್ಲಿ ಕೇವಲ ಉಪದೇಶವಿರಲಿಲ್ಲ; ಬದುಕಿನಲ್ಲಿ ಅವರು ಅದನ್ನು ಅನುಸರಿಸುತ್ತಿದ್ದರು.
ಮಕ್ಕಳು ಏನನ್ನಾದರೂ ಪ್ರಶ್ನಿಸಿದಾಗ,
“ಹೀಗೆ ಮಾಡಬೇಕು ಎಂದು ಹೇಳಿತಿದ್ದರು ಅದರ ಒಳ ಅಡಕವಾದ ಅರ್ಥ ಏನು ಎಂದು ತಿಳಿದುಕೊಳ್ಳಿ ಮೊದಲು ಎಂದು ಪ್ರೋತ್ಸಾಹಿಸುತ್ತಿದ್ದರು.
ಹೀಗಾಗಿ ಅವರ ಮನೆ ನಿಧಾನವಾಗಿ ಜ್ಞಾನ, ಸಮಾನತೆ ಮತ್ತು ಪ್ರೀತಿ ತುಂಬಿದ ಶರಣ ಸಂಸ್ಕೃತಿಯ ಮನೆ ಆಗಿ ರೂಪುಗೊಂಡಿತು.
ಅತ್ಯಂತ ಸಾಂಪ್ರದಾಯಸ್ತ ಮನೆಯಾದ ಲಿಗಾಡೆ ಮನೆತನದವರು ವೈಚಾರಿಕತೆಯ ಶರಣ ಆಚರಣೆ ಅತ್ತ ತಿರುಗಲಾರಂಭಿಸಿದರು.
*ಮೂಢನಂಬಿಕೆಗಳು ಮನುಷ್ಯನ ಮನಸ್ಸನ್ನು ಬಂಧಿಸುತ್ತವೆ… ಶರಣರ ಮಾರ್ಗ ಮನುಷ್ಯನ ಮನಸ್ಸನ್ನು ಮುಕ್ತಗೊಳಿಸುತ್ತದೆ.”*
ಆ ಮಾತುಗಳು ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಬೇರುರರಾಲಂಭೀಸಿದವು.
ಅವರು ಕೇವಲ ಮಕ್ಕಳಿಗೆ ತಾಯಿಯಾಗಿರಲಿಲ್ಲ ಮಾನವೀಯತೆಯ ಮೌಲ್ಯಗಳನ್ನು ಅಳವಡಿಸಿಕೊಂಡ ಶರಣ ಸಂಸ್ಕೃತಿಯ ವಾರಸುದಾರರು ಆಗಿ ಬೆಳೆಯಲು ಆರಂಭಿಸಿದರು.
ಹೀಗೆ, ಜಯದೇವಿ ತಾಯಿಯ ಮನೆ
ಅದು ಸಮಾನತೆ, ಜ್ಞಾನ ಮತ್ತು ಮಾನವೀಯತೆಯನ್ನು ಬೆಳೆಸುವ ಒಂದು ಚಿಕ್ಕ ಸಮಾಜ ಆಗಿತ್ತು.
ಇದಕ್ಕೆ ಉದಾಹರಣೆ ಎಂದರೆ ಜಯದೇವಿತಾಯಿಯವರ ಐದು ಅತ್ತೆಯಂದಿರು ಸಾಂಪ್ರದಾಯಸ್ಥರು …..ಪಡಸಾಲೆಯಲ್ಲಿ ನಿಂತು ಮಾತನಾಡಿದರೆ ,ಅಂಗಳದಲ್ಲಿ ನಿಂತು ಕುಂಕುಮವನ್ನು ಇಟ್ಟಿರೆ ಸಾವಿರ ಸಲ ಬೈದ ಅತ್ತೆಯಂದರು ….ಮುಂದೆ ತಾಯಿಯವರನ್ನು ಸಭೆ ಸಮಾರಂಭಗಳಿಗೆ ಅತ್ಯಂತ ಆನಂದಭರಿತರಾಗಿ ಕಳುಹಿಸಿ ಕೊಡಲಾರಂಭಿಸಿದರು .ಗಂಡನ ಅನಾರೋಗ್ಯದಲ್ಲಿ ತಾಯಿಯವರಿಗೆ ಸಮಾರಂಭಗಳಿಗೆ ಹೋಗಲು ಮನಸ್ಸಿಇಲ್ಲದಿದ್ದರು …. ಗಂಡ ತಮ್ಮ ಕಾರುಗಳನ್ನು ಕೊಟ್ಟು ಬೇರೆ ಊರುಗಳಿಗೆ ಹೋಗಿ ಭಾಷಣ ಮಾಡಿ ಬರಲು ಒತ್ತಾಯಿಸುತ್ತಿದ್ದರು.
” ಇಲ್ಲಿ ನನ್ನ ನೋಡಿಕೊಳ್ಳಲು ಅನೇಕ ಜನರಿದ್ದಾರೆ
…… ಅಲ್ಲಿ ನೀನು ಇಡೀ ಸಮಾಜಕ್ಕೆ ಬೇಕಾಗಿದ್ದೀಯಾ ನೀನು ಹೋಗು “ಅನ್ನುವಷ್ಟರ ಮಟ್ಟಿಗೆ ಅವರು ವೈಶಾಲ್ಯ ಮನೋಭಾವನೆಯನ್ನು ಹೊಂದಿದ್ದರು.
ಚೆನ್ನ ಮಲ್ಲಪ್ಪನವರು ಕಾಯಿಲೆಯಲ್ಲಿ ಬಳಲಾರಂಭಿಸಿದ ವೇದನೆಯ ದಿನಗಳು ಅವು…. ವೈದ್ಯರಿಗೆ ತೋರಿಸಲು ದೊಡ್ಡ ದೊಡ್ಡ ಊರುಗಳಿಗೆ ಕಲ್ಕತ್ತಾ ಬೊಂಬೆ ಊರುಗಳಿಗೆ ಹೋಗುವಾಗ ಇಡೀ ರೈಲ್ವೆ ಒಂದು ಬಂಡಿಯಲ್ಲಿ ಅವರಿಗಾಗಿ ಮೀಸಲಾಗಿಡಲಾಗುತ್ತಿತ್ತು. ಹಾಗೇ ಊರುಗಳಿಗೆ ಹೋದಲ್ಲೆಲ್ಲ ಹೆಂಡತಿಗೆ ಅಪ್ಪಟ ರೇಷ್ಮೆ ಸೀರೆ ಹಾಗೂ ವಜ್ರಗಳ ಆಭರಣಗಳನ್ನು ತಂದು ಕೊಡುತ್ತಿದ್ದರು.
ತಾಯಿಯವರಿಗೆ ಆ ಸಮಯದಲ್ಲಿ ಅವುಗಳನ್ನೆಲ್ಲ ಹಾಕಿಕೊಳ್ಳಲು ಹಿಂಸೆಯಾಗುತ್ತಿತ್ತು ಏಕೆಂದರೆ ಗಂಡನ ಅನಾರೋಗ್ಯ ಹಾಗೂ ಈಗಾಗಲೇ ತಾಯಿಯವರು ತಮ್ಮ ಲೌಕಿಕ ಜೀವನದಿಂದ ಅತಿ ದೂರ ಸರದ್ದಿದ್ದರು…… ಗಂಡನ ಸಂತೋಷಕ್ಕಾಗಿ ಅವುಗಳನ್ನು ಹಾಕಿ ಅವರಿಗೆ ತೋರಿಸಿ ಮತ್ತೆ ತೆಗೆದುಇಡುತ್ತಿದ್ದರು.
ಜಯದೇವಿ ತಾಯಿಯವರ ಜೀವನವು ಹೊರಗೆ ನೋಡಲು ಧೈರ್ಯದ ಬೆಳಕಿನಂತೆ ಕಾಣುತ್ತಿದ್ದರೂ, ಅದರೊಳಗೆ ಅನೇಕ ನೋವುಗಳ ನೆರಳುಗಳು ಗೇರೆಗಳಿದ್ದವು.
ಅವರ ಬದುಕಿನ ವಿಪರ್ಯಾಸವೆಂದರೆ—ಸಂತೋಷವನ್ನು ಅನುಭವಿಸಲು ಸಮಯವೇ ಅವರಿಗೆ ಸಿಕ್ಕಿರಲಿಲ್ಲ.
ಚಿಕ್ಕ ವಯಸ್ಸಿನಲ್ಲೇ ಅವರು ಮದುವೆಯಾಗಿ ಮನೆಗೆ ಬಂದಾಗ, ಹೊಸ ಜೀವನದ ಕನಸುಗಳು ಅವರ ಮನಸ್ಸಿನಲ್ಲಿ ಮೂಡಿದ್ದವು. ಆದರೆ ಆ ಕನಸುಗಳು ಬೇಗನೆ ನಶಿಸಿಬಿಟ್ಟವು. ಮನೆಯ ಅತ್ತೆಯ ಕಠಿಣ ಸ್ವಭಾವ, ದಿನನಿತ್ಯದ ಕಾಟ, ಅಸಹನೆ—ಇವೆಲ್ಲದರ ನಡುವೆ ಅವರ ಬಾಲ್ಯವೇ ಕಳೆದುಹೋಯಿತು.
ಒಬ್ಬ ಚಿಕ್ಕ ಹುಡುಗಿ ಮಮತೆಯನ್ನೂ, ಆರೈಕೆಯನ್ನೂ ಪಡೆಯಬೇಕಾದ ವಯಸ್ಸಿನಲ್ಲಿ, ಅವರು ಮೌನವಾಗಿ ನೋವನ್ನು ಸಹಿಸುವುದನ್ನು ಕಲಿತರು.
ಆ ದಿನಗಳಲ್ಲಿ ಅವರ ಹೃದಯದಲ್ಲಿ ಎಷ್ಟೋ ಬಾರಿ ಪ್ರಶ್ನೆ ಮೂಡುತ್ತಿತ್ತು—
“ನನ್ನ ಬದುಕಿನಲ್ಲಿ ಸ್ವಲ್ಪ ಶಾಂತಿ, ಸ್ವಲ್ಪ ಸಂತೋಷ ಸಿಗುವ ದಿನ ಬರಬಹುದೇ?” ಎಂದು…ಹೀಗೆ
ಕಾಲ ಮುಂದುವರಿದಿತು. …
ಮಕ್ಕಳ ಜನನದಿಂದ ಅವರ ಬದುಕಿನಲ್ಲಿ ಹೊಸ ಬೆಳಕು ಮೂಡಿತು. ಮಕ್ಕಳ ನಗು, ಅವರ ಚಿಕ್ಕಚಿಕ್ಕ ಮಾತುಗಳು ತಾಯಿಯ ಮನಸ್ಸಿಗೆ ಆಶೆಯ ಕಿರಣಗಳನ್ನು ತಂದವು.
ಆ ಸಂತೋಷವೂ ಬಹಳ ದಿನ ಉಳಿಯಲಿಲ್ಲ. ಗಂಡನಿಗೆ ಅನಾರೋಗ್ಯ ,, ಗಂಡನ ಆರೈಕೆ, ಮನೆಯ ಜವಾಬ್ದಾರಿ,ಮಕ್ಕಳ ಭವಿಷ್ಯ—ಇವೆಲ್ಲದರ ಭಾರ ಜಯದೇವಿ ತಾಯಿಯ ಭುಜಗಳ ಮೇಲೆ ಬಿದ್ದಿತು.
ರಾತ್ರಿ ನಿದ್ರೆಯಿಲ್ಲದೆ ಗಂಡನ ಪಕ್ಕದಲ್ಲಿ ಕುಳಿತು ಕಣ್ಣೀರು ಒರೆಸಿಕೊಂಡು ಕಳೆಯುವ ಕ್ಷಣಗಳು ಅನೇಕವಾಗಿದ್ದವು.
ಆ ಸಮಯದಲ್ಲಿ ಅವರ ಮನಸ್ಸಿನಲ್ಲಿ ಮೂಡಿದ ನೋವಿನ ಕ್ಷಣಗಳನ್ನು ಸಹಿಸಿಕೊಂಡು. ಶಿವಯೋಗಿ ಸಿದ್ದರಾಮನನ್ನು ಕ್ಷಣಕ್ಷಣಕ್ಕೂ ನೆನೆಯುತ್ತಿದ್ದರು…
*ತಾಳುವೆನು ಯಾತನೆಯ ಬಾಳುವೆನು
ನಿನಗಾಗಿ ಕಾಳ ಸರ್ಪ ಬಂದರು -ಹೆದರೇನು
ಸಿದ್ದರಾಮ ಮತ್ತೆ ನಿನ್ನನೆ ನೆನೆಯುವೆ!!*
ಅವರು ಯಾವುದಕ್ಕೂ ಕುಗ್ಗಲಿಲ್ಲ. ತಮ್ಮ ನೋವನ್ನು ಒಳಗೇ ಮರೆಮಾಚಿಕೊಂಡು ಮಕ್ಕಳಿಗಾಗಿ, ಕುಟುಂಬಕ್ಕಾಗಿ ಬದುಕಿದರು. ತಮ್ಮ ದುಃಖವನ್ನು ಯಾರಿಗೂ ತೋರಿಸದೇ, ಎಲ್ಲರಿಗೂ ಧೈರ್ಯ ತುಂಬಿದವರು ಜಯದೇವಿ ತಾಯಿಯವರು.
ಜೀವನವು ನೋವುಗಳಿಂದ ತುಂಬಿದರೂ, ಆ ನೋವನ್ನೇ ಶಕ್ತಿಯಾಗಿ ಮಾಡಿಕೊಂಡು ಬದುಕಿದ ಮಹಿಳೆಯ ಕಥೆಯಾಯಿತು.
ಕೆಲವರು ಸಂತೋಷಕ್ಕಾಗಿ ಬದುಕುವುದಿಲ್ಲ… ಇತರರ ಸಂತೋಷಕ್ಕಾಗಿ ತಮ್ಮ ಬದುಕನ್ನೇ ಅರ್ಪಿಸುತ್ತಾರೆ.
ಸವಿತಾ ದೇಶಮುಖ




