ಧಾರಾವಾಹಿ ಸಂಗಾತಿ-17
ಅರ್ಜುನ ಉವಾಚ
ವಿಶ್ವನಾಥ್ ಎನ್ ನೇರಳೆಕಟ್ಟೆ
ಕುದುರೆ ಸಂಚಾರಕ್ಕೆ ಸಂಚಕಾರವಾಯಿತು ಆ ಶಿಲೆ!


ಈಗ ನಮ್ಮ ಜೊತೆ ನೀಲಧ್ವಜನೂ ಸೇರಿಕೊಂಡಿದ್ದ. ತೆಂಕುದಿಕ್ಕಿನೆಡೆಗೆ ಹೆಜ್ಜೆ ಹಾಕುತ್ತಿತ್ತು ಹಯ. ಮುಂದೆ ಕಾಣುತ್ತಿದ್ದದ್ದು ವಿಂಧ್ಯಾ ಪರ್ವತ. ನಮ್ಮ ಅವಿರತ ಚಲನೆಯನ್ನು ಕಂಡೂ ಚಲನೆಗೆ ಮನಸ್ಸು ಮಾಡದೆ ದೃಢತೆಯೇ ಮೈವೆತ್ತ ಬಗೆಯಲ್ಲಿತ್ತು ಅದರ ನಿಲುವು. ಶೃಂಗವಿತ್ತು. ಕಂದರವಿತ್ತು. ಮಂಜು ಮುಸುಕಿತ್ತು. ಕಾಡು ಬೆಳೆದಿತ್ತು. ಅರಣ್ಯವನ್ನೇ ಆಶ್ರಯಿಸಿಕೊಂಡಿದ್ದ ಜನರನ್ನು ಕಂಡೆವು. ಬಗೆಬಗೆಯ ಪಕ್ಷಿಗಳು ಅಲ್ಲಿದ್ದವು. ವಿಧವಿಧದ ಪ್ರಾಣಿಸಮೂಹಗಳಿದ್ದವು. ಹಾಗೆಯೇ ಮುಂದೆ ಹೋಗುತ್ತಿದ್ದಂತೆ ಋಷಿಗಳ ಆಶ್ರಮಗಳು ಕಣ್ಣಿಗೆ ಕಂಡವು.
ವಿಂಧ್ಯಾ ಪರ್ವತದೊಳಗನ್ನು ಪ್ರವೇಶಿಸಿದೆವು. ಕುದುರೆಯನ್ನು ಕೂಡಿಕೊಂಡ ನಾವು, ಕೃಷ್ಣ ಕಿಂಕರರು, ಕಾಲಿಟ್ಟ ಒಡನೆಯೇ ಅಚ್ಚರಿ ಹುಟ್ಟಿಸುವ ಪರಿವರ್ತನೆಗೀಡಾಯಿತು ಆ ಪರ್ವತ ಪ್ರದೇಶ. ದುರ್ಗಮವಾಗಿದ್ದ ದಾರಿಯದು ಸುಗಮವಾಗಿ ತೋರಿತು. ಅದುವರೆಗೂ ನೆಲೆಸಿದ್ದ ಕತ್ತಲು ತೊಲಗಿ ಬೆಳ್ಳನೆಯ ಬೆಳಕು ಮೂಡಿಬಂತು. ನಾವೆಲ್ಲರೂ ಕುದುರೆಯ ಜೊತೆಜೊತೆಗೇ ಇದ್ದೆವು. ತನ್ನ ಇಚ್ಛೆಯನುಸಾರ ಸಾಗುತ್ತಿತ್ತು ಆ ಕುದುರೆ. ಮುಂದೆ ಮುಂದೆ ಹೋದಾಗ ಎದುರಾದದ್ದು ಅತೀವ ವಿಸ್ತಾರದ ಒಂದು ಶಿಲೆ. ಒಂದು ಯೋಜನದಷ್ಟು ಅಗಲವಿದ್ದಿರಬಹುದು ಅದು. ಅದರ ಮೇಲೆಯೂ ನಡೆಯುವೆ ತಾನು ಎಂಬAತೆ ಕಾಲುಗಳನ್ನಿಟ್ಟಿತು ಕುದುರೆ.
ಸ್ವಚ್ಛಂದವಾಗಿ ಸಂಚರಿಸುತ್ತಿದ್ದ ಅಶ್ವದ ಸುಗಮ ಸಂಚಾರಕ್ಕೆ ಸಂಚಕಾರ ಎದುರಾದದ್ದು ಆಗಲೇ. ಕಾಲುಗಳನ್ನು ಮೇಲಕ್ಕೆ ಎತ್ತಲಾಗದ, ಎತ್ತಿ ಮುಂದಿಡಲಾಗದ ಸ್ಥಿತಿಯಲ್ಲಿ ಕುದುರೆ ಅಲ್ಲಿಯೇ ನಿಂತುಬಿಟ್ಟಿತು. ಆ ಶಿಲೆಗೆ ಅದರ ಕಾಲುಗಳು ಅಂಟಿಕೊAಡಿವೆಯೋ ಏನೋ ಎಂಬAತೆ ತೋರುತ್ತಿತ್ತು. ನಡೆಯುವುದನ್ನೇ ಮರೆತಂತೆ ಅದು ಅಲ್ಲಿಯೇ ನಿಂತಿತು. ಪೌರ್ಣಮಿಯಂದು ಚಂದ್ರಾಕೃತಿಯ ಒಳಗೆ ಮೊಲವೊಂದು ತಟಸ್ಥವಾಗಿ ತೋರುವಂತೆ ಅಗಲಗಲವಾಗಿದ್ದ ಶಿಲೆಯ ಮೇಲೆ ಈ ಕುದುರೆ ಅಚಲವಾಗಿ ನಿಂತಿತ್ತು. ಗಾಳಿಯ ವೇಗವನ್ನೂ ಮೀರಿ ನಡೆಯುವ ಕುದುರೆ ಈ ಬಗೆಯಲ್ಲಿ ನಿಂತುದನ್ನು ಕಂಡಾಗ ಆಶ್ಚರ್ಯವಲ್ಲದೆ ಇನ್ನೇನು ತಾನೇ ಆಗಲು ಸಾಧ್ಯ!
ಕುದುರೆ ಚಲಿಸಲೇಬೇಕಿತ್ತು. ಅದು ಚಲಿಸದೆಯೇ ನಾವು ಚಲಿಸುವಂತಿರಲಿಲ್ಲ. ಚಲಿಸಿದರೂ ಅದಕ್ಕೇನೇನೂ ಸಾರ್ಥಕತೆಯಿರಲಿಲ್ಲ. ಬದುಕು ಎಂದರೆ ಕೆಲವೊಮ್ಮೆ ಹೀಗೆಯೇ. ಇನ್ನೊಬ್ಬರ ಚಲನೆಯಿದ್ದರೆ ಮಾತ್ರ ನಮ್ಮ ಚಲನೆಗೆ ಅರ್ಥವಿರುತ್ತದೆ.
ಜೊತೆಗಿದ್ದ ಸೇವಕರನ್ನು ಕುದುರೆಯ ಬಳಿಗೆ ಅಟ್ಟಿದೆ. ಕುದುರೆಯ ಕಾಲುಗಳನ್ನು ಬಿಡಿಸಲು ಹೇಳಿದೆ. ಅಳವು ತೋರಿದ ಆಳುಗಳು ಸೋತು ಅಳುಮೋರೆ ಮಾಡಿದರು.
ಏನಾಯಿತಿದು! ಕುದುರೆಗೇಕೆ ಇಂತಹ ದುರವಸ್ಥೆ! ಅದು ಚಲಿಸದಿದ್ದರೆ ಮುಂದಿನ ತಾಣವನ್ನು ಸೇರುವ ಬಗೆ ಹೇಗೆ! ಅಶ್ವಮೇಧ ಯಾಗದ ಗತಿಯೇನಾಯಿತು! ಎಂದೆಲ್ಲಾ ಚಿಂತೆ ಮಾಡಿದ ನನಗೆ ಹೊಳೆದ ಯೋಚನೆ ಮುನಿಶಾಪದ್ದು. ಯಾರೋ ಮುನಿಗಳ ಶಾಪದ ಫಲವೇ ಇದಾಗಿರಬೇಕು ಎನಿಸಿತು. ತಿಳಿದ ಹಿರಿಯರಲ್ಲಿ ಕೇಳಿದರೆ ಒಳಿತು ಎನಿಸಿತು.
“ಈ ಸ್ಥಳದಲ್ಲಿ ಸುತ್ತಮುತ್ತ ಋಷಿಗಳ ಆಶ್ರಮವಿದೆಯೇ ಎಂದು ನೋಡಿಬನ್ನಿ” ಎಂದು ಸೇವಕರನ್ನು ಕಳುಹಿಸಿಕೊಟ್ಟೆ. ತಾಣವನ್ನು ಸುತ್ತಾಡಿದ ಅವರು ಸ್ವಲ್ಪ ಸಮಯದಲ್ಲಿಯೇ ನನ್ನ ಬಳಿಬಂದು ಹತ್ತಿರದಲ್ಲಿಯೇ ಒಂದು ಆಶ್ರಮ ಇರುವುದಾಗಿ ಹೇಳಿದರು. ಪ್ರದ್ಯುಮ್ನ, ವೃಷಕೇತು, ಸಾಲ್ವಪತಿ, ಯೌವನಾಶ್ವ, ನೀಲಧ್ವಜ ಇವರೆಲ್ಲರನ್ನೂ ಜೊತೆ ಸೇರಿಸಿಕೊಂಡು ಆ ಆಶ್ರಮವಿದ್ದೆಡೆಗೆ ಹೊರಟೆ. ಹೋಗಿ ತಲುಪಿದೆ.
ಶ್ರೇಷ್ಠ ಋಷಿಗಳು ಇರುವ ಪ್ರದೇಶವದು ಎನ್ನುವುದು ಆ ಪರಿಸರವನ್ನು ಈಕ್ಷಿಸಿದಾಗಲೇ ಗೊತ್ತಾಗುವಂತಿತ್ತು. ಬಗೆಬಗೆಯ ಮೃಗಗಳು ಪಕ್ಷಿಗಳು ತಮ್ಮ ವೈರತ್ವವನ್ನು ಮರೆತು ಅನುರಾಗ ಭಾವದಲ್ಲಿ ಸೊಗ ಕಂಡುಕೊಂಡಿದ್ದವು. ಅಗ್ನಿ, ವಾಯು, ಚಂದ್ರ, ವರುಣ ಮೊದಲಾದ ದೇವಾನುದೇವತೆಗಳು ಅಲ್ಲಿ ನೆಮ್ಮದಿಯಿಂದ ನೆಲೆಸಿದ್ದರು. ಅಲ್ಲಿದ್ದ ಎಲ್ಲಾ ಗಿಡ ಮರಗಳಲ್ಲಿಯೂ ಕಾಯಿ ಹಣ್ಣುಗಳ ಸಮೃದ್ಧಿ. ಬಂದವರು ಬಯಸಿದ್ದನ್ನು ಯಾವಾಗಲೂ ನೀಡಲು ಸಿದ್ಧವಾಗಿ ನಿಂತಂತೆ ತೋರುತ್ತಿತ್ತು ವೃಕ್ಷ ತರುಗಳು ನಿಂತ ಭಂಗಿ. ಸದಾಕಾಲವೂ ಸುಗ್ಗಿಯ ಕಾಲ ಎಂಬAತೆ ಪ್ರಕೃತಿ ಕಾಣಿಸುತ್ತಿತ್ತು. ಸುಖದ ಕೊರತೆಯಿದ್ದರೆ ತಾನೇ ದುಃಖ ಹುಟ್ಟುವುದು! ದುಃಖ ಉದ್ಭವಿಸಲು ಅಲ್ಲಿ ಅವಕಾಶವೇ ಇರಲಿಲ್ಲ. ಸುಖವೇ ಎಲ್ಲಾ.
ಆಶ್ರಮದ ಒಂದೆಡೆಯಲ್ಲಿ ಒಂದಷ್ಟು ಮುನಿಗಳು ವೇದ ಆಗಮ ಶಾಸ್ತç ಪುರಾಣಗಳ ಪ್ರವಚನ, ಅಧ್ಯಯನದಲ್ಲಿ ನಿರತರಾಗಿದ್ದರು. ಇನ್ನೊಂದಷ್ಟು ಋಷಿಗಳು ಜಪ ತಪಸ್ಸನ್ನು ಗೈಯ್ಯುತ್ತಾ, ಪರಮಾತ್ಮ ಸ್ಮರಣೆಯಲ್ಲಿ ಪವಿತ್ರಾನುಭವ ಪಡೆಯುತ್ತಿದ್ದರು. ಸೂರ್ಯ ನಮಸ್ಕಾರ, ಹರಿಹರ ಸಮಾರಾಧನೆ, ಯೋಗ ಸಾಧನೆ ಮೊದಲಾದವು ನಡೆಯುತ್ತಿದ್ದವು. ಅತಿಥಿಗಳನ್ನು ಆದರದಿಂದ ಸತ್ಕರಿಸುವುದರಲ್ಲಿ ತಲ್ಲೀನರಾಗಿದ್ದರು ಕೆಲವರು.
ಆಗಲೇ ನನ್ನ ಕಣ್ಣನ್ನು ಕಾಡಿದ್ದು ತೇಜೋಮಯವಾದ ಒಂದು ದಿವ್ಯಕಾಯ. ಶಾಂತಭಾವವೇ ಮೂರ್ತರೂಪ ಪಡೆದಂತೆ ಕುಳಿತಿದ್ದರು ಮುನಿಶ್ರೇಷ್ಠರೆನಿಸಿಕೊಂಡ ಸೌಭರಿ ಮುನಿಗಳು. ಅಗ್ನಿಯಂತಹ ಪ್ರವರ್ಧಮಾನವಾದ ಬೆಳಕಿನಿಂದ ಕಂಗೊಳಿಸುತ್ತಿದ್ದರು. ಆದರೆ ಸುಡುವವರಲ್ಲ. ಸೂರ್ಯನಂತೆ ಕಾಂತಿಮಯವಾಗಿದ್ದರು. ಆದರೆ ಮೈಸುಡುವ ಬಿಸಿ ಅವರದ್ದಲ್ಲ. ಜಟೆಯನ್ನು ಹೊತ್ತಿದ್ದವರು ಶಿವನಂತೆ ತೋರುತ್ತಿದ್ದರು. ಆದರೆ ನಂಜಿನ ಕಂಠ ಅವರದ್ದಲ್ಲ.
ಸಾಷ್ಟಾಂಗ ನಮಸ್ಕರಿಸಿದೆ ಅವರಿಗೆ. ಅಶ್ವಮೇಧ ಯಾಗದ ವಿಚಾರ ಅರುಹಿದೆ. ಈಗ ಕುದುರೆ ಶಿಲೆಯ ಮೇಲೆ ಕಾಲಿಟ್ಟು ತಟಸ್ಥವಾದ ವಿಷಯ ತಿಳಿಸಿದೆ. “ನಿಮ್ಮ ಮಾರ್ಗದರ್ಶನ ಬೇಕು” ಎಂದೆ.
ನನ್ನನ್ನು ಲೇವಡಿ ಮಾಡುವ ನಗು ಅವರ ಮೊಗದಲ್ಲಿ ಮೂಡಿತು. ಈ ಪರಿಯ ನಗುವದೇತಕೆ! ಅರ್ಥವಾಗಲಿಲ್ಲ. ಅವರ ಮುಖವನ್ನೇ ನೋಡಿದೆ.
ಡಾ. ವಿಶ್ವನಾಥ ಎನ್ ನೇರಳಕಟ್ಟೆ




