ಧಾರಾವಾಹಿ-15
ಅರ್ಜುನ ಉವಾಚ
ವಿಶ್ವನಾಥ್ ಎನ್ ನೇರಳೆಕಟ್ಟೆ
ಕುಟುಂಬ ಕಲಹವದು
ಕುದುರೆ ಕದನದಿಂದ…


ಕುಟುಂಬ ಕಲಹವದು ಕುದುರೆ ಕದನದಿಂದ…
ಸೂರ್ಯನಿನ್ನೂ ಉದಯಿಸಿರಲಿಲ್ಲ. ನನ್ನೊಳಗೆ ಕದನ ಸೆಳೆತ ಉದಯಿಸಿಯಾಗಿತ್ತು. ಮಾಹಿಷ್ಮತಿಯ ಸೇನೆಗೆ ಸಾಧ್ಯವಾದಷ್ಟು ಶೀಘ್ರ ಸೋಲುಣಿಸುತ್ತೇನೆ ಎಂಬ ತವಕ ತಲೆಯೇರಿ ಕುಳಿತಿತ್ತು. ನೇಸರನ ನಸುಬೆಳಕು ಮಾಹಿಷ್ಮತಿಯ ಬುವಿನಾರಿಯನ್ನು ಸ್ಪರ್ಶಿಸುವ ಮಧುರ ಗಳಿಗೆಗೂ ಮೊದಲೇ ಕುದುರೆಯನ್ನು ಕಟ್ಟಿಹಾಕಿದ್ದ ಕಟ್ಟಾಳುಗಳನ್ನು ಕದನದಲ್ಲಿ ಕೊನೆಗಾಣಿಸುವ ರುಧಿರ ಗಳಿಗೆ ನನ್ನನ್ನಪ್ಪಿತು.
ನಮ್ಮ ಚತುರಂಗ ಬಲ ಮಾಹಿಷ್ಮತಿ ಪಟ್ಟಣಕ್ಕೆ ಮುತ್ತಿಗೆ ಹಾಕಿತು. ಎರಡೂ ಪಡೆಗಳ ಮಧ್ಯೆ ಬಿಡುವಿರದ, ಎಡೆಯಿರದ ಕಾದಾಟ. ಕಂಡ ಕಂಡ ಕಡೆಯಲ್ಲೆಲ್ಲಾ ಬಾಣಗಳ ಆರ್ಭಟ. ಆನೆ ಕುದುರೆ ರಥಗಳ ಎಡೆಬಿಡದ ಓಡಾಟ. ಯಮರಾಜನಿಗದೋ ಸೈನಿಕರ ಸಾವಿನ ರಸದೂಟ.
ನಾನಂತೂ ಯಾವುದಕ್ಕೂ ಅಳುಕದವನಾಗಿದ್ದೆ. ಇಂದಂತೂ ಜಯ ನಮ್ಮ ಸೈನ್ಯಕ್ಕೆ ಒದಗಲೇಬೇಕು ಎಂಬ ಹಠ ನನ್ನೊಳಗಿತ್ತು. ನನ್ನ ಈ ಬಗೆಯ ವೀರಾವೇಶ ನೀಲಧ್ವಜನ ಅರಿವಿಗೂ ಬಂದಿತ್ತು. ನನ್ನ ರಭಸವನ್ನು ತಾಳಿಕೊಳ್ಳುವ ತ್ರಾಣವದು ಅವನ ಸೇನೆಗೆ ಅದೆಲ್ಲಿತ್ತು!
ಸೈನಿಕರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಲೇ ಇದ್ದರು. ರಥಗಳು ಮುರಿದವು. ಗಜಶಿರಗಳು ಒಡೆದವು. ಕುದುರೆಗಳು ಧರಾಶಾಯಿಯಾದವು.
ಅನಾಥಪ್ರಜ್ಞೆ ನೀಲಧ್ವಜನನ್ನು ಬಂದು ಅಪ್ಪಿದ್ದು ಆ ಗಳಿಗೆಯಲ್ಲಿ, ಸಹೋದರ ಸುತರನ್ನು ಕಳೆದುಕೊಂಡ ಹೀನ ಕ್ಷಣದಲ್ಲಿ. ಕುಗ್ಗಿಹೋದ ನೀಲಧ್ವಜ. ಹಿಂದಣ ಯುದ್ದದಲ್ಲಿ ಕಾಣದ ಹತಾಶೆ ಅವನೊಳಗೆ. ಯುದ್ಧವೇ ಬೇಡ ಎಂಬ ವೈರಾಗ್ಯ ಆತನಲ್ಲಿ ಮೂಡಿದಂತೆನಿಸಿತು ನನಗೆ. ಕೆಲವೊಮ್ಮೆ ಹಾಗೆಯೇ. ಬಂಧುಗಳಿರುವಾಗ, ನಮ್ಮವರೆನಿಸಿಕೊಂಡವರು ನಮ್ಮ ಜೊತೆಗೇ ಇರುವಾಗ ಅವರ ಮೌಲ್ಯ ನಮ್ಮರಿವಿಗೆ ದಕ್ಕುವುದಿಲ್ಲ. ಆದರೆ ಅವರನ್ನು ಕಳೆದುಕೊಂಡಾಗ ಇಡಿಯ ಬದುಕೇ ಪೂರ್ಣಶೂನ್ಯವಾಗಿ ನಮ್ಮನ್ನು ಆವರಿಸಿ ಕಾಡತೊಡಗುತ್ತದೆ. ಅದೇ ಬಗೆಯ ಭಾವತೀವ್ರತೆ ನೀಲಧ್ವಜನಲ್ಲಿ ಮೂಡಿಬಂತು. ಅದು ನನ್ನ ತಿಳಿವಳಿಕೆಗೆ ನಿಲುಕಿತು.
ಇದ್ದಕ್ಕಿದ್ದಂತೆಯೇ ರೋಷಾತಪ್ತನಾದ ಮಾಹಿಷ್ಮತಿಯ ಅರಸ. ಮಡಿದ ತನುಜ ಅನುಜರ ಸಾವಿಗೆ ಸೇಡು ತೀರಿಸಿಕೊಳ್ಳುವ ಕೆಚ್ಚು ಅವನಲ್ಲಿ ಮೂಡಿದ್ದಿರಬೇಕು. ಕೆರಳಿನಿಂತ. ಕಿಡಿಕಿಡಿಯಾದ. ವಿಚಿತ್ರವಾದ ಆವೇಶದಲ್ಲಿ ನನ್ನೊಡನೆ ಹೋರಾಟಕ್ಕಿಳಿದ. ನನ್ನಲ್ಲಿ ಈಗಲೂ ಕದನದ ಉಮೇದು ಅಳಿದಿರಲಿಲ್ಲ. ಬಾಣವನ್ನು ನಿರಂತರವಾಗಿ ಪ್ರಯೋಗಿಸಿದೆ. ಅದೊಂದು ಕ್ಷಣದಲ್ಲಿ ನೀಲಧ್ವಜ ಪೂರ್ಣಪ್ರಜ್ಞೆಯಿಂದ ವಿಮುಕ್ತನಾದ. ಮೂರ್ಛೆ ಹೋದ. ರಥದಲ್ಲಿಯೇ ಕುಸಿದು ಕೂತ. ಅವನ ಸಾರಥಿಗೆ ದೊರೆಯ ಸ್ಥಿತಿ ಮನದಟ್ಟಾಯಿತು. ರಥವನ್ನಲ್ಲಿಂದ ಓಡಿಸಿ ಅರಮನೆಯ ಬಳಿಗೆ ಒಯ್ದ.
ರಾಜನೇ ಇಲ್ಲವಾದ ಮಾಹಿಷ್ಮತಿ ಸೇನೆಯಲ್ಲಿ ಗೊಂದಲ, ತಳಮಳ. ಒಡೆಯನಿಲ್ಲವಾದ ಸೈನಿಕರು ದೆಸೆದೆಸೆಗೆ ಓಡಿದರು. ಅವರ ಕಳವಳದ ಬೊಬ್ಬೆಯದು ನಮ್ಮ ಗೆಲುವನ್ನು ಸಾರಿಹೇಳುವ ವಿಜಯಘೋಷವಾಯಿತು. ನಾವು ಗೆದ್ದೆವು.
ಅರಮನೆಯಲ್ಲಿ ಎಚ್ಚರಗೊಂಡ ನೀಲಧ್ವಜನಿಗೆ ಸೋಲಿನ ವಿಚಾರ ತಿಳಿಯಿತು. ಅವಮಾನವಾಯಿತು. ಮೊದಲೇ ಸಂಧಾನದ ಮೂಲಕ ಗೌರವಯುತವಾಗಿ ಕುದುರೆಯನ್ನು ಬಿಟ್ಟುಕೊಡುವ ನಿರ್ಧಾರ ಮಾಡಿದವನು ತಾನು. ಆದರೆ ಆ ಬಳಿಕ ಕದನಕ್ಕಿಳಿದು ಉಳಿಸಿಕೊಂಡ ಮರ್ಯಾದೆಯನ್ನು ಮಣ್ಣುಪಾಲು ಮಾಡಿಕೊಂಡೆ ಎಂಬ ಅಪಮಾನಸುಳಿ ಅವನನ್ನು ಕೀಳರಿಮೆ ಕೊಳದಲ್ಲಿ ಮುಳುಗಿಸಿತು. ಅದಕ್ಕೆ ಕಾರಣಳಾದ ರಾಣಿ ಜ್ವಾಲೆಯ ಮೇಲೆ ಕೋಪ ಉಕ್ಕಿಬಂತು. “ನಿನ್ನೆಯೇ ಕುದುರೆಯನ್ನು ಪಾರ್ಥನಿಗೆ ಬಿಟ್ಟುಕೊಡುವ ನಿರ್ಣಯ ತಳೆದವನು ನಾನು. ಬಿಡಬೇಡ ಎಂಬ ತಪ್ಪು ಸಲಹೆ ಕೊಟ್ಟು ನನ್ನನ್ನು ಹಾಳುಮಾಡಿದೆಯಲ್ಲಾ! ನಿನ್ನ ಮಾತು ಕೇಳಿ ನನ್ನವರನ್ನು ಕಳೆದುಕೊಂಡೆ. ದುಷ್ಟೆ ನೀನು. ನಿಕೃಷ್ಟೆ ನೀನು. ಅತಿಕಷ್ಟ ಕೊಟ್ಟೆಯೆನಗೆ” ಎಂದು ಅವಳನ್ನು ಪರಿಪರಿಯಾಗಿ ಜರಿದ. “ನನ್ನ ಅರಮನೆಯಲ್ಲಿ ನೀನು ಇರಕೂಡದು” ಎಂದು ಆಜ್ಞಾಪಿಸಿದ.
ಹೀಗೆ ಜ್ವಾಲೆಯೊಂದಿಗೆ ಜಗಳವಾಡಿ ಅವಳೊಂದಿಗಿನ ಬಂಧವನ್ನು ಮುರಿದ ನೀಲಧ್ವಜ ಬಂದದ್ದು ನನ್ನ ಬಳಿಗೆ. ನಮ್ಮ ಗೆಲುವನ್ನವನು ಪೂರ್ಣ ಮನಸ್ಸಿನಿಂದ ಒಪ್ಪಿಕೊಂಡ. ಅಖಿಲ ವಸ್ತುಗಳನ್ನು ಸಮರ್ಪಿಸಿದ. ಅಶ್ವಮೇಧ ಯಾಗಕ್ಕಾಗಿ ಸಂಪದವನ್ನಿತ್ತ. ಬಗೆಬಗೆಯ ಧವಸಧಾನ್ಯಗಳನ್ನು ಬಂಡಿಬಂಡಿಗಳಲ್ಲಿ ತುಂಬಿಸಿ ತರಿಸಿ ಎದುರಿಗಿರಿಸಿದ. ಪಾಂಡವ ಸಾರ್ವಭೌಮತ್ವವನ್ನವನು ಸ್ವೀಕರಿಸಿದ. ಒಲವಿನಿಂದ ನನ್ನ ಬಳಿಗೆ ಬಂದು ನಮ್ಮದು ನಿಜ ಗೆಲುವು ಎನ್ನುವುದನ್ನು ಮನ್ನಿಸಿದ.
ನನಗಂತೂ ಸಂತಸವಾಗಿತ್ತು. ಅಗ್ನಿಯ ಸಂಧಾನಕ್ಕೆ ಅನುಸಾರವಾಗಿ ಅವನು ಕುದುರೆಯನ್ನು ಬಿಟ್ಟು ಕಳುಹಿಸಿಕೊಟ್ಟಿದ್ದರೆ ಈ ಬಗೆಯ ಸಂಭ್ರಮ ಖಂಡಿತವಾಗಿಯೂ ನನ್ನದಾಗುತ್ತಿರಲಿಲ್ಲ. ಶಕ್ತಿಯನ್ನು ಪ್ರದರ್ಶಿಸಿ, ನೋವು ಬೇಗೆಗಳನ್ನು ದರ್ಶಿಸಿ ಪಡೆದ ಗೆಲುವಾದ್ದರಿಂದ ಇದಕ್ಕೆ ಮಹತ್ವ ಅಧಿಕ ಎನಿಸಿತು.
ಆದರದಿಂದ ನೀಲಧ್ವಜನಿಗೆ ನಮಿಸಿದೆ. ಅಲ್ಲಿಂದ ಹೊರಡುತ್ತೇನೆಂದೆ. ಅವನೂ ನಮ್ಮ ಜೊತೆಗೆ ಬರುವುದಕ್ಕೆ ಸಿದ್ಧನಿದ್ದ. ಅವನನ್ನೂ ಜೊತೆಮಾಡಿಕೊಂಡು ನಾವು ಮುಂದೆ ಮುಂದೆ ಹೋದೆವು. ಹಯವದು ಚಲಿಸುತ್ತಿತ್ತು ನಮ್ಮ ಮುಂದೆ. ದಕ್ಷಿಣ ದಿಶೆಯೆಡೆಗೆ ಮುಖಮಾಡಿ ಹೊರಟಿತು ಆ ಕುದುರೆ.
ನೀಲಧ್ವಜನಿಂದ ತಿರಸ್ಕೃತಳಾದ ಜ್ವಾಲೆಯೊಡಲಲ್ಲಿ ಅವಮಾನದ ಜ್ವಾಲೆಯೆದ್ದಿತ್ತು. ಇಷ್ಟೊಂದು ಅವಮಾನ ಮಾಡಿಸಿಕೊಂಡು ಇಲ್ಲಿರುವುದಾದರೂ ಏತಕ್ಕೆ ಎಂಬ ಭಾವ ತಳೆದ ಅವಳು ಅರಮನೆಯನ್ನು ಆ ಕ್ಷಣವೇ ತೊರೆದಳು. ಉನ್ಮುಖ ಹೆಸರಿನ ಸಹೋದರನಿದ್ದ ಅವಳಿಗೆ. ಅವನ ಮನೆಗೆ ಹೋದಳು.
ಅಕ್ಕನನ್ನು ಅಕ್ಕರೆಯಿಂದ ಆದರಿಸಿದ ಉನ್ಮುಖ. ಅಕ್ಕನ ಆಕಸ್ಮಿಕ ಆಗಮನದ ಕಾರಣವೇನೆಂದು ಕೇಳಿದ. ನನ್ನೆದುರಿಗೆ ಕದನದಲ್ಲಿ ಮಕ್ಕಳನ್ನು ಕಳೆದುಕೊಂಡುದನ್ನು ತಮ್ಮನಿಗೆ ತಿಳಿಸಿದಳು. ಪತಿ ನೀಲಧ್ವಜ ಗೆಲುವಿಗೆ ಅಧಿಪತಿಯಾಗದಿರುವುದನ್ನು ನೋವಿನಿಂದ ಉಸುರಿದಳು. ತನ್ನ ಕುಟುಂಬದ ಹೀನಸ್ಥಿತಿಗೆ ಕಾರಣನಾದ ಅರ್ಜುನನ ಶಿರವನ್ನು ಕತ್ತರಿಸಿಹಾಕಬೇಕು ನೀನು ಎಂದು ಮನವಿ ಮಾಡಿಕೊಂಡಳು ತಮ್ಮನನ್ನು.
ತನ್ನ ರೋಷದ ನುಡಿಗೆ ಅವನು ಸ್ಪಂದಿಸಿಯಾನು ಎಂಬ ನಿರೀಕ್ಷೆಯಿತ್ತು ಅವಳಲ್ಲಿ. ನಿರುಕಿಸಿದಳು ಜ್ವಾಲೆ ಉನ್ಮುಖನ ಮೊಗವನ್ನು “ನರನ ಶಿರವನ್ನು ನಾನು ತಂದೊಪ್ಪಿಸುವೆ ನಿನಗೆ” ಎಂಬ ಮಾತು ಅವನಿಂದ ಹೊರಹೊಮ್ಮುತ್ತದೆಂಬ ಭಾವದಲ್ಲಿ…
ಡಾ. ವಿಶ್ವನಾಥ ಎನ್ ನೇರಳಕಟ್ಟೆ




