ಅಂಕಣ ಸಂಗಾತಿ
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ-29

ವೃತ್ತಿ ವೃತ್ತಾಂತ
ವೃತ್ತಿ ಬದುಕಿನ ಹಿನ್ನೋಟ
ನೋಟ ~ ೨೯
ಈ ಹಿಂದೆ ಮೈಸೂರಿನಿಂದ ವರ್ಗವಾಗಿ ಹೋಗಿದ್ದ ರೇಣುಕುಮಾರಿ ಹಾಗೂ ಪದ್ಮಿನಿ ಎನ್ನುವರು ಅಲ್ಲಿ ಒಬ್ಬರ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ಇದ್ದರು. ಅವರು ಮತ್ತೆ ವಾಪಸ್ ಮೈಸೂರಿಗೆ ವರ್ಗವಾಗಿದ್ದರಿಂದ ಅವರ ಜಾಗದಲ್ಲಿ ಆ ಹಾಸ್ಟೆಲಿಗೆ ನಾವು ಸೇರುವುದು ಎಂದು ಈಗಾಗಲೇ ನಾನು ಸುಲೋಚನ ನಿರ್ಧರಿಸಿದ್ದೆವು. ರವೀಶ್ ನನ್ನ ಜೊತೆ ಬರಲು ನಿರ್ಧರಿಸಿದ್ದರಿಂದ ಸುಲೋಚನ ಅವರ ಅಕ್ಕ ಬರುವುದು ಬೇಡ ಎಂದು ಹೇಳಿ ನಾವು ಡಿಸೆಂಬರ್ ೧ ೧೯೯೭ರ ಬೆಳಿಗ್ಗೆ 5:30 ಬಸ್ಸಿಗೆ ಸಕಲೇಶಪುರಕ್ಕೆ ಹೊರಟೆವು.
ಮೊದಲು ರವೀಶ್ ಅವರ ಸಂಬಂಧಿ ಸತ್ಯ ಅವರ ಮನೆಗೆ ಹೋಗಿ ತಿಂಡಿ ತಿಂದು ನಂತರ ಆಫೀಸಿನ ಕಡೆ ಹೋದೆವು. ಮಾಮೂಲಿನಂತೆ ಡ್ಯೂಟಿ ರಿಪೋರ್ಟ್ ಹಾಗೂ ವರ್ಗಾವಣೆ ಅರ್ಜಿ ಎರಡನ್ನು ಸಲ್ಲಿಸಿ
ಆಯಿತು. ಆದರೆ ಕನ್ಫರ್ಮೇಷನ್ ಆಗುವ ತನಕ ನಮ್ಮ ಅರ್ಜಿಗೆ ಮಾನ್ಯತೆ ಇರುವುದಿಲ್ಲ. ನಾನು ಈಗಾಗಲೇ ಹೊಸ ವ್ಯವಹಾರ ವಿಭಾಗದಲ್ಲಿ ವಿಭಾಗ ಕಚೇರಿಯಲ್ಲಿ ಇದ್ದುದರಿಂದ ನನಗೆ ಅದೇ ಡಿಪಾರ್ಟ್ಮೆಂಟ್ ಕೊಟ್ಟರು. ಸುಲೋಚನಾ ಅವರು ಪಾಲಿಸಿ ಸೇವಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ಅವರಿಗೆ ಗೊತ್ತಿದ್ದ ಅದೇ ಡಿಪಾರ್ಟ್ಮೆಂಟ್. ಮಧ್ಯಾಹ್ನ ರವೀಶ್ ಅವರು ವಾಪಸ್ ಹೋದರು.

ಸಂಜೆ ಕಚೇರಿ ಮುಗಿದ ನಂತರ ರೇಣು ಅವರ ಜೊತೆಯಲ್ಲಿ ಹಾಸ್ಟೆಲ್ ಗೆ ಹೋದೆವು. ಈಗಾಗಲೇ ಅಲ್ಲಿ ಮತ್ತೊಬ್ಬರು ಉಪಾಧ್ಯಾಯಿನಿ ಶಿಲ್ಪ ಎನ್ನುವವರು ಇದ್ದರು. ಒಟ್ಟು ಮೂರು ಜನ ಒಂದು ಕೋಣೆಯಲ್ಲಿ ಇದ್ದುದ್ದು. ನಾವು ಹೊಸಬರು ಡ್ಯೂಟಿ ರಿಪೋರ್ಟ್ ಮಾಡಿಕೊಂಡ ನಂತರ ಮುಂದಿನ ವಾರ ಅವರು ಅಲ್ಲಿಂದ ರಿಲೀವ್ ಆಗಬೇಕಿದ್ದು ಹಾಗಾಗಿ ಆ ಒಂದು ವಾರ ಆ ಚಿಕ್ಕ ಕೋಣೆಯಲ್ಲಿ ನಾವು ಇರಲು ಸಾಧ್ಯವಿರಲಿಲ್ಲ. ಆ ಪ್ರಶ್ನೆ ನಮಗೆ ಎದುರಾಗಿಯೇ ಇರದುದ್ದರಿಂದ ಎಲ್ಲಿ ಇರುವುದು ಎನ್ನುವ ಪ್ರಶ್ನೆ ಉದ್ಭವವಾಯಿತು. ಸಂಬಂಧಿಗಳ ಮನೆ ಸಹ ಚಿಕ್ಕದಾಗಿದ್ದರಿಂದ ಅಲ್ಲಿ ಉಳಿಯುವುದು ಸಾಧ್ಯವಿರಲಿಲ್ಲ. ಕಡೆಗೆ ಊರಿಗೆ ವಾಪಸ್ ಆಗಿ ಮುಂದಿನ ವಾರ ಬರುವುದು ಎಂಬ ನಿರ್ಧಾರಕ್ಕೂ ಬಂದೆವು. ಸದ್ಯ ಅಲ್ಲಿಯೇ ಮೂರು ಜನ ಬೇರೆ ನಮ್ಮ ಕಚೇರಿಯ ಉದ್ಯೋಗಿಗಳು ಒಂದು ಮನೆ ಮಾಡಿಕೊಂಡು ಇದ್ದರು. ಇನ್ನುಳಿದ ಐದು ದಿನ ಇಲ್ಲಿಯೇ ಇರಿ ಎಂದು ಅವರು ಆಹ್ವಾನಿಸಿದ್ದರಿಂದ ರಜೆ ಹಾಕುವ ಯೋಚನೆ ಕೈ ಬಿಟ್ಟು ಅಲ್ಲಿಯೇ ಇರಬೇಕಾಯಿತು. ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಇದ್ದ ಅವರ ಮನೆ ಅಲ್ಲೇ ಬಸ್ಟಾಂಡ್. ಎದುರಿಗೆ ಆಫೀಸ್. ಅಂತೂ ಅವರ ಜೊತೆ ಅವರಿಗೆ ತೊಂದರೆ ಕೊಟ್ಟುಕೊಂಡು 5 ದಿನ ಇದ್ದು ಹಾಸ್ಟೆಲ್ ಗೆ ಅಡ್ವಾನ್ಸ್ ಕೊಟ್ಟು ಜಾಗ ಖಚಿತಪಡಿಸಿಕೊಂಡಿದ್ದಾಯಿತು.
ನನಗೆ ಹೊಸ ವ್ಯವಹಾರ ವಿಭಾಗದಲ್ಲಿ ಆಗ ಜವರಯ್ಯ ಮತ್ತು ಕುಮಾರ್ ಎಂಬುವವರು ಸಹಾಯಕರು. ಇಸ್ಮಾಯಿಲ್ ಎನ್ನುವರು ಅಲ್ಲಿನ ರೆಕಾರ್ಡ್ ಕ್ಲರ್ಕ್. ತುಂಬಾ ಹೊಂದಿಕೊಳ್ಳುವಂತಹ ವ್ಯಕ್ತಿತ್ವದವರು. ಅಲ್ಲಿ ಇದ್ದ ಚಂದ್ರು ಎನ್ನುವವರು ಕ್ಯಾಶಿಯರ್ ಆಗಿ ಹೋಗಿದ್ದರು ಸ್ವಲ್ಪ ಕೆಲಸ ಬಾಕಿ ಉಳಿದಿತ್ತು ಡಿಸೆಂಬರ್ ಅಂತ್ಯದ ವೇಳೆಗೆ ಶೆಡ್ಯೂಲ್ ಗಳನ್ನು ಸಲ್ಲಿಸಬೇಕಿತ್ತು ಅದರ ಕಡೆಯ ಕೆಲಸ ಏನು ಆಗಿರಲಿಲ್ಲ ಸ್ವಲ್ಪ ಹೆಚ್ಚಿನ ಶ್ರಮ ಹಾಕಬೇಕಿತ್ತು.
ಐದು ವರೆಗೆ ಸರಿಯಾಗಿ ನಾವು ಹೊರಟರೆ ಅಲ್ಲಿ ಎಲ್ಲರಿಗೂ ಆಶ್ಚರ್ಯ. ಎಲ್ಲರೂ ಅಲ್ಲಿ ಆರು ವರೆ ಏಳು ಗಂಟೆಯ ತನಕ ಆಫೀಸಿನಲ್ಲಿಯೇ ಇರುತ್ತಿದ್ದವರು. ಕೆಲಸ ಬಾಕಿ ಉಳಿದಿದ್ದವರು ಕೆಲಸ ಮಾಡುತ್ತಿದ್ದರು. ಇಲ್ಲದಿದ್ದವರು ಕೇರಂ ಅಥವಾ ಟಿಟಿ ಆಡುತ್ತಾ ಕಾಲ ಕಳೆಯುತ್ತಿದ್ದರು. ಬಹಳಷ್ಟು ಜನ ಮನೆಗಳಿಂದ ದೂರ ಬಂದು ಇಲ್ಲಿ ರೂಮ್ ಮಾಡಿಕೊಂಡು ಇರುತ್ತಿದುದರಿಂದ ಇಲ್ಲಿ ಅದೇ ಸಂಸ್ಕೃತಿ ಬೆಳೆದು ಬಂದಿತ್ತು.

ಆ ಒಂದು ವಾರ ನಾವು ಉಳಿದಿದ್ದ ನಮ್ಮ ಉದ್ಯೋಗಿಗಳು ಎಲ್ಲರೂ ಉಡುಪಿಯ ಕಡೆಯವರು. ಅವರಲ್ಲಿ ನೀರಜ ಎನ್ನುವವರಿಗೆ ಮದುವೆಯಾಗಿ ಒಂದು ಮಗುವಿತ್ತು. ಈ ಹಿಂದೆ ಪೋಸ್ಟಲ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದವರು ಅದನ್ನು ಬಿಟ್ಟು ಇಲ್ಲಿ ಸೇರಿದ್ದರು. ಮಂಗಳೂರಿಗೆ ವರ್ಗಾವಣೆ ಅರ್ಜಿ ಕೋರೊದ್ದರು. ಪ್ರತಿ ಶನಿವಾರ ಮಧ್ಯಾಹ್ನ ಅವರು ಮಂಗಳೂರಿಗೆ ಹೋಗಿ ಸೋಮವಾರ ಬೆಳಿಗ್ಗೆ ವಾಪಸ್ ಆಗುತ್ತಿದ್ದರು. ಇನ್ನೊಬ್ಬರು ಶುಭದಾ. ಅವರು ಅಷ್ಟೇ ಉಡುಪಿಯವರು. ಅವರ ತಂದೆ ಸಹ ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದರು ಅವರಿಗೂ ಒಂದು ಪುಟ್ಟ ಮಗು ಇತ್ತು .ಮತ್ತು ಒಬ್ಬರು ಶ್ರೀಲತಾ ಆಗತಾನೇ ವಿವಾಹವಾಗಿ ವಿವಾಹದ ಆಧಾರದ ಮೇಲೆ ಮಂಗಳೂರಿಗೆ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು. ಈಗ ಅವರೊಂದಿಗೆ ನಾವು ಇಬ್ಬರು ಸೇರಿದ್ದೆವು ತುಂಬಾ ಒಳ್ಳೆಯವರು ಚೆನ್ನಾಗಿ ಹೊಂದಿಕೊಂಡು ಹೋಗುತ್ತಿದ್ದರು ನಮ್ಮ ಕಡೆಯ ಅಡುಗೆ ಇಷ್ಟವಾಗಿದ್ದರಿಂದ ಆ ಐದು ದಿನ ಅಡುಗೆಯ ಹೊಣೆ ನಾನೇ ಹೊತ್ತಿದ್ದೆ ಅಲ್ಲಿ ಎಷ್ಟು ಹೊಂದಾಣಿಕೆ ಇತ್ತೆಂದರೆ ಹಾಸ್ಟೆಲ್ ಬದಲು ಅಲ್ಲೇ ಮುಂದುವರೆಯಬಹುದಿತ್ತು ಆದರೆ ಐದು ಜನಕ್ಕೆ ಆ ಮನೆ ಸ್ವಲ್ಪ ಚಿಕ್ಕದಾಗುತ್ತಿತ್ತು ಹಾಗಾಗಿ ಆ ಯೋಜನೆ ಕೈ ಬಿಟ್ಟೆವು. ನಮ್ಮ ಜೊತೆಗೆ ಶಶಿಕಲಾ ಎನ್ನುವವರು ಹುಣಸೂರಿನಿಂದ ಇಲ್ಲಿಗೆ ಉನ್ನತ ದರ್ಜೆ ಸಹಾಯಕಿಯಾಗಿ ಬಂದಿದ್ದರು ಅವರಿಗೆ ಇಬ್ಬರು ಮಕ್ಕಳು, ಬೆಂಗಳೂರಿನಲ್ಲಿ ಅವರ ಪತಿ ಹಾಗೂ ತಾಯಿಯ ಮನೆ ಇತ್ತು ಪ್ರತಿವಾರ ಬೆಂಗಳೂರಿಗೆ ಹೋಗಲು ಕಷ್ಟ ಎಂದು ಎರಡು ವಾರಕ್ಕೊಮ್ಮೆ ಹೋಗುತ್ತಿದ್ದರು ಅವರು ಈ ಬೇರೆ ಇನ್ನೊಂದು ಹಾಸ್ಟೆಲ್ ಸೇರಿದ್ದರು ಆದರೆ ಅದು ನಾನ್-ವೆಜ್ ಸಹ ಇರುವುದರಿಂದ ನಾವು ಹೋಗಲು ಇಷ್ಟಪಡಲಿಲ್ಲ.
ಮೊದಲು ನಮ್ಮ ಶಾಖೆ ಬಸ್ ನಿಲ್ದಾಣದ ಎದುರಿನ ರಸ್ತೆ ಮಸೀದಿಯ ಎದುರು ಇತ್ತು ಆದರೆ ಜನವರಿ ತಿಂಗಳಿನಲ್ಲಿ ಬಸ್ ನಿಲ್ದಾಣದ ಎದುರು ಮುಖ್ಯರಸ್ತೆಯ ಒಂದು ಹೊಸ ಕಾಂಪ್ಲೆಕ್ಸ್ ನ ೧ ಹಾಗೂ ೨ ನೆಯ ಮಹಡಿಗೆ ಸ್ಥಳಾಂತರ ಗೊಳ್ಳಲಿತ್ತು. ಆ ನಿಟ್ಟಿನಲ್ಲಿ ಪ್ಯಾಕಿಂಗ್ ಮತ್ತು ಸಾಗಣೆ ಕೆಲಸಗಳ ಹೊರೆಯೂ ಇತ್ತು.
ಈ ಹಿಂದೆ ಹೊಸದಾಗಿ ಕೆಲಸಕ್ಕೆ ಸೇರುವಾಗ ನಮ್ಮ ಜೊತೆಯ ಬ್ಯಾಚ್ನಲ್ಲಿ ಇದ್ದ ಮುಕುಂದನ್ ಅವರೂ ಸಹ ಉನ್ನತ ದರ್ಜೆ ಸಹಾಯಕರಾಗಿ ಈ ಶಾಖೆಯಲ್ಲೇ ಇದ್ದರು. ವಿಕ್ರಯ ವಿಭಾಗದಲ್ಲಿ ಅವರಿದ್ದುದು. ಅವರ ಪತ್ನಿ ಅಲ್ಲಿನ ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದುದರಿಂದ ಅವರು ಇಲ್ಲಿಗೆ ವರ್ಗಾವಣೆ ತೆಗೆದುಕೊಂಡಿದ್ದರು.
ನಮ್ಮ ಹೊಸ ವ್ಯವಹಾರ ವಿಭಾಗಕ್ಕೆ ಸಹಾಯಕ ಆಡಳಿತ ಅಧಿಕಾರಿಯಾಗಿ ಇದ್ದವರು ಮಂಜುನಾಥ್ ಎಂಬವರು ಅವರ ಪತ್ನಿ ನವರತ್ನಮ್ಮ ಅವರು ಸಹ ನಮ್ಮ ನಿಗಮದ ಉದ್ಯೋಗಿ ಅದೇ ಶಾಖೆಯಲ್ಲಿ ಇದ್ದರು. ಇತ್ತೀಚಿಗೆ ಸರ್ವಿಸ್ ನಲ್ಲಿ ಇದ್ದಾಗಲೇ ನವರತ್ನ ಅವರು ನಿಧನ ಹೊಂದಿದ್ದರು. ತುಂಬಾ ಒಳ್ಳೆಯವರು. ಸ್ನೇಹಜೀವಿ ಕೂಡ.
ಮೊದಲ ವಾರ ಶನಿವಾರ ಮುಗಿದ ನಂತರವೇ ನಾನು ಸುಲೋಚನಾ ಮೈಸೂರಿಗೆ ವಾಪಸ್ ಆದೆವು. ಆನಂತರ ಒಂದೆರಡು ಮೂರು ದಿನ ರಜಾ ಹಾಕಿ ಮತ್ತೆ ಬರುವುದು ಎಂದು ನಿರ್ಧರಿಸಿದ್ದರಿಂದ ಗುರುವಾರದ ದಿನ ಸಕಲೇಶಪುರಕ್ಕೆ ಹೋಗಿ ಸಂಜೆ ಹಾಸ್ಟೆಲ್ ಗೆ ಹೋದೆವು. ಸಕಲೇಶಪುರದ ಚಂಪಕ ನಗರದಲ್ಲಿ ರೋಟರಿ ಎಕ್ಸ್ಟೆಂಶನ್ ಎಂದು ಅದನ್ನು ಕರೆಯುತ್ತಿದ್ದರು. ಮೊದಲ ದಿನ ಮಾತನಾಡಲು ಹೋದಾಗಲೇ ತಲಾ 600 ಅಡ್ವಾನ್ಸ್ ತೆಗೆದುಕೊಂಡಿದ್ದರು. ಚಿಕ್ಕ ರೂಂ ಒಂದು ಡಬಲ್ ಕಾಟ್ ಹಾಕಿದರೆ ಬೆಳಗ್ಗೆ ಸ್ವಲ್ಪ ಜಾಗ ಉಳಿದಿರುತ್ತಿತ್ತು ಅಷ್ಟೇ, ಮೂರು ಜನ ಆದುದರಿಂದ ಹಾಸಿಗೆಯನ್ನು ಸಹ ನಾವೇ ತೆಗೆದುಕೊಳ್ಳಬೇಕು ಎಂದು ಹೇಳಿದರು. ಇಬ್ಬರು ಮಂಚದ ಮೇಲೆ ಒಬ್ಬರು ನೆಲದ ಮೇಲೆ. ಏಕೋ ವಾತಾವರಣವೇ ಸರಿ ಹೋಗಲಿಲ್ಲ .ಇನ್ನು ಊಟ ತಿಂಡಿ ಆ ದೇವರಿಗೆ ಪ್ರೀತಿ .ಎಲ್ಲಾ ಮಾಡಿ ಡೈನಿಂಗ್ ಟೇಬಲ್ ಮೇಲೆ ಇಟ್ಟುಬಿಡುತ್ತಿದ್ದರು. ನಾವು ತಿನ್ನಲು ಹೋಗುವ ವೇಳೆಗೆ ಆರಿ ಅಕ್ಷತೆ ಆಗಿರುತ್ತಿತ್ತು. ಲೆಕ್ಕಾಚಾರವಾಗಿ ಅಷ್ಟೇ ಇಡುತ್ತಿದ್ದರು ನಮಗೇನು ಆ ರುಚಿ ಗೆ ಹೆಚ್ಚು ಬೇಕಾಗುತ್ತಲೂ ಇರಲಿಲ್ಲ. ಆದರೆ ಒಂದು ತರಹ ಇರಸುಮುರಸು ಮೊದಲ ದಿನದಿಂದಲೇ. ನಾಲ್ಕೈದು ದಿನ ಕಳೆದ ನಂತರ ನಮಗೆ ಇಲ್ಲಿ ಸರಿ ಬರುವುದಿಲ್ಲ ಬೇರೆ ಮನೆ ಮಾಡಿಕೊಳ್ಳುವ ಎಂದು ನಿರ್ಧರಿಸಿದೆವು. ಆಫೀಸಿನಲ್ಲಿ ಎಲ್ಲರಿಗೂ ಮನೆ ನೋಡಲು ಹೇಳಿದೆವು. ಸಂಜೆ ಆಯಿತೆಂದರೆ ಯಾರಾದರೂ ಮನೆ ಖಾಲಿ ಇದೆ ಎಂದು ಹೇಳಿದ ಕಡೆ ಹೋಗುವುದು. ಮನೆ ನೋಡುವುದು .ಆದರೆ ಯಾಕೋ ಯಾವುದೂ ಸರಿ ಹೋಗುತ್ತಿರಲಿಲ್ಲ. ಸರಿ ಹೋದ ಮನೆಗೆ ಸಿಕ್ಕಾಪಟ್ಟೆ ಬಾಡಿಗೆ. ಸಕಲೇಶಪುರ ಬೆಂಗಳೂರಿಗಿಂತಲೂ ದುಬಾರಿ ಎಂದು ನಮಗೆ ಅರಿವಾಗಿದ್ದು ಆಗಲೇ. ಹೋಗಲಿ ಎಂದರೆ ಯಾವುದು ಸರಿ ಹೋಗುತ್ತಲೂ ಇರಲಿಲ್ಲ .
ಮೈಸೂರಿನಿಂದಲೇ ಒಂದಷ್ಟು ಪುಡಿಗಳು ಚಟ್ನಿಪುಡಿ ಮೆಂತ್ಯದ ಹಿಟ್ಟು ಅನ್ನದ ಪುಡಿ ತುಪ್ಪ ಮತ್ತು ಉಪ್ಪಿನಕಾಯಿ ತೊಕ್ಕುಗಳನ್ನು ತೆಗೆದುಕೊಂಡು ಹೋಗಿದ್ದರಿಂದ ಹೇಗೋ ಅದನ್ನೇ ಬಳಸಿಕೊಂಡು ಊಟ ಮಾಡುತಿದ್ದೆವು. ಬೆಳಿಗ್ಗೆ ಕಾಫಿಗೆ ಹೋದಾಗ ಎದುರುಗಿನ ಹೋಟೆಲ್ನಲ್ಲಿ ಅಲ್ಲಿನ ಸ್ಪೆಷಾಲಿಟಿ ಕಡುಬು ಮತ್ತು ಅಕ್ಕಿ ರೊಟ್ಟಿ ಒಂದರಲ್ಲಿ ಅರ್ಧ ಮಾಡಿ ತ ತಿನ್ನುತ್ತಿದ್ದುದು. ಸಂಜೆ ಕಚೇರಿ ಮುಗಿದ ನಂತರ ಮನೆ ಹುಡುಕಲು ಯಾರಾದರೂ ಮನೆಗೆ ಹೋದಾಗ ಅಲ್ಲಿ ಕಾಫಿ ಇನ್ನೇನಾದರೂ ಆತಿಥ್ಯ ಆಗುತ್ತಿತ್ತು. ಇಲ್ಲದಿದ್ದರೆ ಸಂಜೆಯ ವೇಳೆಯೂ ಅಲ್ಲಿ ಹೋಗಿ ತಿಂಡಿ ತಿಂದು ಮನೆಗೆ ಹೋಗುತ್ತಿದ್ದುದು.. ಹೋದ ತಕ್ಷಣ ಒಂದರ್ಧ ಲೋಟ ಕಾಫಿ ಕೊಡುತ್ತಿದ್ದರು ಅಷ್ಟೇ. ರಾತ್ರಿಯ ಊಟವೂ ಅಷ್ಟೇ ಬೆಳಗ್ಗೆ ಉಳಿದದ್ದನ್ನು ಹಾಕುತ್ತಿದ್ದು ಎಷ್ಟು ಬಾರಿ ಹೇಳಿದರು ಒಂದು ದಿನವೂ ಬಿಸಿ ಊಟ ತಿಂಡಿ ಹಾಕಲಿಲ್ಲ .ಆ ಡಿಸೆಂಬರ್ ಚಳಿಗೆ ಆ ಊರಿನ ವಾತಾವರಣಕ್ಕೆ ಆರಿದ್ದು ತಿನ್ನುವುದು ತುಂಬಾ ಹಿಂಸೆ ಎನಿಸುತ್ತಿತ್ತು. ಯಾವಾಗ ನಾವು ನಮಗೆ ಬೇರೆ ಮನೆ ಮಾಡುತ್ತೇವಪ್ಪಾ ಅಂತ ಅನ್ನಿಸತೊಡಗಿತ್ತು. ಯಾವುದೇ ಹಾಸ್ಟೆಲ್ ನಲ್ಲಿದ್ದು ಅಭ್ಯಾಸ ಇಲ್ಲದ ನಮಗೆ ಹೊರಗಿನ ಊಟದ ಕಷ್ಟ ಏನೆಂದು ಆಗ ಅರ್ಥವಾಯಿತು. ಅಲ್ಲದೆ ಹೆಚ್ಚು ಕಡಿಮೆ ಮೂರು ಕಿಲೋಮೀಟರ್ ದೂರ ಇತ್ತು ಅದು ನಮ್ಮ ಕಚೇರಿಯಿಂದ. ಹೋಗಿ ಬರುವುದು ಸಹ ಕಷ್ಟವೇ. ಸದ್ಯ ಆಗ ಡಿಸೆಂಬರ್ ನಲ್ಲಿ ಮಳೆ ಇಲ್ಲದಿದ್ದರಿಂದ ಹೇಗೋ ನಡೆಯಿತು ಹಾಗಾಗಿ ಕಚೇರಿಗೆ ಹತ್ತಿರದ ಸ್ಥಳಗಳಲ್ಲಿ ನಾವು ಮನೆ ಹುಡುಕುತ್ತಿದ್ದು. ಕೆಲವು ದೂರದ ಪ್ರದೇಶ ಏರಿಯಾದಲ್ಲಿ ಮನೆ ಸಿಕ್ಕುತ್ತಿದ್ದರು ನಮ್ಮ ಬಳಿ ವಾಹನ ಇಲ್ಲದ್ದರಿಂದ ಅಲ್ಲಿನ ಮಳೆ ಸಮಯದಲ್ಲಿ ಓಡಾಡಲು ಕಷ್ಟ ಎಂದು ಎಲ್ಲರೂ ಹೇಳಿದ್ದರಿಂದ ದೂರದ ಏರಿಯಾಗಳಿಗೆ ಹೋಗಲು ಮನಸ್ಸು ಮಾಡಲಿಲ್ಲ.
ಕಡೆಗೆ ಕಚೇರಿಯಿಂದ ಒಂದೇ ಕಿಲೋಮೀಟರ್ ದೂರ ಇದ್ದ ಕುಶಾಲನಗರ ಎಕ್ಸ್ಟೆಂಶನ್ ಎಂಬಲ್ಲಿ ಮಹಡಿಯ ಮೇಲೆ ಒಂದು ಮನೆ ಖಾಲಿ ಇದೆ ಎಂದು ತಿಳಿಯಿತು ರಾಜಮ್ಮ ಎನ್ನುವವರು ಅಲ್ಲಿನ ರಾಜಕೀಯ ಪುಡಾರಿ ಅವರದೇ ಮನೆ. ಕೆಳಗಡೆ ಅವರದೊಂದು ದೊಡ್ಡ ಮನೆ. ಪಕ್ಕದಲ್ಲಿ ಸ್ವಲ್ಪ ಜಾಗ ಅವರ ಮನೆಗೆ ಸೇರಿದಂತೆಯೇ ಮಹಡಿಯ ಮೇಲೆ ಎರಡು ಮನೆಗಳು ಅಲ್ಲಿ ಕೆಳಗಡೆ ಅಟಾಚ್ಡ್ ಬಾತ್ರೂಮ್ ಇರುವಂತಹ ಎರಡು ಕೊಠಡಿಗಳು. ಅಂತಹ ಒಂದು ಕೊಠಡಿಯಲ್ಲಿ ನಮ್ಮದೇ ಆಫೀಸಿನ ಹೊಸ ರೆಕ್ರೂಟ್ಮೆಂಟ್ ಆದ ಆನಂದ್ ಮತ್ತು ಮೋಹನ್ ಎನ್ನುವವರು ಇದ್ದುದರಿಂದ ಅವರ ಮೇಲಿನ ಮನೆ ಖಾಲಿಯಾಗುತ್ತದೆ ಎಂದು ತಿಳಿಸಿದರು. ಹಾಗಾಗಿ ಅಲ್ಲಿ ನೋಡಲು ಹೋದೆವು. ಅವರ ಮನೆಯಲ್ಲಿ ಟೀ ಚೌಚೌ ಆತಿಥ್ಯ ಸ್ವೀಕರಿಸಿ ಮನೆ ನೋಡಲು ಹೋದೆವು. ಒಂದು ರೂಮಿನ ಮನೆ. ಮನೆ ಏನೋ ಚೆನ್ನಾಗಿತ್ತು ಆದರೆ ಅಲ್ಲಿ ಯಾರು ಬಾರ್ ನವರು ಇದ್ದುದರಿಂದ ಬಹಳವೇ ಗಲೀಜಾಗಿತ್ತು ಅಲ್ಲದೇ ಅವರು ಜನವರಿ ಮೊದಲ ವಾರದಲ್ಲಿ ಖಾಲಿ ಮಾಡುತ್ತಾರೆ ಎಂದು ತಿಳಿಯಿತು. ತಕ್ಷಣವೇ ಟೋಕನ್ ಅಡ್ವಾನ್ಸ್ ಕೊಟ್ಟು ಅವರು ಖಾಲಿಯಾದ ನಂತರ ಮನೆಯನ್ನು ಸ್ವಚ್ಛಗೊಳಿಸಿ ಎಂದು ಹೇಳಿ ಬಂದೆವು.
ತುಂಬಾ ಒಳ್ಳೆಯ ವಾತಾವರಣದ ಊರು ಅದು ಕರ್ನಾಟಕದ ಸ್ವಿಜರ್ಲ್ಯಾಂಡ್ ಎಂದೇ ಖ್ಯಾತಿ ಪಡೆದಿದೆ ಊರಿಂದ ಒಂದು ಅರ್ಧ ಕಿಲೋಮೀಟರ್ ಹೊರ ಬಂದರು ಸಾಕು ಒಳ್ಳೆಯ ಪ್ರಕೃತಿ ಸೌಂದರ್ಯ ತುಂಬಾನೇ ಇಷ್ಟವಾಗಿತ್ತು.
ಸಂಕ್ರಾಂತಿಗೆ ಹಬ್ಬಕ್ಕೆ ಹೋಗುವ ಮುಂಚೆ ಮತ್ತೊಮ್ಮೆ ಅವರಿಗೆ ಹೇಳಿದಾಗ ಇನ್ನು ಮೂರು ನಾಲ್ಕು ದಿನದಲ್ಲಿ ಮನೆ ಖಾಲಿಯಾಗುತ್ತದೆ ಎಂದರು. ಮನೆಗೆ ಶಿಫ್ಟ್ ಮಾಡುವಾಗ ಅಡ್ವಾನ್ಸ್ ಹಣ ಕೊಡುತ್ತೇವೆ ಎಂದು ಹೇಳಿ ಮನೆ ಸ್ವಚ್ಛ ಮಾಡಿಸಿ ಎಂದು ಮತ್ತೊಮ್ಮೆ ಹೇಳಿ ಮೈಸೂರಿಗೆ ಬಂದೆವು ಹಬ್ಬ ಕಳೆದ ನಂತರ ಫೋನ್ ಮಾಡಿ ಮನೆ ಖಾಲಿಯಾಗಿರುವುದನ್ನು ಖಾತ್ರಿಪಡಿಸಿಕೊಂಡು ಶಿಫ್ಟ್ ಮಾಡಿದೆವು.
ರವೀಶ್ ಅವರು ಅವರ ತಾಯಿ ತಂದೆಯ ಜೊತೆಯಲ್ಲಿ ಇರುವುದು ಎಂದು ಹೇಳಿ ನಮ್ಮ ಮನೆಯನ್ನು ಖಾಲಿ ಮಾಡಿ ಸಾಮಾನುಗಳನ್ನು ಸಾಗಿಸುವುದು . ಮೈಸೂರಿನ ಮನೆ ಬಾಡಿಗೆಗೆ ಕೊಡುವುದು ಎಂದು ನಿರ್ಧಾರವಾಯಿತು. ನಾವು ಶಿಫ್ಟ್ ಮಾಡಿಕೊಂಡು ಹೋಗುವುದು ಅದರ ನಂತರದ ಸೋಮವಾರ ಸುಲೋಚನಾ ಆಫೀಸಿಗೆ ಬರುವುದು ಎಂದು ಹೇಳಿದ್ದರು. ಅವರು ಸಾಕಷ್ಟು ರಜೆ ಹಾಕುತ್ತಿದ್ದರು ನನಗೆ ಹೆಚ್ಚಿನ ರಜೆ ಇರದಿದುದರಿಂದ ಹೆಚ್ಚು ರಜೆ ಹಾಕಲು ಸಾಧ್ಯವಿರಲಿಲ್ಲ .ಹಾಗಾಗಿ ಅವರು ರಜೆ ಹಾಕಿ ಮೈಸೂರಿಗೆ ಹೋದಾಗಲೆಲ್ಲ ನನ್ನ ಪತಿ ಇಲ್ಲಿಗೆ ಬರುವುದು ಎಂದುಕೊಂಡೆವು. ನಮ್ಮದು ಮೈಸೂರಿನಲ್ಲಿ ಅಂಗಡಿ. ಅವರಿಲ್ಲದಾಗ ಮಾವ ಮತ್ತು ಮೈದುನ ನೋಡಿಕೊಳ್ಳುತ್ತಿದ್ದರು. ಆದುದರಿಂದ ರವೀಶ್ ಬಂದು ಹೋಗಿ ಮಾಡಬಹುದಿತ್ತು.
ಮೈಸೂರಿನಿಂದ ಹೊರಡುವ ಮೊದಲು ಇನ್ನು ನಮ್ಮ ಬಳಿ ಆಗ ಟಿವಿ ಇಲ್ಲದಿದ್ದರಿಂದ ನಮ್ಮ ತಂದೆ ಒಂದು ಟಿವಿ ಉಡುಗೊರೆ ಕೊಟ್ಟರು. ಅದರ ಜೊತೆಗೆ ಬೇರೆ ಸಾಮಾನುಗಳನ್ನು ಸಾಗಿಸಿಕೊಂಡು ಬಂದೆವು. ನಮ್ಮ ಜೊತೆಯಲ್ಲಿ ಸಾಮಾನುಗಳ ಜೊತೆ ನಮ್ಮ ತಂದೆಯೂ ಬಂದರು .ಇಲ್ಲಿ ಬಂದು ಸಾಮಾನಿ ಇಳಿಸಲು ನೋಡಿದರೆ ಅವರು ಮನೆಯನ್ನು ಸ್ವಚ್ಛ ಮಾಡಿಯೇ ಇರಲಿಲ್ಲ .ಅಡುಗೆ ಮನೆ ಅಂತೂ ಜಿಗುಟು ಜಿಗುಟು . ಅಳು ಬರುವ ಹಾಗೇ ಆಗಿತ್ತು. ನಮ್ಮ ಪಕ್ಕದ ಮನೆಯಲ್ಲಿ ಇದ್ದವರು ಬಿಎಸ್ಎನ್ಎಲ್ ಇಂಜಿನಿಯರ್ ಅವರು. ಅವರ ಪತ್ನಿ ನಾವು ಮನೆ ನೋಡಲು ಹೋದಾಗ ಇರಲಿಲ್ಲ. ಅನಂತರ ಮುಗಿಸಿ ವಾಪಸ್ ಬಂದಿದ್ದರು.ಅವರ ದೊಡ್ಡ ಮಗ ಅಂತೂ ನಮ್ಮನ್ನು ತುಂಬಾ ಹಚ್ಚಿಕೊಂಡು ಬಿಟ್ಟಿದ್ದು ನಮ್ಮ ಮನೆಯಲ್ಲೇ ಸದಾ ಇರುತ್ತಿತ್ತು. ರವೀಶ್ ಊರಿಗೆ ಬಂದಾಗಲಂತೂ ಅವರನ್ನು ಬಿಟ್ಟೇ ಹೋಗುತ್ತಿರಲಿಲ್ಲ.
ಸರಿ ಮೊದಲು ಅಡುಗೆಮನೆ ಎಲ್ಲಾ ಕ್ಲೀನ್ ಮಾಡಿಕೊಂಡು ಅಡುಗೆ ಸಾಮಾನು ಜೋಡಿಸಿ ರಾತ್ರಿಗೆ ಒಂದು ಉಪ್ಪಿಟ್ಟು ಮಾಡಿದ್ದಾಯಿತು. ಟ್ಯಾಂಕ್ ಸಂಪರ್ಕ ಇದ್ದುದರಿಂದ ನೀರು ಬರುತ್ತಿತ್ತು. ಆದರೆ ಖಾಲಿಯಾದ ತಕ್ಷಣ ಹೇಳಿದರೆ ಮಾತ್ರ ಆನ್ ಮಾಡುತ್ತಿರಲಿಲ್ಲ. ಕುಡಿಯಲು ಮತ್ತು ಅಡುಗೆಗೆ ನೀರನ್ನು ಕೆಳಗಿನಿಂದ ತರಬೇಕಿತ್ತು. ಪಕ್ಕದ ಮನೆಯಲ್ಲಿ ಹಿಂಬದಿಗೆ ಒಂದು ಬಾಲ್ಕನಿ ಇತ್ತು ಅಲ್ಲಿಂದ ಕೆಳಗಿನ ನೀರು ಮೇಲಕ್ಕೆ ತೊಗೊಳ್ಳಲು ವ್ಯವಸ್ಥೆ ಇತ್ತು ಹಾಗಾಗಿ ಅವರ ಮನೆಯ ಮೂಲಕ ದಿನಾ ನೀರು ಹಿಡಿದಿಟ್ಟು ಕೊಳ್ಳುತ್ತಿದ್ದೆವು. ಊರಿಗೆ ಹೋದಾಗ ಅವರ ಮನೆಯಲ್ಲಿ ಕೊಳದಪ್ಪಲೆ ಇಟ್ಟಿದ್ದರೆ ತುಂಬಿಸಿ ಇಟ್ಟಿರುತ್ತಿದ್ದರು. ನಾವು ಆಮೇಲೆ ತೆಗೆದುಕೊಳ್ಳುತ್ತಿದ್ದೆವು. ಆಕೆ ಸುಧಾ ಎಂದು. ತುಂಬಾ ಆತ್ಮೀಯರಾಗಿ ಬಿಟ್ಟಿದ್ದರು ಆ ಮನೆ ಬಿಟ್ಟ ಮೇಲೆ ನಮ್ಮ ಬೇರೆ ಮನೆಗೆ ಬಂದು ಹೋಗಿ ಮಾಡುತ್ತಿದ್ದರು. ಆದರೆ ಮೊಬೈಲ್ ಇಲ್ಲದ್ದರಿಂದ ಸಕಲೇಶಪುರ ಬಿಟ್ಟ ಮೇಲೆ ಅವರ ಸಂಪರ್ಕ ಬಿಟ್ಟು ಹೋಯಿತು.
ನಾವು ಮನೆ ಮಾಡಿದ ಮೇಲೆ ನಮ್ಮ ತಾಯಿ ತಂದೆ ತಂಗಿ ಇನ್ನೊಬ್ಬ ತಂಗಿ ಮತ್ತು ಅವಳ ಪತಿ ಮುರಳಿ ಎಲ್ಲಾ ಬಂದಿದ್ದರು. ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯಕ್ಕೆ ಹೋಗಿ ಬಂದರು.

ಹಾಸ್ಟೆಲ್ ಬಿಡುತ್ತೇವೆ ಎಂದಾಗ ಆಕೆಗೆ ತುಂಬಾ ಕೋಪ ಬಂತು. ಆ ತಿಂಗಳ ಹಣ ಪೂರ್ತಿ ಕೊಡಲೇಬೇಕು ಎಂದು ದುಬಾಯಿಸಿ ಕೇಳಿದರು ಇದ್ದ ಒಂದುವರೆ ತಿಂಗಳಿಗೆ ಮೂರು ತಿಂಗಳ ಹಣ ಕೊಡಬೇಕಾಯಿತು. ಆದರೂ ಸದ್ಯ ಅಲ್ಲಿಂದ ಬಿಡುಗಡೆ ಸಿಕ್ಕಿತಲ್ಲಾ ಅನ್ನುವುದೇ ನನಗೂ ಸುಲೋಚನಾಗೂ ಸಮಾಧಾನ. ಮಧ್ಯಾಹ್ನ ಊಟಕ್ಕೂ ಬಂದು ಹೋಗುತ್ತಿದ್ದೆವು.
ಪ್ರತಿ ವಾರ ಬೆಂಗಳೂರಿಗೆ ಹೋಗಿ ಬರುತ್ತಿದ್ದ ಶಶಿಕಲಾಗೆ ಊರಿಂದ ಬರುವ ದಿನ ತಿಂಡಿ ತೆಗೆದುಕೊಂಡು ಹೋಗುತ್ತಿದ್ದೆವು. ಮಧ್ಯಾಹ್ನ ಊಟಕ್ಕೆ ಹಾಸ್ಟೆಲ್ ಗೆ ಹೋಗುತ್ತಿದ್ದಳು ಅವಳು ತುಂಬಾ ಕ್ಲೋಸ್ ಆಗಿಬಿಟ್ಟಿದ್ದು ಊರಿಗೆ ಹೋಗದೆ ಉಳಿದಾಗ ಅಥವಾ ವಾರದ ಮಧ್ಯದಲ್ಲಿ ರಜೆ ಬಂದಾಗ ನಮ್ಮ ಜೊತೆಗೆ ಬಂದು ಇದ್ದುಬಿಡುತ್ತಿದ್ದಳು. ಕೆಲವೊಮ್ಮೆ ನಾನು ಊರಲ್ಲಿರದೆ ಸುಲೋಚನಾ ಒಬ್ಬರೇ ಇರಬೇಕಾದಾಗಲೂ ಬಂದು ಅವಳು ನಮ್ಮ ಮನೆಯಲ್ಲಿ ಇರುತ್ತಿದ್ದಳು. ಎಲ್ಲಾ ಖುಷಿಯಾಗಿ ಇತ್ತು ಆಗ ಗ್ಯಾಸ್ ಸಂಪರ್ಕ ಸಿಗುವುದು ಕಷ್ಟ ಇದ್ದುದರಿಂದ ನಾನು ಪ್ರೈವೇಟ್ ಗಾಸ್ ಸಂಪರ್ಕ ಇಟ್ಟುಕೊಂಡಿದ್ದೆ ಮೈಸೂರಿನಲ್ಲಿ .ಅಲ್ಲಿ ಹೋದ ನಂತರ ಇಸ್ಮಾಯಿಲ್ ಅವರ ಶಿಫಾರಸಿನಿಂದ ತಕ್ಷಣಕ್ಕೆ ಗ್ಯಾಸ್ ಸಿಲಿಂಡರ್ ಗಳು ಸಿಕ್ಕವು. ಅವರ ಮೂಲಕ ಅರ್ಜಿ ಹಾಕಿದ್ದರಿಂದ 3 _ 4 ತಿಂಗಳುಗಳಲ್ಲಿ ಹೊಸ ಗ್ಯಾಸ್ ಸಂಪರ್ಕ ಹಾಗೂ ಅಡಿಷನಲ್ ಸಂಪರ್ಕ ಸಹ ಸಿಕ್ಕಿತು .ಹಾಗೆಯೇ ನನ್ನ ಹೆಸರಿನಲ್ಲಿ ಮತ್ತೊಂದು ಸಂಪರ್ಕ ತೆಗೆದುಕೊಂಡು ನನ್ನ ನಾದಿನಿ ಅವರಿಗೂ ಬೆಂಗಳೂರಿಗೆ ಅದನ್ನು ವರ್ಗಾಯಿಸಿ ಕೊಟ್ಟೆವು. ಅದೊಂದು ತುಂಬಾ ಒಳ್ಳೆಯ ಸಹಾಯ ಆಯಿತು ಸಕಲೇಶಪುರಕ್ಕೆ ಹೋಗಿದ್ದರಿಂದ.
ಮೈಸೂರಿನಲ್ಲಿ ತಾತ್ಕಾಲಿಕ ಲೈಸನ್ಸ್ ಪಡೆದು ವಾಹನ ಸಾಲಕ್ಕೆ ಅರ್ಜಿ ಹಾಕಿದ್ದೆ ಅದು ಮಂಜೂರಾಗಿ ಬಂದು ಬೈಕ್ ಕೊಂಡುಕೊಂಡೆವು. ಆದರೆ ಅದಕ್ಕೆ ಪರ್ಮನೆಂಟ್ ಲೈಸನ್ಸ್ ಕೊಡಬೇಕಿತ್ತು. ಸಕಲೇಶಪುರದ ಒಬ್ಬರು ಪ್ರತಿನಿಧಿ ಅವರ ಇನ್ಫ್ಲುಯೆನ್ಸ್ ನಿಂದ ನನಗೆ ಹಾಗೂ ಸುಲೋಚನ ಇಬ್ಬರಿಗೂ ವಿತ್ ಗೇರ್ ಲೈಸೆನ್ಸ್ ಕೊಡಿಸಿದರು. ಪ್ಯಾನ್ ಕಾರ್ಡ್ ಮಾಡಿಸಿದ್ದೂ ಸಹ ಅಲ್ಲಿದ್ದಾಗಲೇ…..
(ಮುಂದುವರೆಯಲಿದೆ)
ಸುಜಾತಾ ರವೀಶ್




