ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜಯದೇವಿ ತಾಯಿಯವರ ಜೀವನ ವೃತ್ತಾಂತ
ಭಾಗ- 5

 ಸೊಲ್ಲಾಪುರದ ಲಿಗಾಡೆಯವರ ಮನೆತನದ ನಿಷ್ಠಾವಂತ ವಕೀಲರಾದ ‘ರಾಮಭಾವು ರಾಜವಾಡೆ’ ಅವರು ಬ್ರಿಟಿಷರ ವಿರುದ್ಧ ಕುತಂತ್ರ ಎಸಗಿದ್ದಕ್ಕಾಗಿ ಬಂಧಿಸಲಾಗಿತ್ತು. ಜಯದೇವಿ ತಾಯಿಯವರ ಅತ್ತೆ ಪ್ರಯಾಗಬಾಯಿ ರಾಜವಾಡೆಯವರ ಬಿಡುಗಡೆಯ ನಂತರ ಅತ್ಯಂತ ಆದರದಿಂದ ಬರಮಾಡಿಕೊಂಡು ಆದರಿಸಿ  ಬ್ರಿಟಿಷರ ಭಿಡೆ ಹಿಡಿಯದೆ  ಮತ್ತೆ ಆಸ್ತಿಯ ಕಾರಭಾರವನ್ನು ನಿರ್ವಹಿಸಿಕೊಂಡು ಹೋಗಲು ಅಣಿ ಮಾಡಿದರು.
” ಪ್ರಯಾಗಬಾಯಿಯ ಕಠೋರ ಧ್ವನಿ …ಬಿರುಸು ನಡತೆ ಇದ್ದರೂ ನಿಜವಾದ ದೇಶಪ್ರೇಮ ರಾಷ್ಟ್ರ ನಿಷ್ಠೆಯನ್ನು ತೋರಿದರು .ತಾಯಿ ಸಂಗವ್ವ ಗಾಂಧಿ ವಾದವನು ಪ್ರಚಾರ ಮಾಡಿದರೆ ಅತ್ತೆ ಪ್ರಯಾಗಬಾಯಿಯೂ ಅದನ್ನು ನಡೆದು ತೋರಿಸಿದ್ದರು. ದೇಶಮಾತೆಗೆ ಅನೌಪಚಾರಿಕವಾಗಿ ಸಹಾಯ ಹಸ್ತ ನೀಡಿದ್ದರು” ಎನ್ನುತ್ತಿದ್ದರು ಜಯದೇವಿ ತಾಯಿಯವರು.

ಅತ್ತೆ ಪ್ರಯಾಗಬಾಯಿ ಜಯದೇವಿಯ ತಾಯಿಯ ಮೇಲೆ ಸಿಡಿಮಿಡಿಕೊಳ್ಳಲು ಎರಡು ಕಾರಣಗಳಿದ್ದವು…. ಮದುವೆಯ ಸಮಯದಲ್ಲಿ ತವರಿನವರು(ಮಡಿಕಿ) ಮದುವೆಯ ದಿಬ್ಬಣವೆನೋ ಜನ ನೋಡುವಂತೆ ಏರಿಸಿದ್ದರು….. ಆದರೆ ಪ್ರಯಾಗಬಾಯಿಯವರಿಗೆ ಕೊಡುವ ಉಡುಗೊರೆಯ ಸೀರೆ ಅವರ ವರ್ಚಸ್ಸಿಗೆ ಹೊಂದುವಂತಿರಲಿಲ್ಲವೆಂದು ನಂಬಿದ ಅತ್ತೆ ….ಸೀರೆ ನೋಡುತ್ತಿದ್ದಂತೆ ಸಿಡಿಮಿಡಿಗೊಂಡು ಅಲ್ಲಿಂದ ಎದ್ದು ಹೋಗಿದ್ದರಂತೆ .
ಇದು ಅದೆಂಥ ದೊಡ್ಡ ವಿಷಯವಾಗಿತ್ತು ಅಂದರೆ  ತಾಯಿಯವರ ಜೀವನದ ಅತಿ ದೊಡ್ಡ ಘಾತಕದ ಘಟನೆಯಾಗಿತ್ತು ಅನ್ನುತ್ತಿದ್ದರು ತಾಯಿಯವರಿಗೆ ….ಸಮಯ ಸಿಕ್ಕಾಗಲೆಲ್ಲ ಆ ಮಾತನ್ನು ಆಡಿ ಆಡಿ ಮನಸ್ಸು ನೋಯಿಸುತ್ತಿದ್ದರಂತೆ. ಮುಂದೆ ಅವರು ಅದೆಷ್ಟೋ ಸೀರೆಗಳನ್ನು ತಂದು ಅವರೆದುರಿಗೆ ಹಾಕಿದರೂ ಆ ದಿನದ ಅವರು ಮರೆಯಲಿಲ್ಲ.
 ಇನ್ನೊಂದು ಕಾರಣವೆಂದರೆ ತಾಯಿಯವರು ಅತ್ಯಂತ ಬಳಕುವ ಅಂದರೆ ತೆಳ್ಳನೆ ದೇಹವನ್ನು ಹೊಂದಿದವರು ಊಟ ಮಾಡುವುದು ಕೇವಲ ಅರ್ಧ ರೊಟ್ಟಿ ಅಥವಾ ಚಪಾತಿ ಅಷ್ಟೇ… ಗಟ್ಟಿ ಮುಟ್ಟಾದ ಸೊಸೆ …ಆಸ್ತಿಯ ಕಾರಭಾರ ಹೊತ್ತುಕೊಳ್ಳುವ ಸೊಸೆ ಬೇಕಾಗಿತ್ತು.

 ಸೊಸೆಯನ್ನು  ಹುಡುಕಾಡಿ   ಪರಿಶೀಲಿಸಿ ಮದುವೆ ಮಾಡಿದ್ದರೇನೋ ನಿಜ ಆದರೆ ಜಯದೇವಿ ತಾಯಿಯು ಮನೆಗೆ ಬಂದ ಮೇಲೆ ಗೊತ್ತಾದದ್ದು ಇವರು ಅತ್ಯಂತ ಸರಳ-ಸಾಧು- ಲಿಂಗನಿಷ್ಠರು. ದೇವರಲ್ಲಿಯೇ ಮೈಮರೆಯುವಳು ಅನ್ನುವುದು ತಿಳಿದಾದ ಮೇಲೆ ಅವರಿಗೆ ಹೊಟ್ಟೆ ಬೇನೆ ಶುರುವಾಗಿತ್ತು.
ಇಂಥ ನಾಜೂಕಾಗಿರುವಳು ಎಲ್ಲವನ್ನು‌ ನಿಭಾಯಿಸುವುದು ಹೇಗೆ ಅನ್ನುವ ಸಮಸ್ಯೆ ಕಾಡುತಿತ್ತು.
  ತಾಯಿಯವರು ಕೆಲಸ ಮಾಡುವಾಗ ಮಧ್ಯದಲ್ಲಿ ಬಂದು ಅವರ ಎರಡು ಕೈಗಳನ್ನು ಗಟ್ಟಿಯಾಗಿ ಹಿಡಿದು ನೋಡಿ ಮತ್ತೆ ದೂರಸರಿಸುವರಂತೆ ..,..”ನೋಡು ಏನು ತಿನ್ನೋದಿಲ್ಲ ಹೀಗೆ ಸ್ವರ್ಗಿ  ಸ್ವರ್ಗಿ ಸಣ್ಣಗಿದ್ದಿ ಎಲ್ಲಾ ಆಸ್ತಿಯನ್ನು ಹೇಗೆ ನೋಡಿಕೊಳ್ತಿ ….

ನಮಗೆ ಮೊಮ್ಮಕ್ಕಳನ್ನು ಹೇಗೆ ಹೆತ್ತು ಕೊಡ್ತೀಯಾ…”!! ಅನ್ನುವ ಚಿಂತೆ ಅವರನ್ನು ಕಾಡುತ್ತಿತ್ತಂತೆ.

ಪ್ರಯಾಗಬಾಯಿಯೂ ಪ್ರತಿ ಸೋಮವಾರ ಸಿದ್ದರಾಮನ ದೇವಸ್ಥಾನಕ್ಕೆ ಗಾಡಿಯಲ್ಲಿ ಹೋಗುತ್ತಿದ್ದರು . ದೇವಸ್ಥಾನಕ್ಕೆ ಹೋಗಬೇಕಾದರೂ ಜರ್ತಾರಿಯ ಸೀರೆ ಉಟ್ಟು ವಜ್ರ ವೈಢೂರ್ಯ ತೊಟ್ಟು ಹೊರಡುವರು ..ಜಯದೇವಿ ತಾಯಿಯವರು ಅವರ ಜೊತೆ ಬರಲು ಹಠ ಮಾಡಿದಾಗ ಅವರಿಗೆ ಹಾಗೆ ಉಟ್ಟ ಸೀರಿ ಕರಿಮಣಿಯ ತಾಳಿ ಹಾಕಿಕೊಂಡೇ  ಕರೆದುಕೊಂಡು ಹೋಗುತ್ತಿದ್ದರು.
ಮದುವೆ ಸಮಾರಂಭಗಳಲ್ಲೂ ಅಷ್ಟೇ ತಾಯಿಯವರಿಗೆ ಮದುವೆ ಸಮಾರಂಭಗಳು ಬಂದರೆ   ಕಳವಳ ಉಂಟಾಗುವುದು….. ಬಂಗಾರ ಇಲ್ಲದೆ ಹೋಗುವದು ಹೇಗೆ  ಮನೆತನ ಮರ್ಯಾದಿಯ ಪ್ರಶ್ನೆಯಾಗಿತ್ತು ……ಹೀಗಾಗಿ ಓಡಿಹೋಗಿ ಹತ್ತಿರದಲ್ಲಿ ಇದ್ದ ತವರು ಮನೆಯಲ್ಲಿ ಹೊಸದಾಗಿ ಬಂದ ಅತ್ತಿಗೆಯರಿಂದ,ತಾಯಿಂದ ವಸ್ತಒಡವೆಗಳನ್ನು ಪಡೆದು ತೊಟ್ಟು ಹೋಗುವರು. ಮತ್ತೆ ತಿರುಗಿ ಬರುವಾಗ ಅವುಗಳನ್ನೆಲ್ಲ ಅಲ್ಲೇ ತವರು ಮನೆಯಲ್ಲಿ ಕಳಚಿಟ್ಟು ಮನೆಗೆ ಬರುವರು .

 ಪ್ರಯಾಗಬಾಯಿ ಎರಡು ಹೊತ್ತು ಲಿಂಗದ ಪೂಜೆ ಮಾಡುವರು ರಾತ್ರಿಯ ಪೂಜೆ ಮುಗಿಸಿ ಅವರಿಗೆ ಊಟ ಕೊಟ್ಟು ಆಳು ಕಾಳುಗಳಿಗೆ ಊಟ ಕೊಟ್ಟು ಎಲ್ಲ ತೆಗೆದಿಟ್ಟು ಅಡುಗೆಯ ಮನೆಯ ಕೆಲಸವನ್ನೆಲ್ಲಾ ಮುಗಿಸಿ ಮೇಲೆ ಮಲಗುವ ಕೋಣೆಯತ್ತ ಹೆಜ್ಜೆ ಹಾಕಿದಾಗ ಮನೆಯಲ್ಲಿ ಎಲ್ಲರೂ ನಿದ್ರೆಯಲ್ಲಿ ಜಾರಿರುತಿದ್ದರು.

ರಾತ್ರಿ ನಿರಾಳ ಮೌನ ಆವರಿಸಿತ್ತು…. ಗಡಿಯಾರ ಟಿಕ್ ಟಿಕ್ ಮಾತ್ರ ಅವರ ಉಸಿರಿಗೆ ತಾಳ ಹಾಕುತ್ತಿತ್ತು…. ನಿಧಾನವಾಗಿ ಹೆದರುತ್ತಲೇ ಗಡಿಯಾರದತ  ನೋಡಿದರು ರಾತ್ರಿ ಒಂದು ಗಂಟೆ ಮೇಲೆ ಆಗಿದೆ…. ಕೋಣೆಯಲಿ ಕಾಲಿಡುವ ಮೊದಲೇ ತೀರ್ಪು ಬಂದುಬಿಟ್ಟಿತು ……..”ಗಂಡನ ಮೇಲೆ ಭಯ ಭಕ್ತಿ ಇಲ್ಲ ಅದಕ್ಕೆ ಇಷ್ಟು ತಡ ಮಾಡುವೆ ಅಲ್ಲೇ ಮೂಲೆಯಲ್ಲಿ ಸ್ಟ್ಯಾಂಡ್ಪ್ಪ(standup)ಅಂದು ಗಂಡನ  ಧ್ವನಿ ಕೇಳಿದ ತಕ್ಷಣ ಹೆದರಿ ಅಲ್ಲಿ ಗೋಡೆಗೆ ಬೆನ್ನೂರು ನಿಂತು ಬಿಡುವರು ತನ್ನ ತಪ್ಪಾದರೂ ಏನು ಅಂತ ತಿಳಿಯದೆ ಗಂಡನ ಆಜ್ಞೆ ಅಲ್ಲವೇ ಪಾಲಿಸಲೇಬೇಕು….!!

ಆದರೆ ಮಧ್ಯರಾತ್ರಿಯಲಿ  ಹಾಗೆ ಕೋಣೆ ಮೂಲೆಯಲ್ಲಿ ನಿಂತು ನಿದ್ದೆ ಹೋಗಿ ಭೂತಾಯಿಯ ಮಡಿಲಲ್ಲಿ ಶರಣಾಗಿ ಮಲಗಿದ್ದು ಗೊತ್ತಾಗುತ್ತಿರಲಿಲ್ಲ….. ನಸುಕಿನಲ್ಲಿ ಗಡಬಡಿಸಿ ಎದ್ದರೆ ತಾವು ನೆರೆದ ಮೇಲೆ ಮಲಗಿದ್ದು ಅರಿವಾಗುತ್ತಿತ್ತು ಮೈ ಕೈಯಲ್ಲ ಇನ್ನಷ್ಟು ನೋವಾದರೂ ಕೆಳಗೆ ಇಳಿದು ಓಡಿ ಬಂದರೆ ಅಲ್ಲಿ ಅತ್ತೆಯ ಬೈಗಳ ಸುರಿಮಳೆ ಪ್ರಾರಂಭ ……!!!
ಗಂಡ ಮಾತ್ರ ಏನು ನಡೆಯಲೇ ಇಲ್ಲ ಅನ್ನುವಂತೆ ಎದ್ದು ಕೆಳಗೆ ಬರುವರು ಅವರಿಗೆ ಯಾವ ವ್ಯವಹಾರಿಕ ಜ್ಞಾನ ಇಲ್ಲ ತನಗೆ ತಿಳಿದಷ್ಟು ನಡೆದುಕೊಳ್ಳುವರು ಏಕೆಂದರೆ ಐದು ಅತ್ತಿಯಂದಿರ ಅಚ್ಚುಮೆಚ್ಚಿನ ಮಗ ಬೇರೆ…

ಮದುವೆಯಾದ ಹೊಸತರಲ್ಲಿ ಜಯದೇವಿ ತಾಯಿಯವರಿಗೆ ತಾನು ಎಲ್ಲಿ ಬದುಕಿ ಬಾಳುತ್ತಿದ್ದೇನೆ  ಅನ್ನುವ  ಜ್ಞಾನವೇ ಇಲ್ಲವಾಗಿತ್ತು ಅಂತ ತಾಯಿಯವರು ಹೇಳುತ್ತಿದ್ದರು . “ಗಂಡನ ಮನೆಯ ಎಲ್ಲ ಸದಸ್ಯರ ಮನಸ್ಸು ಗೆಲ್ಲ ಬೇಕಾಗಿತ್ತು. ಸಿದ್ದರಾಮನಲ್ಲಿ ಸೈ ಎನ್ನಿಸಿಕೊಳ್ಳಬೇಕಾಗಿತ್ತು. ಬಂದ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಹಾಗೆ ನುಂಗುತ್ತ ನಡೆದಿದೆ” ಅನ್ನುತ್ತಿದ್ದರು.

ತಮ್ಮ ದುಃಖವನ್ನೆಲ್ಲ ಅಂಗೈಯಲ್ಲಿ ಇಟ್ಟುಕೊಂಡ ಲಿಂಗನಿಗೆ ಹೇಳುತ್ತಾ ಸಿದ್ದರಾಮನನ್ನು ಮಾತನಾಡಿಸುತ ದುಃಖವನ್ನು ಮರೆಯುವರು…. ಧಾರಾಕಾರವಾಗಿ ಕಣ್ಣೀರು ಸುರಿಸುವರು…

*ನಿನ್ನ  ಭಜಿಸಲೆಂದು
 ಉಲಿಯುವೆ ಜಯಗೀತ
 ಒಂದೊಂದು, ನನ್ನ ಜೀಯಾ
ನಿನ್ನ ಬರುವಿಕೆಯ ಬಯಕೆ-
ನೆನೆ ನೆನೆದು ಅಳಹೋಗಿ
ಹಾಡು ಬಿಡುವೆ !!*(ಜಯಗೀತ ಕವನ ಸಂಕಲ
)

ಒಂದು ಕಡೆ ಬರುತ್ತಾರೆ

ತಾಳ್ಮೆನು ಯಾತನೆಯ/ ಬಾಳುವೆನು ನಿನಗಾಗಿ
ಕಾಳ ಬಂದರು ಹೆದರೇನು -ಸಿದ್ದರಾಮ
ದಾಳಿ ತಂದರು ಮತ್ತೆ ನಿನ್ನನೇ ನೆನೆಯುವೆ!!

ಎಲ್ಲವೂ ನಿನ್ನ ಪಾದಕ್ಕೆ ಅರ್ಪಣೆ
… ಎನ್ನ ಮಾನ ಅಪಮಾನ ನಿನ್ನದಯ್ಯಾ
ಎನ್ನುತ್ತಿದ್ದೆ
ಕಷ್ಟಗಳು ಹೆಚ್ಚಿದಂತೆ ಸಿದ್ದರಾಮನ ಮೇಲಿನ ಭಕ್ತಿ ಇನ್ನು  ಗಟ್ಟಿಕೊಳ್ಳಲಾರಂಬಿಸಿತ್ತು.  ಸುಖದ ಸಂಪತ್ತಿನಲ್ಲಿ ನಾನು ಸುಖವಾಗಿ ಒಂದು ವೇಳೆ ಬದುಕಿದ್ದರೆ …. ಸಿದ್ದರಾಮನನ್ನು ನೆನೆಯುತ್ತಿರಲಿಲ್ಲವೇನು…??!.
..ಸಿದ್ದರಾಮ ಪರೀಕ್ಷಿಸುತ್ತಿರುವ ನಾನು ಆ ಪರೀಕ್ಷೆಯಲ್ಲಿ ಪಾಸ್ ಆಗಲೇಬೇಕು ಎನ್ನುವ ಛಲವನ್ನು ಹೊತ್ತ ಸೊಸೆಯಾಗಿದ್ದೆ ” ‌….ಅಂತ ಅನೇಕ ಸಲ ಹೇಳುತ್ತಿದ್ದರು.

ತಾಯಿಯ ತವರಿನಲ್ಲಿ  ಹೆಣ್ಣು ಮಕ್ಕಳಿಗೆ ಸಮಾನತೆ ಹೇಳಿಕೊಟ್ಟಿದ್ದರು. ಪುರುಷ ಪ್ರಧಾನವಾದ ನಮ್ಮ ದೇಶದಲ್ಲಿ ಗಂಡನಿಗೆ ಹೊಂದುಕೊಳ್ಳಬೇಕಾದರೆ ಸಹನೆ ಇರಬೇಕು ಆಗ ಮುಂದೆ ಎಲ್ಲವನ್ನು ಗೆಲ್ಲಬಹುದು ಅನ್ನುವುದನ್ನು ತಾಯಿ ಸಂಗವ್ವ ಜಯದೇವಿ ತಾಯಿಯವರಿಗೆ ಕಲಸಿದ ಪಾಠ .ನೆನೆಯುತಿದರು..

ಬಾಲ್ಯ ವಿವಾಹ ಒಂದು ಮದುವೆ ಅಲ್ಲ ಅದು ಬಾಲ್ಯದ  ಅಂತ್ಯ. ಬೊಂಬೆಯ ಜೊತೆ ಆಟವಾಡುವ ಕೈಗಳಿಗೆ ಅಡುಗೆಯ ಪಾತ್ರೆಯ ಹೊರೆ ತಾಳೆದಾಗಿತ್ತು. ಪಾಠ ಪುಸ್ತಕ ಓದಬೇಕಾದ ಕಣ್ಣುಗಳಿಗೆ ಆಶ್ರುಗಳ ಅಭ್ಯಾಸ ಆಗಿಹೋಗಿತ್ತು. ಹೆಣ್ಣು ಮಗು ಹೆಂಡತಿಯಾಗುವ ಮುನ್ನ ಮಗುವಾಗಿ ಬದುಕುವ ಹಕ್ಕು ಕಸಿದುಕೊಂಡರೆ ಅದು ಒಂದು ಅಪರಾಧವೇ ಸರಿ ಅನ್ನುತ್ತಿದ್ದರು .ಅವಳಿಗೆ ಗಂಡನ ಮನೆ ಸಿಗುವುದು ಅನ್ನುವ ಸಂತಸವೇನು ಇರಬಹುದು ಆದರೆ ಮಗುವಿನ ಅತ್ಯ ಅಮೂಲ್ಯವಾದ ಬಾಲ್ಯದ ಬದುಕು ಸಿಹಿ ನೆನಪಿನ ಲೋಕವೂ ಕಳೆದು ಹೋಗುವುದು. ಬೆಳೆಯದ ದೇಹ- ಮನಸ್ಸಿಗೆ ತಾಳದ‌ ಹಿಂಸೆ ಕೊಟ್ಟಂತಾಗುವುದು .
ಅವಳು ನಿಭಾಯಿಸಲಾರದಂತ ಜವಾಬ್ದಾರಿ  ಮಗುವಿನ ಮೇಲೆ ಒಡ್ದುವದು ಅಕ್ಷಮ್ಯ ಅಪಕೃತವಾಗುವುದು ಎನ್ನುತ್ತಿದ್ದರು.

 ಒಂದು ಹೆಣ್ಣು ಮಗು ಬಾಲ್ಯದಲ್ಲಿ ವಿವಾಹ ಮಾಡಿಕೊಂಡು ಜೀವನದಲ್ಲಿ ಸೋತು ಹೋದರೆ ಸೋಲು ಅವಳೊಬ್ಬಳದೇ ಅಲ್ಲ…. ಅದು ಒಂದು ತಲೆಮಾರಿನ ಸೋಲು ,!!

“ಮಗು ಕುತ್ತಿಗೆಗೆ ತಾಳಿಯಲ್ಲ – ಅವಳಿಗೆ ಭವಿಷ್ಯ ಕೊಡಿ” ಅನ್ನುತ್ತಿದ್ದರು .

ಸಿರಿತನದ ಕುವರಿ ! ಸಿರಿವಂತರ ಸತಿಯಾದೆ
ಸಿರಿತನದ ಶ್ರಂಗಾರವೆಲ್ಲವನು- ಭೋಗಿಸಿದೆ
ಸಿರಿತನ ದೊರೆತನ ಹಿರಿತನ ಎನ್ನವಾರಿಸದೆ
ಶ್ರೀ ಲೋಲನ ದರ್ಶನವೆಂದು ಕಾಯುತಿರುವೆ…!!”

“ಸಿರಿತನದ ತಳಕಿನಲ್ಲಿ ನಾನು ಮುಳುಗದಿರಲಿ
 ಅಂತಾನೆ  ಕಷ್ಟಗಳ ಕೊಡಿ  ಹರಿಸಿದ  ಸಿದ್ದರಾಮ…..ಸುಖದ ಸುಪ್ಪತ್ತಿನಲ್ಲಿ ಮುಳುಗದಿರಲಿ
ಅಂತ ಏನೋ ಸಿದ್ದರಾಮನ ಪರೀಕ್ಷೆಯಲಿ….. ಗೆಲ್ಲಲೆಂದೆ ನಾನು ಕಷ್ಟಗಳನ್ನು ಸಂಭ್ರಮಿಸಲಾರಂಭಿಸಿದೆ. ಅನ್ನುತ್ತಾರೆ .

 ಸಿದ್ದರಾಮನಲ್ಲಿ ಒಂದಾಗಲು ಶುರುವಿಟ್ಟೆ  ಲೋಕಕಲ್ಯಾಣದ ಕೆಲಸದತ್ತ ಹೊರಳಿದೆ” ಎನ್ನುವ ಮಾತು ಸುಳ್ಳಲ್ಲ .

ಹಳೆಯ ಸಂಪ್ರದಾಯದ ಅತ್ತೆ ಮನೆಯ ವಾತಾವರಣ ಬೆಳೆದ ಮನೆಯ ವಾತಾವರಣಕ್ಕೂ ಅಜಗಜಾಂತರ ಅಂತರವಿತ್ತು .
ಅತ್ತೆಯ ಬೈಗಳ ಪ್ರತಿ ಮಾತಿನಲ್ಲಿಯೂ ಒಳ್ಳೆಯದನ್ನು ಹುಡುಕಲು ಆರಂಭಿಸಿದರು.

 ಒಂದು ಸಲ ಪಡಸಾಲಿಯಲಿ ದೊಡ್ಡ ಕನ್ನಡಿಯ ನೋಡುತ  ಜಯದೇವಿ ತಾಯಿಯವರು ಕುಂಕುಮ ಇಟ್ಟುಕೊಳ್ಳುವುದು ನೋಡಿದ ಪ್ರಯಾಗಬಾಯಿ ಜೋರಾಗಿ ಕಿರುಚಾಡಿಲಾರಂಭಿಸಿದರು .
“ನಿನಗೆ ಸಂಸ್ಕಾರ ಅನ್ನೋದೇ ಇಲ್ಲ ಯಾರಾದರೂ ಅಂಗಳದಲ್ಲಿ ನಿಂತು ಕುಂಕುಮ ಇಡುವರೇ ನೀನು ಹೇಳಿ ಕೇಳಿ ಭಾಷಣ ಮಾಡುವಾಕೆಯ ಮಗಳು” ಎಂದು ಕೂಗಾಡಿದರಂತೆ.
ಅವರು ಯಾಕೆ ಗದರಿಸಿದರಂತೆ ತಿಳಿಯಲಿಲ್ಲ  ಕುಂಕುಮವನ್ನು ಅಂಗಳದಲ್ಲಿ ಹಚ್ಚಿಕೊಳ್ಳಬಾರದು ಅನ್ನುವ ಪದ್ಧತಿ ಇರಬೇಕೆನೊ ಅದಕ್ಕೆ ಅತ್ತೆ ಬೈದಿರಬೇಕು ಅಂದುಕೊಂಡರಂತೆ.ಆದರೆ ನನ್ನ ತಾಯಿಗೆ ಏಕೆ ಬೈದರು ಭಾಷಣ ಮಾಡುವುದು ತಪ್ಪೇ ಅಂತೆಲ್ಲ ಲೆಕ್ಕ ಹಾಕಿದರು.
ಆದರೂ ಎದೆ ನಡುಗುತಿತ್ತು, ಕೈಕಾಲುಗಳು ಶಕ್ತಿ ಕುಂದುತಿದೆ ಅನ್ನಿಸಿಲಾರಿಂಭಿಸಿತ್ತು. ಆ ದೃಶ್ಯವನ್ನು ನೋಡಿದ ಪ್ರಯಾಗಬಾಯಿಯು
ಸಮೀಪ ಬಂದು …”ನೋಡು ಮನೆಯಲ್ಲಿ ಹಾಲ ತುಪ್ಪದ ಹೊಳೆ ಹರಿತಾ ಇದೆ ಚೆನ್ನಾಗಿ ಉಂಡು-ತಿಂದು ಇರಬೇಕು ಅಂತ ಹೇಳಿದ್ದು ಕೇಳಿ ಜೀವ ಬಂದಂತಾಯಿತು.

ಮುಂದೆ ಕೆಲವು ದಿನಗಳು ಕಳೆದ ನಂತರ ಸೊಸೆಯ ಮೇಲೆ ಪ್ರೀತಿ ಹೆಚ್ಚ ಆರಂಭಿಸಿತು ಸೊಸೆಯ ತಾಳ್ಮೆ ಗಂಭೀರ ನಡೆನುಡಿಯನ್ನು ಪ್ರಯಾಗಬಾಯಿ ಗಮನಿಸುತ್ತಿದ್ದಂತೆ ಮನ ಕರಗಲಾರಂಭಿಸಿತ್ತು. ಆಗಾಗ ತಾಯಿಯವರನ್ನು ದಿಟ್ಟಿಸಿ ನೋಡುತ್ತಿದ್ದರಂತೆ ಅದೇಕೋ ಸೊಸೆ ಇನ್ನೂ ಸಣ್ಣ ಆಗಿ ಹೋಗುತ್ತಿರುವಂತೆ ಕಂಡು ಅಡುಗೆಯ ಬಸವ್ವಳನ್ನು ಕರೆದು ಇವಳಿಗೆ “ಇನ್ನು ಮೇಲಿಂದ ನನಗಾಗಿ ಮಾಡುವ ತುಪ್ಪದ ಅಡಿಗೆ ಇವಳಿಗೂ ಉಣ್ಣಿಸಬೇಕು” ಅಂತ ಆಜ್ಞೆ ಮಾಡಿದರಂತೆ .
ಅದೇ ರೀತಿ ಕೆಲಸದವಳು ಬಂದು ತಾಯಿಯವರಿಗೆ “ನೋಡಿರಿ ಬಾಯಾರ……ನೀವು ಹೀಗೆ ಕಿವುಚಿ ಅದ್ದಾ-ಗಿದ್ದಾ ಊಟ ಮಾಡಿದರೆ ನಡೆಯುವುದಿಲ್ಲ ಚೆನ್ನಾಗಿ ಊಟ ಮಾಡಬೇಕು ಗಂಡು ಮಕ್ಕಳ ಹೆತ್ತು ಕೊಡಬೇಕು “ಅಂತ  ಕೆಲಸದವಳು ಪ್ರೀತಿಯಿಂದ ಆಜ್ಞೆ ಮಾಡಿದಳಂತೆ.

ಸಾಧು-ಸಂತರು ನೀರು ಕುಡಿದು ,ಇಲ್ಲ ತುಣುಕು ಅನ್ನ ಉಂಡು ಬದುಕುವಂತೆ ಜಯದೇವಿ ತಾಯಿಯವರು ಹುಟ್ಟುತ್ತಲೇ ಯೋಗಿಣಿ ಯಾಗಿದ್ದರು  ಅವರು ಕೊನೆಯವರೆಗೂ ಅವರ ಊಟ ಅಷ್ಟೇ. ಅವರು ಊಟತಿಂಡಿಗಾಗಿ  ಸಂಸಾರದ ಭೋಗಕ್ಕಾಗಿ ಹುಟ್ಟಿದವರಲ್ಲ  ಬಸವಣ್ಣನ ತತ್ವದಂತೆ ಕಾಯಕವ ಮಾಡುತ್ತಾ ಸಂಸಾರ ಗೆದ್ದು   ಮಹಾನ ಶರಣೆಯಾದವರು.

ಎಲ್ಲ  ಐದು ಜನ ಓರಗಿತ್ತಿಯರನ್ನು, ಮನೆಯ ಆಸ್ತಿ , ಹೊಲಗದ್ದೆ ,ಬಡ್ಡಿಯ ವಹಿವಾಟ ಎಲ್ಲವನ್ನು ಒಬ್ಬಳೇ ನಿಭಾಯಿಸುತ್ತ………ಇದ್ದ ಆಸ್ತಿಯನ್ನು ವೃದ್ಧಿಸಿ
 ಮುಂದೆ ಲಿಗಾಡಿ ಮನೆತನದ ವಿಜಯ ಪತಾಕೆಯನ್ನು ಹಾರಿಸಿ, ಕನ್ನಡ ನಾಡ ನುಡಿಗಾಗಿ ದುಡಿದ, ಸಿದ್ದರಾಮನ ಶ್ರೇಷ್ಠ ಭಕ್ತಳಾಗಿ,…  ಕನ್ನಡ ಸಾಹಿತ್ಯ ಸಾರಸ್ವತ ಲೋಕಕ್ಕೆ ಮಹಾನ ಕೊಡುಗೆ ನೀಡಲಿರುವರು  ಅನ್ನುವದ  ಅರಯದಾಗಿದ್ದರು…. ಅತ್ತೆ ಪ್ರಯಾಗಬಾಯಿ….
ಅಲ್ಲವೇ…..! (ಮುಂದುವರೆಯುವುದು)


About The Author

Leave a Reply

You cannot copy content of this page

Scroll to Top