ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗುಡಿಸಿಲಿನ ಗುಬ್ಬಚ್ಚಿ ನಾನು.
ತಂದೆ–ತಾಯಿಯ ಪ್ರೀತಿ,
ಅಪ್ಪನ ದುಡಿಮೆ ದುಡ್ಡಿನಿಂದ
ಮೃಷ್ಟಾನ್ನ ಭೋಜನ, ಅವ್ವನ ಬುದ್ಧಿಮಾತು— ನಿಧಾನವಾಗಿ
ಹಾರಲು ಕಲಿತೆ.

ಗೂಡು ಬಿಟ್ಟು,
ಗುರುತಿಲ್ಲದ ಕಡೆಗೆ ಸಾಗುತ್ತಿದ್ದೆ;
ಅಡೆತಡೆ ಇಲ್ಲದ ಸ್ವಚ್ಛಂದ ಹಾರಾಟ,
ಎತ್ತರಕ್ಕೆ ಏರುತ್ತಿದ್ದೆ.

ಗುಬ್ಬಚ್ಚಿಯ ಗೂಡಲ್ಲಿ
ಬಡತನ ಇದ್ದರೂ ಬವಣೆ ಇರಲಿಲ್ಲ;
ಹಣ ಇರಲಿಲ್ಲ, ಆದರೆ ಆನಂದ ಇತ್ತು.
ನೋವಿತ್ತು, ನಂಜಿರಲಿಲ್ಲ;
ಕೊಳಕು ಇತ್ತು, ಕತ್ತಲೆ ಇರಲಿಲ್ಲ.

ಶುಭ್ರ ನೀಲಿ ಆಕಾಶ,
ತಣ್ಣನೆಯ ಗಾಳಿ,
ತಳಿರಿನ ತಂಪು,
ಮಲ್ಲಿಗೆಯ ಕಂಪು—
ಇವೆಲ್ಲಾ ನನಗೆ ಗುರಿಯಾಗಿ,
ಗುರುವಾಗಿ,
ಗುರಿಯವರೆಗೂ ಕರೆದೊಯ್ದವು.

ಆಮೇಲೆ…
ಅರಮನೆ ಸೇರಿದೆ.
ಅಂದ–ಚಂದದ ಮೈಮಾಟ,
ಮೋಹ–ಮಾಯೆಯ ಪಾಶ;
ಅಲ್ಲಿ ರೆಕ್ಕೆ ಬಿಚ್ಚಲು ಆಗಲಿಲ್ಲ,
ಹಾರಲು ಆಗಲಿಲ್ಲ.

ಪಂಜರದೊಳಗೆ ರೆಕ್ಕೆ ಬಡಿಯುತ್ತಾ,
ನಿದ್ರೆ ಬಾರದ ರಾತ್ರಿಯ ನರಳಾಟದಲ್ಲಿ
ನಲಿವು ಕಾಣದೆ
ಕಾದು ಕುಳಿತು ಕಂಗಾಲಾದೆ.

ಹೊಸ ಪ್ರಪಂಚದಲ್ಲಿ
ದಾರಿ ತಪ್ಪಿದೆ;
ದಾರಿ ತೋರಿಸುವವರೇ
ಕತ್ತಲಿನ ಪರದೆ ಕಟ್ಟಿದರು.

ಹಾರಲೂ ಆಗದೆ,
ಹೊರಳಲೂ ಆಗದೆ,
ಮರುಗುತ, ಸೊರಗುತ, ಕೊರಗುತ
ಕುಳಿತೆ—
ರೆಕ್ಕೆ ಮುರಿದ ಹಕ್ಕಿಯಂತೆ.

ಪಂಜರದಿಂದ ಬಿಡುಗಡೆ ಯಾವಾಗ?
ನಾನು ಹಾರಬೇಕು—
ಶುಭ್ರ ಗಾಳಿಯ ತಂಪಿನಲ್ಲಿ,
ಸ್ವಚ್ಛ ನೀಲಿ ಆಕಾಶದ ಕಡೆಗೆ.

ಮೌನವೇ ಮಾತಾಗಿದೆ.
ಮಾಡಿದ ತಪ್ಪಿಗೆ ಪ್ರಾಯಶ್ಚಿತ ಯಾವಾಗ?
ಒಂದು ದಿನ ಪಂಜರದ ಸರಳು ಮರುಗಿತು
“ಬಿಡುಗಡೆ ನೀಡುವೆ ಹೋಗು ನೀನು”

ಹಾರುವ ಚೈತನ್ಯ ಇಲ್ಲ;
ಅದೇ ಆಕಾಶ, ಅದೇ ಗಾಳಿ—
ರೆಕ್ಕೆ ಮುರಿದಿವೆ ನಾನಿನ್ನು ಹಾರಲು ಆಗದ
ರೆಕ್ಕೆ ಮುರಿದ ಹಕ್ಕಿ.


About The Author

Leave a Reply

You cannot copy content of this page

Scroll to Top