ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

K

ದೇವರು ದೇವರು
ಮನಕ್ಕೊಬ್ಬ ದೇವರು
ಭಕ್ತಿಗೊಬ್ಬ ದೇವರು
ಭಾವಕ್ಕೊಬ್ಬ ದೇವರು
ಹೃದಯಕ್ಕೊಬ್ಬ ದೇವರು
ದೇವರಿಗೊಬ್ಬ ದೇವರು

ಸಂದರ್ಭ,ಅಗರ್ಭ,ಭೂಗರ್ಭ,
ಮಾತೃಗರ್ಭಕ್ಕೊಂದೊಂದು  ದೇವರು
ಉದಯಕ್ಕೊಂದು ದೇವರು
ಅಸ್ತಮಕ್ಕೊಂದು ದೇವರು
ಲಿಂಗಕ್ಕೊಂದು ದೇವರು
ದೇವರಿಗೊಂದು ದೇವರು.
ಚರಾಚರಕ್ಕೊಂದು ದೇವರು

ಪಶು,ಪಕ್ಷಿ,ನಭ, ಪಸಿರು,ಪತ್ರೆ
ಇಳೆ,ಜಲ,ಪತ್ರ,ಪುಷ್ಪ,ಪತಂಗ,
ಶಿಲೆ,ಮಲೆ,ಒಲೆ,ಓಲೆ,
ಅಲೆ,ಕಲೆ,ನೆಲೆ,ಬಲೆ,ಬೆಲೆ,
ಜಲಚರ,ಭೂಚರ,ನಭಚರ,
ಹುತ್ತ,ಪೀಠ,ಜಗುಲಿ,
ಕ್ರಿಮಿಕೀಟಗಳೊಳಗೊಂದು
ಇಚ್ಚೆಯ ದೈವ,
ಭ್ರಮರದ ಝೇಂಕಾರ
ಭ್ರೂಣದ ಮಮಕಾರ
ಮೌನದ ಓಂಕಾರ
ಕಲ್ಪನೆಯ ಆಕಾರ
ಭ್ರಮೆಯ ನಿರ್ವಿಕಾರ
ಗೊಂದಲದ ಕಾಂತಾರ
ಎಲ್ಲೆಲ್ಲೂ ಅಪರಾಂಪರ
ಕಾಣದ ದೇವರ ಮನ್ವಂತರ.

ಮಾಟ ಮಂತ್ರ ತಂತ್ರ ಅಂತ್ರ ಯಂತ್ರಕ್ಕೊಂದೊಂದು ದೇವರು
ಸಿಹಿ,ಕಹಿ ,ಒಲವು ನಿಲುವು ಗೆಲುವು ಚೆಲುವಿಗೊಂದೊಂದು ದೇವರು .
ಪಾಪ ಪುಣ್ಯ ಮಡಿ ಮೈಲಿಗೆ
ಸುಕೃತ್ಯ, ದುಷ್ಕೃತ್ಯ
ಸುಕೃತಿ,ವಿಕೃತಿ, ದ್ವೈತ ಅದ್ವೈತ
ಸುಖಾಂತ್ಯ ದು:ಖಾಂತ್ಯಕ್ಕೆ
ಒಂದೊಂದು ದೇವರು..

ನಾಮಕ್ಕೊಂದು ದೇವರು
ದೇವರಿಗೆಷ್ಟು ನಾಮಗಳು
ಓಣಿ,ವಠಾರ,ಗಲ್ಲಿ,ಹಳ್ಳಿ
ಕಾಡು,ನಾಡು,ಬೀಡು,
ಶಹರಕ್ಕೊಂದೊಂದು ದೈವಗಳು
ಬುಡಕಟ್ಟು ಕೆರೆಕಟ್ಟುಗಳು
ಪರಂಪರೆ, ಪಾರುಪತ್ಯ,
ಪ್ರಾಚೀನ, ನವ್ಯೋತ್ತರಕ್ಕೆ
ಅಮಾವಾಸ್ಯೆ,ಹುಣ್ಣಿಮೆ
ವಾರ,ಮಾಸ, ತಿಂಗಳು
ರೋಷ-ದ್ವೇಷಕ್ಕೊಂದು ದೈವ
ಪ್ರೀತಿ-ಪ್ರೇಮಕ್ಕೊಂದು ದೈವ
ವರ್ಷಕ್ಕೊಂದು ದೇವರು
ಹರ್ಷಕ್ಕೊಂದು ದೇವರು.

ವಾದ್ಯಕ್ಕೊಂದು ದೈವ
ತಾಳಕ್ಕೊಂದು ದೈವ,
ನಾದ ನಿನಾದ ನೃತ್ಯ ನಾಟಕ
ಕಪಟತೆ,ರಿಷವತ್ಗೆ
ಒಂದೊಂದು ದೇವರು
ಹರಕೆ, ಹಾರೈಗೊಂದೊಂದು ದೈವ,
ಸಂಗೀತ,ಸರಳತೆ
ಸರಸತೆ,ವಿರಸತೆ ,
ತನ್ಮಯತೆಗೊಂದೊಂದು ದೇವರು
ಮಂದಿರ, ಮಸೀದಿ,
ಇಗರ್ಜಿ,ಬಸದಿ,
ಸ್ತೂಪ,ಚೈತ್ಯಾಲಯ
ಗುಡಿಯೊಳಗೆ,ಗುಡಿಹೊರಗೆ
ಗಡಿಯೀಚೆ,ಗಡಿಯಾಚೆ
ಪ್ರಪಂಚಕ್ಕೆ ,ಇಡೀ ಜಗತ್ತಿಗೆ
ಮನ-ಕಾಯಕ್ಕೊಂದೊಂದು  ದೇವರು.
ಅಣು ರೇಣು ತೃಣ ಕಾಷ್ಠ
ಶಾಂತಿ,ನೀತಿ,ನ್ಯಾಯ
ಸಂಘರ್ಷ ಸಂಧಾನ
ಸಂತೃಪ್ತಿಗೊಂದೊಂದು ದೇವರು.
ವಚನ, ಕೀರ್ತನೆ,ಜಾನಪದ ,ಭಜನೆ
ತತ್ವಪದ, ನಮಾಜು, ಪ್ರಾರ್ಥನೆ
ಎಲ್ಲೆಲ್ಲೂ ಆಗೋಚರ ದೇವರು.
ಸೃಷ್ಟಿ ಸ್ಥಿತಿ ಲಯ ಮೋಕ್ಷಗಳ
ಒಳಗೊಳಗೆ ದೇವರು
ಎಳ್ಳು ಕೊನೆಯ ಮುಳ್ಳು ಮೊನೆಯ ಎಲ್ಲೆಲ್ಲೂ ಬಿಡದಂತೆ
ಅಂತರ್  ಬಹಿರಂಗದ ಒಳಗೊಳಗೆ
ದೇವರು….ದೇವರು…
ನಂಬಿಕೆಯ ದೇವರಿದ್ದಾನೆಯೇ?
 ಹಾಗಾದರೆ
 ಎಷ್ಟೊಂದು ದೇವರುಗಳು?


About The Author

3 thoughts on “ಎಷ್ಟೊಂದು ದೇವರುಗಳು? ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ”

Leave a Reply

You cannot copy content of this page

Scroll to Top