ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸರಿ 40 + 45 ಒಟ್ಟು 85 ದಿನಗಳ ಕಾಲ ನೌಕರಿ ಮಾಡಿ ಆಯಿತು. ಜೀವ ವಿಮಾ ನಿಗಮದ ವಾತಾವರಣ ಅರಿತಾಯಿತು.  ನಂತರ ಏನೂ ಸುದ್ದಿಯೇ ಇಲ್ಲ…. ಬರೀ ತಾತ್ಕಾಲಿಕವಾಗಿ ಕೆಲಸ ನಿರ್ವಹಿಸುವುದು ಅಷ್ಟೇ ಏನೋ ನನ್ನ ಹಣೆಯಲ್ಲಿ ಬರೆದದ್ದು. ಹೋಗಲಿ ಬಿಡು ಮತ್ತೆ ಬೇರೆ ಕೆಲಸಕ್ಕೆ ಪ್ರಯತ್ನಿಸುವ ಎಂದು ಸುಮ್ಮನಾಗಿದ್ದಾಯಿತು.  ಜೊತೆ ಜೊತೆಯಲ್ಲೇ ನನ್ನ ಹೊಲಿಗೆ, ಕಸೂತಿ ಓದು ನಡೆಯುತ್ತಲೇ ಇತ್ತು . ನನ್ನ ಮತ್ತು ಮನೆಯವರ ಬಟ್ಟೆಗಳನ್ನು ಮಾತ್ರ ಹೊಲೆದುಕೊಳ್ಳುತ್ತಿದ್ದ ನನಗೆ ಅಕ್ಕಪಕ್ಕದವರು ಹೊಲೆದು ಕೊಡಲು ಹೇಳಿ ಅವರಿಗೆ ಮೆಚ್ಚುಗೆ ಆದುದರಿಂದ ಹೊರಗಿನ ಹೊಲಿಗೆ ಕೆಲಸಗಳು ತುಂಬಾ ಬರತೊಡಗಿದವು. ಅದು ನನ್ನ ಮೆಚ್ಚಿನ ಕೆಲಸವೂ ಆದುದರಿಂದ ಹೊಸಹೊಸ ಪ್ರಯೋಗಗಳಿಗೆ ಕೈ ಹಾಕುತ್ತಿದ್ದೆ . ಅಮ್ಮನ ವಿಮಲ್ ಸೀರೆಯಲ್ಲಿ ದೊಡ್ಡ ತಂಗಿಗೆ ಚೂಡಿದಾರ್ ಟಾಪ್ ಹೊಲಿದು ಕಡೆಯ ತಂಗಿಗೆ ಟೂ ಪೀಸ್ ಮಿಡಿ ಒಂದನ್ನು ಹೊಲೆದಿದ್ದೆ.  ಅವಳ ಕಾಲೇಜಿನಲ್ಲಿ ತುಂಬಾ ಜನರಿಗೆ ಅದು ಮೆಚ್ಚುಗೆಯಾಗಿ ಅದೇ ಮಾದರಿಯ ಮಿಡಿಗಳನ್ನು ಹೊಲೆಯಲು ಒಟ್ಟು 10 ಆರ್ಡರ್ಗಳು ಬಂದು ತುಂಬಾ ಖುಷಿಯಾಗಿ ಅದನ್ನು ನಿರ್ವಹಿಸಿದೆ. ನೋಡೋಣ ಇನ್ನೊಂದೆರಡು ವರುಷ ಕೆಲಸ ಸಿಕ್ಕದಿದ್ದರೆ ಇನ್ನಷ್ಟು ತರಬೇತಿ ಪಡೆದು ಒಂದು ಬಾಟಿಕ್ ಆರಂಭಿಸಿದರೆ ಆಯಿತು ಎಂದೂ ಸಹ ಯೋಚನೆ ಬಂದಿತ್ತು.  ಜೊತೆಗೆ ಉಲ್ಲನ್ ನಿಟಿಂಗ್ ನಮ್ಮ ಅಜ್ಜಿಯಿಂದ ತರಬೇತಿ ಪಡೆದು ನಂತರ woman’s era ಮೊದಲಾದ ಪತ್ರಿಕೆಗಳಲ್ಲಿ ನೋಡಿ ಹೊಸ ಹೊಸ ವಿನ್ಯಾಸಗಳನ್ನು ರಚಿಸುತ್ತಿದ್ದೆ. ಅದಕ್ಕೂ ಸಹ ತುಂಬಾ ಬೇಡಿಕೆ ಬರತೊಡಗಿತ್ತು.
ಕೈಗೆ ಹಣ ಬರುವುದು ನಡೆದೇ ಇದ್ದರೂ ಪೂರ್ಣ ಪ್ರಮಾಣದ ಕಚೇರಿಯ ವೃತ್ತಿಯ ನನ್ನ ಕನಸು ಮಾತ್ರ ಈಡೇರಲಿಲ್ಲವಲ್ಲ ಎಂಬ ಬೇಸರವಂತೂ ಇದ್ದೇ ಇತ್ತು, ಆದರೆ ಹವ್ಯಾಸವೇ ವೃತ್ತಿ ಆಗಿದ್ದು ಒಂದು ರೀತಿ ಖುಷಿ ಕೊಡುತ್ತಿತ್ತು.

ಈ ಮಧ್ಯೆ ನಮ್ಮ ತಾಯಿ ಮನೆಯವರು ಕುವೆಂಪು ನಗರದಲ್ಲಿ ಹೊಸ ಮನೆ ಕೊಂಡುಕೊಂಡರು. ಅದು 1989ರ ಮಾರ್ಚ್ ತಿಂಗಳು. ಮೇ ತಿಂಗಳಿನ ಕಡೆಯ ವಾರದಲ್ಲಿ ಒಂದು ಶನಿವಾರ ಮಧ್ಯಾಹ್ನ 3 ಮೂರುವರೆ ವೇಳೆಗೆ ಅಮ್ಮನ ಮನೆಯ ಕರೆಗಂಟೆ ಶಬ್ದವಾಯಿತು. ಅಂದು ನಾನು ಅಲ್ಲಿಯೇ ಇದ್ದೆ . ಬಾಗಿಲು ತೆಗೆದರೆ ಜೀವವಿಮಾ ನಿಗಮದ ಕಾರ್ಮಿಕ ಸಂಘದ ಪುರುಷೋತ್ತಮ ನಾಗರಾಜ್ ಗುಪ್ತ  ಮತ್ತು ಕುಮಾರಸ್ವಾಮಿ ಅವರು ನಿಂತಿದ್ದರು. ನೋಡಿದ ತಕ್ಷಣವೇ ಏನೋ ಶುಭ ಸುದ್ದಿ ಎಂದು ಖಾತ್ರಿ ಯಾಯಿತು. ಒಳಗೆ ಬಂದು ಅಭಿನಂದನೆಗಳನ್ನು ತಿಳಿಸಿ ಬೆಂಗಳೂರಿಗೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕು ಎಂದು ತಿಳಿಸಿದಲ್ಲದೆ ನೇಮಕಾತಿ ಪತ್ರದಲ್ಲಿ ಎಲ್ಲಾ ವಿವರ ಇದೆ ಎಂದು ಹೇಳಿದರು. ಆದರೆ ನನಗೆ ನೇಮಕಾತಿ ಪತ್ರ ತಲುಪಿಯೇ ಇರಲಿಲ್ಲ.  ಹಳೆಯ ಮನೆಯ ಬಳಿ ಹೋಗಿ ಆಗಿದ್ದ ಬಾಡಿಗೆದಾರರನ್ನು ಕೇಳಿದರೆ ಯಾವುದು ಬಂದಿಲ್ಲ ಎಂದು ತಿಳಿಸಿಬಿಟ್ಟರು. ಪೋಸ್ಟ್ ಆಫೀಸ್ಗೆ ಹೋಗಿ ಸುದ್ದಿ ಸಹ ಕೊಟ್ಟು ಬಂದರೂ ನೇಮಕಾತಿ ಪತ್ರ ಸಿಗಲೇ ಇಲ್ಲ.

ಥೂ ನನ್ನ ಹಣೆಬರಹವೇ ಇಷ್ಟು . ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂದ ಹಾಗಾಯಿತಲ್ಲ! ಇನ್ನು  ನೌಕರಿಯ ಆಸೆ ಕೈ ಬಿಟ್ಟಂತೆ ಎಂದೆಲ್ಲ ಅನಿಸತೊಡಗಿತು. ಆದರೆ ನಮ್ಮ ತಂದೆಯವರು ಇಲ್ಲ  ಹಾಗೆಲ್ಲಾ ಆಗುವುದಿಲ್ಲ ಬೆಂಗಳೂರಿನ ಕಚೇರಿಯಲ್ಲಿ ವಿಚಾರಿಸಿದರೆ ಸರಿ ಹೋಗುತ್ತದೆ ಹೆದರಬೇಡ ಎಂದು ಧೈರ್ಯ ಕೊಡುತ್ತಲೇ ಇದ್ದರು. ಕಾರ್ಮಿಕ ಸಂಘದವರು ಹಾಗೆಯೇ ತಿಳಿಸಿದ ಮೇಲೆ ಸ್ವಲ್ಪ ಸಮಾಧಾನ ಆಯಿತು.

ಅವರು ಬಂದು ಹೋದ ಸ್ವಲ್ಪ ಸಮಯದಲ್ಲಿ ನನ್ನ ಗೆಳತಿ ಸರ್ವಮಂಗಳ ಮತ್ತು ಅವರ ಸೋದರಿ ಬಂದರು. ಈ ಹಿಂದೆ ತಿಳಿಸಿದಂತೆ ನನ್ನ ಜೊತೆ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ಗೆಳತಿ ಅವಳು. ನಾನು ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದಾಗ ನನ್ನ ಜೊತೆ ಕೆಲಸ ಮಾಡುತ್ತಿದ್ದ ಅನಸೂಯ ಮೇಡಂ ಅವರು ಸರ್ವಮಂಗಳ ಮೂಲಕ ಒಂದು ಪತ್ರವನ್ನು ಕಳುಹಿಸಿಕೊಟ್ಟು ಅವರ ಯೂನಿಯನ್ ಗೆ ಸೇರಬೇಕು ಎಂಬ ಕೋರಿಕೆ ಇಟ್ಟಿದ್ದರು. ನನ್ನ ಗೆಳತಿ ಏನು ಯಾವುದೇ ವಿಚಾರ ಮಾತನಾಡಲಿಲ್ಲ .ಅವಳು ಎಐಇಎ ಸಂಘ ಸೇರುವುದು ಖಂಡಿತವಾಗಿತ್ತು .ಅವಳ ಅಕ್ಕ ಅದೇ ಕಾರ್ಮಿಕ ಸಂಘದಲ್ಲಿ ಇದ್ದದ್ದು.  ಆದರೆ ನಾನು ತರಬೇತಿ ಎಲ್ಲವನ್ನು ಪಡೆದದ್ದು ಫೆಡರೇಶನ್ ಅವರ ಮೂಲಕವಾಗಿ. ಹಾಗಾಗಿ ಅಲ್ಲಿಗೆ ಸೇರುವುದು ಎಂದು ನಿರ್ಧರಿಸಿಯಾಗಿತ್ತು ಅದನ್ನೇ ಅವರಿಗೆ ಪತ್ರದಲ್ಲೇ ಬರೆದು ಕಳುಹಿಸಿ ಕೊಟ್ಟೆ.

ಆದರೆ ಉದ್ಯೋಗಿಗಳ ನೇಮಕಾತಿ ಆದಾಗ ಆ ಮೊದಲು ಇರುತಿದ್ದ ಸೌಹಾರ್ದಯುತ ವಾತಾವರಣ ಕಾರ್ಮಿಕ ಸಂಘಗಳ ಮಧ್ಯೆ ಇರುತ್ತಿರಲಿಲ್ಲ. ಒಂದು ರೀತಿಯ ಶೀತಲ ಸಮರ ನಡೆಯುತ್ತಿದ್ದು ಕಣ್ಣಿಗೆ ಬಿದ್ದಿತು.  ಆ ಸಮಯದಲ್ಲಿ ನಮ್ಮದು ಹೊರಗಿನ ಅವಲೋಕನ . ನಂತರದ ದಿನಗಳಲ್ಲಿ ಒಳಗಿನ ಅವಲೋಕನ ನಡೆಸಿದಾಗ ಚುನಾವಣೆಯ ಸಮಯದಲ್ಲಿ ರಾಜಕೀಯ ಸ್ಪರ್ಧಿಗಳ ಮಧ್ಯೆ ಇರುವ ಸಿಕ್ಕಾಟ ಅದೇ ರೀತಿಯ ಪರಿಸ್ಥಿತಿ ಇಲ್ಲಿಯೂ ಇದ್ದದ್ದು ಕಂಡು ಬಂದಿದೆ.  ರಾಜಕೀಯ ರಂಗದಲ್ಲಿನಂತೆ ರೆಸಾರ್ಟ್ ರಾಜಕೀಯ ಸಹ ಇತ್ತೀಚಿನ ದಿನಗಳಲ್ಲಿ ನಡೆದದ್ದು ಕಂಡು ಒಂದು ರೀತಿಯ ಜಿಗುಪ್ಸೆ ಬಂದಿದ್ದೂ ನಿಜ.

ಈ ನೇಮಕಾತಿ ಪತ್ರ ತಲುಪದೇ ಇದ್ದ ಒಂದು ಸಣ್ಣ ಆತಂಕ ಒಳಗೆ ಕೊರೆಯುತ್ತಲೇ ಇತ್ತು. ಕಾರ್ಮಿಕ ಸಂಘದವರ ಒಡನಾಟ ಇಲ್ಲದೇ ಹೋಗಿದ್ದರೆ, ಅವರು ಬಂದು ತಿಳಿಸದೆ ಹೋಗಿದ್ದರೇ ನೇಮಕಾತಿಯ ವಿಷಯ ನಮಗೆ ತಿಳಿಯುತ್ತಲೇ ಇರದೆ ಕೆಲಸ ಕೈತಪ್ಪಿ ಹೋಗುತ್ತಿದ್ದುದಂತೂ ಗ್ಯಾರಂಟಿ. ಇತ್ತೀಚೆಗೆ ಪ್ರತಿನಿಧಿ ಮಿತ್ರರೊಬ್ಬರು ಅವರ ಪತ್ನಿಗೆ ಸಂದರ್ಶನಕ್ಕೆ ನಿಗಮದಿಂದ ಬಂದ ಪತ್ರ ದೊರೆಯದೆ ಯಾರಿಂದಲೂ ವಿಷಯವೂ ತಿಳಿಯದೆ ಎಂತಹ ಒಳ್ಳೆಯ ಅವಕಾಶ ಕೈ ತಪ್ಪಿ ಹೋಯಿತು ಎಂದು ತಿಳಿಸಿದಾಗಲಂತೂ ನನಗೂ ಹೀಗೆಯೇ ಆಗಿದಿದ್ದರೆ ಎಂಬ ಅನಿಸಿಕೆ ಮೂಡಿ ದೇವರನ್ನು ನೆನೆದು ಧನ್ಯವಾದ ತಿಳಿಸುವಂತೆ ಆಯಿತು. ಈ ವಿಷಯದಲ್ಲಿ ನಾನು ನಮ್ಮ ಫೆಡರೇಶನ್ ಯೂನಿಯನ್ ಅವರನ್ನು ಅದರಲ್ಲೂ ಮುಖ್ಯವಾಗಿ ನಾಗರಾಜ ಗುಪ್ತ ಪುರುಷೋತ್ತಮ್ ಹಾಗೂ ಕುಮಾರಸ್ವಾಮಿ ಅವರನ್ನು ಹೃತ್ಪೂರ್ವಕವಾಗಿ ವಂದಿಸಲೇಬೇಕು ಹಾಗೂ ನೆನೆಯಲೇಬೇಕು.

ಜೂನ್ ತಿಂಗಳ ಮೊದಲ ವಾರದಲ್ಲಿ ವೈದ್ಯಕೀಯ ಪರೀಕ್ಷೆ ಹಾಗೂ 12ನೆಯ ತಾರೀಖಿನಿಂದ ತರಬೇತಿ ಕಾರ್ಯಕ್ರಮ ಎಂಬ ವಿಷಯ ತಿಳಿಯಿತು 12ನೆಯ ತಾರೀಕು ಸೋಮವಾರ .ನಾವು ಗುರುವಾರ ವೈದ್ಯಕೀಯ ಪರೀಕ್ಷೆಗೆ ಹೊರಟೆವು ಮತ್ತೆ ಮತ್ತೆ ಓಡಾಡುವ ತಾಪತ್ರಯ ತಪ್ಪುವುದು ಎಂಬುದೂ ಒಂದು ಉದ್ದೇಶ. ಅಲ್ಲಿ ವೈದ್ಯಕೀಯ ಪರೀಕ್ಷೆಗೆ ಹೋದಾಗ ಹೀಗೆ ನೇಮಕಾತಿ ಪತ್ರ ತಲುಪದೇ ಇದ್ದ ವಿಷಯ ತಿಳಿಸಿ ನನ್ನ ಮೂಲ ದಾಖಲಾತಿಗಳು ಅಂಕಪಟ್ಟಿ ಗಳನ್ನೆಲ್ಲ ಅವರು ಹೇಳಿದಂತೆ ತೋರಿಸಿದಾಗ ತಾಳೆ ಮಾಡಿಕೊಂಡು ನಕಲು ಆದೇಶ ಪ್ರತಿಯನ್ನು ಸಹ ನೀಡಿದರು. ಆಗ ಮನಸ್ಸಿಗೆ ಪೂರ್ಣ ಸಮಾಧಾನವಾಯಿತು. ವೈದ್ಯಕೀಯ ಪರೀಕ್ಷೆ ಸಹ ನಡೆದು ಏನೆಂದು ತೊಂದರೆ ಇಲ್ಲದೆ ಸಮ್ಮತವಾಯಿತು. ಆಗ ನನ್ನ ದೂರದ ಸಂಬಂಧಿ ಹಾಗೂ ಗೆಳತಿ ಗೌರಿಯು ಸಹ ವೈದ್ಯಕೀಯ ಪರೀಕ್ಷೆಗೆ ಬಂದಿದ್ದು ಅವಳು ಸಹ ಕೆಲಸಕ್ಕೆ ಅರ್ಹಳಾಗಿದ್ದು ಖುಷಿ ಕೊಟ್ಟಿತ್ತು.  ಅವಳಿಗೆ ಚನ್ನಪಟ್ಟಣ ಶಾಖೆಗೆ ನೇಮಕಾತಿ ಆಗಿತ್ತು. ವೈದ್ಯಕೀಯ ಪರೀಕ್ಷೆಗೆ ಸಹಕಾರ ನೀಡಲು ಮೈಸೂರಿನಿಂದ ಪುರುಷೋತ್ತಮ್ ಅವರು ಸಹ ಅಲ್ಲಿ ವಿಭಾಗ ಕಚೇರಿಗೆ ಬಂದಿದ್ದರು ಆಗಲೇ ಅಲ್ಲಿಗೆ ಬೆಂಗಳೂರು ವಿಭಾಗದ ಫೆಡರೇಶನ್ ಯೂನಿಯನ್ ನ ಶ್ರೀನಾಥ್ ಹಾಗೂ ಸುಂದರಮೂರ್ತಿ ಅವರ ಪರಿಚಯವನ್ನು ಮಾಡಿಕೊಟ್ಟರು ಸುಂದರ ಮೂರ್ತಿ ಅವರದು ಬಹಳ ದೊಡ್ಡ ಹೆಸರು ರಾಷ್ಟ್ರಮಟ್ಟದಲ್ಲಿ ಕಾರ್ಮಿಕ ಸಂಘಟನೆಯಲ್ಲಿ ಮುಂದಾಳತ್ವ ವಹಿಸಿದವರು. ಮುಂದೆ ಬಹಳ ದಿನಗಳ ಕಾಲ ಅವರ ಮಾರ್ಗದರ್ಶನ ದೊರೆತದ್ದು ನನ್ನ ಪಾಲಿಗೆ ಒಂದು ಸುದೈವವೇ ಸರಿ.

ಹೇಳುವುದು ಮರೆತಿದ್ದೆ ನನಗೆ ಬೆಂಗಳೂರು ವಿಭಾಗದ ಚಿಕ್ಕಬಳ್ಳಾಪುರ ಶಾಖೆಗೆ ನೇಮಕಾತಿ ಪತ್ರ ಬಂದಿದ್ದು.  ವಿಷಯ ಮೊದಲೇ ತಿಳಿದಿತ್ತು. ನಮ್ಮ ಮಾವನವರಿಗೆ ಬೇರೆ ಊರಿಗೆ ಹೋಗಿ ಕೆಲಸಕ್ಕೆ ಸೇರುವುದು  ಸುತರಾಂ ಇಷ್ಟವಿರಲಿಲ್ಲ. ಆದರೆ ಕಾರ್ಮಿಕ ಸಂಘದವರು ಒಂದು ವರ್ಷದ ಒಳಗೆ ಮತ್ತೆ ಮೈಸೂರಿಗೆ ವರ್ಗಾವಣೆ ಸಿಗುತ್ತದೆ ಎಂಬ ಭರವಸೆ ನೀಡಿದ್ದರು. ಅಲ್ಲದೆ ಪದವಿ ಪಡೆದ ನಂತರ ಎರಡು ವರ್ಷಗಳ ಕಾಲ ಕೆಲಸ ಸಿಗದಿದ್ದರಿಂದ ಸಿಕ್ಕ ಈ ಒಳ್ಳೆಯ ಕೆಲಸವನ್ನು ಬಿಡಲು ನನಗೆ ಇಷ್ಟವಿರಲಿಲ್ಲ ಹಾಗಾಗಿ ಕೆಲಸಕ್ಕೆ ಹೋಗಿಯೇ ಹೋಗುವೆ ಎಂದು ತೀರ್ಮಾನಿಸಿದೆ.

ಹಳೆಯ ಗೆಳತಿ ಗೌರಿ ಸಿಕ್ಕಿದ ಖುಷಿ ಒಂದು ಕಡೆ .‌ಮತ್ತೆ ಮೊದಲು ಹೇಳಿದ ಗೆಳತಿ ಸರ್ವ ಮಂಗಳ ಗೆ ಟೈಪಿಸ್ಟ್ ಆಗಿ ಸಿಕ್ಕಿದುದರಿಂದ ಅವರಿಗೆ ನಮ್ಮ ಹಾಗೆ ತರಬೇತಿ ಇರಲಿಲ್ಲ ಹಾಗಾಗಿ ಅವಳ ಜೊತೆ ಇಲ್ಲಿ ಸಿಕ್ಕಲಿಲ್ಲ ಆದರೆ ಪತ್ರದ ಮೂಲಕ ಒಡನಾಟ ಮುಂದುವರೆಸುವ ಉದ್ದೇಶವಂತೂ ಇತ್ತು.

ಬೆಂಗಳೂರು ವಿಭಾಗದ ಕಚೇರಿ ಟೌನ್ ಹಾಲ್ ಎದುರು  ಇದ್ದು ಅಲ್ಲೇ ಹಿಂದೆ ನಗರ್ತಪೇಟೆಯಲ್ಲಿ ನಮ್ಮ ದೊಡ್ಡಮ್ಮ ಸುಮಿತ್ರ ಅವರ ಮನೆ ಇದ್ದುದರಿಂದ ಅವರು ತಮ್ಮಲ್ಲಿಯೇ ಇದ್ದು 15 ದಿನದ ತರಬೇತಿ ಮುಂದುವರಿಸಲು ಹೇಳಿದರು.‌ ಓಡಾಟದ ಪ್ರಶ್ನೆಯಂತೂ ಇರಲಿಲ್ಲ .‌ಹಾಗಾಗಿ ಅವರ ಈ ದೊಡ್ಡ ಮನಸ್ಸಿನ ಉಪಯೋಗ ಪಡೆದುಕೊಂಡೆ. ಈ ಸಹಾಯಕ್ಕಾಗಿ ನಾನು ನಮ್ಮ ದೊಡ್ಡಮ್ಮ ಸುಮಿತ್ರಮ್ಮ ದೊಡ್ಡಪ್ಪ ಶಿವಾನಂದ ಹಾಗೂ ನನ್ನ ಕಸಿನ್ ಗಳಾದ ವಾಣಿ ಮತ್ತು  ಸುದರ್ಶನ ಇವರುಗಳಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆಯೇ. ಇಂದು ವಾಣಿ ನಮ್ಮ ಜೊತೆಗಿಲ್ಲ.  ಆದರೂ ಅವಳ ಸ್ನೇಹ ವಿಶ್ವಾಸ ಪ್ರೀತಿ ಸದಾ ಕಾಲ ನನ್ನ ಹೃದಯದಲ್ಲಿ ಹಸಿರಾಗಿರುತ್ತದೆ.

ಮತ್ತೆ ಸೋಮವಾರ ಸಂಧಿಸುವ ಎಂದು ಗೌರಿಯೊಡನೆ ಮಾತನಾಡಿ ವಾಪಸ್ಸು ಬಂದದ್ದಾಯಿತು ವೈದ್ಯಕೀಯ ಪರೀಕ್ಷೆಗೆ ನನ್ನೊಂದಿಗೆ ನಮ್ಮ ತಂದೆ ಹಾಗೂ ರವೀಶ್ ಇಬ್ಬರು ಬಂದಿದ್ದರು. ಹಾಗೂ ಅಂದೇ ಅವರಿಬ್ಬರೂ ವಾಪಸ್ ಹೋದರು.‌ ನಾನು ತರಬೇತಿಯ ನಿರೀಕ್ಷೆಯಿಂದ ಅಲ್ಲಿಯೇ ಬೆಂಗಳೂರಿನಲ್ಲಿ ದೊಡ್ಡಮ್ಮನ ಮನೆಯಲ್ಲಿಯೇ ಉಳಿದುಕೊಂಡೆ .‌ಜೀವನದ ಹೊಸ ಪರ್ವ ಆರಂಭವಾಗುವ ಮಂಗಳ ಗಳಿಗೆಗೆ ಕಾಯುತ್ತಾ…..

(ಮುಂದಿನ ವಾರಕ್ಕೆ ಮುಂದುವರೆಯಲಿದೆ)


About The Author

11 thoughts on “”

  1. ಸೂಕ್ತ ಚಿತ್ರಗಳೊಂದಿಗೆ ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವ ಸಂಪಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು.

    ಸುಜಾತಾ ರವೀಶ್

    1. ಕೊನೆಗೂ ನಿಮಗೆ ಕೆಲಸ ಸಿಕ್ಕಿದ್ದು ತುಂಬಾ ಖುಷಿ ಕೊಟ್ಟಿತು. ನಮ್ಮ ಕ್ಲಾಸ್ಮೇಟ್ಕು ಗೌರಿಯ ಹೆಸರು ಓದಿ ಇನ್ನೂ ಖುಷಿಯಾಯಿತು. ಕುತೂಹಲದಿಂದ ಓಡಿಸಿಕೊಂಡು ಹೋಗುತ್ತದೆ ನಿಮ್ಮ ಬರಹ. ಎಲ್ಲಾ ಕಂತುಗಳನ್ನು ಓದಬೇಕೆಂಬ ಹಂಬಲವಾಗುತ್ತಿದೆ. ಓದುತ್ತೇನೆ

      ಸುಧಾ ಗಾಯತ್ರಿ

      1. ಧನ್ಯವಾದಗಳು ಕಣಮ್ಮಾ. ನಿಮ್ಮೆಲ್ಲರ ಪ್ರೋತ್ಸಾಹ ಮತ್ತಷ್ಟು ಬರೆಯಲು ಪ್ರೇರಣೆ ನೀಡುತ್ತದೆ.

        ಸುಜಾತಾ ರವೀಶ್

  2. ಯೂನಿಯನ್ ಗಳ ಹೊಲಸು ರಾಜಕೀಯ ನೋಡಿ ನಾನು ಯೂನಿಯನ್ ಗೆ ರಾಜೀನಾಮೆ ಕೊಟ್ಟಿದ್ಸೆ.

    ಉತ್ತಮವಾಗಿ ಮೂಡಿ ಬರುತ್ತಿದೆ.

    ದೋಣಿ ಮುಂದೆ ಸಾಗಲಿ

    1. ಧನ್ಯವಾದಗಳು. ನಿಜ….ತುಂಬಾ ಬೇಸರವಾಗುತ್ತದೆ.

      ಸುಜಾತಾ ರವೀಶ್

    2. ಸವಿ ಸ್ಪಂದನೆಗೆ ಧನ್ಯವಾದಗಳು

      ಸುಜಾತಾ ರವೀಶ್

  3. ಚಲನವೇ ಬದುಕು ನಿಶ್ಚಲವೇ ಮರಣ ಎಂಬ ಗೋಪಾಲಕೃಷ್ಣ ಅಡಿಗರ ಸಾಲು ನೆನಪಾಗುತ್ತದೆ. ಸಾತತ್ಯದ ಹಂಬಲ ಹುಡುಕಾಟದ ಹುರುಪೇ ಜೀವ ಜೀವನದ ಆಡುಂಬೊಲ. ಈ ಹಾದಿಯಲ್ಲಿ ಅದರ ಯಾದಿಯಲ್ಲಿ ಸಾಗುವ ಮಾಗುವ ಕ್ರಮಕ್ಕೆ ನಿರೀಕ್ಷೆ ಹೆಚ್ಚು. ಆದರೆ ನೀವು ಉತ್ತೇಜಿತ ಸ್ಫೂರ್ತಿ ಕಳೆದುಕೊಂಡಿರಲಿಲ್ಲ ಎಂಬುದೇ ಅದರ ಜೀವದ್ರವ್ಯ.
    ಸಿಕ್ಕಾಟ ತಿಕ್ಕಾಟಗಳ ಘರ್ಷ ಸ್ಪರ್ಶಗಳೇ ಮುಂಹಾದಿಯ ವಿಜಿಗೀಷು ಪಯಣಕ್ಕೆ ಹೇತು.ಅದರ ಸತ್ಫಲ ಸಂಕಲ್ಪಬಲದಿಂದ ಸಾಧ್ಯ ಎಂಬುದನ್ನು ಸವೆಸಿದ ಮಾರ್ಗದಲ್ಲಿ ಕಂಡಿರಿಸಿದ್ದೀರಿ. ನಿರಭ್ರ ಹೆಜ್ಜೆಗಳಿಗೆ ಸಪ್ಪಳದ ಹಂಗೇಕೆ, ಶಬ್ದಗಳ ಚಪಲವೇಕೆ ಅಲ್ಲವೇ.ಅವಿಚಲಿತವಾದ ನಿಮ್ಮ ಅನುಭವದ ಪುನರನುಭವ ಸಲೀಸು ಲಯದ ಸುಗ್ರಾಸ ಭಾವ ಮೂಡಿಸುತ್ತದೆ.ಶುಭಾಭಿನಂದನೆಗಳು.ಬಳಸಿರುವ ಪದಗಳಲ್ಲಿ ಸುಭಾಷೆ ಇದೆ.ನವಿರುತನ ಬರಲು ಇದೇ ಕಾರಣ.

    1. ವಾವ್ ಎಷ್ಟು ಸುಂದರ ಪ್ರತಿಕ್ರಿಯೆ. ಇಂತಹ ಸ್ಪಂದನೆಯೇ ಬರೆಯಲು ಪ್ರೇರಣೆ ಅಷ್ಟೇ ಅಲ್ಲದೆ
      ಒಂದು ರೀತಿಯ ಜಾಗೃತ ಸ್ಥಿತಿಯ ಅನಿವಾರ್ಯತೆ ತರುತ್ತದೆ. ಬರವಣಿಗೆಗೆ ಇಂತಹ ಒತ್ತಡ ಅಗತ್ಯ. ಸತತ ಪ್ರೋತ್ಸಾಹದ ಅದ್ಭುತ ಪ್ರತಿಕ್ರಿಯೆಗೆ ಅದೆಷ್ಟು ಧನ್ಯವಾದಗಳನ್ನು ತಿಳಿಸಿದರೂ ಅದು ಕಡಿಮೆಯೇ….

      ಸುಜಾತಾ ರವೀಶ್

  4. ಕುತೂಹಲ ತಿರುವುಗಳೊಂದಿಗೆ ಜೀವನದ ವೃತ್ತಾಂತ ಘಟನೆಗಳು ಚೆನ್ನಾಗಿ ಮೂಡಿ ಬರುತ್ತಿವೆ.
    ಮುರುಳಿಧರ ಅನಂತಮೂರ್ತಿ

  5. ಧನ್ಯವಾದಗಳು. ನಿಮ್ಮ ಪ್ರೋತ್ಸಾಹದ ನುಡಿಗಳು ಮತ್ತಷ್ಟು ಬರೆಯಲು ಪ್ರೇರಣೆ ನೀಡುತ್ತಿದೆ.

    ಸುಜಾತಾ ರವೀಶ್

  6. ಕುತೂಹಲ ದಿಂದ odisikondu hoguttade ninna ಬರಹ. Multi talented. ನಂಗೂ langa blouse holidukottidde ninu. Tumba chennagi ಬಂದಿತ್ತು

Leave a Reply

You cannot copy content of this page

Scroll to Top