ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ಗಜಲ್

ಪ್ರೇಮದಮಳೆ ಸುರಿಸಿದರೂ ಹೃದಯದ
ಅರಮನೆಗೆ ಬರಲಾಗಲಿಲ್ಲ ಗೆಳೆಯಾ
ಕೋಮಲತೆಯ ಸ್ಪಷ್ಟೀಕರಿಸಿ ಒಲವಿನ
ಸಿರಿತನವ ತರಲಾಗಲಿಲ್ಲ ಗೆಳೆಯಾ
ಅನಿರೀಕ್ಷಿತ ತಿರುವುಗಳು ಬದುಕಿನ
ನಿರ್ಧಾರವನು ಬದಲಾವಣೆ ಮಾಡದೇ
ಕನಸಿನಲಿ ಕಂಡಿರುವ ಕಲ್ಪನೆಯ
ಭವನದೊಳು ಇರಲಾಗಲಿಲ್ಲ ಗೆಳೆಯಾ
ಕೂಸುಹುಟ್ಟುವ ಮುನ್ನಕುಲಾವಿ ಹೊಲಿಯುವ ವ್ಯರ್ಥ ಪ್ರಯತ್ನ ಬಿಟ್ಟುಬಿಡು
ಹಾಸಿರುವ ಹೂಮಂಚದಲಿ ಸುಖವೆಂಬ
ಮರೀಚಿಕೆ ತೋರಲಾಗಲಿಲ್ಲ ಗೆಳೆಯಾ
ಹೊನ್ನಕಲಶ ಶಿಖರದಲಿ ಇರಿಸುತ
ಭ್ರಮೆಯಲಿ ಬೀಳದಿರುವುದೇ ಒಳಿತು
ಕನ್ನಡಿಯೊಳಗೆ ಪ್ರತಿಬಿಂಬವ ನೋಡುತ
ಮುಗುಳುನಗೆ ಬೀರಲಾಗಲಿಲ್ಲ ಗೆಳೆಯಾ
ಹರಿಸುವಾಸೆ ಝರಿಯಂತೆ ಧಾರೆಯಾಗಿ
ಪ್ರೀತಿಯ ಪೂರವನು ರಾಧೆಯಲಿ
ತೆರೆಯದೆಯೇ ರೆಕ್ಕೆಯನು ಬಾನಂಚಿಗೆ
ಹಕ್ಕಿಯಂತೆ ಹಾರಲಾಗಲಿಲ್ಲ ಗೆಳೆಯಾ
ಅನುರಾಧಾ ರಾಜೀವ್ ಸುರತ್ಕಲ್

Best of luck….deavera anugraha yaapala uppadu..