ಪ್ರಯಾಣ ಅನುಭವ
“ತೆಂಕಣ ಗಾಳಿ ಸೋಂಕಿದೊಡೆ
ನೆನೆವುದು ಎನ್ನ ಮನಂ ಕೋಲಾರಂ
“ಡಾ. ಮಾಸ್ತಿ ಬಾಬು
“ಪ್ರಯಾಣದ ಅನುಭವ”


“ತೆಂಕಣ ಗಾಳಿ ಸೋಂಕಿದೊಡೆ ನೆನೆವುದು ಎನ್ನ ಮನಂ ಕೋಲಾರಂ”
ಕರ್ನಾಟಕದ ಗಡಿಯಲ್ಲಿರುವ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಗ್ರಾಮ ನನ್ನೂರು. ಹುಟ್ಟಿದ್ದು, ಬೆಳೆದಿದ್ದು ಇಲ್ಲಿಯೇ. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ವೃತ್ತಿಯನ್ನು ಮಾಡುತ್ತಿರುತ್ತೇನೆ. ಈ ಲೇಖನದ ವಿಶೇಷವೆಂದರೆ ಹಳ್ಳಿ ಪ್ರಯಾಣದ ಅನುಭವವನ್ನು ಪರಿಚಯಿಸುವುದು. ಸದಾ ಹವಾನಿಯಂತ್ರಿತ ಕಾರು, ಬಸ್ ಮತ್ತು ವಾಹನಗಳಲ್ಲಿ ಓಡಾಡುತ್ತಾ, ಹವಾನಿಯಂತ್ರಿತ ದೊಡ್ಡ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನನಗೆ ಪದವಿ ವ್ಯಾಸಾಂಗದ ದಿನಗಳು ಇಂದಿನ ಪ್ರಯಾಣದಲ್ಲಿ ಮರುಕಳಿಸಿತು. ೧೯೯೯ – ೨೦೦೨ರವರೆಗೆ ಪದವಿಗಾಗಿ ಮಾಸ್ತಿಯಿಂದ ಮಾಲೂರಿಗೆ ಪ್ರತಿದಿನ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಪ್ರಯಾಣ ಸಾಗುತ್ತಿತ್ತು. ಕಿಕ್ಕಿರಿದ ಜನಸಂದಣಿಯಲ್ಲಿ ಹಾಗೋ ಹೀಗೋ ನಿಂತುಕೊಳ್ಳಲು ಜಾಗ ಮಾಡೊಕೊಂಡು ಊರು ಸೇರುತ್ತಿದ್ದುದು ಅಭ್ಯಾಸ. ಕುಳಿತುಕೊಳ್ಳಲು ಸೀಟು ಸಿಕ್ಕಿದ್ರೆ ಮನಸ್ಸಿಗೆ ಮುದ. ಮುಂದಿನ ಸೀಟಿನಲ್ಲಿನ ಹುಡುಗಿಯರ ಜಡೆಗಳನ್ನು ಕಟ್ಟುವುದು ಅಥವಾ ಮೇಲುದೆಯನ್ನೇ ಗಂಟು ಹಾಕುವುದು, ತಮಾಷೆ ಮಾಡುವುದು ಸರ್ವೇ ಸಾಮಾನ್ಯವಾಗಿತ್ತು. ಬಸ್ಸಿನಿಂದ ಇಳಿಯುವಾಗ ಹುಡುಗಿಯರು ಎದ್ದು ಮುಂದೆ ಬರಲು ಪ್ರಯತ್ನಿಸಿದಾಗ ಜಡೆಗಳು ಎಳೆದುಕೊಂಡಾಗ ಕಣ್ಣು ಕೆಂಪಗೆ ಮಾಡುತ್ತಿದ್ದರು. ವಿದ್ಯಾರ್ಥಿ ಜೀವನದ ಚೇಷ್ಠೆಗಳಿಂದ ಆನಂದ ಪಡುತ್ತಿದ್ದುದು ಸಹಜವಾಗಿತ್ತು. ಇಂದು ಕಾರಣಾತಂರದಿಂದ ಕಾರು ಇಲ್ಲದೆ ಬಸ್ಸಿನಲ್ಲಿ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಉಂಟಾಯಿತು. ಬೆಳಗ್ಗೆ ನನ್ನ ಶ್ರೀಮತಿ ಮನೆಯಿಂದ ಕೆ.ಆರ್.ಪುರಂ ಬಸ್ ನಿಲ್ದಾಣಕ್ಕೆ ದ್ವಿಚಕ್ರವಾಹನದಲ್ಲಿ ಇಳಿಸಿದರು. ನಂತರ ಮಾಲೂರಿಗೆ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಪ್ರಯಾಣ. ಮುಂದೆ ಮಾಲೂರಿನಿಂದ ಮಾಸ್ತಿಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣ. ಆಹಾ! ಬೆಂಗಳೂರಿನ ಯಾವ ರಾಜಹಂಸ ಬಸ್ಸಿಗೂ ಕಡಿಮೆ ಇಲ್ಲದ ಮಾಸ್ತಿ ಎಕ್ಸ್ಪ್ರೆಸ್ ಬಸ್ಸು. ಬಸ್ಸಿನೊಳಗೆ ಕಿಟಕಿಯ ಕಡೆ ಖಾಲಿ ಇದ್ದ ಸೀಟಿನಲ್ಲಿ ಕುಳಿತಾಗ ಕಂಡೆಕ್ಟರ್ ಟಿಕೇಟ್…. ಟಿಕೇಟ್ ಅಂತ ಬಂದ್ರು. ಅಣ್ಣ ಮಾಸ್ತಿಗೆ ಎಷ್ಟು ಹಣ ಕೊಡಬೇಕು ಎಂದಾಗ ೨೫ ಅಂದ್ರು. ಮೊಬೈಲ್ ಹೊರತೆಗೆದು ಗೂಗಲ್ ಪೇ ಸ್ಕ್ಯಾನರ್ ಕೇಳಿದೆ. ಒಮ್ಮೆ ಕಂಡೆಕ್ಟರಣ್ಣ ನನ್ನ ಮುಖ ನೋಡಿದ್ರು, ಯಾಕಣ್ಣ ಅಂದೆ. ಅದಕ್ಕೆ ಕಂಡೆಕ್ಟರ್, ಗೂಗಲ್ ಪೇ, ಫೋನ್ ಪೇ ಯಾವ್ದೂ ಇಲ್ಲ ಕಾಸು ಕೊಡಿ ಅಂದ್ರು. ಆಗ್ಲೇ ನನಗೆ ಅರಿವಾಗಿದ್ದು ನಾನು ಹಳ್ಳಿ ಪ್ರಯಾಣದಲ್ಲಿರುವೆ ಎಂದು. ತಂತ್ರಜ್ಞಾನ ಇಷ್ಟೊಂದು ಮುಂದುವರೆದಿದ್ದರೂ ನನ್ನ ಹಳ್ಳಿಯಲ್ಲಿ ಇನ್ನೂ ಅನೇಕ ಮಂದಿ ಹಳೆಯ ಸಂಪ್ರದಾಯವನ್ನು ಬಿಟ್ಟಿಲ್ಲ. ಅಂತೂ ಜೇಬಿನಿಂದ ೨೫ ರೂಗಳನ್ನು ಕೊಟ್ಟಾಗ ಬಣ್ಣದ ಪೇಪರಲ್ಲಿ ಡಾಕ್ಟರ್ ಬರಹದಲ್ಲಿ ಟಿಕೇಟ್ ಬರೆದುಕೊಟ್ಟರು. ಅದನ್ನೊಮ್ಮೆ ನೋಡಿದೆ. ಬಾಲ್ಯದಲ್ಲಿ ಹಿರಿಯರೊಂದಿಗಿನ ಪಯಣ, ಪದವಿ ಸಮಯದಲ್ಲಿನ ಪಯಣ ಕಣ್ಣಮುಂದೆ ಹಾದುಹೋಯಿತು. ಕೆ.ಎಸ್.ಆರ್.ಟಿ.ಸಿ ಯಲ್ಲಿ ಟಿಕೇಟ್ ಇಲ್ಲದಿದ್ದರೆ ತಪಾಸಣಾಧಿಕಾರಿಗಳು ಬಂದಾಗ ದಂಡ ಬೀಳುತ್ತಿದ್ದ ವಿಷಯ ತಿಳಿದು ಖಾಸಗಿ ಬಸ್ಸಿನಲ್ಲೂ ದಂಡಾಧಿಕಾರಿ ಬರ್ತಾರೆ ಅಂತ ಭಯದಿಂದ ಕಂಡೆಕ್ಟರ್ ನೀಡಿದ ಬಣ್ಣದ ಟಿಕೇಟನ್ನು ಭದ್ರವಾಗಿ ಜೇಬಿನಲ್ಳಿಡುತ್ತಿದ್ದೆ. ಇಂದು ಇದೇ ರೀತಿಯ ಟಿಕೇಟನ್ನು ಖಾಸಗಿ ಬಸ್ಸಲ್ಲಿ ಪಡೆದಾಗ ಮುಖದಲ್ಲಿ ಸವಿನೆನಪಿನ ಮಂದಹಾಸ ಮೂಡಿತು. ಒಬ್ಬನೆ ನಗಲೂ ಸಾಧ್ಯವಾಗಲಿಲ್ಲ. ನಕ್ಕರೆ ಹಳ್ಳಿ ಜನ ನನ್ನ ನೋಡಿ ಇವನ್ಯಾರೋ ಮಾಡ್ರನ್ ಹುಚ್ಚ ಅಂತ ಅಂದುಕೊಳ್ಳಬಹುದೆಂದು ಎಳೆನಗೆಯನ್ನು ಬೀರಿದೆ. ಖಾಸಗಿ ಬಸ್ಸು ಯಾವ ಹವಾನಿಯಂತ್ರಿತ ಬಸ್ಸಿಗೂ ಕಡಿಮೆಯಿಲ್ಲ. ಕಿಟಕಿಯನ್ನು ಎರಡೂ ಕಡೆ ಸರಿಸಿ ಕೂತರೆ ಸಾಕು ಪ್ರಕೃತಿದತ್ತವಾದ ತಣ್ಣನೆ ಗಾಳಿ ಬೀಸುತ್ತದೆ. ಇಲ್ಲಿ ಸೆಕೆ ಎಂಬ ಪದವೇ ಕಣ್ಮರೆಯಾಗಿರುತ್ತದೆ. ಇನ್ನು ಬಸ್ಸಿನೊಳಗೆ ಝಗಮಗಿಸುವ ಬಣ್ಣಬಣ್ಣದ ಡಿಸ್ಕೋ ಲೈಟ್ಸ್ ಕಣ್ಣಿಗೆ ಹಬ್ಬವ ತರುತ್ತದೆ. ಜೊತೆಗೆ ಚಾಲಕನ ಆಸನದ ಹಿಂಭಾಗದಲ್ಲಿ ಎಡ ಮತ್ತು ಬಲಕ್ಕೆ ಎರಡು ಬಣ್ಣದ ಟಿ.ವಿ. ಇದರಲ್ಲಿ ಹಳೆಯ ಮತ್ತು ಹೊಸ ಸಿನಿಮಾಗಳನ್ನು ಉಚಿತವಾಗಿ ಪ್ರದರ್ಶಿಸಿ ಮನರಂಜನೆ ನೀಡುತ್ತಾರೆ. ಎಲ್ಲರ ಕಣ್ಣು ಸಿನಿಮಾ ಮೇಲೇಯೇ ಇರುತ್ತದೆ. ಇದು ಪ್ರಯಾಣವಲ್ಲ. ಸಿನಿಮಾ ಮಂದಿರದಲ್ಲಿರುವ ಅನುಭವವ ನೀಡುತ್ತದೆ. ಒಂದು ಗಂಟೆಯ ಪ್ರಯಾಣದ ನಂತರ ಊರು ಬಂತು ಇಳಿಯಿರಿ ಎಂಬ ಧ್ವನಿ ಕಂಡೆಕ್ಟರ್ ಹೇಳಿದಾಗ ಮನಸ್ಸಿಗೆ ಬೇಸರ. ಇಳಿಯುವಾಗಲೂ ಟಿ.ವಿಯಲ್ಲಿ ಬರುತ್ತಿರುವ ಸಿನಿಮಾ ಮೇಲೆಯೇ ಕಣ್ಣು. ಅಂತು ಖಾಸಗಿ ಬಸ್ಸಿನ ಪಯಣ ಮನಸ್ಸಿಗೆ ತರುವುದು ಆನಂದ. ಮತ್ತೊಮ್ಮೆ ಪ್ರಯಾಣಿಸಬೇಕು ಈ ಖಾಸಗಿ ಬಸ್ಸಿನಲ್ಲಿ. ಹಳ್ಳಿಯ ಜೀವನ, ಹಳ್ಳಿಯೂಟ, ಹಳ್ಳಿಯ ಜನರ ಗುಣ ಕಾಮಧೇನುವಿನ ಹಾಲಿನಷ್ಟೇ ಪರಿಶುದ್ಧವಾಗಿರುತ್ತದೆ. ಹಳ್ಳಿಯ ಪರಿಸರವು ಸ್ವರ್ಗವೇ ಧರೆಗಿಳಿದಂತೆ ಕಾಣುತ್ತಾ ಎಲ್ಲರಿಗೂ ಉತ್ತಮ ಆರೋಗ್ಯವನ್ನು ನೀಡುತ್ತದೆ. ಓದುಗರಿಗೆ ಧನ್ಯವಾದಗಳು. ಮತ್ತೊಂದು ವಿಷಯದೊಂದಿಗೆ ಮತ್ತೊಮ್ಮೆ ನಿಮ್ಮ ಮುಂದೆ ಬರುವೆ.
ಡಾ. ಮಾಸ್ತಿ ಬಾಬು




ಮೈಲಾಂಡಹಳ್ಳಿ ಕೆರೆ ಕಟ್ಟೆ ಮೇಲೆ ಬಸ್ಸು ಹೋಗುವಾಗ ಆಗುವ ಅನುಭವದ ಬಗ್ಗೆ ಸ್ವಲ್ಪ
ವರ್ಣಿಸಿರುತ್ತೀರಿ ಅಂತ ಅನ್ಕೊಂಡಿದ್ದೆ ಗುರುಗಳೆ…..