ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನದಿ ತೀರದಲಿ ಕುಳಿತು ನಿನ್ನನೇ ನಿರೀಕ್ಷಿಸುತಿಹೆ ಮಂದಾನಿಲವಾಗಿ ಬರುವೆಯಾ ಸಖಾ
ನಿದಿರೆಯಲೂ ಕಾಡಿಸುತ ಕಾಡಿಗೆ ಕಣ್ಣಂಚಿನ ಹೊಂಗನಸಾಗಿ ಬರುವೆಯಾ ಸಖಾ

ಪದಗಳ ರೂಪದಿ ಪ್ರಣಯ ಕಾವ್ಯದ ಪುಟದಲಿ ಸಂಧಿಸುವೆನೆಂದವನು ನೀನಲ್ಲವೇ
ಕದಕೆ ಒರಗಿ ನಿಂತು ಹಗಲಿರುಳು ಕಾಯ್ದಿರುವೆ ಕಾವ್ಯಲಹರಿಯಾಗಿ ಬರುವೆಯಾ ಸಖಾ

ಜೋಡಿ ಮೇಘಗಳಾಗಿ ಆಗಸದಿ ತೇಲಾಡುವ ಕನಸುಗಳ ಕಂಡವನು ನೀನು
ಮೋಡಿ‌ ಮಾಡಿ ಮೈ ಝಮ್ಮೆನಿಸಿ ಹೊಳೆಯುವ ಕೋಲ್ಮಿಂಚಾಗಿ ಬರುವೆಯಾ ಸಖಾ..

ಅಂಗಳದ ಹೊಂಬೆಳಕಿನಲಿ ಕುಳಿತು ಸಲ್ಲಾಪದಿ ಜಗ ಮರೆವ ನಿನ್ನಾಸೆಯ ನಾ ಬಲ್ಲೆ
ಮುಂಗುರುಳ ಸರಿಸಿ ಕಂಗಳಲಿ ಬಿಂಬ ಕಾಣಲು ಬೆಳದಿಂಗಳಾಗಿ ಬರುವೆಯಾ ಸಖಾ

ಒಡಲ ಶರಧಿಯಲಿ ಉಕ್ಕಿ ಹರಿಯುವ ಒಲವಿನ ಅಲೆಗಳಲಿ ಈಸುತಿದ್ದೆವಲ್ಲವೇ
ಮಡಿಲ ಪರಿಧಿಯಲಿ ಹರಡಿಹ ಪ್ರೀತಿ ಭಾವಕೆ ಬಿಸಿಯುಸಿರಾಗಿ ಬರುವೆಯಾ ಸಖಾ

ಏಳು‌ ಬಣ್ಣಗಳ ಕಾಮನಬಿಲ್ಲಿನೊಳು‌ ಒಂದಾಗಿ ಹೋಳಿ ಆಡೋಣವೆಂದಿದ್ದೆ
ಬಾಳ ಬಾನಿಗೆ ಬೆಳಕ ಚೆಲ್ಲಿ ಹೊಂಗಿರಣ ಹೊತ್ತ‌ ನೇಸರನಾಗಿ ಬರುವೆಯಾ ಸಖಾ

ಅರಳಿದ ಹೂವಲಿ ಘಮ್ಮೆನ್ನುವ ಸುಗಂಧವಾಗಿ ಸೇರೋಣವೆಂದು ವಚನವಿತ್ತಿದ್ದೆ
ತರಳೆಯಧರದ ಮಧುವಿಗಾಗಿ ಝೇಂಕರಿಸುತ ಭೃಂಗವಾಗಿ ಬರುವೆಯಾ ಸಖಾ..


About The Author

Leave a Reply

You cannot copy content of this page

Scroll to Top