ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್


ಬಯಸಿ ಕರೆದಾಗ ಬಾರದಿರೆ ಅಪಾರ ನೋವು
ಬಯಕೆ ತೊರೆದಾಗ ಕಾಣದಿರೆ ಅಪಾರ ನೋವು
ಜೀವಕುಸುಮ ಅರಳಿ ಕೆರಳಿ ನಲುಗುತಿದೆ ಹೊರಳಿ
ಮರುಳ ಮನವು ಹಸಿದಾಗ ಸಿಗದಿರೆ ಅಪಾರ ನೋವು
ಆಸೆಗಳ ಮೂಟೆ ಹೊತ್ತು ತಿರುತಿರುಗಿ ಭಾರವಾಗಿದೆ
ತೃಷೆಯಿಂದ ಬಳಲುವಾಗ ಬಳಸದಿರೆ ಅಪಾರ ನೋವು
ಕನಸುಗಳು ಕಂತೆ ಕಂತೆ ಸಾಕಾರಗೊಳದೆ ಸಂಕಟಗೊಂಡೆ
ತನುವು ತಲ್ಲಣಿಸುವಾಗ ತಬ್ಬದಿರೆ ಅಪಾರ ನೋವು
ಭಾವಬಿತ್ತಿಯಾ ಉತ್ತಿ ಬಿತ್ತಿದಾ ಪ್ರೇಮ ಚಿಗುರೊಡೆದಿದೆ
ಅರಳಿ ನಿಂತಾಗ ಮಕರಂದ ಹೀರದಿರೆ ಅಪಾರ ನೋವು
ನೆನಪುಗಳಾ ಸುಳಿಯಲಿ ಅನು ಬಿಗಿದಿಟ್ಟ ಬಯಕೆಗಳಾ ಕಟ್ಟು ಸಡಿಲಾಗಿದೆ
ಉಸಿರು ಬಿಗಿಹಿಡಿದು ನಿಂತಾಗ ಮುದ್ದಿಸದಿರೆ ಅಪಾರ ನೋವು
—————
ಡಾ ಅನ್ನಪೂರ್ಣ ಹಿರೇಮಠ



