ಕಾವ್ಯ ಸಂಗಾತಿ
ಸಿಂಧು ಭಾರ್ಗವ
“ಸಮಾಧಿಯೊಳಗಿಂದ”

ಸಮಾಧಿಯೊಳಗಿಂದ
ಎದ್ದು ಬಂದ ಆ ಸ್ವರವು
ತನ್ನ ಸಾವಿನ ಕಾರಣವ ಹೇಳಲು
ತೋರಿಸುತಿದೆ ಕಾತುರವ..
ಅದೆಷ್ಟು ಮಳೆಗಾಲ,
ಚಳಿಗಾಲದ ಸುತ್ತ
ಕಣ್ಕಟ್ಟುವಂತಿದೆ
ಅಸ್ಥಿಪಂಜರಗಳ ಚಿತ್ರ..
ಕಾನನವೇ ಬೆಳೆದಿದೆ
ಅಪರಿಚಿತ ಶವಗಳ ಗೊಬ್ಬರದಿಂದ
ಲೆಕ್ಕವಿಲ್ಲದಷ್ಟು ದೇಹಗಳನು
ಹೊರತೆಗೆಯಲಾಗಿದೆ ನದಿಯಿಂದ
ಕೊನೆಯಿಲ್ಲದ ಹಿಂಸೆ,
ಕಿವುಡಾದ ಆಕ್ರಂದನ
ನ್ಯಾಯಕ್ಕೆ ಮೊರೆಯಿಟ್ಟವರಿಗೆ
ಮಾಡುವರು ಅವಮಾನ..
ಕಾಣೆಯಾದವರ
ಚಹರೆಯೆ ಇಲ್ಲ..
ಅಮಾಯಕರ ಜೀವಕ್ಕೆ
ಬೆಲೆಯೇ ಇಲ್ಲ..
ಅನ್ಯಾಯವ ಕೇಳುವವರಿಲ್ಲ
ಸಹಾಯಕ್ಕೆ ಯಾರೂ ಬರಲಿಲ್ಲ..
ಕೈಚೆಲ್ಲಿ ಕುಳಿತ ಅಧಿಕಾರಿಗಳ ವರ್ಗ..
ಪ್ರಶ್ನೆ ಮಾಡಲು ಬಂದವರಿಗೆ
ವರ್ಗಾವಣೆಯ ಭಾಗ್ಯ..
ಮಾರಿಕೊಂಡಿವೆ
ಕೆಲ ಸುದ್ದಿ ಮಾಧ್ಯಮಗಳು
ರಾಜಕೀಯದವರ ಮನೆಯಲ್ಲಿ
ನೋಟಿನ ಕಂತೆಗಳು..
ಒಗ್ಗಟ್ಟಾಗಬೇಕಿದೆ,
ಹೆಡೆಮುರಿ ಕಟ್ಟಲು
ಭಯವೇಕೆ ಇನ್ನು
ಸಾವೇ ಎದುರಾದರೂ
ಅಮಾಯಕರ ಬಲಿ,
ಹೆಣ್ಮಕ್ಕಳ ಅತ್ಯಾಚಾರ
ರಕ್ಕಸರ ಕ್ರೂರತನಕೆ
ಧರ್ಮದ ಮುಖವಾಡ..
ಇನ್ನು ಕಾಲ ಮುಂಚಿಲ್ಲ
ಜನರ ಕೂಗು ನಿಂತಿಲ್ಲ..
ಅಧರ್ಮಕ್ಕೂ ಕೊನೆಯೆಂಬುದಿದೆ..
ಹೋರಾಟಕ್ಕೂ ಜಯವೆಂಬುದಿದೆ..
ಸಿಂಧು ಭಾರ್ಗವ,





ಸಕಾಲಿಕ
ಧನ್ಯವಾದಗಳು
ಅರ್ಥಪೂರ್ಣ ಸಾಲುಗಳು