ಪರವಿನ ಬಾನು ಯಲಿಗಾರ ಅವರ “ಬದುಕಿಬಿಡೋಣ ಹೀಗೆ”

ಉಳಿ ಪೆಟ್ಟು ತಿಂದ ಶಿಲೆ ,  
ವಿಗ್ರಹವಾಗಿ ನಿತ್ಯ ಪೂಜೆ ಸ್ವೀಕರಿಸಿ ,
ಸಾವಿರಾರು ವರ್ಷಗಳಿಂದ ಜನರ ಪ್ರಾರ್ಥನೆ , ಕೋರಿಕೆ , 

ಕೇಳಿಸಿಕೊಳ್ಳುತ್ತಿರುವುದು …..

ಸಂಕಷ್ಟಗಳ ಪೆಟ್ಟು  ಬಿದ್ದಾಗಲೇ
ಮನಸು ಮಾಗುವುದು ,
ಬಾಗುವುದು , ಸಾವಿರ ಜನರ ಕಷ್ಟಕ್ಕೆ
ಹೆಗಲಾಗುವುದು , ದೇಹಿ ಎಂದವರಿಗೆ
ಕೊಡುಗೈಯಾಗುವುದು…..

ಬೆಂಕಿ ತಾಗಿದರೆ ಬಂಗಾರ ಮತ್ತಷ್ಟು ಹೊಳೆಯುವುದು , 

ಹಣ್ಣು ಮಾಗಿದರೆ ರುಚಿಸುವುದು ,
ಅಕ್ಕಿ ಬೆಂದಾಗಲೇ ಹಸಿವು ತಣಿಸುವುದು ,
ಸಮಯ ಸರಿದಾಗಲೇ ಗಾಯಗಳು ಆರುವುದು …….

ಸವಾಲುಗಳು  ಇದ್ದಾಗಲೇ ,  
ನಡಿಯುವ ದಾರಿಯಲ್ಲಿ ದಣಿವಾಗದು ,
ಬದುಕಿನ ಪಯಣದಲ್ಲಿ  ತಿರುವುಗಳಿದ್ದಷ್ಟು ಚಂದ , ಎತ್ತರದಿಂದ ಧುಮುಕಿದಾಗಲೇ ನದಿ ರಮಣೀಯ ಜಲಪಾತವಾಗುವುದು

ಸರಳ ಜೀವನಕ್ಕಿಂತ ,
ಸಂಘರ್ಷಿಸುವ ಜೀವನ ಬಲು ಸಾರ್ಥಕ ,  
ಯಾರೋ ನಿರ್ಮಿಸಿದ
ರಾಜ ಮಾರ್ಗದಲ್ಲಿ ನಡೆಯುವುದಕ್ಕಿಂತ  ,
 ನಮ್ಮದೇ ಆದ ಕಾಲು ದಾರಿ ಸೂಕ್ತ …..

ಅಡೆ ತಡೆಗಳು ಬರುವುದು , ಎದುರಿಸುವ    
 ಸಾಮರ್ಥ್ಯ ಇದ್ದವರಿಗೆ ಮಾತ್ರ ,
ಹೋರಾಡುವ ಶಕ್ತಿವಂತರೇ
ಸಾಮ್ರಾಜ್ಯ ಕಟ್ಟುವರು ,
ಚರಿತ್ರೆ ಸೃಷ್ಠಿಸುವರು…..

ಇದ್ದು ಸತ್ತಂತೆ ಬದುಕುವುದಕ್ಕಿಂತ ,
ಸತ್ತು ಇದ್ದಂತೆ ಬದುಕಿದರೆ ,
ಅದುವೇ ಶ್ರೇಷ್ಠ ಬದುಕು ,
ಅರ್ಥಪೂರ್ಣ ಬದುಕು ……

3 thoughts on “ಪರವಿನ ಬಾನು ಯಲಿಗಾರ ಅವರ “ಬದುಕಿಬಿಡೋಣ ಹೀಗೆ”

Leave a Reply