ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್

ಎರಡು ಜೀವಗಳು ಬೆಸೆದು ಪರಸ್ಪರ
ಮೂಡಿತು ಅನುರಾಗ
ಕೊರಡು ಕೊನರಿದ ತೆರದಿ ಭಾವದಲಿ
ಕೂಡಿತು ಅನುರಾಗ

ಎದೆಯ ಗೀತೆಯಲಿ ಸಂಗೀತ ಮೇಳೈಸಿ
ಹೊಸತುಲೋಕ ತೋರುವೆಯಾ
ನಾದವ ಹೊಮ್ಮಿಸುತ  ಸ್ವರ ತಾಳದಲಿ
ಹಾಡಿತು ಅನುರಾಗ

ಮಾತಿಗೆ ಸಿಲುಕದೆ ಮೌನವಾಗಿ ಮೀಟಿದೆ
ಹೃದಯ ವೀಣೆಯನು
ಸೋತಿದೆ ಅಂತರಂಗ ಮೃದಂಗ ಸ್ಪರ್ಶದಿ
ತೀಡಿತು ಅನುರಾಗ

ಬರಡು ಭೂಮಿಯಲಿ ಹನಿಸಿ ನೀರನು
ಬಿತ್ತಿದೆ ಒಲವನು
ಶರಧಿ ಅಲೆಗಳು ಚಿಮ್ಮಿ ದೂರವಾಗೆ
ಕಾಡಿತು ಅನುರಾಗ

ಕಣ್ಣಿನ ರೆಪ್ಪೆಯಲಿ ಮುಚ್ಚಿಟ್ಟು ಕಾಯುವಳು
ರಾಧೆ ನಲ್ಲನನು
ಬಣ್ಣದ ಕನಸಿನ ಚಿತ್ತಾರ ಬಿಡಿಸಲು
ಬೇಡಿತು ಅನುರಾಗ


Leave a Reply

Back To Top