ಹಫ್ಸಾ ಬಾನು ಬೆಂಗಳೂರು ಅವರ ಕಾವ್ಯ

 

ಮುಗ್ಧ ಬಾಲ್ಯವೇ ಎಷ್ಟೊಂದು ಚಂದಿತ್ತು
ಜಾತಿ ಬೇಧ ಈರ್ಷೆಗಳಿಲ್ಲದ್ದು ಚಂದವಿತ್ತು

ಒತ್ತಿ ಕೂತು ಒಂದೇ ತಟ್ಟೆಯಲ್ಲಿ ಉಂಡೆದ್ದು
ಭುಜ ಬಳಸಿ ನಡೆವ ಆದತ್ತದು ಚಂದವಿತ್ತು

ಅಮ್ಮ ಯಾರೋ, ಮಕ್ಕಳು ಯಾರದೋ
ನಮ್ಮವರೇ ಎಲ್ಲ ಅನ್ನೋ ಭಾವವದು ಚಂದವಿತ್ತು

ಎದ್ದು ಬಿದ್ದು ಆದ ಗಾಯಗಳು ಅದೆಷ್ಟೋ
ನೋವು ದೇಹಕ್ಕೆ ಮನಸ್ಸದು ಚಂದವಿತ್ತು

ಕಪ್ಪು ಇರುವೆ ಪಾಪ, ಕೆಂಪಿರುವೆ ದುಷ್ಟ
ನಂಬಿಕೆಗಳು ಪೆದ್ದು ಮುದ್ದು ಚಂದವಿತ್ತು

ಕಾಗೆ ಕೂಗಿದರೆ ನೆಂಟರು ಬರುವರು
ಅತ್ತರೋ ಗುಮ್ಮ ಬರುವುದು ಚಂದವಿತ್ತು

ಕರಿಯ ಬಿಳಿಯ ಧನಿಕ ಬಡವ ಒಟ್ಟಾಗಿ
ಒಂದೇ ಹಣ್ಣು ಕಚ್ಚಿ ತಿಂದದ್ದು ಚಂದವಿತ್ತು

ಕೆಸರಲಿ ಜಾರುತ ಕೊಳದಿ ಮಿಂದೆದ್ದಿದ್ದು
ಮಳೇಲಿ ಹಾಡುತ್ತಾ ನೆಂದದ್ದು ಚಂದವಿತ್ತು

ಕಿರುಬೆರಳಲಿ ಕೋಪಿಸಿ ತೋರು ಬೆರಳಲಿ
ರಾಜಿಯಾಗುವ ಸ್ನೇಹ ಎಷ್ಟೊಂದು ಚಂದವಿತ್ತು


2 thoughts on “ಹಫ್ಸಾ ಬಾನು ಬೆಂಗಳೂರು ಅವರ ಕಾವ್ಯ

  1. ಬಹಳ ಉತ್ತವಾಗಿವೆ ಮೇಡಂರ ನಿಮ್ಮ ಗಜಲ್ ಗಳು

Leave a Reply

Back To Top