ಎಮ್ಮಾರ್ಕೆ ಅವರ ಕವಿತೆ-ಅಂ(ಇಂ)ದು

ನಮ್ಮೂರ ಕೆರೆ ಏಕೋ
ಈಗ ಕಾಣದಾಗಿದೆ,
ಅದೇ ಕೆರೆಯೇ ಬಸ್ಸು
ತಂಗುದಾಣವಾಗಿದೆ

ರಸ್ತೆ ಅಕ್ಕಪಕ್ಕದ ಮರ
ಈಗ ಕಾಣದಾಗಿದೆ,
ಆ ಮರಗಳನೇ ಕಡಿದು
ರಸ್ತೆ ಅಗಲವಾಗಿದೆ

ಊರ ಹೊರಗಿನ ಕಾಡು
ಈಗ ಕಾಣದಾಗಿದೆ,
ಕಾಡೆಲ್ಲ ಅಳಿದು ನಾಡು
ನಿರ್ಮಾಣವಾಗಿದೆ

ರಸ್ತೆ ಬದಿಯ ಗದ್ದೆಗಳು
ಈಗ ಕಾಣದಾಗಿದೆ,
ಮಳಿಗೆ ಮುಗ್ಗಟ್ಟುಗಳ
ತೆರೆದ ಜಾಗವಾಗಿದೆ

ಜೋಡೆತ್ತಿನ ಬಂಡಿಗಳು
ಈಗ ಕಾಣದಾಗಿದೆ,
ಬಸ್ಸು,ಟ್ರ್ಯಾಕ್ಟರ್ರು,ಲಾರಿ
ಇವೇ ತುಂಬಿಕೊಂಡಿವೆ

ಕುಂಕುಮ,ವಿಭೂತಿಗಳು
ಈಗ ಕಾಣದಾಗಿದೆ,
ಮೈತುಂಬ ಟಾಟ್ಟುಗಳೇ
ತುಂಬಿಕೊಂಡಿವೆ

ಅಪ್ಪ,ಅಮ್ಮ ಎಂಬ ಕನ್ನಡ
ಈಗ ಕಾಣದಾಗಿದೆ,
ಮಮ್ಮಿ,ಡ್ಯಾಡಿ ಇಂಗ್ಲೀಸು
ಸದ್ಯ ಸಹಜವಾಗಿದೆ

ಆ ಹಿಂದಿನಂತೆ ಇಂದಿಗಿಲ್ಲ
ಎಂಬುದು ಸತ್ಯವಾಗಿದೆ,
ಮುಂದೆ ಹೇಗೋ? ಏನೋ?
ಎಂಬುದೇ ಶಂಕೆಯಾಗಿದೆ


Leave a Reply

Back To Top