ವರದೇಂದ್ರ ಕೆ ಮಸ್ಕಿ ಅವರ ಕವಿತೆ “ಪ್ರೇಮ ನಿಕ್ಷೇಪ”

   

ಕಾಡುವುದಕ್ಕೊಂದು ಮಿತಿ ಇದೆ
ಮನದ ಭೀತಿಯಲಿ ಪ್ರೀತಿ ಕಾಣುತಿದೆ
ತೊಟ್ಟ ಶ್ವೇತವಸ್ತ್ರದಿ ರಂಗಿನ ರಾಗ ಲಹರಿ
ಹೃದಯದಿ ಕಾಮನಬಿಲ್ಲ ಚಿತ್ತಾರ
ಬೆಸುಗೆಗಿದೆ ದಿನಕರನ ಅಂಗೀಕಾರ

ನಿನ್ನ ನೋಟಕೆ ಮನದ ನೇಕಾರ
ಹೆಣೆದ ಒಲವಿನ ಚಾದರ
ಚಿತ್ತಾರದ ಹೆಣಿಕೆ ಬಂಧಿಸಿದೆ,
ಬಿಸಿಯುಸಿರ ತನ್ಮಯಿಸಿ ತಣಿಸಿದೆ
ಹಿಗ್ಗಿನಲಿ ಅರಳಿದೆ ಮನಮೊಗ್ಗು

ಖುಷಿ ಅವಸರಕ್ಕೆ ದಕ್ಕಿದ್ದಲ್ಲ
ತಾಳ್ಮೆಯ ಶೃತಿಗೆ ಒಲಿದಿದೆ,
ಖಾಲಿ ನೆತ್ತರು ಪ್ರೇಮದಿ ಕೆಂಪೇರಿದೆ
ಸ್ಪರ್ಶದಿ ಮಾತೃ ಛಾಯೆ, ವಾತ್ಸಲ್ಯ
ಮಗು ಮಡಿಲಲಿ ಚಿಗುರಿದೆ

ಗೆಳತಿ,
ಮುಷ್ಟಿ ತುಂಬ ಹಿಡಿದ ಜೀವ
ಕರಗದಿರಲಿ ಬದುಕಿನೋಟದಿ
ನೀ ಪ್ರೇಮ ನಿಕ್ಷೇಪ
ಕಾಡದಿರು, ವಿಮೋಚಿಸಿ ಶಾಪ
ತಳಮಳ ಕಡಿತಗೊಳಿಸಿ ಬಾ
ನಾ ನಿನ್ನಾಪೇಕ್ಷಿ ಅಪಹರಿಸುವೆ
ತೊಳ ಬಂಧಿಯಲಿದೆ ನಿಶ್ಚಲ
ನಿಷ್ಕಲ್ಮಶ ಭಾವ, ಮುಂದಿನದೆಲ್ಲ
ಹೊಸ ಹೆಜ್ಜೆ ಸವಿ ರಸಭಾವ


Leave a Reply

Back To Top