ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎದೆಯೊಳಗಣ ಆಡುವ ಉಸಿರೂ ನೀನೆ
ಹೊರಗಣ ಉಸಿರಾಟದ ಗಾಳಿಯು ನೀನೆ
ಉಚ್ವಾಸ ನಿಶ್ವಾಸಗಳ ನಿಯಂತ್ರಕನು ನೀನು
ನಿನ್ನುಸಿರಿನಾಟದ ಬೊಂಬೆಯಷ್ಟೆ ನಾನು.!

ಕಂಗಳೊಳಗಣ ನೋಡುವ ದೃಷ್ಟಿಯು ನೀನೆ
ಕಂಗಳಾಚೆಯಲಿ ಕಾಣುವ ಸೃಷ್ಟಿಯೂ ನೀನೆ
ನಯನ ನೋಟಗಳ ಸಮೀಕರಣವೇ ನೀನು
ನಿನ್ನ ಕಾರುಣ್ಯ ಚೈತನ್ಯಗಳ ಕಣವಷ್ಟೆ ನಾನು,!

ಸ್ವರ ಸ್ವರಗಳ ನುಡಿಸುವ ಸಂಚಲನ ನೀನು
ನರ ನರಗಳ ಜೋಡಿಸುವ ಸಂವಹನ ನೀನು
ಸ್ವರನರ ಭಾವಭಾಷ್ಯ ಸಂಯೋಜಕನು ನೀನು
ನಿನ್ನ ಸಂಚಯನ ಸೂತ್ರಗಳ ಪಾತ್ರವಷ್ಟೆ ನಾನು.!

ಭಾಸ್ಕರನ ಪ್ರಜ್ವಲನದ ಬೆಳಕು ಬಿಸಿಲೂ ನೀನೆ
ಚಂದಿರನ ಪ್ರತಿಫಲನದ ಬೆಳದಿಂಗಳೂ ನೀನೆ
ಹಗಲು ಇರುಳುಗಳ ನಿತ್ಯ ನಿಯಾಮಕ ನೀನು
ನಿನ್ನಯ ನೆಳಲು ಬೆಳಕಿನಾಟದ ಪ್ರೇಕ್ಷಕ ನಾನು.!

ಪಂಚೇಂದ್ರಿಯಗಳ ಪರಿಧಿಗೆಟುಕದವನು ನೀನು
ಪಂಚಭೂತಗಳಲು ನೆಲೆ ಸೆಲೆಯಾದವ ನೀನು
ಜೀವಭಾವಗಳ ಪೆÇರೆವ ಸತ್ಯ ಶೃಂಖಲೆ ನೀನು
ನಿನ್ನ ಕಾರುಣ್ಯಗಡಲು ಕರುಣಿಸಿದ ಅಲೆ ನಾನು.!

ಇಲ್ಲಿ ಸರ್ವವೂ ನೀನೆ. ಸರ್ವಸ್ವವೂ ನಿನ್ನದೆ
ಇಹ ಪರಗಳ ಬಂಧ, ಬಂಧುತ್ವವೂ ನಿನ್ನದೆ
ನನ್ನೊಳಗಣ ಅಂತರಾತ್ಮ, ಪರಮಾತ್ಮ ನೀನೆ
ನಾನು ನಾನಳಿದ ಮೇಲೂ ಉಳಿವುದು ನೀನೆ.!

ಅರಿವೂ ನೀನೆ.. ಗುರುವೂ ನೀನೆ.. ಅಗೋಚರ
ಬದುಕೂ ನೀನೆ.. ಬೆಳಕೂ ನೀನೆ.. ಅಖಿಲೇಶ್ವರ
ನಿನ್ನಿಂದಲೇ ಜೀವ-ಭಾವಗಳ ನಿತ್ಯ ಝೇಂಕಾರ
ಅರ್ಥ ಸಾರ್ಥ ಪರಮಾರ್ಥಗಳ ಸತ್ಯ ಸಾಕ್ಷಾತ್ಕಾರ.!


About The Author

Leave a Reply

You cannot copy content of this page