ಕಾವ್ಯ ಸಂಗಾತಿ
ಗೀತಾಮಂಜು ಬೆಣ್ಣೆಹಳ್ಳಿ
ಬೇರಿನ ಕಮಟು

ಸೊಕ್ಕಿರುವ ಪವನ ಪಂಕಗಳು
ಕೈಚಾಚಿ ಕರೆಯುವಾಗ
ತೆವಳುವ ಮರ
ಮೊಳಕೆಯ ಅಂಗೈರೇಖೆ
ನೋಡುತ್ತಿತ್ತು.
ಜಿಗಿಯುವ ಕೊಂಬೆ
ಕಡಲ ಗಂಟಲಲ್ಲಿ
ಸಿಕ್ಕಿ ಬಿದ್ದ ಮೂಳೆ
ಮೇಲ್ಪದರ ಹೊದ್ದ
ಮತ್ಸ್ಯಗಳ ಅಸ್ಥಿ
ಇತಿಹಾಸಕ್ಕೆ ಇಂಧನ
ತುಂಬಿಸಬೇಕಿತ್ತು
ಕೊರಳಿಗೆ ಕಟ್ಟಿದ
ಕರಡಿಯ ರೋಮ
ನೇಣಿನ ಕುಣಿಕೆ
ಹೊಸೆಯುತ್ತಿತ್ತು.
ಒಡಲ ಬಗೆದ ಜೆ ಸಿ ಬಿ
ಕರುಳ ಕಥೆ ಬರೆಯಲು
ನೆತ್ತರ ಶಾಹಿಗಾಗಿ
ಹುಡುಕುತ್ತಿತ್ತು
ಹೆಣಗಳ ಓಣಿಯ
ತಳದಲ್ಲಿ ಕುಳಿತು
ಕಡ್ಡಿ ಗೀರುತ್ತಿರುವ
ಬೇರಿನ ಕಮಟು
ಗಾಳಿಗೆ ಬಣ್ಣ ಹಚ್ಚಿ
ತೇಲಿಬಿಟ್ಟಿತ್ತು
ಇಂದೋ…ನಾಳೆಯೋ…
ನಿರ್ಜನ ನೀರ ಹಾಡು
ಎದೆಗೆ ನಾಟಿದ ನಂಜಿನಿ ಬಾಣ
ಹಸಿರ ಕೊಂದು
ನೆತ್ತರ ಓಕುಳಿಯಾಡುತ್ತಿತ್ತು
ಎದೆ ಬರಿದಾಗಿತ್ತು.
ಗೀತಾಮಂಜು ಬೆಣ್ಣೆಹಳ್ಳಿ

ಚೆನ್ನಾಗಿದೆ … ವಾಸ್ತವಕ್ಕೆ ಹಿಡಿದ ಕನ್ನಡಿ
ಚೆನ್ನಾಗಿದೆ, ಬೇರಿನ ಕಮಟು