ಸವಿತಾ ದೇಶಮುಖ ಅವರ ಕವಿತೆ-ಭೂಮಿ ಕಾಯ್ದಿದೆ

ಕಾಯ್ದಿದೆ ನೆಲವು -ಕೆಂಡಾಗುತಿದೆ
ಭೂಮಾತೆಯ ಒಡಿಲು- ಬರಡಾಗುತಿದೆ
ಜಲ-ಗಿಡ-ಮರಗಳು -ಒಣಗುತಿವೆ
ಧರಣಿ ಮಂಡಲ ಮತ್ತೆ ಚಿಗುರುವುದಕ್ಕೆ….

ಕಾಯುತ್ತಿದೆ ಮಳೆಯ ಬಿಂದುವಿಗಾಗಿ
ಹೊರಹೊಮ್ಮಿ ಚಿಮ್ಮುವ ಆಶಯವಾಗಿ;
ನಿಗಿಯ ಸೂರ್ಯನ ಬಿಸಿಲಿನಲ್ಲಿ ನೆಲ
ಮೊಳಕೆ ಒಡೆವ ಜೀವಕ್ಕಾಗಿ ಕಾದು ನಿಂತಿದೆ….

ಕಾಯ್ದಿದೆ ನೆಲ ಭೂಮಿಯ ಸತ್ವವನ್ನೆಲ್ಲ
ಹೀರಿ ಹಿಪ್ಪಿಯಾದರೂ ಸ್ಥಿರವಾಗಿ ನಿಲ್ಲಲು
ಕಲಿತಿದೆ ,ಮನುಜನು ಕಡಿದು ಚೆಲ್ಲುವ ಗಿಡ
ಮರಗಳ ನೋಡುತ್ತಲೇ ನಿಂತಿದೆ- ತಾಳ್ಮೆಯಲಿ….

ಒಣ ಹುಲ್ಲುಗಳ,ವಾಸನೆ ಇಲ್ಲದ ಹೂಗಳಲಿ
ಕಷ್ಟಗಳ ಕಲ್ಲುಬಂಡೆಗಳ ಮಧ್ಯದಲಿ
ತೆಗ್ಗು ದಿಣ್ಣೆಗಳ ದಾರಿ- ಅಡೆತಡೆಯಲಿ
ಮತ್ತೆ ಚಿಗುರೊಡೆಯಲು ಕನಸು ಹೊತ್ತು…..

ಸುಧೆಯು ಕಾದು ಕಾಯ್ದು ನಿಂತರೆ
ಕನಸು-ತಾಳ್ಮೆ- ಶ್ರಮ  ಬೇರುಗಳ
ಹುಡುಕಿ ಹೆಕ್ಕಿ ಹೆಕ್ಕಿ ತೆಗೆದು ಮತ್ತೆ
ಮೌನವಾಗಿ ಬೆಳೆಯುತ್ತಿದೆ ಗರ್ಭದಲ್ಲಿ….

ಕಾಯ್ದ ನೆಲದ – ಜ್ವಾಲೆಯ ಮೇಲಿನ ತೂಗು
ಮೂಕ ಹಾಡಿನಲಿ ಮತ್ತೆ ನಳಿ ನಳಿಸಲು
ಎಲ್ಲವನು ತ್ಯಾಗ ಮಾಡಿ ಕಾಯುತಿದೆ
ಸುರಿಯುವ ಹನಿಗಳು….
ಕರುಣಾಮೃತಕ್ಕಾಗಿ…….

————

One thought on “ಸವಿತಾ ದೇಶಮುಖ ಅವರ ಕವಿತೆ-ಭೂಮಿ ಕಾಯ್ದಿದೆ

Leave a Reply

Back To Top