ಕಾವ್ಯ ಸಂಗಾತಿ
ಅರುಣಾ ನರೇಂದ್ರ
ಅಂಬೇಡ್ಕರ್ ಬಗ್ಗೆಒಂದು
ಗಜಲ್

ಅಡುಗೆ ಮನೆ ಹೆರಿಗೆ ಮನೆಯಲ್ಲಿ ನಾ ಬಂಧಿಯಾದಾಗ ಬಾಬಾ ವಿಮೋಚಕನಾಗಿ ಬಂದ
ಹೊಸಿಲು ದಾಟಿ ಮುಂದೆ ಹೆಜ್ಜೆ ಇಡದಂತೆ ಗೆರೆ ಕೊರೆದಾಗ ಬಾಬಾ ಆಸರೆಯಾಗಿ ಬಂದ
ಶತ ಶತಮಾನದಿಂದ ದರ್ಪ ದೌರ್ಜನ್ಯ ದಬ್ಬಾಳಿಕೆಗೆ ನಲುಗಿ ಹೋಗಿದ್ದೆ
ಕಣ್ಣೀರಿಡುತ್ತಾ ಅಸ್ಮಿತೆಗಾಗಿ ಅಳುತ್ತಿರುವಾಗ ಬಾಬಾ ಬಂಧುವಾಗಿ ಬಂದ
ಹೆಣ್ಣು ಹೆಣ್ಣೆಂದು ಮೂಲೆಗೆ ದಬ್ಬಿದಾಗ ಸುತ್ತಲೂ ಕತ್ತಲೆಯ ಕೂಪ
ಅಕ್ಷರದ ಅರಿವಿರದೆ ತೊಳಲಾಡುತ್ತಿರುವಾಗ ಬಾಬಾ ಬೆಳಕಾಗಿ ಬಂದ
ಜಾತಿ ಮತ ಬೇಧ ಭಾವ ಮೇಲು ಕೀಳು ಸಹಿಸುತ್ತಾ ಸಣ್ಣಾಗಿ ಹೋಗಿದ್ದೆ
ಅಸಮಾನತೆ ಅಂಬು ಎದೆ ಇರಿಯುವಾಗ ಬಾಬಾ ಸಂವಿಧಾನವಾಗಿ ಬಂದ
ಕನಸು ಕಳೆದುಕೊಂಡು ಆಸೆಗಳ ಬಿಟ್ಟುಕೊಟ್ಟು ಬೊಗಸೆಯೊಡ್ಡಿ ಬೇಡುತ್ತಿದ್ದೆ
ಹೇಳಿದಂತೆ ಕೇಳಿಕೊಂಡು ದಾಸಾನುದಾಸಿಯಾದಾಗ ಬಾಬಾ ಧ್ವನಿಯಾಗಿ ಬಂದ
ಅನ್ಯಾಯ ಕಂಡಾಗ ಸಿಡಿಲಾಗಿ ಸಿಡಿದು ಗುಡುಗಾಗಿ ಗರ್ಜಿಸಿದಾತ
ಛಲದ ಜೊತೆಗೆ ಬಲದ ಪಾಠ ಕಲಿಯುವಾಗ ಬಾಬಾ ಆಸ್ತಿ ಹಕ್ಕಾಗಿ ಬಂದ
ತಾನುಂಡ ನೋವು ಪಡೆದ ಅರಿವು ತನಗೆ ಗುರುವಾಯಿತು ಕೇಳು ಅರುಣಾ
ಭಾರತದ ಭಾಗ್ಯವಿಧಾತನೆಂದು ದೇಶ ಕರೆಯುವಾಗ ಬಾಬಾ ದೈವವಾಗಿ ಬಂದ
———————————————————————————————
ಅರುಣಾ ನರೇಂದ್ರ

ಚೆನ್ನಾಗಿ ಇದೆ ಮೇಡಮ್
Nice one mam