ಅಂಬೇಡ್ಕರ್ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
ʼಹೊಂಬೆಳಗಿನ ಭಾಸ್ಕರ
́ಬಾಬಾ ಸಾಹೇಬ ಅಂಬೇಡ್ಕರʼ


ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಸಾಮರಸ್ಯದ ಬೀಜ ಬಿತ್ತಲು, ಸರ್ವರಿಗೂ ಸಮಪಾಲು ಸಮಬಾಳು ನೀಡಲು, ಸಮಾನತೆಯ ಬೆಳಗಲು,ಹುಟ್ಟಿದ ಕೆಳಸ್ತರದ ನೋವನ್ನು ದಿಟ್ಟವಾಗಿ ಎದುರಿಸಿ,
ಕಟ್ಟಕಡೆಯ ಮೆಟ್ಟಿಲಿಂದ ಬೆಟ್ಟದಷ್ಟು ಸಾಧನೆಗಯ್ದ ಭಾರತದ ಸಂವಿಧಾನ ಪಿತಾಮಹ,ಶತಶತಮಾನಗಳ ಶೋಷಣೆಯ ನಿಶೆಯ ತೊಡೆದ ಆಶಾಕಿರಣ ಹೊಂಬೆಳಗಿನ ಭಾಸ್ಕರ ಬಾಬಾ ಸಾಹೇಬ ಅಂಬೇಡ್ಕರ.ಅವಿರತ ಶ್ರಮಿಕ, ಸಾಮಾಜಿಕ ಕಳಕಳಿಯ ಪ್ರತೀಕ, ಮಾನವೀಯತೆಯ ಸಾಕಾರ ಮೂರ್ತಿ, ಅಜರಾಮರ ಇವರ ಕೀರ್ತಿ. ಶ್ರಮಿಸಿದರು ದಲಿತ ಶೋಷಿತರ ಏಳ್ಗೆಗಾಗಿ ಅವರ ಉತ್ತಮ ಬಾಳ್ವೆಗಾಗಿ, ದಮನಿತರ ಬಾಳ ಕತ್ತಲೆಯ ಕಳೆದುಬೆಳಕನೀಯಲೆಂದೆ ಬಂದ ರವಿ ದೂರಾಲೋಚನೆಯ ಅನನ್ಯ ಅನುಭವಿ.
ಗುಡಿ ಕಟ್ಟಿದವನು ಒಳಗಡಿಯಿ
ಡಲಾಗದಂತಹ ಅಸಮಾನತೆ ಶಿಲೆಯಲ್ಲಿ ಕಲೆಯ ಅರಳಿಸಿ ನೆಲೆ ನಿಲ್ಲಿಸಿ ದೇವರ ಮಾಡಿದವನು ಪೂಜಿಸಲಾಗದ ಅನಿವಾರ್ಯತೆ ಇದುವೇ ಜಾತೀಯತೆ,
ಕಾನೂನಿನ ಮೂಲಕ ಇದನು ತೊಳೆಯ ಬಂದ ಅಧಿದೇವತೆ.
ಭರತ ಮಾತೆಯ ಮಡಿಲ ಕುಡಿ ಜಗಕೆ ವರವಾದ ಸಿಡಿಲ ಮರಿ
ತಾಯ್ನಾಡಿನ ಹೆಮ್ಮೆಯ ಗರಿ
ಪರಿಚಯಿಸಿ ಭಾರತದ ಘನ ಸಂವಿಧಾನ ಅರುಹಿದೆಯಾ…. ಮಾನವತೆಯ ವಿಧಾನ.
ಭೀಮರಾವ್ ರಾಮ್ ಜಿ ಅಂಬೇಡ್ಕರ್ರವರು 14/4/1891ರಂದು ಮಧ್ಯಪ್ರದೇಶದ ಮಾವ್ ಸೇನಾ ಕಂಟೋನ್ಮೆ0ಟ್ ನಲ್ಲಿ, ಆಗಿನ ಕಾಲದ ಕೆಳ ಜಾತಿ ಎಂದು ಗುರುತಿಸಲ್ಪಡುತ್ತಿದ್ದ ದಲಿತ ತುಂಬು ಕುಟುಂಬದಲ್ಲಿ ರಾಮ್ ಜಿ ಸಕ್ಪಾಲ್ ಮತ್ತು ಭೀಮಬಾಯಿ ಸಕ್ಪಾಲ್ ದಂಪತಿಗಳಿಗೆ ಜನಿಸಿದರು.ಹುಟ್ಟಿದಂದಿನಿಂದ ತಾರತಮ್ಯ, ಜಾತೀಯತೆ, ಪ್ರತ್ಯೇಕತೆ, ಅಸ್ಪೃಶ್ಯತೆ,ಅವಮಾನಗಳ ಕೂಸಾದರೂ ಇಡೀ ಭರತ ಖಂಡದ ಲೇಸಾದ ಮಗನಾಗಿ ಬೆಳೆದರು. ಅವರಲ್ಲಿದ್ದ ಶಿಕ್ಷಣವೆಂಬ ಏಕೈಕ ಅಸ್ತ್ರ ,ಅವರನ್ನು ಅತ್ಯುನ್ನತ ಸ್ಥಿತಿಗೆ ಕೊಂಡೊಯ್ದಿತು.ಅಗಾಧ ಪಂಡಿತ, ಅಪರಿಮಿತ ಜ್ಞಾನಿ, ಬರೋಡಾದ ಮಹಾರಾಜರ ಕೃಪೆಗೆ ಪಾತ್ರರಾಗಿ, ಅವರ ಪ್ರಾಯೋಜಕತ್ವದಿಂದ ಅಮೆರಿಕದಲ್ಲಿ ಶಿಕ್ಷಣ ಪಡೆದರು.ಲಂಡನ್, ಕೊಲಂಬಿಯಾ ಮುಂತಾದ ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್ ಪದವಿ ಪಡೆದರು.
ಅವರ ಹೆಸರಾಂತ ನುಡಿ ಮುತ್ತೆಂದರೆ, “ಓದು ಓದು ಓದು ಯಾಕೆಂದರೆ ಶತ್ರುಗಳು ನಿನ್ನ ಜ್ಞಾನಕ್ಕೆ ಮಾತ್ರ ಹೆದರುತ್ತಾರೆ”
ಎಂಬುದಾಗಿತ್ತು.ಮಹಿಳಾ ಸಬಲೀಕರಣಕ್ಕಾಗಿ ಅವಿರತ ಶ್ರಮಿಸಿದ ಇವರು ಒಂದು ಸಮಾಜದ ಪ್ರಗತಿ ಆ ದೇಶದ ಮಹಿಳೆಯ ಪ್ರಗತಿಗೆ ಹಿಡಿದ ಕೈಗನ್ನಡಿ, ಮಹಿಳೆಯನ್ನು ದೇವತೆಯನ್ನಾಗಿಸಿ ಗುಡಿಯಲ್ಲಿ ಬಂಧಿಸುವುದಕ್ಕಿಂತ, ಸಮಾನ ಘನತೆ ಗೌರವಗಳನ್ನು ನೀಡಿ ಎಂದು ಪ್ರತಿಪಾದಿಸಿದರು.ಆಗಿನ ಕಾಲದಲ್ಲಿ ಸಾರ್ವಜನಿಕ ನೀರಿನ ಮೂಲಗಳನ್ನು ಕೆಳ ವರ್ಗದವರು ಮುಟ್ಟಲಾರದಂತಹ ಹೀನಾಯ ಪರಿಸ್ಥಿತಿಯಿಂದ ಅವರನ್ನು ಹೊರ ತಂದರು.ದೇವಾಲಯದ ಗಂಟೆಗಿಂತ ಶಾಲೆಯ ಗಂಟೆ ಕಿವಿಯ ಮೇಲೆ ಬೀಳಬೇಕು, ಶಾಲೆಗೆ ತೆರಳಿ ವಿದ್ಯಾವಂತರಾಗಿ ದೊಡ್ಡ ಅಧಿಕಾರಿಗಳಾಗಬೇಕು. ದೇವಾಲಯಗಳಿಗಿಂತ ಗ್ರಂಥಾಲಯಗಳು ಮಹತ್ವದ್ದು ಎಂಬ ಅರಿವನ್ನು ಮೂಡಿಸಿದವರು. ನಾವೆಷ್ಟು ಸುಖ ಸಂತೋಷದಿಂದ ಇದ್ದೇವೆ ಎನ್ನುವುದಕ್ಕಿಂತ ನಮ್ಮಿಂದ ಎಷ್ಟು ಜನರು ಸುಖ ಸಂತೋಷವಾಗಿ ಇದ್ದಾರೆ ಎಂಬುದೇ ಬದುಕಿನ ಸಾರ್ಥಕತೆ ಎಂದರುಹಿದರು.
ಅಖಿಲ ಭಾರತ ಪರಿಶಿಷ್ಟ ಜಾತಿಯ ಒಕ್ಕೂಟ ಸ್ಥಾಪಿಸಿ, ಹಗಲಿರುಳೂ ದುಡಿದರು.ಸ್ವತಂತ್ರ ಭಾರತದ ಕಾನೂನು ಸಚಿವರಾಗಿ ಮಾನವತೆಯ ಕಾನೂನುಗಳ ಪ್ರತಿಪಾದಕರಾದ ಶ್ರೇಷ್ಠ ಕಾನೂನು ತಜ್ಞ, ಸಮಾಜ ಸುಧಾರಕ, ಶ್ರೇಷ್ಠ ಚಿಂತಕ.
ಭಾರತ ಕೇವಲ ರಾಜಕೀಯ ಪ್ರಜಾಸತ್ತಾತ್ಮಕವಾಗದೆ, ಸಾಮಾಜಿಕ ಪ್ರಜಾಸತ್ತಾತ್ಮಕ ವಾಗಬೇಕೆಂದು ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವ, ಜೀವನದ ತತ್ವ ಗಳಾಗಬೇಕೆಂದು, ಅವುಗಳೇ ಜೀವನದ ವಿಧಾನಗಳಾಗ ಬೇಕೆಂದು ಸಾರಿದ ಧೀಮಂತ ನಾಯಕ,
ಅನೇಕ ಕೃತಿಗಳನ್ನು ರಚಿಸಿದ ಮಹಾನ್ ಲೇಖಕ.ಅವರ ಸಂಪೂರ್ಣ ಲಿಖಿತ ಕೃತಿಗಳು ಮತ್ತು ಭಾಷಣಗಳ ಸಂಗ್ರಹವನ್ನು 17 ಸಂಪುಟದಲ್ಲಿ ಭಾರತೀಯ ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ.ಕಟ್ಟಕಡೆಯ ವ್ಯಕ್ತಿಗಳಿಗಾಗಿ ಕಡೆಯವರೆಗೂ ಶ್ರಮಿಸಿದ, ಇಂತಹ ಮಹಾನ್ ಚೇತನ ಬೌದ್ಧ ಧರ್ಮವನ್ನು ಅನುಸರಿಸಿ ಡಿಸೆಂಬರ್ 6,1956 ರಂದು ದೆಹಲಿಯಲ್ಲಿ ತಮ್ಮ ಕೊನೆಯುಸಿರೆಳೆದರು.
ಭಾರತದ ಘನ ಸರ್ಕಾರವು 1991 ರಂದು ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಸಂವಿಧಾನ ಜಾರಿಯಾದ ದಿನದಿಂದ ಇಂದಿನವರೆಗೂ, ಮೀಸಲಾತಿ ಮುಂದುವರಿದಿದೆ ಎಂದರೆ, ನಿರೀಕ್ಷಿತ ಮಟ್ಟದಲ್ಲಿ ಶೋಶಿತರ ಉದ್ಧಾರವಾಗದೇ ಇರುವುದು, ಈ ನಿಟ್ಟಿನಲ್ಲಿ ಅಂಬೇಡ್ಕರ್ ಎಂಬ ದಾರಿ ದೀಪವನ್ನು ಅನುಸರಿಸಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಶಿಕ್ಷಣದ ಔನತ್ಯವನ್ನು ಸಾಧಿಸಿದ್ದೆ ಆದರೆ…ಸರ್ವರಿಗೂ ಸಮಪಾಲು- ಸಮ ಬಾಳು ಉಂಟಾಗಿ, ಸಮಾನತೆ ಬೆಳಗಿ, ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಸಾಮರಸ್ಯದ ಹೂಗಳರಳಲು ಸಾಧ್ಯ.
ಇದಕ್ಕೆಲ್ಲ ಏಕೈಕ ಮಾರ್ಗವೆಂದರೆ ಶಿಕ್ಷಣ. ವರ್ಗರಹಿತ, ವರ್ಣರಹಿತ, ಜಾತ್ಯತೀತ
ಸಮಾಜದ ನಿರ್ಮಾಣ ಪುಸ್ತಕದ ಬದನೆಕಾಯಿಯಾಗದೆ, ನೈಜವಾದರೆ, ಅದೇ ನಿಜವಾದ ಅಂಬೇಡ್ಕರ್ ಜಯಂತಿ.
̲———————————-
ಶೋಭಾ ಮಲ್ಲಿಕಾರ್ಜುನ್

ಸಕಾಲಿಕ ಬರಹ ಸಂಕ್ಷಿಪ್ತ ಮಾಹಿತಿ