ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-ರಸಭರಿತ ಕವಿತೆ

ಮೂಡಿ ಬಿದ್ದಂತಲ್ಲ ಚಿಗುರು
ಎಲೆಯಾಗಬೇಕು
ಹೂವ ಒಡಮೂಡಿಸಬೇಕು
ಈಚು ಕಾಯಿ ದೋರೆ ಹಣ್ಣು
ಮಾಗಿ ಮಾಗಿ ಉದುರಬೇಕು
ಅದಾಗಲೇಬೇಕು ಅದು ಗುರುತ್ವಾಕರ್ಷಣೆ!
ವಾತಾನುಕೂಲಿ ವಿಜ್ಞಾನಿಯ ತರ್ಕ ಮಂಡನೆ!

ಉದುರಿದ ಹಣ್ಣು ನನ್ನ ಕೋಮಲೆಯ ಕಣ್ಣು;
ಹಣ್ಣ ಘಮವನ್ನೇ ಆಘ್ರಾಣಿಸದ
ಫಲಕದಾಸೆಯ ಪಲುಕು ಕವಿಯ ಬಣ್ಣನೆ!

ಅಲ್ಲೇ ಬುಡದಲ್ಲಿ ಕೂತ ದಣಿದ ಗೊಲ್ಲ;
ಬಿಸಿಲು ತಣಿಲು ಹಸಿವು ಕಸುವು ಬಲ್ಲ!

ಚಿಗುರ ಬುಡದಲಿ ಹೂವು!
ಮಾಗಿ ಉದುರಿದೆ ಮಾವು!
ಬರೆಯದ ಹಾಡು ಕಟ್ಟುತ್ತಾನೆ
ನಲ್ಲೆಗೊಂಚೂರು ಎಂಜಲಾಗದ ಮರದ
ರಸಭರಿತ ಕವಿತೆ ಒಯ್ಯೊತ್ತಾನೆ!

ಚಿಗುರು ಮತ್ತೆ ಚಿಗುರುವುದು
ಹಗಲ ಗೊಲ್ಲನಿಗಾಗಿ!
ಅವನ ನಲ್ಲೆಯ ಒಲುಮೆಗಾಗಿ!
ಇರುಳ ವಿಜ್ಞಾನಿಗಾಗಿಯಲ್ಲ
ನಿಜಕ್ಕು
ಈ ಮರುಳ ಕವಿಗಾಗಿಯಲ್ಲ!

*****

One thought on “ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-ರಸಭರಿತ ಕವಿತೆ

Leave a Reply

Back To Top