ಶರಣ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ್
ʼಅಕ್ಕರೆಯ ಅಕ್ಕ ಅಕ್ಕಮಹಾದೇವಿʼ

ಅಕ್ಕರೆಯಿಂದ “ ಅಕ್ಕ” ಎಂಬ ಅಭಿಧಾನದಿಂದ ಕರೆಯಲ್ಪಡುವ ಅಕ್ಕಮಹಾದೇವಿಯ ಲೌಕಿಕ ಜೀವನ ಒಂದು ಹೋರಾಟ ಎನ್ನಬಹುದು. ಕನ್ನಡ ಸಾಹಿತ್ಯದಲ್ಲಿ ಪ್ರಥಮ ಕವಿಯತ್ರಿ ಎಂಬ ಹೆಗ್ಗಳಿಕೆಗೆ ಪಾತ್ರಳದವಳು.. ಅವಳು ಬರೆದ ಆತ್ಮನಿವೇದನೆಯ ವಚನಗಳಲ್ಲಿ ಚೆನ್ನಮಲ್ಲಿಕಾರ್ಜುನನನ್ನು ತನ್ನ ಪತಿ ಎಂದು ಹೇಳುವ ಮೂಲಕ ಸತಿ-ಪತಿ ಭಾವವನ್ನು ಸಾಹಿತ್ಯದಲ್ಲಿ ಪ್ರಚುರ ಪಡಿಸಿದ ಮೊದಲ ಕವಿಯಿತ್ರಿ ಅಕ್ಕ….,
ಪ್ರಕೃತಿಯ ಸಂಗತಿಗಳನ್ನು ಹೆಚ್ಚಾಗಿ ತನ್ನ ವಚನಗಳಲ್ಲಿ ಬಳಸಿರುವ ಅಕ್ಕನ ವಚನಗಳನ್ನು ಪ್ರಕೃತಿಯ ವಚನಗಳೆಂದು ಕರೆಯಬಹುದು.
ಇದಕ್ಕೆ ಉದಾಹರಣೆಯಾಗಿ ಒಂದು ವಚನವನ್ನು ನೋಡುವುದಾದರೆ……….
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ,
ಕರಣಂಗಳ ಜೇಷ್ಠೆಗೆ ಮನವೇ ಬೀಜ,
ಎನಗೆ ಉಳ್ಳುದೊಂದು ಮನ,
ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ
ಎನಗೆ ಭವವುಂಟೆ
ಚೆನ್ನಮಲ್ಲಿಕಾರ್ಜುನ.
ಸೂರ್ಯ ಇಲ್ಲದೆ ಈ ಜಗತ್ತನ್ನು ಕಲ್ಪಿಸಿಕೊಳ್ಳಲಿಕ್ಕಾಗದು. ಸೂರ್ಯ ಇರುವುದರಿಂದಲೇ ಸಸ್ಯಲೋಕ, ಪ್ರಾಣಿ ಲೋಕ ಮತ್ತು ಮಾನವ ಲೋಕಗಳು ಜೀವಂತವಾಗಿವೆ . ಜಗತ್ತಿನ ಎಲ್ಲ ಪ್ರಕ್ರಿಯೆಗಳಿಗೆ ಸೂರ್ಯನೇ ಮೂಲ ಕಾರಣವಾಗಿದ್ದಾನೆ ಎಂಬುದು ವೈಜ್ಞಾನಿಕ ಸತ್ಯ.ಪ್ರತಿಯೊಂದು ಜೀವಿಯ ಬದುಕಿಗೂ ಸೂರ್ಯ ಬೇಕೇ ಬೇಕು. ಅಂತೆಯೇ ಜಗತ್ತಿನ ಎಲ್ಲ ಚಟುವಟಿಕೆಗಳಿಗೆ ಸೂರ್ಯನೇ ಮೂಲವಾಗುತ್ತಾನೆ. ಅದೇ ರೀತಿ ಕರಣಗಳ ವರ್ತನೆಗೆ ಮನವೇ ಮೂಲ ಕಾರಣವಾಗುತ್ತದೆ.
ಶಬ್ದ , ಸ್ಪರ್ಶ, ರೂಪ, ರಸ ಮತ್ತು ಗಂಧಗಳ ಜ್ಞಾನ ಕೊಡುವ ಕಿವಿ, ಚರ್ಮ, ಕಣ್ಣು , ನಾಲಿಗೆ ಮತ್ತು ಮೂಗು ಎಂಬ ಪಂಚ ಜ್ಞಾನೇಂದ್ರಿಯಗಳೇ ಪಂಚಕರಣೇಂದ್ರಿಯಗಳು. ಮನಸ್ಸು ಬುದ್ಧಿ ಚಿತ್ತ ಮತ್ತು ಅಹಂಕಾರ ಎಂಬ ಈ ನಾಲ್ಕು ಅಂತರ್ ಇಂದ್ರಿಯಗಳಿಗೆ ಅಂತಃಕರಣ ಚತುಷ್ಟಯ ಎನ್ನುತ್ತಾರೆ .. ಕಾಯ ನುಡಿ ಮತ್ತು ಮನಸ್ಸಿಗೆ ತ್ರಿಕರಣಗಳೆನ್ನುತ್ತಾರೆ. ಕಾಯ ವಿಕಾರ ಮತ್ತು ಮನೋವಿಕಾರಗಳಿಗೆ ಕರಣೇಂದ್ರಿಯಗಳೇ ಕಾರಣವಾಗಿವೆ. ಇದು ಮನೋವೈಜ್ಞಾನಿಕ ಸತ್ಯ. ಕರಣೆಂದ್ರಿಯಗಳನ್ನೆಲ್ಲ ಹತೋಟಿಯಲ್ಲಿಡದೆ ಮನಸ್ಸು ಪರಿಶುದ್ಧವಾಗದು. ಕರಣಿಂದ್ರಿಯಗಳನ್ನು ಜಾಗೃತಗೊಳಿಸಿದಂತೆ, ಮನಸ್ಸನ್ನು ನಿಯಂತ್ರಿಸಬೇಕು. ಮನಸ್ಸನ್ನು ದೇವರಲ್ಲಿ ಸಿಲುಕಿಸಿದಾಗ ಕರಣವೃತ್ತಿಗಳು ಅಡಗುವವು. ಹಾಗೆ ಮನಸ್ಸನ್ನು ದೇವನಲ್ಲಿ ಸಿಲುಕಿಸುವುದರ ಮೂಲಕ ಕರಣಗಳನ್ನೆಲ್ಲ ಲಿಂಗಾರ್ಪಿತ ಮಾಡಿದಾಗ ಮನಸ್ಸು ನಿರಾಳವಾಗುವುದು. ಹೀಗೆ ದೇವರಿಗೆ ಮನವನ್ನು ಅರ್ಪಿಸುವದಕ್ಕೆ ಕರಣಾರ್ಪಣ ಎನ್ನುತ್ತಾರೆ.
ಮನಸ್ಸನ್ನು ದೇವರಲ್ಲಿ ಸಿಲುಕಿಸಿದ ಬಳಿಕ ಭವವಿಲ್ಲ ಎಂದು ಅಕ್ಕ ಹೇಳುತ್ತಾಳೆ. ಭವವೆಂದರೆ ಪ್ರಾಪಂಚಿಕ ವ್ಯವಹಾರ. ಭವಪಾಶವೆಂದರೆ ಸಂಸಾರ ಬಂಧನ. ಸಂಸಾರ ಬಂಧನಕ್ಕಳಗಾದವನೇ ಭವಿ. ಲೌಕಿಕದಲ್ಲಿ ತೊಳಲಾಡುವವನು. ಇಷ್ಟಲಿಂಗ ದೀಕ್ಷ ಪಡೆಯದೆ ಇರುವವನಿಗೆ ಭವಿ ಅನ್ನುತ್ತಾರೆ. ಅಂದರೆ ಇಷ್ಟಲಿಂಗ ದೀಕ್ಷೆ ಪಡೆದ ಭಕ್ತನು ಲೌಕಿಕ ವಸ್ತುಗಳಿಗೆ ಆಸೆ ಪಡದೆ ಮತ್ತು ಪರಾವಲಂಬಿಯಾಗದೆ ಬದುಕುವವನು . ಇಹಲೋಕ ಯಾತ್ರೆ ಮುಗಿಯುವವರೆಗೂ ದಾಸೋಹಂ ಭಾವದಿಂದ ಪರೋಪಕಾರಿಯಾಗಿಯೇ ಇರುವನು. ಇಷ್ಟಲಿಂಗ ಧಾರಣೆ ಮಾಡಿಯೂ ಬದಲಾಗದವರ ತನು ಮಾತ್ರ ಭಕ್ತನದಾಗಿದ್ದು, ಮನ ಭವಿ ಆಗಿರುತ್ತದೆ. ಎಂದು ಬಸವಣ್ಣನವರು ಹೇಳಿದ್ದಾರೆ. ಹೀಗೆ ಇಷ್ಟಲಿಂಗ ಧರಿಸಿಯೂ ಸಂಸಾರದ ಜಂಜಾಟದಲ್ಲಿ ಸಿಲುಕಿಕೊಂಡವರು ಭವಭಾರಿಗಳು. ಭವಗೆಡುವುದೆಂದರೆ ಸಂಸಾರ ಬಂಧನದಿಂದ ಮುಕ್ತ ವಾಗುವುದು. ಸಂಸಾರದ ಜಂಜಾಟದಿಂದ ದೂರವಾಗುವುದೆಂದರೆ ಸಂಸಾರ ತ್ಯಾಗ ಮಾಡುವುದು ಎಂದಲ್ಲ. ಕಾಯಕ ನಿಷ್ಠೆ ,ದೇವಪ್ರೇಮ ಮತ್ತು ನಿಸ್ವಾರ್ಥದಿಂದ ಸರ್ವರಿಗೂ ಒಳ್ಳೆಯದನ್ನೇ ಬಯಸುತ್ತಾ ಸಂಸಾರವನ್ನು ಅರ್ಥಪೂರ್ಣವಾಗಿಸಿ ಬದುಕುವುದು. ಸಂಸಾರದಲ್ಲಿ ಇದ್ದೂ ದೇವಸನ್ನಿಧಿಯಲ್ಲಿಯೇ ಇದ್ದಂತೆ ಬದುಕುವುದು.
.
ಎಲ್ಲರಿಗೂ ಅಕ್ಕಮಹಾದೇವಿ ಜಯಂತಿಯ ಶುಭಾಶಯಗಳು
ಅಕ್ಕಳಿಗೆ ಹೊಸ ಬಟ್ಟೆಯನ್ನ ತೊಡಿಸಿ ಅವಳ ಜನ್ಮದಿನವನ್ನು ಸಂಭ್ರಮದಿಂದ ಆಚರಿಸೋಣ
ಬೆತ್ತಲೆ ಚಿತ್ರದ ಮೌಢ್ಯವನ್ನು ತೊಡೆದು ಹಾಕೋಣ ಇನ್ನು ಮುಂದಾದರೂ ಅಕ್ಕಮಹಾದೇವಿಯ ಬೆತ್ತಲೆ ಚಿತ್ರವನ್ನು ವಿರೋಧಿಸೋಣ ಎಂದು ಪ್ರಮಾಣ ಮಾಡೋಣ.
ಡಾ. ಮೀನಾಕ್ಷಿ ಪಾಟೀಲ್
