ಸ್ಮರಣೆ ಸಂಗಾತಿ
ಡಾ. ರಾಜ್ ಕುಮಾರ್ ಸ್ಮರಣೆ ದಿನದ ಅಂಗವಾಗಿ-
ʼಲಂಕೇಶರಿಂದ
ರಾಜ್ ಸಂದರ್ಶನ’
(ಜುಲೈ 04, 1982)


ಲಂಕೇಶ್: ತಾಂತ್ರಿಕವಾಗಿ ನಾನು ನಿಮ್ಮ ಹಾಡುಗಳನ್ನು ಇಷ್ಟಪಡ್ತೇನೆ. ಆದರೆ ರಾಘವೇಂದ್ರ ಜನರಲ್ಲಿ ಅಗತ್ಯವಲ್ಲದಷ್ಟು ಭಕ್ತಿ ಉಕ್ಕಿಸಿದರೆ ಕೆಟ್ಟದಲ್ಲವೇ?
ರಾಜ್ ಕುಮಾರ್: ಹಾಗಲ್ಲ, ಭಕ್ತಿಯ ಹಾಡನ್ನು ಭಕ್ತಿಯಿಂದ ಹಾಡ್ತೇನೆ ಎಂದರು.
ಲಂಕೇಶ್: ಸರಿ, ಒಂದು ಪ್ರಶ್ನೆ ಕೇಳ್ತೇನೆ, ನಿಮ್ಮನ್ನು ಹೀಯಾಳಿಸುವುದು ನನ್ನ ಉದ್ದೇಶವಲ್ಲ. ನಿಮ್ಮ ಉತ್ತರ ಜನಕ್ಕೆ ಉಪಯುಕ್ತವಾಗುತ್ತೆ. ನಾನು ಮಂತ್ರಾಲಯಕ್ಕೆ ಹೋಗಿಲ್ಲ, ಕೇಳಿದ್ದೇನೆ ಅಲ್ಲಿ ಬ್ರಾಹ್ಮಣರಿಗೆ ಬೇರೆ ಜಾಗದಲ್ಲಿ ಶೂದ್ರರಿಗೆ ಬೇರೆ ಜಾಗದಲ್ಲಿ ಊಟ ಹಾಕುವುದು ನಿಜವೇ? ನಿಮಗೆಲ್ಲಿ ಊಟ ಹಾಕ್ತಾರೆ?

ರಾಜ್ ಕುಮಾರ್: ನಾನು ಅದನ್ನು ಗಮನಿಸಿಲ್ಲ. ಒಂದು ದೊಡ್ಡ ಹಾಲ್‌ನಲ್ಲಿ ಊಟ ಹಾಕ್ತಾರೆ, ಅವರು ಹಾಗೆ ಮಾಡಿದರೆ ಅದು ಅವರ ಕರ್ಮ. “ನೋಡಿ, ಈಡಿಗ ಜಾತಿಯ ನಾನು ರಾಘವೇಂದ್ರ ಸ್ವಾಮಿಯ ಪಾತ್ರ ಮಾಡಬೇಕಾಗಿ ಬಂದದ್ದು ಏನನ್ನು ತೋರಿಸುತ್ತದೆ? ಕಲೆ ಅಹಂಕಾರಗಳನ್ನೆಲ್ಲಾ ಮೀರಿದ್ದು ಅನ್ನೋದಲ್ಲವೇ?” ನಿಮಗೊಂದು ವಿಷಯ ಹೇಳ್ತೇನೆ. ರಾಘವೇಂದ್ರರ ಪಾತ್ರಮಾಡಲು ನನಗೆ ಕೇಳಿದಾಗ ನಾನು ವಿನಯದಿಂದ ಹಿಂಜರಿದೆ. ಆದರೆ ನಾಲ್ಕು ಜನ ನಟರ ಹೆಸರಿನ ಚೀಟಿ ಬರೆದು ಎತ್ತಿದಾಗ ನನ್ನ ಹೆಸರು ಬಂತು. ಆಗ ನಾನು ‘ನಾನೇ ಮಾಡ್ತೇನೆ’ ಎಂದು ದೃಢವಾಗಿ ಹೇಳಿದೆ.
ಜಾತಿಯ ಪ್ರಶ್ನೆಯನ್ನು ನೆನೆಯುತ್ತಾ ಡಾ. ರಾಜ್ “ಕೆದಕುತ್ತಾ ಹೋದರೆ ಅದು ತಿಪ್ಪೆಗುಂಡಿಯಂತೆ ಆಳ” ಎಂದರು.
“ಸಿನಿಮಾ ಬಗ್ಗೆಯೇ ಮಾತಾಡೋಣ. 1960ರಲ್ಲೆಂದು ಕಾಣುತ್ತೆ, ನಾನು ಮತ್ತು ತೇಜಸ್ವಿ ನೀವು ನಟಿಸಿದ್ದ ‘ಭೂದಾನ’ ಚಿತ್ರವನ್ನು ಶಿವಮೊಗ್ಗದಲ್ಲಿ ನೋಡುತ್ತಿದ್ದಾಗ, ನೀವು ಆ ಚಿತ್ರದಲ್ಲಿ ಹೆಚ್ಚು ಮಾತಾಡದಿದ್ದರೂ, ‘ನೋಡಿ, ಈ ಚಿತ್ರದಲ್ಲಿ ಇವನೇ ನಟ’ ಎಂದರು, ತೇಜಸ್ವಿ” ಎಂದೆ.
ರಾಜ್ ಉಲ್ಲಾಸಗೊಂಡು ನಕ್ಕರು.
ಉಲ್ಲೇಖ: -‘ಲಂಕೇಶರಿಂದ ರಾಜ್ ಸಂದರ್ಶನ’ (ಜುಲೈ 04, 1982)
ಕೃಪೆ: -‘ಈ ನರಕ, ಈ ಪುಲಕ’ (ಸಿನಿಮಾ ಬರಹಗಳು, ಪುಟ:07, 2011)

ನಾಗರಾಜ್ ಹರಪನಹಳ್ಳಿ
