ಕಥಾ ಸಂಗಾತಿ
ಎಸ್ ವಿ ಹೆಗಡೆ ಅವರಿಂದ
ವಿಪರ್ಯಾಸ ( ಸಣ್ಣ ಕಥೆ)

ನಿನ್ನೆ ಮೊನ್ನೆಯವರೆಗೂ ಯಾರನ್ನೂ ಅವಲಂಬಿಸಿದವಳಲ್ಲ ನನ್ನಮ್ಮ. ಒಂಬತ್ತರ ದಶಕದಲ್ಲಿ ಕಾಲಿಡಲು ಹೊರಟವಳು ಸಮತೋಲನ ಕಳೆದು ಕಾಲುಜಾರಿ ಬಿದ್ದಳು ಒಂದೆರಡು ಬಾರಿ ಅಷ್ಟೇ. ಜೀವನದುದ್ದಕ್ಕೂ ಮೊದಲು ಹಳ್ಳಿಯಲ್ಲಿ ನಂತರ ನಗರದಲ್ಲೂ ಅತಿಯಾದ ಮನೆ ಕೆಲಸ ಮಾಡುತ್ತಾ ತಾನೇ ತಂದುಕೊಂಡ ಸೊಂಟದ ನೋವು ಬೇರೆ. ಹಾಸಿಗೆ ಹಿಡಿದು ಮಲಗಿ ತಿಂಗಳೇ ಕಳೆಯುತ್ತಿದೆ.
ಹೆತ್ತವರನ್ನು ಯಾವುದೋ ವೃದ್ಧಾಶ್ರಮದಲ್ಲಿ ಇಟ್ಟು ಬಿಡುವ ಕಟುಕನಾಗುವ ಮನಸ್ಸು ಬಾರದೆ
ನಾನೇ ಅವಳ ಸೇವೆ ಮಾಡಲು ಕಟ್ಟಿಬದ್ಧನಾಗಿದ್ದೆ.
ಜೊತೆಗೆ ಜೀವನದಲ್ಲಿ ಸದಾ ಬೆಂಬಲಿಸಿ ನಿಂತ ಧರ್ಮ ಪತ್ನಿ. ಉಟ್ಟ ಬಟ್ಟೆಯ ಬಿಚ್ಚಿ ಬಿಸಿನೀರ ಜಳಕ ಮಾಡಿಸಿ, ತೊಳೆದಿಟ್ಟ ವಸ್ತ್ರವನ್ನು ಧರಿಸಿ ಹಸೆಯಲ್ಲಿ ಮಲಗಿಸಿ, ಹೊತ್ತಿಂದ ಹೊತ್ತಿಗೆ ವೈದ್ಯರು ಕೊಟ್ಟ ಔಷದವನ್ನು ನೀಡುತ್ತ ದಿನಚರಿ ಸಾಗಿದೆ. ಸರಿಯಾದ ತರಕಾರಿ ಹಿತವಾದ ಆಹಾರ ಬೇಯಿಸಿ ತುತ್ತು ನೀಡುವಲ್ಲಿ ಆಯುರ್ವೇದ ಪರಿಣಿತೆ ಪತ್ನಿಯದೇ ಪಾಲು. ಅಮ್ಮನ ಶುಶ್ರೂಷೆ ಮಾಡುತ್ತಲೇ ಅರಿವು ಬಂದಿದೆ ನೋಡಿ… ಬಾಲ್ಯದಲ್ಲಿ ನಮಗೆಲ್ಲ ಅದನ್ನೇ ಅಮ್ಮ ಮಾಡಿಲ್ಲವೇ ನೋಡಿ.
“ಓ ಮಾಣಿ ಬಾ ಇಲ್ಲಿ ನೋವ ತಾಳಲಾರೆ ಏನ ಮಾಡಲಿ” ಎಂದು ಗೋಗರೆದಾಗಲೆಲ್ಲ, ಬೀದಿಯಲ್ಲಿ ಆಟವಾಡುತ್ತಾ ಬಿದ್ದು ಪೆಟ್ಟಾದಾಗ ಅಮ್ಮನ ಮುಂದೆ ಬಂದು ರಂಪ ಮಾಡಿದ್ದು ನೆನಪಾಗುತ್ತದೆ. ವಯಸ್ಸಿಗನುಗುಣವಾಗಿ ಇತ್ತೀಚೆಗೆ ಅವಳ ನೆನಪು ಮಾಸುತಿದೆ. ಹೊಸ ಹೆಸರು ವಾರಮಾಸಗಳೆಲ್ಲ ಮಾಯವಾಗಿದೆ. ಕೆಲವೊಮ್ಮೆ ಮೊಮ್ಮಕ್ಕಳ ಹೆಸರೂ ಮರೆತು ಹೋಗುತ್ತದೆ. ಈಗ ಯಾವ ಊರಿನಲ್ಲಿ ಇದ್ದೇವೆ ಎಂಬುದು ನೆನಪಾಗದಿದ್ದರೂ ಆಶ್ಚರ್ಯವೆಂದರೆ ಐವತ್ತು ಅರವತ್ತು ವರ್ಷಗಳ ಹಿಂದಿನ ಘಟನೆಗಳನ್ನು ಸಹ ಕರಾರುವಾಕ್ಕಾಗಿ ಪದೇಪದೇ ನಮಗೆ ಹೇಳುತ್ತಾಳೆ.
ಮಾತು ಕೇಳಿ ಕೇಳಿ ಉತ್ತರ ಹೇಳಿ ಹೇಳಿ ನನ್ನ ತಾಳ್ಮೆಯ ಮಿತಿ ಮೀರಿ ಸಿಡುಕು ಮಾಡುತ್ತೇನೆ.
ನಾನೂ ಸಣ್ಣವನಿದ್ದಾಗ ಕೇಳಿಲ್ಲವೇ ಎಷ್ಟೊಂದು ಸಲ ನೂರು ಪ್ರಶ್ನೆ ಅಮ್ಮನ ಹತ್ತಿರ. ನಗುನಗುತ್ತ ಉತ್ತರಿಸುತ್ತಿದ್ದೂ ಹಂಬಲಾಗುತ್ತಿದೆ.
ಅದು ಬೇಡ ಇದು ಬೇಡ ಎಂಬ ಹಠ ಹೆಚ್ಚಾಗಿದೆ. ನಾನು ಈಗಿನ ಕಾಲಕ್ಕೆ ತಕ್ಕಂತೆ ಸರಿಯಾಗಿ ತಿಳಿಸಲು ಹೊರಟರೆ ಬರುವುದು ಆಳುವು. ಕಣ್ಣಲ್ಲಿ ನೀರು. ನಾನು ಬೇಜಾರು ಮಾಡಿಕೊಂಡರೆ ಮುಂದಿನ ಕ್ಷಣದಲ್ಲಿ ಏನು ಆಗಲೇ ಇಲ್ಲವೆಂಬಂತೆ ಮುಖದಲ್ಲಿ ನಗು. ಯಾವಾಗಲೂ ಯಾರಿದಾದರೂ ಜೊತೆ ಇರ ಇರಬೇಕೆಂಬ ಅಸೆ. ತೆರೆದ ಬಾಗಿಲನ್ನು ಮುಚ್ಚಿದರೂ ಹೆದರಿಕೆ. ಬಾಲ್ಯದಲ್ಲಿ ನಾನು ಮಾಡಿರಬಹುದಾದ ಪುನರಾವರ್ತನೆ ಅನಿಸುತ್ತದೆ. ಏನಿದು ವಿಧಿಯ ವಿಪರ್ಯಾಸ. ವಯಸ್ಸು ಹೆಚ್ಚಾದಂತೆ ಅಮ್ಮ ಆಗುತ್ತಿದ್ದಾಳೆ ಚಿಕ್ಕ ಮಗು.
ಸುಖವಾಗಿ ಮಲಗಿ ನಿದ್ರಿಸುವ ಅಮ್ಮನ ಮುಖವನ್ನು ದೃಷ್ಟಿಸಿದಾಗಲೆಲ್ಲ ನನ್ನ ದೇಹದ ಆಳದಲ್ಲೆಲ್ಲೋ ಕಾಣಿಸುತ್ತಿದೆ ನೋವು. ನಾನು ಮುದುಕನಾಗುತ್ತಿದ್ದೇನೆಯೇ ಎಂಬ ಅಳುಕು.
ದೂರದಲ್ಲಿ ವಾಸವಾಗಿರುವ ಮಕ್ಕಳ ನೆನಪು.
ಏಕೋ ಅವರು ಹತ್ತಿರ ಬರಬಾರದೇ ಎಂಬ ಭಾವನೆ ಮರುಕಳಿಸುತ್ತಿದೆ.
ಎಸ್ ವಿ ಹೆಗಡೆ

ಚೆನ್ನಾಗಿದೆ.
ಖಂಡಿತ ವಯಸ್ಸು ಆಗ್ತಾ ಹೋದಂತೆ ಹಿರಿಯರು ಮಕ್ಕಳಾಗುತ್ತಾರೆ ನಾವು ಹಿರಿಯರಾಗಿರುತ್ತೇವೆ ನಾವು ಮಕ್ಕಳಿದ್ದಾಗ ಹಿರಿಯರು ಹೇಗೆ ನಮ್ಮನ್ನು ಪ್ರೀತಿಯಿಂದ ಜವಾಬ್ದಾರಿಯಿಂದ ನೋಡಿಕೊಂರೋ ಅದೇ ರೀತಿ ಪ್ರೀತಿ ಸಹನೆ ಆರೈಕೆ ಜವಾಬ್ದಾರಿ ಯೊಂದಿಗೆ ಗೌರವದಿಂದ ನೋಡಿಕೊಳ್ಳಬೇಕು ಇದು ನಮ್ಮ ಕರ್ತವ್ಯ ಮಾನವೀಯತೆ ಕೂಡ ಪೃಕೃತಿ ನಿಯಮ ಜೀವನದ ಮಾದರಿ ದೇವರ ಇಚ್ಛೆ ಮಾತೃ ದೇವೋ ಭವ
ಸಹ ಅನಿಸಿಕೆಗೆ ಧನ್ಯವಾದೆ.