ರಾಜು ನಾಯ್ಕ ಅವರ ಭೋಗ ಷಟ್ಪದಿ -ತಂದೆ

ಅರಿವ ನೀಡಿ  ದಾರಿ ತೋರೊ
ಗುರುವು ನೀನೆ ಗುರಿಯು ನೀನೆ
ವರವು ನಮ್ಮ ಜೀವ ಪಥದಿ
ನೆನೆವೆ  ಸುಮ್ಮನೆ
ಹರಣ ಬೇಡಿ ಬಂದ ಹಾಗೆ
ಚರಣದಾಣೆ ಪೂಜೆ ಮಾಡಿ
ಬರುವ ದಿನದಿ  ಮಗುವಿನಂತೆ
ಪೊರೆವೆ ನಿಮ್ಮನು

ಮಂದಹಾಸ ವದನದೊಳಗೆ
ಬಂಧ ಬೆಸೆದ ತಂದೆ ನೀನು
ಮಂದ ಮತಿಯ ಕಂದನೆಂದು
ಬೇಧ ಬೀರದೆ
ಸುಂದರಾಂಗ ಮುದ್ದು ಮಗುವ
ಕುಂದದೇನು  ಕೇಳಿ ಬೆಳೆಸಿ
ಮುಂದೆ ನಲಿವ ದಾರಿ ತೋರಿ
ನಗುವ ತೋರಿದೆ

ಅಂದಗಾರ ಕಂದನೆಂದು
ಚೆಂದ ಮಾತು ಕಲಿಸಿ ಕಲೆತು
ಬಿಂದು ಜಾರದಂತೆ ಕರವ
ಪಿಡಿದು ಬೆಳೆಸಿದೆ
ನಂದ ಗೋಪ ಕುವರನಂತೆ
ಬೆಂದು ನೊಂದು ಹೋಗದಂತೆ
ಹಂದಗೊಡದೆ ಬಾಳ ಚಿಂತೆ
ಬಂದು ಸಲಹಿದೆ

ದೇವ ದೇವ ದೇವನಂತೆ
ಕಾವ ದೊರೆಯೆ ಜೀವ ನೀನು
ಯಾವ ಜನ್ಮ ತಂದ ಬಂಧ
ಬೆಸುಗೆ ನಮ್ಮೊಳು
ನೋವು ಬೇವು ಸುಳಿಯದಂತೆ
ಜೀವ ನವ್ಯ ರಮ್ಯವಾಗಿ
ನಾವು ಕೂಡಿ ನಲಿವ ಮನೆಯೆ
ನಾಕ ಬಾಳೊಳು

————-

2 thoughts on “ರಾಜು ನಾಯ್ಕ ಅವರ ಭೋಗ ಷಟ್ಪದಿ -ತಂದೆ

Leave a Reply

Back To Top