ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ಬಳ್ಳಿಯ ಹೂಗಳು…….


ಮಣ್ಣಿನ ಆಳದಿ
ಬೇರಿನ ಚಿಗುರು
ಚೆಂದದಿ ಹುಟ್ಟಿ
ತಾ ಸುಮ್ಮನೆ ನಗುತ್ತಿತ್ತು…..
ಒಲವಿನ ಉಸಿರಿಗೆ
ಜೀವವ ಹಿಡಿದು
ಮರಕೆ ಹಬ್ಬಿ
ಬೆಳೆಯುತಾ ಸಾಗಿತ್ತು…..
ದೂರಕೆ ಹಬ್ಬುತಾ
ಹಸಿರನು ಚೆಲ್ಲುತಾ
ಹೂಗಳ ಅರಳಿಸಿ
ನಗುತಾ ನಿಂತಿತ್ತು……
ಗೆಲುವಿನ ಉಯಿಲಿಗೆ
ಪರಿಮಳ ಹರಡಿ
ಗಾಳಿಯ ಬಯಲಲಿ
ಮನವನು ತುಂಬಿತ್ತು……
ಬೆಳಕಿನ ಬಣ್ಣಕ್ಕೆ
ಭರವಸೆಯಾಗಿ
ಬುವಿಯ ಮಣ್ಣಲಿ
ಎಲ್ಲೆಡೆ ಹರಡಿತ್ತು……
ಮರದ ನೆರಳಿಗೆ
ಚಿಗುರನು ಹರಡಿ
ಬಿಸಿಲಿನ ಬೇಗೆಗೆ
ನೆರಳೇ ಆಗಿತ್ತು…….
ಮಣ್ಣಿನ ನಗುವಿಗೆ
ಹೂವನು ಹಾಸಿ
ಒಲವಿನ ಮಾತಿಗೆ
ಪಲ್ಲವಿ ಹಾಡಿತ್ತು…..
ಬದುಕದು ಬಳ್ಳಿ
ಚಿಗುರುತಾ ಬೆಳೆದು
ಬದುಕಿನ ಒಳಗೆ
ಒಳಿತನ್ನು ಹೇಳಿತ್ತು……
ನಾಗರಾಜ ಬಿ.ನಾಯ್ಕ

ಮತ್ತೊಮ್ಮೆ ಕವಿ ಪ್ರಕೃತಿಯಲ್ಲಿ ಲೀನ. ಪ್ರಕೃತಿಯೊಂದಿಗೆ ಬದುಕಿನ ಮಿಲನ. ಸಾಗರವ ಸೇರಲು ಹೊರಟ ನದಿ ಸಾಗರವೇ ಆಗುವ ಪರಿ ಅದ್ಭುತ.
ಸುಂದರವಾದ ಸಾಲುಗಳು, ಅಭಿನಂದನೆಗಳು ಸರ್