ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಬದುಕಿಬಿಡು


ಇಂದೇ ಕೊನೆಯ ದಿನವೆಂಬಂತೆ ಬದುಕಿಬಿಡು
ಮರಳಿ ಸಮಯ ಸಿಗದೆಂಬತೆ ಪ್ರೀತಿಸಿಬಿಡು
ನಿನಗಾಗಿ ನೀ ಮೀಸಲೆಂಬಂತೆ ಬಾಳಿಬಿಡು
ನಿನ್ನ ಖುಷಿಗಾಗಿ ಮಗುವಂತೆ ಸೋತುಬಿಡು
ಕ್ಷಮಿಸಿಬಿಡು ಎಲ್ಲರನೂ ಅವರವರ ತಪ್ಪಿಗೆ
ಬಿಟ್ಟುಬಿಡು ಎಲ್ಲವನೂ ದೈವದ ಇಚ್ಛೆಗೆ
ನೋಡಿಬಿಡು ನಸುಕಿನ ಸೌಂದರ್ಯ
ಕೇಳಿಬಿಡು ಹಕ್ಕಿಗಳ ಕಲರವದ ಕೈಂಕರ್ಯ
ಬಿಸಿಲಿದ್ದರೇ ಕಿರಣಗಳಿಗೊಮ್ಮೆ ನಿನ್ನ ಸ್ಪರ್ಶಿಸಲುಬಿಡು
ಮಳೆಯಿದ್ದರೇ ಹನಿಗಳಿಗೊಮ್ಮೆ ನಿನ್ನ ತೋಯಿಸಲುಬಿಡು
ಹಗಲಿದ್ದರೇ ಬೆವರು, ಬೆವರಿಳಿಸುವಂತೆ ದುಡಿದುಬಿಡು
ಇರುಳಿದ್ದರೇ ಕನಸು ಮಗ್ಗಲು ಬದಲಿಸದಂತೆ ಮಲಗಿಬಿಡು
ಮಗುವ ನೋಡಿ ಮಗುವಂತೆ ನಕ್ಕುಬಿಡು
ಆಡದ ಬಾಲ್ಯದ ಆಟವನೊಮ್ಮೆ ಆಡಿಬಿಡು
ಹೇಳದ ನೋವು ಹೇಳಿ ಅತ್ತುಬಿಡು
ತೀರದ ಆಸೆಯನೊಮ್ಮೆ ತೆರೆದಿಟ್ಟುಬಿಡು
ಎಂದು ಬರುವುದೋ ಮರಣದ ಕರೆ?
ಎಂದು ಬೀಳುವುದೋ ನಾಟಕಕೆ ತೆರೆ ?
ಇಂದೇ ಕೊನೆಯ ದಿನವೆಂಬಂತೆ ಬದುಕಿಬಿಡು
ಇಂದೇ ಕೊನೆಯ ದಿನವೆಂಬಂತೆ ಬದುಕಿಬಿಡು
————————————-
ವಾಣಿ ಯಡಹಳ್ಳಿಮಠ