ಕಾವ್ಯ ಸಂಗಾತಿ
ರಾಜು ನಾಯ್ಕ
“ಒಡಲಿಗ ಕಾವ್ಯ ಬನ”


ನೀನಿಲ್ಲದೆ ಬರಿದಾದ ಎದೆಯೊಳಗೆ
ನೋವುಗಳೂ ಬಿಕ್ಕಳಿಸುತ್ತಿವೆ
ಮೌನದಲಿ ನಲಿವು ನಗುವುಗಳು
ಕೂಡ ಕ್ಷಣ ಕ್ಷಣವು ಸಾಯುತ್ತಿವೆ
ಒಲವಿನ ನೆನಪುಗಳು ಹೂಂಕರಿಸಿ
ಗೆಲುವಿನ ನಲಿವುಗಳೂ ನರಳುತ್ತಿವೆ
ಇಂದೇತಕೊ ನಯನಗಳಲ್ಲಿ ತುಸು ಹೆಚ್ಚೇ
ಹನಿದು ಕಂಬನಿಗಳು ಕಾಯುತ್ತಿವೆ
ಅಧರದಲಿ ಮಾತುಗಳು ಬಾಡಿಹುದು
ಬದುಕಿನಲಿ ಭಾವನೆಗಳು ಸಾಯುತ್ತಿವೆ
ಮಾತುಗಳಲ್ಲಿ ಭಾವ ಬೆವತು ನಡುಗಿಹುದು
ಮೌನದೊಳಗೆ ಮಾತುಗಳೂ ಬೆವರುತಿವೆ
ಜೀವಕ್ಕಿಲ್ಲ ಬೆಲೆ ನಿರ್ಭಾವ ವೈಖರಿ
ಧಾವಿಸೊ ಬಿಕ್ಕುಗಳು ನಗುವಾಗುವ ಪರಿ
ಭಾವಕ್ಕೆಲ್ಲಿದೆ ಬೇಲಿ ಹರಿಯಲಿ ಲಹರಿ
ದೇವನೊಲವು ಭಾಷೆ ಭಾವದ ಬೆನ್ನೇರಿ
ಹಾಡಾಗಿ ಹರಿದವು ಬದುಕಿನ ಬೆಡಗು
ಕಾಡಲ್ಲಿ ಅಲೆದರು ಕಾವ್ಯದ ಸೊಗಡು
ಮೋಡದ ಗುಡುಗು ತೋಡಿನ ಸಲಿಲ
ಮೂಡಿಸಿದೆ ಎದೆಯಲ್ಲಿ ಕಾವ್ಯ ಜಲ
ದೃಷ್ಟಿಯಲಿ ದೃಶ್ಯವಿಲ್ಲ ದಿಟ್ಟಿಸಿದೆ ಶೂನ್ಯ
ಸೃಷ್ಟಿಯಲಿ ಕಲ್ಪನೆಗೆ ಮೆತ್ತಲೇನು ಬಣ್ಣ
ನಾನೇಕೆ ಬರೆಯಲಿ ನೂರೆಂಟು ಕವನ
ತಾನಾಗಿ ಬೆಳೆದವು,ಒಡಲಿಗ ಕಾವ್ಯ ಬನ
ರಾಜು ನಾಯ್ಕ