ಶರಣ ಸಂಗಾತಿ
ಸಾವಿಲ್ಲದ ಶರಣರು ಮಾಲಿಕೆ-
ರೇವಣಸಿದ್ಧರು.
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಪುಣೆ


ರೇವಣಸಿದ್ಧರು
———————–
ಕಾಲ ಬಸವ ಸಮಕಾಲೀನ 12 ನೆಯ ಶತಮಾನ
ಜನ್ಮ -ಇಂದಿನ ಸಾಂಗಲಿ ಜಿಲ್ಲೆಯ ವಿಟಾ ತಾಲೂಕಿನ ರೇವಳಗಾವ
ಮಡದಿ – ರೇಕವ್ವೆ
ಮಗ -ರುದ್ರಮುನಿದೇವ
ಕಾಯಕ- ಲಿಂಗ ತತ್ವವನ್ನು ಪ್ರಸಾರ ಮಾಡುವುದು
ಐಕ್ಯ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ
ರೇವಣಸಿದ್ಧರು ಹಾಲು ಮತಸ್ಥ ಸಮಾಜಕ್ಕೆ ಸೇರಿದ ಇಂದಿನ ಸಾಂಗಲಿ ಜಿಲ್ಲೆಯ ವಿಟಾ ತಾಲೂಕಿನ ರೇವಾಳಗಾವ ಎಂಬಲ್ಲಿ ಜನಿಸಿದರು. 12ನೇ ಶತಮಾನದಲ್ಲಿ ಶ್ರೀ ರೇವಣಸಿದ್ದ ಹಾಗೂ ಶ್ರೀ ಸಿದ್ದರಾಮ ಸಮಕಾಲೀನರು ಎಂಬುದು ರೇವಣಸಿದ್ದೇಶ್ವರನ ಕುರಿತು ಬರೆದ ರೇವಣಸಾಂಗತ್ಯ, ರೇವಣಸಿದ್ದೇಶ್ವರ ರಗಳೆ ಹಾಗೂ ಜಾನಪದ ಹಾಲುಮತ ಪುರಾಣ ಇವುಗಳಲ್ಲಿ ಉಲ್ಲೇಖವಾಗಿದೆ. ಅಲ್ಲದೆ ಹರಿಹರ ಕವಿಯೂ ಸಹ ಇವರ ಬಗ್ಗೆ ತಮ್ಮ ಮೊಟ್ಟಮೊದಲ ಕಾವ್ಯದಲ್ಲಿ ಉಲ್ಲೇಖ ಮಾಡಿರುತ್ತಾರೆ. ಇವರ ಟಗರು ಪವಾಡಕ್ಕೆ ರೇವಣಸಿದ್ದ ಪುರಾಣವೆಂದು ಕರೆಯುತ್ತಾರೆ.
ಡಾ ಎಂ ಎಂ ಕಲಬುರ್ಗಿ ಅವರು ತಮ್ಮ ಮಾರ್ಗದಲ್ಲಿ ರೇವಣಸಿದ್ಧರು ನಾಥ ಪರಂಪರೆಗೆ ಸೇರಿದವರು ವಚನ ಚಳುವಳಿಯಿಂದ ದೂರ ಉಳಿದರು ಎಂದು ನಮೂದಿಸಿದ್ದಾರೆ ,ಇದು ಸಂಪೂರ್ಣ ತಪ್ಪು. ಟಿ ಎಸ ವೆಂಕಣ್ಣಯ್ಯನವರು (ಕುವೆಂಪು ಅವರ ಗುರುಗಳು ) ತಮ್ಮಹರಿಹರ ಕವಿಯ ರೇವಣಸಿದ್ದೇಶ್ವರ ರಗಳೆ ಎಂಬ ಕೃತಿ ಸಂಪಾದನೆಯ ಪೀಠಿಕೆಯಲ್ಲಿ ರೇವಣಸಿದ್ಧರು ಬಸವ ಸಮಕಾಲೀನ ಮತ್ತು 12 ನೆಯ ಶತಮಾನದ ಶರಣ ಶ್ರೇಷ್ಠ ಎಂದಿದ್ದಾರೆ. ಡಾ ಎಂ ಚಿದಾನಂದ ಮೂರ್ತಿಯವರು ಸಹ ತಮ್ಮ ವಚನ ಶೋಧ ಎಂಬ ಕೃತಿಯಲ್ಲಿ ರೇವಣ ಸಿದ್ಧರನ್ನೇ ರೇಣುಕಾಚಾರ್ಯ ಎಂದು ಕರೆದಿದ್ದಾರೆ. ಐತಿಹಾಸಿಕ ರೇವಣಸಿದ್ಧ ಎಂಬ ಶರಣರು ಶೈವ ಪುರಾಣಗಳಲ್ಲಿ ಆಂಧ್ರ ಪ್ರದೇಶದ ಕೊಲ್ಲಿಪಾಕಿಯಲ್ಲಿಸ್ಥಾವರ ಲಿಂಗದಿಂದ ಉದ್ಭವವಾದರು ಎಂಬ ಹಸಿ ಶುದ್ಧ ಸುಳ್ಳನ್ನು ದಾಖಲಿಸುತ್ತಾ ನಡೆದರು.

ರೇವಣಸಿದ್ಧರು ಒಬ್ಬ ಬಸವ ಸಮಕಾಲೀನ ಶರಣರು
————————————————————
12ನೆಯ ಶತಮಾನದ ವಚನಕಾರರು ತಮ್ಮ ವಚನಗಳಲ್ಲ್ಲಿ ರೇವಣಸಿದ್ಧನ ಚರಿತ್ರೆಗೆ ಸಂಬಂಧಿಸಿದ ಅಲ್ಪಸ್ವಲ್ಪ ಮಾಹಿತಿಗಳನ್ನು ನೀಡಿರುವುದು ಕಂಡುಬರುತ್ತವೆ. ಇಂಥ ವಚನಗಳಲ್ಲಿ ನಾಗಮ್ಮಳ ವಚನ ಗಮನಿಸೋಣ:
ಅಂಗದಿಂದುದಯವಾದಾತ ಮಡಿವಾಳಯ್ಯ
ಲಿಂಗದಿಂದುದಯವಾದಾತ ರೇವಣಸಿದ್ಧಯ್ಯ
ಭಸ್ಮದಿಂದುದಯವಾದಾತ ಸಿದ್ಧರಾಮಯ್ಯ
ಪಾದೋದಕದಿಂದುದಯವಾದವಳು ಅಕ್ಕಮಹಾದೇವಿ
ಮಂತ್ರದಿಂದುದಯವಾದಾತ ನಮ್ಮ ಸೋದರ ಬಸವಯ್ಯ
ಪ್ರಸಾದದಿಂದುದಯವಾದಾತ ನೀನಲ್ಲವೆ ಚೆನ್ನಬಸವಯ್ಯ ಬಸವಣ್ಣ ಪ್ರಿಯ ಚೆನ್ನಸಂಗಯ್ಯ ||
(ನಾಗಲಾಂಬಿಕೆಯ, ಶಿವಶರಣೆಯರ ವಚನ ಸಂ, ವಚನ 787, ಪು. 252.)
ಈ ಮೇಲಿನ ವಚನದಿಂದ ರೇವಣಸಿದ್ಧನ ಲಿಂಗೋದ್ಭವ ಸಂಗತಿ ಎಂಬುದಕ್ಕೆ ಒಂದು ಐತಿಹ್ಯವಿದೆ. ಮರಾಠಿಯಲ್ಲಿ ರೇವು ಎಂದರೆ ಉಸುಕು ಸಾಂಗ್ಲಿ ಜಿಲ್ಲೆಯ ರೇವಳಗಾವದಲ್ಲಿ ಹಳ್ಳದ ಉಸುಕಿನಲ್ಲಿ ದೊರೆತ ಅನಾಥ ಶಿಶುವೆಂದು ಮೌಖಿಕ ಹೇಳಿಕೆ ಉಂಟು. ಹಾಲುಮತಸ್ಥ ಸಮಾಜದವರು ಈ ಶಿಶುವನ್ನು ಸಾಕಿ ಸಲುಹಿ ಪೋಷಿಸಿ ಸಮಾಜಕ್ಕೆ ಕೊಟ್ಟ ಕಾರಣ ಅಕ್ಕ ನಾಗಮ್ಮ ಲಿಂಗದಿಂದುದಯವಾದಾತ ರೇವಣಸಿದ್ಧಯ್ಯ ಎಂದಿದ್ದಾಳೆ.
12ನೆಯ ಶತಮಾನದಲ್ಲಿ ಕಲ್ಯಾಣದ ಪರಿಸರದಲ್ಲಿ ಜನ್ಮವೆತ್ತಿ ವಿಭೂತಿಪುರಷರಾಗಿ ಮೆರೆದು ಸಮಾಜಸೇವೆ ಸಲ್ಲಿಸಿ ಬಯಲಾದರೆನ್ನಲಾದ ಪ್ರಸಿದ್ಧ ಲಿಂಗಾಯತ ಧರ್ಮ ಗುರು . ಇವರ ಜೀವನದ ಚಾರಿತ್ರಿಕ ಅಂಶಗಳು ಪೌರಾಣಿಕಾಂಶಗಳೊಂದಿಗೆ ಬೆರೆತು ಮಸುಕಾಗಿವೆ. ಸಂಪ್ರದಾಯದ ಪ್ರಕಾರ ರೇವಣಸಿದ್ಧರು ವೀರಶೈವ ಪಂಚಾಚಾರ್ಯರಲ್ಲೊಬ್ಬರು ಎಂದು ಹೇಳುತ್ತಾರೆ . ಇದು ಸತ್ಯಕ್ಕೆ ದೂರವಾದ ಮಾತು. 12ನೆಯ ಶತಮಾನದ ಸಿರಿವಾಳ ಶಾಸನದಲ್ಲಿ ಸಿದ್ಧರೇವಣ, ರೇವಣಾಚಾರ್ಯರನ್ನು (ರೇಣಕಾಚಾರ್ಯ) ಮಹಾನ್ ಸಿದ್ಧಪುರುಷರೆಂದು ಉಲ್ಲೇಖಿಸಲಾಗಿದೆ. ಇವರನ್ನು ಕೈಲಾಸದ ಪ್ರಮಥ ರೇಣುಕನೊಂದಿಗೆ ಹೋಲಿಸಲಾಗಿದೆ. ಬಸವಾದಿಗಳಿಗೆ ಸಮಕಾಲೀನರಾಗಿದ್ದು ಧರ್ಮಗುರುವೆನಿಸಿದ್ದ ರೇವಣಸಿದ್ಧರೇ ಈ ಸಿದ್ಧರೇವಣ್ಣ. ಅಂತೆಯೇ ಸಿದ್ಧರಾಮ, ಆದಯ್ಯ ಮುಂತಾದ ಶರಣರ ವಚನಗಳಲ್ಲಿ ರೇವಣಸಿದ್ಧರ ಉಲ್ಲೇಖವಿದೆ. ಶಿವತತ್ತ್ವರತ್ನಾಕರದ ಕರ್ತೃ ಬಸವಭೂಪಲನು ರೇವಣಸಿದ್ಧೇಶ್ವರರು ಶೃಂಗೇರಿಯ ಪ್ರಸಿದ್ಧ ಚಂದ್ರಮೌಳೀಶ್ವರ ಲಿಂಗದ ದಾತೃವೆಂದು ಉಲ್ಲೇಖಿಸಿದ್ದಾನೆ ಇದು ಪೌರಾಣಿಕ ಕಲ್ಪನೆ ಅಷ್ಟೇ .
ಹರಿಹರಾದಿಗಳು ತಿಳಿಸುವಂತೆ ರಾಜೇಂದ್ರ ಚೋಳ ರೇವಣಸಿದ್ಧರ ಸಮಕಾಲೀನ. ಈತ ರೇವಣಸಿದ್ಧಗಿರಿಯಿಂದ ಶಿವರಾತ್ರಿ ಶಿವಯೋಗಿಗಳನ್ನು ಕರೆದೊಯ್ದು ಕಪಿಲಾ ನದೀ ತೀರದಲ್ಲಿ ಸುತ್ತೂರು ಮಠವನ್ನು ಸ್ಥಾಪಿಸಿದ. ಶಿವರಾತ್ರೀಶ್ವರ ಗದ್ದುಗೆ ಇಲ್ಲಿರುವುದೇ ಇದಕ್ಕೆ ಸಾಕ್ಷಿ. ಮಾಯಾಕೋಲಾ ಹಲ ಮಲೆಯ ಮಾದೇಶ್ವರರೂ ಈ ಮಠದಲ್ಲಿ ಸ್ವಲ್ಪಕಾಲ ಇದ್ದರಂತೆ ಹೀಗೆ ಅನೇಕ ಕಥೆಗಳು ಜನಜನಿತವಾಗಿವೆ. ರೇವಣ ಸಿದ್ಧರು – ಸಿದ್ಧರಾಮರ ತಂದೆ ತಾಯಿಯವರನ್ನು ಭೇಟಿಯಾಗಿದ್ದರು ಎನ್ನುವದಕ್ಕೆ ದಾಖಲೆಗಳಿವೆ. ತಂದೆ-ಮುದ್ದುಗೌಡ. ತಾಯಿ-ಸುಗ್ಗಲೆ. ಮನೆದೈವ-ಧೂಳಿಮಾಕಾಳ. ರೇವಣಸಿದ್ಧನ ವರದಿಂದ ಹುಟ್ಟಿದ ಮಗುವೇ ಸಿದ್ಧರಾಮರು . ತಂದೆ ತಾಯಿ ಇಟ್ಟ ಹೆಸರು ಧೂಳಿಮಾಕಾಳ. ಅನಂತರ ನಾಥಸಿದ್ಧ ಸಂಪ್ರದಾಯದಲ್ಲಿ ಸಿದ್ಧರಾಮನೆಂದು ಪ್ರಸಿದ್ಧನಾದ. ಬಾಲ್ಯದಲ್ಲಿ ಮುಗ್ಧಭಕ್ತ ಮುಂದೆ ಪ್ರಭುದೇವರ ಸಂಪರ್ಕಕ್ಕೆ ಬಂದು ಕಲ್ಯಾಣ ಪಟ್ಟಣಕ್ಕೆ ಹೋಗಿ ಚೆನ್ನಬಸವಣ್ಣನವರ ಕೈಯಿಂದ ಇಷ್ಟಲಿಂಗ ದೀಕ್ಷೆ ಪಡೆದರು ಎನ್ನುವದಕ್ಕೆ ನೂರಾರು ದಾಖಲೆಗಳಿವೆ.
ಬಸವಣ್ಣನವರ ಮತ್ತು ಶರಣರ ವಚನ ಚಳುವಳಿಯ ಫಲಪ್ರದವೇ ಲಿಂಗಾಯತ ಧರ್ಮ . ಧಾರ್ಮಿಕ ಕ್ರಾಂತಿಯನ್ನು ಮುಂದುವರಿಸಲು ಶರಣರು ರುದ್ರಮುನಿಯನ್ನು ನಾಯಕನನ್ನಾಗಿ ಆರಿಸಿದರಂತೆ. ಆ ರುದ್ರಮುನಿ ರೇವಣಸಿದ್ಧರ ಪುತ್ರ ಮತ್ತು ಚೆನ್ನಬಸವಣ್ಣನವರ ಶಿಷ್ಯ. ಈ ಸಂಗತಿ ಚಾರಿತ್ರಿಕವಾದದ್ದು. ಕಲ್ಯಾಣದ ಬಿಲ್ವವನದ ಮಧ್ಯೆ ಈಗಲೂ ಇರುವ ರುದ್ರಮುನಿ ಗುದ್ದುಗೆ ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಕಲ್ಯಾಣದ ಸಮೀಪದಲ್ಲಿ ಸಿದ್ಧಗಿರಿಯೆಂದು ಹೆಸರಾದ ತಾಣ ಈ ರೇವಣಸಿದ್ಧರ ತಪೋಭೂಮಿ ಎನ್ನಲಾಗಿದೆ. ಇವಲ್ಲದೆ ರೇವಣಸಿದ್ಧ ಗದ್ದುಗೆ, ರುದ್ರಮುನಿಗದ್ದುಗೆ ಎಂಬ ತೋರು ಗದ್ದುಗೆಗಳು ಕರ್ನಾಟಕದಲ್ಲಿ ಅನೇಕವಿವೆ. ಬೆಂಗಳೂರು ತಾಲ್ಲೂಕಿನ ರಾಮನಗರದ ಬಳಿ ಇರುವ ರೇವಣಸಿದ್ಧೇಶ್ವರ ಬೆಟ್ಟ ಆ ಭಾಗದಲ್ಲಿ ಪವಿತ್ರ ಕ್ಷೇತ್ರವಾಗಿ ಇಂದಿಗೂ ಪ್ರಸಿದ್ಧವಿದೆ. ಶರಣ ರೇವಣಸಿದ್ಧರು ಕಲ್ಯಾಣನಾಡಿನಲ್ಲಿ ಲಿಂಗ ತತ್ವವನ್ನು ಪ್ರಸಾರ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ರೇವಣಸಿದ್ಧರ ಮಡದಿ ರೇಕವ್ವೆಯೂ ಕೂಡ ವಚನಕಾರಳು.
ಕಲ್ಯಾಣ ಕ್ರಾಂತಿಯ ನಂತರ ರೇವಣಸಿದ್ಧರು ಸಿದ್ಧರಾಮರ ಜೊತೆಗೂಡಿ ಸೋಲಾಪುರಕ್ಕೆ ಬಂದು ಮುಂದೆ ವಚನ ಸಾಹಿತ್ಯವನ್ನು ರಕ್ಷಿಸುವ ಶರಣರ ತಂಡದೊಂದಿಗೆ ವಿಜಯಪುರದ ಇಂಡಿ ತಾಲೂಕಿನ ಹೊರಟಿಗೆ ಬಂದು ಅಲ್ಲಿಯೇ ಜನಪರ ಕಾರ್ಯ ಮಾಡುತ್ತಾ ಮುಂದೆ ಅಲ್ಲಿಯೇ ಐಕ್ಯನಾಗುತ್ತಾರೇ . ಈಗಲೂ ಅನೇಕ ರೇವಣಸಿದ್ಧರ ತೋರು ಗದ್ದುಗೆ ಗುಡಿಗಳು ಇಂಡಿ ಮತ್ತು ಸೋಲಾಪುರ ಸುತ್ತಮುತ್ತಲೂ ಕಂಡು ಬರುತ್ತವೆ
ಆಕರಗಳು –
———————-
ಹರಿಹರ ಕವಿಯ ರೇವಣಸಿದ್ದೇಶ್ವರ ರಗಳೆ -ಸಂಪಾದನೆ ಟಿ ಎಸ ವೆಂಕಣ್ಣಯ್ಯನವರು
ವಚನ ಶೋಧ – ಡಾ ಎಂ ಚಿದಾನಂದ ಮೂರ್ತಿ
ಶಿವಶರಣೆಯರ ವಚನಗಳು – ಡಾ ವೀರಣ್ಣ ರಾಜೂರ
ಕ್ಷೇತ್ರ ಕಾರ್ಯ ರೇವಾಳಗಾವ ಸಾಂಗಲಿ ಜಿಲ್ಲೆ ಮತ್ತು ಹೊರ್ತಿ ವಿಜಯಪುರ ಜಿಲ್ಲೆ – ಡಾ ಶಶಿಕಾಂತ ಪಟ್ಟಣ
——————————————————————————————————

ಡಾಶಶಿಕಾಂತ ಪಟ್ಟಣ ರಾಮದುರ್ಗ
Excellent Article Sir
ಅರ್ಥವತ್ತಾದ ರೇವಣಸಿದ್ಧರ ಚರಿತ್ರೆಯನ್ನು
ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಸರ್
ಸುತೇಜ