ಸುಮತಿ ತಮ್ಮ ಮುಂದೆ ಹಿಡಿದ ಪ್ರಯೋಗಾಲಯದ ವರದಿಯ ಚೀಟಿಯನ್ನು ದಂತವೈದ್ಯರು ಕೂಲಂಕುಷವಾಗಿ ಪರಿಶೀಲಿಸಿ ನೋಡಿದರು. ಅವರ ಮುಖದಲ್ಲಿ ಚಿಂತೆಯ ಗೆರೆಗಳು ಮೂಡಿದವು. ನಂಬಲಾರದೆ ಮತ್ತೊಮ್ಮೆ ವರದಿಯನ್ನು ಪರಿಶೀಲಿಸಿ… “ಸುಮತಿ ನಿಮ್ಮ ವಯಸ್ಸು ಎಷ್ಟು?”…. ಎಂದು ಪ್ರಶ್ನಿಸಿದರು. ಅವರು ಈ ಮೊದಲೇ ಬರೆದುಕೊಂಡ ಚೀಟಿಯಲ್ಲಿ 40 ಎಂದು ನಮೂದಿಸಿತ್ತು ಆದರೂ ತಮ್ಮ ಮನದಲ್ಲಿ ಉದ್ಭವಿಸಿದ ಸಂಶಯವನ್ನು ನಿವಾರಿಸಿಕೊಳ್ಳಲು ಕೇಳಿದ್ದರು. ವೈದ್ಯರು ತನ್ನ ವಯಸ್ಸನ್ನು ಕೇಳಿದಾಗ ಅಲ್ಲಿ ನಮೂದಿಸಿದ್ದ ವಯಸ್ಸನ್ನೇ ಹೇಳಿದಳು…” ಮತ್ತೊಮ್ಮೆ ನೆನಪು ಮಾಡಿಕೊಂಡು ಹೇಳಿ ಸುಮತಿ”….ಎಂದು ವೈದ್ಯರು ಕೇಳಿದಾಗ…”ಸರ್ ನಾನು ವಿದ್ಯಾವಂತೆ…ಶಾಲೆಯಲ್ಲಿ ಓದುವಾಗ ನಮೂದಿಸಿದ್ದ ವಯಸ್ಸಿನ ಲೆಕ್ಕದಲ್ಲಿಯೇ ಹೇಳಿದ್ದೇನೆ…ನನ್ನ ಅಮ್ಮ ನಾವು ಹುಟ್ಟಿದ ದಿನಾಂಕವನ್ನು ಒಂದು ಪುಸ್ತಕದಲ್ಲಿ ಬರೆದು ಇಟ್ಟಿದ್ದರು”…ಎಂದು ಹೇಳಿದಳು. ಆಗ ವೈದ್ಯರು….”ಹಾಗಲ್ಲ ಸುಮತಿ…ನಾನು ಹೇಳಲು ಹೊರಟಿರುವುದನ್ನು ಶ್ರದ್ಧೆಯಿಂದ ಕೇಳಿ….ಗಾಭರಿ ಆಗಬೇಡಿ…ನಿಮಗೆ ಸಕ್ಕರೆ ಕಾಯಿಲೆ ( ಮಧುಮೇಹ) ಇದೆ ಎಂದು ರಕ್ತ ಮತ್ತು ಮೂತ್ರ ಪರಿಶೋಧನೆಯ ಈ ವರದಿಯು ಹೇಳುತ್ತಿದೆ….ಹಾಗಾಗಿ ನಿಮ್ಮ ವಯಸ್ಸು ಕೇಳಿದೆ….ನಿಮಗಿನ್ನೂ ಚಿಕ್ಕ ವಯಸ್ಸು… ಒಂದು ಕೆಲಸ ಮಾಡಿ…ಇಲ್ಲಿ ನುರಿತ ಫಿಸೀಷಿಯನ್ ಒಬ್ಬರು ಇದ್ದಾರೆ…ಈ ವೈದ್ಯಕೀಯ ಪ್ರಯೋಗಾಲದ ವರದಿಯನ್ನು ಅವರಿಗೆ ತೋರಿಸಿ….ಅವರ ಸಲಹೆಯಂತೆ ಔಷಧಿ ತೆಗೆದುಕೊಂಡು ನಿಮ್ಮ ರಕ್ತ ಹಾಗೂ ಮೂತ್ರದಲ್ಲಿ ಇರುವ ಸಕ್ಕರೆಯ ಅಂಶವನ್ನು ಕಡಿಮೆ ಮಾಡಿಕೊಂಡು ನನ್ನಲ್ಲಿಗೆ ಬನ್ನಿ….ಸಕ್ಕರೆಯ ಅಂಶವು ನಿಮ್ಮ ಶರೀರದಲ್ಲಿ ಕಡಿಮೆ ಆದರೆ ಮಾತ್ರ ನಾನು ನಿಮ್ಮ ಹಾಳಾದ ಹಲ್ಲುಗಳನ್ನು ಕೀಳಲು ಸಾಧ್ಯ”….ಎಂದರು.

ದಂತ ವೈದ್ಯರು ಹೇಳಿದ ಮಾತುಗಳನ್ನು ಕೇಳಿದಾಗ ಸುಮತಿಗೆ ತನ್ನ ತಲೆಯ ಮೇಲೆ ಒಮ್ಮೆಲೇ ಬಲವಾದ ಸಿಡಿಲು ಎರಗಿದಂತೆ ಭಾಸವಾಯಿತು. ದಂಗಾಗಿ ಕೆಲವು ಕ್ಷಣಗಳ ಕಾಲ ಹಾಗೆಯೇ ವೈದ್ಯರನ್ನು ನೋಡುತ್ತಾ ಕುಳಿತಳು. ಅಂದರೆ ವೈದ್ಯರು ಇಷ್ಟು ಚಿಂತಾಕ್ರಾಂತರಾಗಿ ಚೀಟಿಯನ್ನು ನೋಡಿ ಈ ಸಂಗತಿಯನ್ನು ನನಗೆ ಹೇಳಬೇಕಾದರೆ ನನಗೆ ಯಾವುದೋ ಮಾರಕ ಕಾಯಿಲೆಯೇ ಬಂದಿರಬಹುದು!! “ಕೃಷ್ಣಾ …ನಾನೀಗ ಏನು ಮಾಡಲಿ…ನನಗೀಗ ನೀನೇ ದಿಕ್ಕು…ನನಗೆ ನಾಲ್ವರೂ ಹೆಣ್ಣು ಮಕ್ಕಳು…ಅವರನ್ನು ಅನಾಥರನ್ನಾಗಿ ಮಾಡಬೇಡ ತಂದೇ”…. ಎಂದು ಕಣ್ಣು ಮುಚ್ಚಿ ಮನದಲ್ಲಿಯೇ ಪ್ರಾರ್ಥಿಸಿದಳು. ಕುಳಿತಲ್ಲಿಯೇ ಅವಳಿಗೆ ತನ್ನ ಹಿರಿಯ ಮಗ ವಿಶ್ವನ ನೆನಪಾಯಿತು. ಮಗನನ್ನು ದಿನಕ್ಕೆ ಒಮ್ಮೆಯಾದರೂ ನೆನಪಿಸಿಕೊಂಡು ಕಣ್ಣೀರಿಡದೇ ಇದ್ದವಳಲ್ಲ ಸುಮತಿ. ಮಗನ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಧೈರ್ಯವನ್ನು ತಂದುಕೊಂಡು ಶ್ರೀ ಕೃಷ್ಣನ ಮೇಲೆ ಭಾರ ಹಾಕಿ ಹೇಗೋ ಜೀವನ ಸಾಗಿಸುತ್ತಿದ್ದಳು. ಉಳಿದ ಮಕ್ಕಳ ಮೇಲೆ ಇರುವ ಮಮಕಾರವನ್ನು ಕೂಡಾ ಲೆಕ್ಕಿಸದೇ ವಿದ್ಯೆಯೇ ಅವರಿಗೆ ಆಸ್ತಿ, ನಾನು ಮಕ್ಕಳ ಮೇಲಿನ ಮಮತೆಯಿಂದ ನನ್ನ ಜೊತೆಗೆ ಇಟ್ಟುಕೊಂಡರೆ ಒಪ್ಪೊತ್ತಿನ ಕೂಳು ಕೂಡಾ ಆ ಮಕ್ಕಳಿಗೆ ಕೊಡಲು ಸಾಧ್ಯವಿಲ್ಲ. ಇನ್ನು ವಿದ್ಯೆ ನನ್ನಿಂದ ಕೊಡಲು ಸಾಧ್ಯವೇ? ಎಂದು ಮನಸ್ಸನ್ನು ಕಲ್ಲುಮಾಡಿ, ಒಂದೆಡೆ ಮಾತೃವಾತ್ಸಲ್ಯ ಸೆಳೆಯುತ್ತಿದ್ದರು ಕೂಡಾ ಅದನ್ನು ಲೆಕ್ಕಿಸದೇ ನಾನು ಬದುಕಿದ್ದರೂ ಮಕ್ಕಳನ್ನು ಅನಾಥಾಶ್ರಮದಲ್ಲಿ ಬಿಟ್ಟಿದ್ದೇನೆ. ಅಯ್ಯೋ ಕೃಷ್ಣಾ ಇದೇನು? ಏನೇನೋ ಪರೀಕ್ಷೆಗಳನ್ನು ನನ್ನ ಜೀವನದಲ್ಲಿ ಒಡ್ಡುತ್ತಿರುವೆ!! ಈಗೇನು ಮಾಡಲಿ? ಎಂದು ಯೋಚಿಸುತ್ತಿರುವಾಗಲೇ ಬವಳಿ ಬಂದು ವೈದ್ಯರ ಮೇಜಿನ ಮೇಲೆ ಹಾಗೇ ಕಣ್ಣು ಮುಚ್ಚಿ ಒರಗಿದಳು. 

ಅಲ್ಲಿಯೇ ಕೊಠಡಿಯ ಒಳಗೆ ದಂತ  ಚಿಕಿತ್ಸೆಗೆ ಬೇಕಾದ ಸಾಮಗ್ರಿಗಳನ್ನು ಜೋಡಿಸುವ ಕೆಲಸದಲ್ಲಿ ನಿರಾತಳಾಗಿದ್ದ ದಾದಿಯನ್ನು ವೈದ್ಯರು ಕೂಗಿ ಕರೆದು ಮೂರ್ಛೆ ಹೋದ ಸುಮತಿಗೆ ಬೇಗ ಒಂದು ಲೋಟ ನೀರನ್ನು ತಂದು ಕೊಡುವಂತೆ ಹೇಳಿದರು. ದಾದಿಯು ವೈದ್ಯರ ಮಾತನ್ನು ಕೇಳಿದ್ದೇ ತಡ ಒಂದು ಲೋಟ ನೀರನ್ನು ತಂದು ಸುಮತಿಯನ್ನು  ಎಬ್ಬಿಸುವ ಪ್ರಯತ್ನ ಮಾಡಿದಳು. ಆದರೆ ಸುಮತಿ ಕಣ್ಣು ತೆರೆಯಲೇ ಇಲ್ಲ. ಕೂಡಲೇ ಲೋಟದಿಂದ ಸ್ವಲ್ಪ ನೀರನ್ನು ಕೈಗೆ ಬಗ್ಗಿಸಿ ಸುರಿದುಕೊಂಡು ಸುಮತಿಯ ಮೇಲೆ ಚಿಮುಕಿಸಿದಳು. ಮೈ ಮೇಲೆ ನೀರು ಬಿದ್ದ ಅರಿವಾಗಿ ಸುಮತಿ ದಡಬಡಿಸಿ ಎದ್ದಳು. ಎದ್ದು ನಿಲ್ಲಲು ಸಾಧ್ಯವಾಗದೇ  ಇನ್ನೇನು ಕೆಳಗೆ ಬೀಳಬೇಕು ಎನ್ನುವಾಗ ದಾದಿ ಅವಳನ್ನು ಹಿಡಿದುಕೊಂಡರು. ದಾದಿಯ ಸಹಾಯದಿಂದ ಸುಮತಿ ಸಾವರಿಸಿಕೊಂಡು ನಿಂತುಕೊಂಡಳು. ಅವಳ ಶರೀರದಲ್ಲಿ ಇರುವ ಹೆಚ್ಚಿನ ಸಕ್ಕರೆಯ ಅಂಶದ ಪರಿಣಾಮವಾಗಿ ಅನಿರೀಕ್ಷಿತ ವಿಚಾರವನ್ನು ಕೇಳಿದಾಗ ಸುಮತಿಗೆ ಕಣ್ಣು ಕತ್ತಲಾಗಿದೆ ಎನ್ನುವುದನ್ನು ಅರಿತ ದಂತವೈದ್ಯರು ಸುಮತಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದರು…”ಸುಮತಿ ಹೆದರಬೇಡಿ…ನಿಯಮಿತವಾಗಿ ಆಹಾರ ಮತ್ತು ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ ಮಧುಮೇಹ ನಿಯಂತ್ರಣಕ್ಕೆ  ಬರುತ್ತದೆ….ಸಾಧಾರಣ ಜೀವನವನ್ನು ನೀವು ಸಾಗಿಸಬಹುದು….ಚಿಂತೆ ಬೇಡ…ಮತ್ತೊಂದು ಚೀಟಿಯನ್ನು ಪಡೆದು ನಾನು ಆಗಲೇ ಹೇಳಿದ ವೈದ್ಯರನ್ನು ಈಗ ಭೇಟಿ ಮಾಡಿ….ಅವರು ಒಳ್ಳೆಯ ಔಷಧಿಗಳನ್ನು ಬರೆದುಕೊಡುತ್ತಾರೆ”….ಎಂದು ಹೇಳಿದರು. ವೈದ್ಯರ ಸಾಂತ್ವನದ ಮಾತುಗಳನ್ನು ಕೇಳಿದಾಗ ಸುಮತಿಗೆ ಆಯಾಸ ತಗ್ಗಿದಂತೆ ಅನಿಸಿತು. ವೈದ್ಯರ ಭರವಸೆಯ ಮಾತಿನಿಂದ ಮನಸ್ಸಿಗೆ ಸ್ವಲ್ಪ ನೆಮ್ಮದಿಯೂ ದೊರೆತಂತೆ ಆಯಿತು….”ಹಾಗೆಯೇ ಆಗಲಿ ಸರ್”….ಎಂದು ಹೇಳುತ್ತಾ ಚೀಟಿಯನ್ನು ಹಾಗೂ ರಕ್ತ ಮೂತ್ರ ಪರೀಕ್ಷೆಯ ವರದಿಯನ್ನು ತೆಗೆದುಕೊಂಡು ಹೊರಡಲು ಅನುವಾದಳು.

“ಒಂದು ನಿಮಿಷ ನಿಲ್ಲಿ ಸುಮತಿ….ಫಿಸಿಷಿಯನ್ ರನ್ನು ಭೇಟಿ ಮಾಡಿದ ನಂತರ ಇಲ್ಲಿ ನನ್ನಲ್ಲಿಗೆ ಬಂದು ಅವರು ಏನು ಹೇಳಿದರು? ಯಾವ ರೀತಿಯ ಚಿಕಿತ್ಸೆಯನ್ನು ಪಡೆಯಲು ಹೇಳಿದ್ದಾರೆ ಎಂಬುದನ್ನು ನನಗೆ ತಿಳಿಸಿ….ಹಾಂ….ಹಾಗೆಯೇ  ನನ್ನಲ್ಲಿಗೆ ನೀವು ಚಿಕಿತ್ಸೆ ಪಡೆಯಲು ಬಂದಿದ್ದು ಹಾಗೂ ನಾನು ನಿಮಗೆ ಸೂಚಿಸಿದ ಹಾಗೆ ಹಲ್ಲಿಗೆ ಚಿಕಿತ್ಸೆ ಕೊಡುವ ಬಗ್ಗೆಯೂ ಮರೆಯದೇ ಹೇಳಿ ಅವರ ಅಭಿಪ್ರಾಯವನ್ನು ತಿಳಿದುಕೊಂಡು ನನಗೆ ತಿಳಿಸಿ”…ಎಂದು ಹೇಳಿ ಸುಮತಿಯ ಭುಜದ ಮೇಲೆ ತಟ್ಟಿ ಧೈರ್ಯ ತುಂಬಿ ಕಳುಹಿಸಿದರು. ಸರಿ ಎಂದು ತಲೆ ಅಲ್ಲಾಡಿಸಿ, ದಂತವೈದ್ಯರಿಗೆ ವಂದಿಸಿ ಅಲ್ಲಿಂದ ಚೀಟಿ ಬರೆದು ಕೊಡುವ ಸ್ಥಳಕ್ಕೆ ಹೋದಳು. ಸುಮತಿಯನ್ನು ಕಂಡ ಚೀಟಿ ಬರೆಯುವ ಸಿಬ್ಬಂದಿ… ಏನಮ್ಮಾ ಆಗಲೇ ನಾನು ಕೊಟ್ಟ ಚೀಟಿ ಏನಾಯ್ತು? ಕಳೆದುಕೊಂಡು ಬಿಟ್ಟಿರಾ ಎಂದು ಹುಬ್ಬು  ಗಂಟಿಕ್ಕಿ ಪ್ರಶ್ನಿಸಿದನು. ಆಗ ಸುಮತಿ ದಂತವೈದ್ಯರು ಬರೆದುಕೊಟ್ಟ ಚೀಟಿಯನ್ನು ತೋರಿಸಿದಳು….”ಸರಿ ಇರಿ”… ಎಂದು ಹೇಳುತ್ತಾ ಮತ್ತೊಂದು ಚೀಟಿಯನ್ನು ಬರೆದುಕೊಟ್ಟನು. ಆ ಚೀಟಿಯನ್ನು ಪಡೆದುಕೊಂಡು ಫಿಸಿಷಿಯನ್ ಇರುವ ಕೊಠಡಿಯ ಬಳಿಗೆ ಬಂದಳು. ಅಲ್ಲಿ ನೋಡಿದರೆ ಅಷ್ಟುದ್ದ ಕ್ಯೂ ಇತ್ತು. ಗುರುವಾರ ಸಂತೆಯ ದಿನ ಹಾಗೂ ಹಲವು ತೋಟಗಳ ಕಾರ್ಮಿಕರಿಗೆ, ಕೆಲಸಗಾರರಿಗೆ ಅಂದು ರಜೆ ಇದ್ದ ಕಾರಣ ಜನ ಸಂದಣಿಯಿಂದ ಆಸ್ಪತ್ರೆ ಕಿಕ್ಕಿರಿದು ತುಂಬಿತ್ತು. ಸರತಿ ಸಾಲಿನಲ್ಲಿ ತಾನೂ ನಿಂತಳು. ಸರತಿ ಸಾಲಿನಲ್ಲಿ ನಿಂತ ಜನರ ನೂಕು ನುಗ್ಗಾಟ ಶುರುವಾಯಿತು. ಮೊದಲೇ ದಣಿದಿದ್ದ ಸುಮತಿಗೆ ಅಲ್ಲಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ಹೊಟ್ಟೆ ಹಸಿವು ಜೋರಾಗಿತ್ತು. ಈಗೀಗ ಹಸಿವು ತಡೆಯಲು ಅವಳಿಂದ ಸಾಧ್ಯವಾಗುತ್ತಿರಲಿಲ್ಲ. ಹಸಿವು ಹೆಚ್ಚಾದರೆ ಕಣ್ಣು ಕತ್ತಲಾದಂತೆ ಆಗಿ ಕೈ ಕಾಲು ನಡುಕ ಜೊತೆಗೆ ಬೆವರಿ ಮೈಯೆಲ್ಲಾ ತಣ್ಣಗಾಗುತ್ತಿತ್ತು. ಹಾಗಾಗಿ ತನ್ನ ಮುಂದೆ ಸರತಿಯಲ್ಲಿ ನಿಂತಿದ್ದ ಹೆಣ್ಣುಮಗಳಿಗೆ ಹೇಳಿ ಅಲ್ಲಿಯೇ ವರಾಂಡದಲ್ಲಿ ಕುಳಿತು ತಾನು ತಂದಿದ್ದ ಬುತ್ತಿಯನ್ನು ಬಿಚ್ಚಿ ಊಟ ಮಾಡಿದಳು. 


Leave a Reply

Back To Top