ನಮ್ಮ ಭಾರತ ದೇಶದ ೭೮ ನೇ ವರ್ಷದ ಸ್ವಾತಂತ್ರ್ಯದಿನಾಚರಣೆಯನ್ನು ಇಂದು ದೇಶದ ಮೂಲೆ ಮೂಲೆಗಳಲ್ಲೂ ಅತ್ಯಂತ ಉತ್ಸಾಹ, ಉಲ್ಲಾಸ, ಸಂತಸ ಮತ್ತು ಸಂಭ್ರಮಗಳಿಂದ ಆಚರಿಸಲಾಗುತ್ತಿದೆ..ಇದು ದೇಶದ ಪ್ರತಿ ಪ್ರಜೆಗೂ ಹೆಮ್ಮೆ, ಅಭಿಮಾನಗಳಿಂದ ತುಂಬಿದ ವಿಶೇಷ ಸಂಧರ್ಭವಾಗಿದೆ. ಇನ್ನೂರು ವರ್ಷಗಳ ಗುಲಾಮಗುರಿಯಿಂದ ಮುಕ್ತವಾಗಿ, ಸ್ವಾತಂತ್ರ್ಯವನ್ನು‌ ಪಡೆದ ದಿನದಿಂದ ಇಂದಿನವರೆಗೂ ನಮ್ಮ ದೇಶ ಸರ್ವತೋಮುಖ ಪ್ರಗತಿಯ ಮಾರ್ಗದಲ್ಲಿ ಸಾಗುತ್ತಿದೆ.. ಅಭಿವೃದ್ಧಿಯ ಈ ಅದ್ಭುತ ಪಯಣದಲ್ಲಿ ಹತ್ತು ಹಲವಾರು ಬದಲಾವಣೆಗಳನ್ನು ಮಾಡುತ್ತ ಬಲಿಷ್ಠವಾಗುತ್ತ ತನ್ನದೇ ಆದ ವಿಶೇಷವಾದ ಗುರುತಿನೊಂದಿಗೆ ಜಗದ ಗಮನವನ್ನು ತನ್ನೆಡೆಗೆ ಸೆಳೆಯುತ್ತಾ ಮುಂದೆ ಮುಂದೆ ಸಾಗುತ್ತಿದೆ..

ಮುಂಬಯಿ ಮಹಾನಗರದಲ್ಲಿ ಈ ವಿಶೇಷ ದಿನದ ಅಂಗವಾಗಿ ದೇಶಪ್ರೇಮ, ದೇಶಭಕ್ತಿ, ಮತ್ತು ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಹಲವಾರು ಉತ್ತಮ ಕಾರ್ಯಕ್ರಮಗಳು ಆಯೋಜಿಸಲ್ಪಡುತ್ತವೆ..
ನಗರದ ಪ್ರತಿಷ್ಠಿತ ಶಿವಾಜಿಪಾರ್ಕ್ ನಲ್ಲಿ ರಾಜ್ಯದ ಮುಖ್ಯ ಮಂತ್ರಿಯವರಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇರುತ್ತದೆ..ಪರೇಡ್, ಮಾರ್ಚ್ ಪಾಸ್ಟ್, ವೈಮಾನಿಕ ಪ್ರದರ್ಶನ, ಡಾಗ್ ಷೋ, ಮತ್ತಿತರ ಆಟೋಟಗಳನ್ನು ಆಯೋಜಿಸಲಾಗುತ್ತದೆ, ವಿದ್ಯಾರ್ಥಿಗಳು, ಶಿಕ್ಷಕರು,ಕಲಾವಿದರು ಗೀತ, ಸಂಗೀತ, ನೃತ್ಯ, ನಾಟಕ ಮತ್ತು ಭಾಷಣಗಳ ಮೂಲಕ ತಮ್ಮ ದೇಶಭಕ್ತಿಯನ್ನು ಪ್ರದರ್ಶನ ಮಾಡುತ್ತಾರೆ. ನಗರದ ವಿವಿಧ ಭಾಗಗಳಲ್ಲಿ, ವಿವಿಧ ಬಡಾವಣೆಗಳಲ್ಲಿ, ದೇಶಪ್ರೇಮವನ್ನು ಸಾರುವ, ಉತ್ತೇಜಿಸುವ ಸಾಂಸ್ಕೃತಿಕ ಚಟುವಟಿಕೆಗಳು ಜರುಗುತ್ತವೆ..ನಮ್ಮ ಹಿರಿಯ ಸ್ವಾತಂತ್ರ್ಯ ಯೋಧರ ಸಾಹಸ, ತ್ಯಾಗ, ದೇಶಭಕ್ತಿಗಳನ್ನು ಸ್ಮರಿಸಿ ನಮಿಸಿ ಗೌರವ ಸಲ್ಲಿಸುವಂತಹ ಉನ್ನತ ಕಾರ್ಯಕ್ರಮಗಳನ್ನು
ಆಯೋಜಿಸಲಾಗುತ್ತದೆ. ರಕ್ತದಾನ ಶಿಬಿರಗಳು, ಪರಿಸರ ಸಂರಕ್ಷಣಾ ಅಭಿಯಾನಗಳು, ಸ್ವಚ್ಛತಾ ಅಭಿಯಾನಗಳು ಜರುಗುತ್ತವೆ..ಈ ದಿನದಂದು ಮುಂಬಯಿಯ ಎಲ್ಲಾ ವರ್ಗದ ಜನರು ತಮ್ಮದೇ ಆದ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂತಸ ಸಂಭ್ರಮಗಳಿಂದ ಆಚರಿಸುತ್ತಾರೆ..

ನಾವು ವಾಸವಾಗಿರುವ ವಸಂತ ಮಾರ್ವೆಲ್  ಸೊಸೈಟಿಯಲ್ಲಿಯೂ ಸಹ ಸ್ವಾತಂತ್ರ್ಯದಿನದ ಅಂಗವಾಗಿ ಹಲವು ಕಾರ್ಯಗಳನ್ನು ಹಮ್ಮಿಕೊಳ್ಳುತ್ತೇವೆ.ಆಗಸ್ಟ್ ೧೫ ಕ್ಕಿಂತ ಒಂದು ವಾರ ಮೊದಲೇ ಗೂಂಜ್ ಕಂಪನಿಯ ಸಹಾಯದಿಂದ ಪಾಲ್ಘರ್, ಡಹಾಣು ತಾಲ್ಲೂಕಿನ ಅಕ್ಕ ಪಕ್ಕದ ಕಾಡು ಪ್ರದೇಶಗಳಲ್ಲಿ ವಾಸವಾಗಿರುವ ಆದಿವಾಸಿ ಜನರಿಗಾಗಿ ಹೊಸ, ಹಳೆಯ ಬಟ್ಟೆ ಬರೆಗಳನ್ನು ಸಂಗ್ರಹಿಸಿ ಕಳಿಸಿ ಕೊಡುತ್ತೇವೆ. ಹಳೆಯ ಬಟ್ಟೆ ಬರೆಗಳು, ಟವೆಲ್, ಚಾದರ್, ಬೆಡ್ ಶೀಟ್ ಗಳು, ಸೀರೆಗಳು ಹೀಗೆ ಆ ಬಡ ಆದಿವಾಸಿ ಜನರಿಗೆ, ಅವರ ಮಕ್ಕಳಿಗೆ ಉಪಯೋಗಕ್ಕೆ ಬರುವಂತಹ ಬಟ್ಟೆಗಳನ್ನು ಒಂದೆಡೆ ಸಂಗ್ರಹಿಸಿ ಗೂಂಜ್ ಕಂಪನಿಯ ಟ್ರಕ್ ನಲ್ಲಿ ತುಂಬಿಸಿ ಕಳಿಸುತ್ತೇವೆ..ಇದೇ ರೀತಿಯಲ್ಲಿ ಹತ್ತಾರು ಸೊಸೈಟಿಗಳ ಜನರಿಂದ‌ ಬಟ್ಟೆ ಬರೆಗಳನ್ನು ಸಂಗ್ರಹಿಸಿ ಟ್ರಕ್ ಗಳಲ್ಲಿ ತುಂಬಿಸಿಕೊಂಡ ಗೂಂಜ್ ಕಂಪನಿಯ ಕಾರ್ಯಕರ್ತರು ಆದಿವಾಸಿ ಜನರ ನಿವಾಸದೆಡೆಗೆ ಪಯಣ ಬೆಳೆಸುತ್ತಾರೆ..

ಗೂಂಜ್ ಕಂಪನಿ ಭಾರತದ ಪ್ರಸಿದ್ಧ ಸರ್ಕಾರೇತರ ಸಂಸ್ಥೆಯಾಗಿದ್ದು, ಹಳೆಯ ಬಟ್ಟೆಗಳನ್ನು ಶುದ್ಧಗೊಳಿಸಿ, ಮರುಬಳಕೆ ಮಾಡಿ ಹೊಸ ಬಟ್ಟೆಗಳನ್ನು ಉತ್ಪಾದಿಸಿ ಅವುಗಳನ್ನು ಅದಿವಾಸಿ ಸಮುದಾಯದ ಜನರಿಗೆ ವಿನಿಯೋಗಿಸುವ ಕಾರ್ಯವನ್ನು ಮಾಡುತ್ತದೆ. ಆದಿವಾಸಿ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಇನ್ನಿತರ ಕಾರ್ಯಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸುತ್ತಿದೆ.. ಈ ಸಂಸ್ಥೆಯ ಮುಖ್ಯ ಉದ್ದೇಶವೆಂದರೆ ಜನಮಾನಸದಲಿ ಕುಳಿರುವ ದಾನ ಧರ್ಮಗಳ ಪರಿಕಲ್ಪನೆಯನ್ನು ಬದಲಾಯಿಸುವುದೇ ಆಗಿದೆ. ದಾನದಿಂದ ಸಂಗ್ರಹಿಸಿದ ಬಟ್ಟೆಗಳನ್ನು ಅವುಗಳ ಗುಣಮಟ್ಟದ ‌ಪ್ರಕಾರ ವಿಭಾಗಿಸಿ, ಶುದ್ಧಗೊಳಿಸಿ, ಮರುಬಳಕೆ ಮಾಡಿ “ಕೇವಲ ಬಟ್ಟೆಯ ತುಂಡಲ್ಲ” (Not just s piece of cloth) ಎಂಬ ಹೆಸರಿನ ಅಭಿಯಾನದ ಮೂಲಕ ಮಹಿಳೆಯರ ಋತುಚಕ್ರದ ಸಮಯದಲ್ಲಿ ಬಳಸುವಂತಹ ನ್ಯಾಪ್ ಕಿನ್ (ಪ್ಯಾಡ್) ಗಳನ್ನು ತಯಾರಿಸಿ ಆದಿವಾಸಿ ಮಹಿಳೆಯರಿಗೆ ನೀಡುವ ಕಾರ್ಯವನ್ನು ಈ ಕಂಪನಿ ಮಾಡುತ್ತದೆ..ಇದು ಭಾರತದಲ್ಲಿನ ಅತ್ಯಂತ ವಿಶ್ವಾಸಾರ್ಹ ಸಾಮಾಜಿಕ ಸಂಸ್ಥೆ ಎಂದು ಹೆಸರು ‌ಪಡೆದಿದೆ..ಈ ಸಂಸ್ಥೆಯ ಮೂಲಕ, ದುರ್ಬಲ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಆದಿವಾಸಿ ಜನರಿಗೆ ಉಡಲು ಬಟ್ಟೆಗಳನ್ನ ನೀಡುವ ಅಲ್ಪ ಸ್ವಲ್ಪ ಸಹಾಯ ಮಾಡುವ ಪುಟ್ಟ ಪ್ರಯತ್ನ ಮುಂಬಯಿಕರರದು..

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಹಲವು ಬಗೆಯ ಸಮಾಜ ಸೇವೆಗಳನ್ನು ಕೈಗೊಳ್ಳಲಾಗುವುದು..  ಸೊಸೈಟಿಯ ಮನೆಗೆಲಸ ಮಾಡುವ‌ ಬಡ ಮಹಿಳೆಯರ ಮಕ್ಕಳಿಗೆ ನೋಟ್ ಬುಕ್, ಪಠ್ಯ ಪುಸ್ತಕಗಳು, ಪೆನ್ ಪೆನ್ಸಿಲ್ ಗಳು, ಮತ್ತು ಸಮವಸ್ತ್ರಗಳನ್ನು ಕೊಡಿಸುವ ಕೆಲಸವನ್ನು ಸೊಸೈಟಿಯ ಅಪೆಕ್ಸ್ ಕಮಿಟಿಯ ಸಹಕಾರದಿಂದ ಮಾಡಲಾಗುತ್ತದೆ.

ಸೊಸೈಟಿಯ ಎಲ್ಲಾ ವಾಚ್ ಮನ್ (ಸೆಕ್ಯೂರಿಟಿ ಗಾರ್ಡ್)  ಗಳಿಗೆ ಹೊದೆಯುವ ಚಾದರ್ ಗಳನ್ನು ನೀಡಲಾಗುತ್ತದೆ..ಮಹಾನಗರದ ವಿವಿಧ ಆಸ್ಪತ್ರೆಗಳಲ್ಲಿಅಡ್ಮಿಟ್ ಆದ ರೋಗಿಗಳ ಶುಶ್ರೂಷೆಗಾಗಿ ಅವರ ಜೊತೆಯಲ್ಲಿ ಬಂದು ನಿಂದ ಮನೆಯ ಸದಸ್ಯರಿಗಾಗಿಯೇ ವಿಶೇಷ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ..
ಅವರಿಗಾಗಿ ಕೆಲವು ಸೊಸೈಟಿಗಳ ಜನರು ತರಕಾರಿಗಳನ್ನು ಸಂಗ್ರಹಿಸಿ ಸಾರು, ಪಲ್ಯಗಳ ವ್ಯವಸ್ಥೆ ಮಾಡುತ್ತಾರೆ. ಇನ್ನೂ ಕೆಲವು ಸೊಸೈಟಿಯ ‌ಜನರು ಅನ್ನ, ಕಿಚಡಿ, ಪುಲಾವ್ ಗಳ ವ್ಯವಸ್ಥೆ ‌ಮಾಡುತ್ತಾರೆ..
ನಮ್ಮ ಸೊಸೈಟಿಯಿಂದ ನಾವು ಪ್ರತಿ ಫ್ಲ್ಯಾಟ್ ನಿಂದ ೧೦  ಚಪಾತಿಗಳನ್ನು ಸಂಗ್ರಹಿಸಿ ನೀಡುತ್ತೇವೆ..ಕಡಿಮೆ ಎಂದರೂ ಒಂದೂವರೆ ಸಾವಿರ ಚಪಾತಿಗಳು ನಮ್ಮ ಸೊಸೈಟಿಯಿಂದ ಹೋಗುತ್ತವೆ..ಇಲ್ಲಿ ಯಾರಿಗೂ ಆಗ್ರಹ ಇರುವುದಿಲ್ಲ..ಎಲ್ಲರೂ ತಮಗೆ ತಿಳಿದಷ್ಟು, ಕೈಲಾದಷ್ಟು ಸಹಾಯ ಮಾಡುತ್ತಾರೆ.. 
ಹೀಗೆ ಮುಂಬಯಿ ಮಹಾನಗರದಲ್ಲಿನ ಸ್ವಾತಂತ್ರ್ಯ ದಿನದ ಆಚರಣೆ  ಸ್ವಲ್ಪ ವಿಭಿನ್ನವಾಗಿ ಇರುತ್ತದೆ ಎನ್ನಬಹುದು..

ಸ್ವಾತಂತ್ರ್ಯ ದಿನಾಚರಣೆಯ ಹತ್ತು ಹದಿನೈದು ದಿನಗಳ ಮೊದಲಿನಿಂದಲೇ ಸತತವಾಗಿ ಕಾರ್ಯನಿರತರಾಗಿ, ಅತ್ಯಂತ ಶಿಸ್ತಿನಿಂದ ಧ್ವಜಾರೋಹಣ, ಪರೇಡ್ ಗಳನ್ನು ಮುಗಿಸಿ, ಬಿಸಿಲು ಮಳೆಯೆನ್ನದೆ, ಹಗಲಿರುಳೂ ಅತ್ಯಂತ ಎಚ್ಚರಿಕೆಯಿಂದ, ಮಹಾನಗರದ ಬಂದೋಬಸ್ತ್ ಕಾರ್ಯದಲ್ಲಿ ತೊಡಗಿರುವ ಕರ್ತವ್ಯದಕ್ಷ ಮುಂಬಯಿ ಪೋಲಿಸ್ ಸಿಬ್ಬಂದಿಗೆ ನನ್ನ ಶತ ಶತ ನಮನಗಳನ್ನು ಅರ್ಪಿಸುವೆ.

ಭಾರತ ದೇಶದ ಆರ್ಥಿಕ ರಾಜಧಾನಿಯಾದ ಮುಂಬಯಿ ಮಹಾನಗರ ತನ್ನ ವೈವಿಧ್ಯಮಯ ಚಟುವಟಿಕೆಗಳಿಗಾಗಿ ಪ್ರಸಿದ್ಧಿ ಪಡೆದಿದೆ..ದೇಶದ ವಿವಿಧ ಭಾಗಗಳಿಂದ ಬಂದು ಇಲ್ಲಿ ನೆಲೆಸಿದ ಜನರು ತಮ್ಮದೇ ಆದ ಭಾಷೆ, ಧರ್ಮ,ಸಂಸ್ಕೃತಿಗಳನ್ನು ಹೊಂದಿದ್ದಾರೆ. ಈ ವಿವಿಧತೆಯಲ್ಲೂ ಏಕತೆಯನ್ನು ಪಡೆದಿರುವ ಈ ನಗರದ ಜನರು ಇಲ್ಲಿಯ ಸಂಸ್ಕೃತಿಗೆ ಒಗ್ಗಿ ಹೋಗಿದ್ದರೂ ಸಹ ತಮ್ಮ ಮೂಲ ಧರ್ಮ ಸಂಸ್ಕಾರ ಸಂಸ್ಕೃತಿ ಆಚರಣೆಗಳನ್ನು ಬಿಟ್ಟಿಲ್ಲ..ಗುಜರಾತ್ ನಿಂದ ಬಂದ ಗುಜರಾತಿ (ಗುಜ್ಜು) ಸಮುದಾಯದವರು ಗಣೇಶೋತ್ಸವ, ನವರಾತ್ರಿ, ದೀಪಾವಳಿ ಉತ್ಸವಗಳನ್ನ ವಿಜೃಂಭಣೆಯಿಂದ ಆಚರಿಸಿದರೆ, ಪಂಜಾಬಿಗಳು ತಮ್ಮ ಬೈಸಾಕಿ, ಲೋಹ್ರಿ ಹಬ್ಬಗಳನ್ನು ಆಚರಿಸುತ್ತಾರೆ. ಪಶ್ಚಿಮ ಬಂಗಾಲದ ಜನರು ವಸಂತ ಪಂಚಮಿ, ನವರಾತ್ರಿ ದುರ್ಗಾಪೂಜಾಗಳನ್ನು ಮಾಡುತ್ತಾರೆ. ರಾಜಸ್ಥಾನದ ಜನರು ಶ್ರೀ ಕೃಷ್ಣ ಜನ್ಮಾಷ್ಟಮಿ, ರಾಮ ನವಮಿ, ತೀಜ್ ಮುಂತಾದ ಹಬ್ಬಗಳನ್ನು ಅದ್ಧೂರಿಯಾಗಿ ಆಚರಿಸುತ್ತಾರೆ..

ವಿಶೇಷವಾಗಿ ಈ ರಾಜಸ್ಥಾನದ ಮಾರವಾಡಿ ಅಥವಾ ಜೈನ್ ಸಮುದಾಯದ ಜನರು ಮಾತ್ರ ತಮ್ಮ ಮೂಲ ಸಂಪ್ರದಾಯಗಳನ್ನು ಬಹಳ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ..
ಕುಡಿಯಲು ನೀರೂ ಸಹ ಸಿಗದಂತಹ ಮರಳುಗಾಡು ಪ್ರದೇಶದಿಂದ ವಲಸೆ ಬಂದು ಇಲ್ಲಿ ನೆಲೆಸಿ, ಮುಂಬಯಿನ ಆಧುನಿಕ ಜೀವನಶೈಲಿಯನ್ನು ಅಳವಡಿಸಿಕೊಂಡರೂ ಸಹ,‍ ಈ ಜನ ತಮ್ಮ ಮೂಲ ಸಂಸ್ಕೃತಿಯ ಬಗ್ಗೆ ತೋರುವ ಶ್ರದ್ಧೆ, ಭಕ್ತಿ, ಪ್ರೀತಿ, ಗೌರವ ಅಭಿಮಾನಗಳು ನಿಜಕ್ಕೂ ಅತ್ಯಂತ ಪ್ರಶಂಸನೀಯವಾಗಿವೆ..

“ಹರಿಯಾಲಿ ತೀಜ್
ಇದು ರಾಜಸ್ಥಾನಿ ಮಹಿಳೆಯರು ಶ್ರಾವಣ ಮಾಸದಲ್ಲಿ ಆಚರಿಸುವ ವಿಶೇಷ ಹಬ್ಬವಾಗಿದೆ..ನಮ್ಮ ಕನ್ನಡ ನಾಡಿನ ಗೌರಿ ನಾಗಪಂಚಮಿ, ಸ್ವರ್ಣ ಗೌರಿ,ಮಂಗಳಗೌರಿ ಹಬ್ಬಗಳನ್ನು ಹೋಲುವ ಈ ಹಬ್ಬವು ಮುಂಬಯಿನ ಹಲವಾರು ಭಾಗಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ.
ಪುರಾಣದಲ್ಲಿ ಪಾರ್ವತಿ ದೇವಿಯು ಸರ್ವಾಲಂಕಾರ ಭೂಷಿತೆಯಾಗಿ ತನ್ನ ಸಖಿಯರೊಡನೊಡಗೂಡಿ ಶಿವನನ್ನು ಪೂಜಿಸಿ ಆರಾಧಿಸಿ ಪತಿಯನ್ನಾಗಿ ಪಡೆದಳೆಂಬ ಪ್ರತೀತಿಯನ್ನು ಅನುಸರಿಸಿ ಹೆಂಗೆಳೆಯರೆಲ್ಲ ಒಂದೆಡೆ ಸೇರಿ ಸಂಭ್ರಮದಿಂದ ತೀಜ್ ಹಬ್ಬವನ್ನು ಆಚರಿಸುತ್ತಾರೆ..ಮುಂಜಾನೆ ಮೆಹಂದಿ, ಬಳೆ, ಹೊಸ ಸಾಂಪ್ರದಾಯಿಕ ಉಡುಪನ್ನು ಧರಿಸಿ ವಿಧಿವತ್ತಾಗಿ ದೇವಿ ಪಾರ್ವತಿಯ ಪೂಜೆಯನ್ನು ನೆರವೇರಿಸುತ್ತಾರೆ..ಸಂಜೆ ಸಖಿಯರೆಲ್ಲ ಒಂದಾಗಿ ಹೂಗಳಿಂದ ಅಲಂಕರಿಸಿದ ಉಯ್ಯಾಲೆಯಲ್ಲಿ ತೂಗಾಟ ಆಡುತ್ತಾರೆ.ಇನ್ನಿತರ ಸಾಂಪ್ರದಾಯಿಕ ಆಟಗಳು, ಹಾಡುಗಳು, ನೃತ್ಯದೊಂದಿಗೆ ಸಂಭ್ರಮಿಸುತ್ತಾರೆ..೭೦- ೭೫ ರ ವಯಸ್ಸಿನ ಹಿರಿಯ ಮಹಿಳೆಯರೂ ಸಹ ಸಂಭ್ರಮದಿಂದ ನರ್ತಿಸುವ ಪರಿಯನ್ನು ನೋಡಿ ಖುಷಿ ಎನಿಸುತ್ತದೆ..

ಘೇವರ್, ಮಾಲ್ ಪುವ, ಚುರ್ಮಾ, ಮೂಂಗ್ ಭಜಿ, ಕಚೋರಿ, ಕಾಂಜಿವಡಾ, ಮುಂತಾದ ವಿವಿಧ ಸಾಂಪ್ರದಾಯಿಕ ತಿನಿಸುಗಳ ಭಾರಿ ಔತಣಕೂಟವನ್ನು ಏರ್ಪಡಿಸಿ ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತಾರೆ..ಈ ಎಲ್ಲ ಹಬ್ಬದಾಚರಣೆಗಳು ಹೊಸ ಪೀಳಿಗೆಯ ಜೀವನದ ಯಾಂತ್ರಿಕತೆಯನ್ನು ದೂರಾಗಿಸಿ ನವೋಲ್ಲಾಸ, ಉತ್ಸಾಹ, ಸ್ಪೂರ್ತಿ ಸಂತಸಗಳನ್ನು ನೀಡುತ್ತವೆಂಬುದು ಸತ್ಯ..

ಒಟ್ಟಿನಲ್ಲಿ, ತೀಜ್ ಹಬ್ಬವು ಧಾರ್ಮಿಕ ಭಾವನೆ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಕುಟುಂಬದ ಒಗ್ಗಟ್ಟನ್ನು ಪ್ರತಿನಿಧಿಸುವ ಅತಿ ವಿಶೇಷ ಹಬ್ಬವಾಗಿದೆ..ಪ್ರತಿವರ್ಷ ಈ ಹಬ್ಬದ ಮೂಲಕ ತಮ್ಮ ಜೀವನದಲ್ಲಿ ಹೊಸ ಉತ್ಸಾಹ, ಉಲ್ಲಾಸ, ಸಂತೋಷ ಮತ್ತು ಭಕ್ತಿಗಳನ್ನು ತುಂಬಿಕೊಂಡು ‌ಸಂಭ್ರಮಿಸುತ್ತಾರೆ. ಈ ಹಬ್ಬವು ತನ್ನ ಪರಂಪರೆ ಮತ್ತು ಸಂಸ್ಕೃತಿಯೊಂದಿಗೆ ಆಳವಾಗಿ ಬೆಸೆದು ಎರಡು ಮೂರು ಪೀಳಿಗೆಯ ಮಹಿಳೆಯರನ್ನು ‌ಒಂದಾಗಿಸುತ್ತದೆ..


Leave a Reply

Back To Top