ವಾಣಿ ಯಡಹಳ್ಳಿಮಠ ಅವರ ಕವಿತೆ

ನಿನ್ಹೆಸರು  ಹೇಳಿ ಈ ಕಂಗಳು ಹೊಳೆದರೇ ನಿನಗರಿವಾಗುವುದೇನು ?
ನಿನ್ಹೆಸರು ಕೇಳಿ ಮನವು ಬೆಳದಿಂಗಳಾದರೇ  ನಿನಗರಿವಾಗುವುದೇನು ?

ಸುತ್ತುವರಿದಿರುವೆ ನೀ ,ಈ ಜಗದಜಂಜಾಟಗಳಿಂದ  ಗೆಳೆಯ
ಆದರೂ ತುಸು ಮೆಲ್ಲಗೆ ನಾ ನಿನ್ನ ಕರೆದರೇ ನಿನಗರಿವಾಗುವುದೇನು ?

ಹಗಲು ಜವಾಬ್ದಾರಿಗಳ ಮೂಟೆ ಹೊತ್ತುಇರುಳು ಬಳಲಿ ಮಲಗುವುದು ದಿಟ
ಆದರೆ ಕನಸಲಿ  ನಿನ್ನ ಕನವರಿಸಿ ಮುದ್ದಿಸಿದರೇ ನಿನಗರಿವಾಗುವುದೇನು ?

ಬದುಕಿನ ಪಯಣದಲಿ ಆಗಾಗ ನಾ ನೊಂದು  ನಿರಾಸೆಗೊಳ್ಳುವೆ
ಆಗ ನಿನ್ನೆನಪುಗಳ ನೆರಳನು ಬಾಚಿ ತಬ್ಬಿದರೇ ನಿನಗರಿವಾಗುವುದೇನು ?

‘ವಾಣಿ’ಯ ಪ್ರತಿ ಶಾಯರಿಯಲ್ಲಿಯೂ ನೀ ಉಸಿರಾಡುವೆ ಸಾಕಿ
ನನ್ನ  ಲೇಖನಿ  ದಿನವೂ ನಿನ್ನ ಪ್ರೀತಿಸಿದರೇ ನಿನಗರಿವಾಗುವುದೇನು ?


Leave a Reply

Back To Top