“ಅವನು ಚಿರುಡುತ್ತಾನೆ. ಮನೆಯವರ ಜೊತೆಗೆ ಸದಾ ಜಗಳ ಕಾಯುತ್ತಾನೆ. ಎಷ್ಟು ಹೇಳಿದರೂ ಕೇಳುವುದಿಲ್ಲ..! ಸಮಾಜದಲ್ಲಿ ಅವನನ್ನು ಕಂಡರೆ ಅವನ ಜಗಳಗಂಟ. ಮೊದಲು ಹೇಗಿದ್ದನೋ ಈಗಲೂ ಹಾಗೆ ಇದ್ದಾನೆ…”
 ಎನ್ನುವ ಮಾತುಗಳನ್ನು ನಾವು ಕೇಳುತ್ತೇವೆ.

 ಇನ್ನೂ ಇವಳು ಸದಾ ಬೇರೆಯವರ ಮೇಲೆ ದೂಷಣೆ ಮಾಡುತ್ತಾ ನಾಲಿಗೆಯನ್ನು ಹರಿಬಿಟ್ಟು ದೊಡ್ಡವರು, ಸಣ್ಣವರು ಎನ್ನದೆ ತನ್ನದೇ ಗರ್ವವನ್ನು ತೋರ್ಪಡಿಸುತ್ತಾ, ಅಹಂಕಾರದಿಂದ ಮೆರೆಯುತ್ತಾಳೆ.

“ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಸಣ್ಣ ಪ್ರಜ್ಞೆಯೂ ಇಲ್ಲ..” ಇಂತಹ ಮಾತುಗಳನ್ನು ನಾವು ನಿತ್ಯ ಬದುಕಿನಲ್ಲಿ ಕೇಳುತ್ತಿರುತ್ತೇವೆ.
 ಮೃದುತ್ವದ ಬಾಲ್ಯ ಕಳೆದು, ಯೌವ್ವನಕ್ಕೆ ಕಾಲಿಡುತ್ತಿದ್ದಂತೆ ನಮ್ಮ ಮೈಯಲ್ಲಿ ಬಿಸಿ ರಕ್ತ ಸಂಚಲನವಾಗುತ್ತದೆ. ಮೈಮನವೆಲ್ಲ ತಾರುಣ್ಯಕ್ಕೆ ತೆರೆದುಕೊಳ್ಳುತ್ತದೆ. ಆಗ ಬದುಕಿನಲ್ಲಿ “ನಾನು ಮಾಡಿದ್ದೆ ಸತ್ಯ..” ಎಂದು ಬೀಗುತ್ತೇವೆ.  ಏನಾದರೂ ದೊಡ್ಡ ಸಾಧನೆಯನ್ನು ಮಾಡಬೇಕೆನ್ನುವ ಮಹಾದಾಸೆಯನ್ನು ಹೊಂದುತ್ತೇವೆ.  ಆಶಾ ಗೋಪುರವನ್ನು ಕಟ್ಟಿಕೊಳ್ಳುತ್ತೇವೆ. ಈ ಆಶಾಗೋಪುರ ಕಟ್ಟುವಾಗ ಧನಾತ್ಮಕ ಚಿಂತನೆಗಳೊಂದಿಗೆ ಬಂದರೆ ತುಂಬಾ ಒಳಿತು.  ಆದರೆ ಋಣಾತ್ಮಕ ಚಿಂತನೆಗಳು ಬಂದರೆ, ಅವು ನಮ್ಮನ್ನು ಅಡ್ಡ ದಾರಿಗೆ ತುಳಿಯುತ್ತವೆ. ಗರ್ವ ಮನೆಮಾಡಿಕೊಂಡಿದ್ದರೆ ನಾವು ಇನ್ನೊಬ್ಬರಿಗೆ ಕಿರಿಕಿರಿಯ ವ್ಯಕ್ತಿಯಾಗಿ ಕಾಣುತ್ತೇವೆ.  ಮುಂದೆ ಹೋಗುತ್ತಾ ಹೋಗುತ್ತಾ ನಮ್ಮ ಬೆನ್ನ ಹಿಂದೆ ಶಪಿಸುತ್ತಾರೆ.  “ಇಂತಹ ವ್ಯಕ್ತಿ ಯಾವತ್ತೂ ಉದ್ದಾರವಾಗುವುದಿಲ್ಲ..” ಎನ್ನುವ ಋಣಾತ್ಮಕ ಮಾತುಗಳನ್ನು ಕೇಳಬೇಕಾಗುತ್ತದೆ. ಎಲ್ಲರನ್ನೂ ಎದುರು  ಹಾಕಿಕೊಂಡು ನಾವು ಮತ್ತೆ ಮತ್ತೆ ನಮ್ಮ ದ್ವೇಷವನ್ನು ಬಿಟ್ಟು ಕೊಡುವುದಿಲ್ಲ. ಅಹಂಕಾರ ದ್ವೇಷ ಯಾವುತ್ತಿಗೂ ಪ್ರೀತಿಯನ್ನು ಕೊಡುವುದಿಲ್ಲ. ಆದರೂ ಆ ವಯಸ್ಸು  ಗರ್ವದ ಗಮ್ಮತ್ತಿನಿಂದ ಕೂಡಿರುತ್ತದೆ.

 ಇನ್ನು, ಯೌವನದಲ್ಲಿ ಕಾಲಿಟ್ಟ ಯುವತಿಯರಾದರು, “ನಾನೇ ಸೌಂದರ್ಯವತಿ, ನಾನೇ ಜಾಣೆ, ಬುದ್ಧಿವಂತೆ ನನ್ನಷ್ಟು ಈ ಪ್ರಪಂಚದಲ್ಲಿ ಯಾರೂ ಇಲ್ಲ..”  ಎನ್ನುತ್ತಾ ಎನ್ನುತ್ತಾ ಆಶಾಗೋಪುರವನ್ನು ಕಟ್ಟುತ್ತಾರೆ.  ಕಲ್ಪನೆ ಕನಸಿನಲ್ಲಿ ವಿಶ್ವ ಸುಂದರಿಯರಾಗುತ್ತಾರೆ. ಜಗತ್ತಿನಲ್ಲಿ ನನಷ್ಟು ಯಾರು ಬುದ್ಧಿವಂತರಿಲ್ಲ ಮತ್ತು ಅದನ್ನು ಒಪ್ಪದಿದ್ದವರನ್ನು ಹಿಗ್ಗಾಮುಗ್ಗ ವಾಗಿ ಬೈಯುತ್ತಾರೆ. ದ್ವೇಷಿಸುತ್ತಾರೆ. ಅಸೂಯೆ ಪಡುತ್ತಾರೆ. ಇನ್ನೊಬ್ಬರ ಏಳಿಗೆಯನ್ನು ಕಂಡು ಸಂತಸಪಡದೆ, “ನಾನು ಸಾಧಿಸಲಿಲ್ಲವಲ್ಲ.” ಎಂದು ಕೊರಗುತ್ತಾರೆ. ಆ ಕೊರಗು  ಕೆಲವು ಸಲ ಧನಾತ್ಮಕವಾಗಿ ಆಲೋಚಿಸಿದರೆ ಒಳ್ಳೆಯದು, ಒಳ್ಳೆಯ ದಾರಿಯಿಂದ ಅವರು ಕೂಡ ಸಾಧನೆ ಮಾಡಬಲ್ಲರು.

ಇನ್ನು ಕೆಲವು ಸಲ ಋಣಾತ್ಮಕವಾಗಿ ಆಲೋಚಿಸಿದರೆ, ಅಡ್ಡದಾರಿ ಹಿಡಿದು ತಮ್ಮ ಬದುಕನ್ನು ಹಾಳು ಮಾಡಿಕೊಳ್ಳಬಲ್ಲರು. ಯೌವನದ ಈ ದಿವಸಗಳು ತುಂಬಾ ಅಪಾಯಕಾರಿ. ಅವುಗಳನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಿಕೊಳ್ಳಬೇಕು. ಹೇಗೆ ವಿದ್ಯುತ್ ನಮ್ಮ ಬದುಕಿನಲ್ಲಿ ಬೇಕೇ ಬೇಕೋ ಅಗತ್ಯವೋ ಹಾಗೆ ಯೌವನ ಕೂಡ. ಅದನ್ನು ಅತ್ಯಂತ ನಾಜೂಕಾಗಿ ಬಳಸಿಕೊಳ್ಳಬೇಕು. ಧನಾತ್ಮಕವಾಗಿ ಉಪಯೋಗಿಸಿಕೊಂಡರೆ, ವಿದ್ಯುತ್ತಿನಿಂದ ನಾವು ಏನೆಲ್ಲವನ್ನು ಪಡೆದುಕೊಳ್ಳುತ್ತೇವೆಯೋ ಹಾಗೆ ನಮ್ಮ ಅಹಂಕಾರದಿಂದ ವಿದ್ಯುತ್ತನ್ನು ಮುಟ್ಟಲು ಹೋದರೆ ಅಪಾಯ ಆಗುವ ಸಾಧ್ಯತೆಯಿದೆ.  ಹಾಗಾಗಿ ಬಹು ಎಚ್ಚರದಿಂದ ಬದುಕಿನಲ್ಲಿ ಹೆಜ್ಜೆ ಹಾಕಬೇಕಾಗಿದೆ.

ಯೌವನದಲ್ಲಿ ಮಾಡಿದ ಅನೇಕ ತಪ್ಪುಗಳು ಮುಂದೊಂದು ದಿನ ಪಶ್ಚಾತಾಪ ಪಡಬೇಕಾಗುತ್ತದೆ. ಯೌವನದಲ್ಲಿದ್ದ ಅಹಂಕಾರ, ಗರ್ವ ಕ್ರಮೇಣ ಕರಗುತ್ತದೆ. ಮತ್ತು ಸಮಾಜದಲ್ಲಿ ಬೆಳೆಯುತ್ತಾ ಬೆಳೆಯುತ್ತಾ ಅನುಭವಗಳ ಅಮೃತವನ್ನು ಪಡೆದುಕೊಳ್ಳುತ್ತೇವೆ. ಯಾವ ವ್ಯಕ್ತಿ ಬದುಕಿನಲ್ಲಿ ಅನುಭವಗಳನ್ನು ಹೆಚ್ಚೆಚ್ಚು ಪಡೆಯುತ್ತಾನೋ ಬದುಕೆಂಬ ಕುಲುಮೆಯಲ್ಲಿ ಬೇಯುತ್ತಾನೋ ಅಂದರೆ ಬಂಗಾರ ಯಾವ ರೀತಿ ಬೆಂದು ಹೊಳಪನ್ನು ಪಡೆದುಕೊಳ್ಳುತ್ತದೆಯೋ ಹಾಗೆಯೇ ವ್ಯಕ್ತಿ  ಕಷ್ಟಗಳಲ್ಲಿ ಬೆಂದಾಗ ಮಾತ್ರ ಬದುಕಿನಲ್ಲಿ ಒಳ್ಳೆಯ ವ್ಯಕ್ತಿತ್ವ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.  ಬರುವ ಕಷ್ಟಗಳನ್ನು ನಗುನಗುತ್ತ ಎದುರಿಸಬೇಕು. ಪ್ರತಿಯೊಬ್ಬರನ್ನು ಗೌರವದಿಂದ ಕಾಣಬೇಕು. “ನಾನು ಬೆಳೆಯುವುದರ ಜೊತೆಗೆ ಇನ್ನೊಬ್ಬರನ್ನು ಬೆಳೆಸುತ್ತೇನೆ..” ಎನ್ನುವ ಮುಖಾಂತರ ಪ್ರೀತಿಯನ್ನು ಹಂಚಬೇಕು. ಆಗ ಸಮಾಜದಲ್ಲಿರುವ ಪ್ರತಿಯೊಬ್ಬರ ನೋವುಗಳಿಗೆ ಸ್ಪಂದಿಸುವ ವ್ಯಕ್ತಿತ್ವವನ್ನು ಒಳಗೊಂಡಿರಬೇಕು.

ಹೀಗೆ ನಾವು ಸಮಾಜದಲ್ಲಿ ಬದುಕುವಾಗ ನಮ್ಮ ಮನಸ್ಸನ್ನು ಮೃದುಗೊಳಿಸಬೇಕು. ವಯಸ್ಸಿಗನುಗುಣವಾಗಿ ಮನಸ್ಸು ಮಾಗಬೇಕು. ಯಾವ ರೀತಿ ಮಾವಿನ ಮರದಲ್ಲಿ ಹೂವು,  ಈಚು, ಕಾಯಿಯಾಗಿ ನಂತರ ಹಣ್ಣಾಗಿ ಮಾಗುತ್ತದೆಯೋ…ಹಾಗೇಯೇ  ನಾವು ಕೂಡ ಬದುಕಿನಲ್ಲಿ ಮಾಗಬೇಕು. ಮಾಗಿದ ವ್ಯಕ್ತಿ ಹೊಳಪಾಗುತ್ತಾನೆ. ಅವನ ಅಂತರಂಗ ಮತ್ತು ಬಹಿರಂಗ ಎರಡರಲ್ಲಿಯೂ ವ್ಯಕ್ತಿತ್ವ ಒಂದಾಗಿರಬೇಕು. ಅರೀಷಡ್ವರ್ಗಗಳನ್ನು ಗೆಲ್ಲುವ ಮೂಲಕ ಮನಸ್ಸನ್ನು ತಂಪುಗೊಳಿಸಬೇಕು.  ಆಗ ನಮ್ಮ  ಮನಸ್ಸು  ಕನ್ನಡಿಯಂತೆ ಹೊಳೆಯುತ್ತದೆ. ಸಮಾಜದಲ್ಲಿ ಗುರುತಿಸಿಕೊಳ್ಳುತ್ತೇವೆ. ನಮಗೆ ಗೊತ್ತಿಲ್ಲದಂತೆ ನಮ್ಮ ವ್ಯಕ್ತಿತ್ವ ಎಲ್ಲಾ ಕಡೆ ಧನಾತ್ಮಕವಾಗಿ ಹರಡುತ್ತದೆ. ನಾವು ಬದುಕುವುದರ ಜೊತೆ ಜೊತೆಗೆ ಇನ್ನೊಬ್ಬರನ್ನು ಬದುಕಿಸುವ, ಇನ್ನೊಬ್ಬರ ಒಳಿತಿಗೆ ಬೆಳಕಾಗುವ ದೊಡ್ಡತನ ನಮ್ಮೊಳಗಿರಬೇಕು. ಇಲ್ಲವಾದರೆ ‘ಸ್ವಾರ್ಥ’ ಎಂಬ ಕೀಟ ನಮ್ಮನ್ನು ತಿಂದು ಹಾಕಿಬಿಡುತ್ತದೆ. ಎಲ್ಲಿಯವರೆಗೆ ನಾವು ಅತ್ಯಂತ ಸ್ವಾರ್ಥವಾಗಿ ಬದುಕುತ್ತೇವೆಯೋ ಅಲ್ಲಿಯವರೆಗೆ ನಮ್ಮ ನಾಶ ಕಟ್ಟಿಟ್ಟ  ಬುತ್ತಿ.  ನಾವು ನಾಶವಾಗುವುದರ ಜೊತೆಗೆ ನಮ್ಮನ್ನು ನಂಬಿದವರು, ಕುಟುಂಬ ವರ್ಗದವರು ಕೂಡ ಕಳಂಕಿತರಾಗುತ್ತಾರೆ. ಕಳಂಕಿತ ವ್ಯಕ್ತಿತ್ವ ಹೊಂದಿದ ನಾವುಗಳು ಎಷ್ಟೇ ಪ್ರಯತ್ನಪಟ್ಟರೂ  ಪುನಃ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ಆಗುವುದಿಲ್ಲ.  ಅದಕ್ಕಾಗಿ ಎಲ್ಲರಿಗೂ ಗೊತ್ತಿರುವ ಒಂದು ಪ್ರಸಿದ್ಧ ಆಂಗ್ಲ ಗಾದೆ ಅನುವಾದ ಹೀಗಿದೆ,
 “ಆರೋಗ್ಯವನ್ನು ಕಳೆದುಕೊಂಡರೆ ಸ್ವಲ್ಪವನ್ನು ಕಳೆದುಕೊಂಡಂತೆ,  ಸಂಪತ್ತನ್ನು ಕಳೆದುಕೊಂಡರೆ ಇನ್ನೊಂದಿಷ್ಟು ಕಳೆದುಕೊಂಡಂತೆ ಆದರೆ ಕ್ಯಾರೆಕ್ಟರ್ ವ್ಯಕ್ತಿತ್ವವನ್ನು ಕಳೆದುಕೊಂಡರೆ ಎಲ್ಲವನ್ನು ಕಳೆದುಕೊಂಡಂತೆ..”  ಹಾಗಾಗಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದರೆ ನಮ್ಮ ಮನಸ್ಸು ಮಾಗಬೇಕು.

ಹಾಗಾಗಿ ನಾವು ನಮ್ಮ ಶೀಲಾಚಾರಿತ್ರ್ಯ ಅಥವಾ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಾದರೆ, ಕೇವಲ  ಕತ್ತೆಯಂತೆ ವಯಸ್ಸಾದರೆ ಸಾಲುವುದಿಲ್ಲ..! ವಯಸ್ಸಿಗೆ ತಕ್ಕಂತೆ ಮನಸ್ಸು ಮಾಗಬೇಕು. ಅನುಭವವಾಗಬೇಕು. ಸಮಾಜದ ಜೊತೆಗೆ ಎಲ್ಲರೊಂದಿಗೆ ಹೊಂದಾಣಿಕೆಯಿಂದ ಬದುಕಬೇಕು. ಅಂತಹ ಮೃದು ಮನಸ್ಸಿನವರು ನಾವೆಲ್ಲರಾಗೋಣ. ಫಲ ತುಂಬಿದ ಮರ ಯಾವ ರೀತಿ ಭೂಮಿಗೆ ಬಾಗುತ್ತದೆಯೋ…ಅದೇ ರೀತಿ  ಮಾಗಿದ ಮನಸ್ಸು ಕೂಡ ಯಾವಾಗಲೂ ಒಳ್ಳೆಯದರ ಕಡೆಗೆ ಬಾಗುತ್ತದೆ. ಅಂತಹ ಮನಸ್ಸು ನಮ್ಮದಾಗಲೆಂದು ಆಶಿಸುವೆ.


Leave a Reply

Back To Top