ರಂಗ ಸಂಗಾತಿ
ಗೊರೂರು ಅನಂತರಾಜು
ಪೂಜಾ ರಘುನಂದನ್ ಅವರಿಗೆ
ಕಿತ್ತೂರು ರಾಣಿ ಚೆನ್ನಮ್ಮ
ರಾಜ್ಯ ಪ್ರಶಸ್ತಿಯ ಸಂಭ್ರಮ-


ಹಾಸನದ ಪೂಜಾ ರಘುನಂದನ್ ಅವರಿಗೆ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ರಾಜ್ಯ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಹಾಸನದ ಕಲಾವಿದೆ, ಪತ್ರಕರ್ತೆ ಪೂಜಾ ರಘುನಂದನ್ ಅವರು ಆಯ್ಕೆ ಆಗಿ ಇಂದು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಾರ್ಚ್ 8ರಂದು ನೆಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕುಂದಾನಗರಿ ಬೆಳಗಾವಿಯಲ್ಲಿ ಜನಿಸಿದ ಪೂಜಾ ಬಾಲ್ಯದಿಂದಲೇ ಕ್ರೀಡಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪದಕಗಳನ್ನು ಪಡೆಯುವಲ್ಲಿ ಬೆಳಗಾವಿಗೆ ಕೀರ್ತಿ ತಂದಿದ್ದರು. ವಿವಾಹ ನಂತರ ಹಾಸನದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾದರು. ರಂಗಭೂಮಿ, ಸಮಾಜ ಸೇವೆ, ಪತ್ರಿಕಾರಂಗ, ಮಾಡಲಿಂಗ್ ,ಸಾಹಿತ್ಯ, ಸಂಗೀತ, ಸಂಘಟನೆ, ಆರೋಗ್ಯ, ಶಿಕ್ಷಣ, ಹೀಗೆ ಎಲ್ಲಾ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪೂಜಾ ರಘುನಂದನ್ ಬಹುಮುಖಿ ಪ್ರತಿಭೆ.
ಒಂದು ದಶಕದಿಂದ ರಂಗಭೂಮಿ ಕಲಾವಿದೆಯಾಗಿ, ತಂತ್ರಜ್ಞರಾಗಿ, ಸಂಘಟಕಿಯಾಗಿ ರಂಗಭೂಮಿ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿರುವ ಇವರು, ರಂಗ ಹೃದಯ ಎಂಬ ತಂಡದೊಂದಿಗೆ ಸಾಮಾಜಿಕ ಹಾಗೂ ಐತಿಹಾಸಿಕ ನಾಟಕಗಳಲ್ಲಿ ನಾಯಕಿಯಾಗಿ ಮತ್ತು ಪೋಷಕ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ಮಕ್ಕಳ ರಂಗಭೂಮಿಯ ಕಡೆಗೆ ಆಕರ್ಷಿತರಾದ ಇವರು ಹಾಸನದಲ್ಲಿ ಪ್ರಪ್ರಥಮ ಬಾರಿಗೆ ಕುಣಿಯೋಣು ಬಾರ ಎಂಬ ಮಕ್ಕಳ ರಂಗ ಶಿಬಿರವನ್ನು ಆರಂಭಿಸಿ, ಅದರ ನಿರ್ದೇಶಕರಾಗಿ ಯಶಸ್ವಿಯಾಗಿ ಮುನ್ನೆಡೆಸಿದ್ದಾರೆ.
ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆಯ ವ್ಯಾಪ್ತಿಯಲ್ಲಿನ ಸೆನ್ಸಾರ್ ಬೋರ್ಡ್ ನ ಪ್ಯಾನೆಲ್ ಅಡೈಸರ್ ಸದಸ್ಯರಾಗಿ 2 ವರ್ಷ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸ್ಮಶಾನ ಕಾಯುವ ಕಾರ್ಯ ಮಾಡುತ್ತಿರುವ ಮಹಿಳೆಯ ಜೀವನ ಕಥನಾಧಾರಿತ ಕೊನೆಯ ನಿಲ್ದಾಣ ಚಿತ್ರದ ನಾಯಕಿಯಾಗಿ ಅಭಿನಯಿಸಿ ಚಿತ್ರರಸಿಕರ ಮನಸೂರೆಗೊಂಡಿದ್ದಾರೆ. ಸುಮಾರು 10ಕ್ಕೂ ಹೆಚ್ಚು ಕಲಾತ್ಮಕ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಕೆ. ಸುಚೇಂದ್ರ ಪ್ರಸಾದ್ ಅಭಿನಯದ ಒಂದಾನೊಂದು ಕಾಲದಾಗ ಚಿತ್ರದಲ್ಲಿ ನಾಯಕಿಯಾಗಿ ಉತ್ತಮ ಅಭಿನಯ ನೀಡಿದ್ದು ಇದು ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಪ್ರದರ್ಶನ ಕಂಡಿದೆ.pr special ಯೂಟ್ಯೂಬ್ ಚಾನೆಲ್ ಮೂಲಕ ಹಾಸನದ ಅನೇಕ ಹೊಸ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿದ್ದಾರೆ. ಪರಿದೃಶ್ಯ ಅಂತಾರಾಷ್ಟ್ರೀಯ ಚಿತ್ರೋತ್ಸವವದ ಜ್ಯೂರಿಯಾಗಿ ಭಾಗವಹಿಸಿರುವ ಇವರು, ದೂರದರ್ಶನ ಚಂದನದ ವಿಜ್ಞಾನ ವಿಸ್ಮಯ ಸರಣಿ ಕಾರ್ಯಕ್ರಮಕ್ಕೆ ಧ್ವನಿದಾನ ಕಲಾವಿದೆಯಾಗಿ ನಾಡಿನಾದ್ಯಂತ ಖ್ಯಾತರಾಗಿದ್ದಾರೆ.
ಸಮಾಜಸೇವೆಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷೆಯಾಗಿ ಹಲವಾರು ಗಮನಾರ್ಹ ಕೆಲಸಗಳನ್ನು ಮಾಡಿದ್ದಾರಲ್ಲದೇ ಅನೇಕ ಸಮಾಜ ಸೇವಾ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಸಮಾಜಮುಖಿಯಾಗಿದ್ದಾರೆಇವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭೇಟಿ ಸಂವಾದದ ಅವಕಾಶ ದೊರೆತಿದೆ. ಕಲಾ ಸೇವೆಗಾಗಿ ಹಾಸನ ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರತಿಷ್ಠಿತ ಪ್ರಶಸ್ತಿ ಸನ್ಮಾನಗಳು ಇವರಿಗೆ ಒಲಿದು ಬಂದಿದೆ.
ಪ್ರಸ್ತುತ ಜಿಲ್ಲಾ ಆರೋಗ್ಯ ಸಮಿತಿಯ ಜಿಲ್ಲಾ ಸದಸ್ಯರಾಗಿ ಭ್ರೂಣಲಿಂಗ ಪತ್ತೆ ತಡೆಯುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇನ್ನರ್ ವೀಲ್ ಸಂಸ್ಥೆಯಲ್ಲಿ ಗೌರವ ಸದಸ್ಯೆಯಾಗಿ, ಸ್ಥಳೀಯ ದೈನಿಕ ಹೊಯ್ಸಳ ಪಥ ಪತ್ರಿಕಾ ಸಂಪಾದಕಿಯಾಗಿ, ಶ್ರೀವಿದ್ಯಾ ಪ್ರತಿಷ್ಠಾನದ ಅಧ್ಯಕ್ಷೆಯಾಗಿ, ರಂಗಹೃದಯ ತಂಡದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕುಟುಂಬ, ಸಾಂಸ್ಕೃತಿಕ ಲೋಕ ಹಾಗೂ ಸಮಾಜ ಸೇವೆ ಇದೆಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸುತ್ತಾ ನಾಡಿನಾದ್ಯಂತ ಹೆಸರು ಮಾಡಿರುವ ಪೂಜಾ ರಘುನಂದನ್ ಅವರ ಬಹುಮುಖಿ ಸಾಧನೆಯನ್ನು ಸರ್ಕಾರ
ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯವಾಗಿದೆ.

ಇವರ ಏಕ ವ್ಯಕ್ತಿ ನಟನೆಯ ವಿಶಿಷ್ಟ ಪ್ರಯೋಗ ́ತಾಯಿಯಾಗುವುದೆಂದರೆʼ
ತಮ್ಮ ಜೀವನದ ಏರಿಳಿತಗಳ ನಿಜ ಕಥೆಯನ್ನು ಆಧರಿಸಿದ ತಾಯಿಯಾಗುವುದೆಂದರೆ ಎಂಬ ಏಕವ್ಯಕ್ತಿ ರಂಗ ಪ್ರಯೋಗವನ್ನು ನಾಡಿನ ಖ್ಯಾತ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದಲ್ಲಿ ಯಶಸ್ವಿಯಾಗಿ ರಂಗಕ್ಕೆ ತಂದಿದ್ದು, ಇದು ಈಗಾಗಲೇ ರಾಜ್ಯಾದ್ಯಂತ 29 ಪ್ರಯೋಗಗಳನ್ನು ಕಂಡಿದೆ. ಕಾನೂನಾತ್ಮಕವಾಗಿ ಮಕ್ಕಳನ್ನು ದತ್ತು ಪ್ರಕ್ರಿಯೆ ಕುರಿತ ಈ ಪ್ರಯೋಗದಿಂದ ಸ್ಫೂರ್ತಿಗೊಂಡ ಹಲವರು ಮಕ್ಕಳನ್ನು ದತ್ತು ಪಡೆಯುವ ಪ್ರಕ್ರಿಯೆಗೆ ಮುಂದಾಗಿದ್ದಾರೆ ಎಂಬುದು ಗಮನಾರ್ಹ. ಈ ರಂಗಪ್ರಯೂಗ ರಾಜ್ಯದ ಪ್ರಮುಖ ರಂಗಕರ್ಮಿಗಳು, ಕಲಾವಿದರು ಹಾಗೂ ಕಲಾಭಿಮಾನಿಗಳಿಂದ ಪ್ರಶಂಸೆ ಪಡೆದಿದ್ದು, ಈ ರಂಗ ಪ್ರಯೋಗದಿಂದ ಬಂದಂತ ಹಣವನ್ನು ಕ್ಯಾನ್ಸರ್ ರೋಗಿಗಳಗೆ ಸಹಾಯಧನ, ಶಾಲೆ ನವೀಕರಣಕ್ಕೆ ಸಹಾಯ ಸೇರಿದಂತೆ ವಿವಿಧ ಜನಪರ ಕಾರ್ಯಕ್ಕೆ ನೀಡುತ್ತಿರುವುದು ಪೂಜಾ ಅವರ ರಂಗ ಹಾಗೂ ಸಾಮಾಜಿಕ ಬದ್ದತೆಯಾಗಿದೆ.

ಗೊರೂರು ಅನಂತರಾಜು,
