ಮಹಿಳಾದಿನ-ಸುಲೋಚನಾ ಮಾಲಿಪಾಟೀಲ

ಕಲಿತ ಹೆಣ್ಣಿನ ಜೀವನ ಜಗದಾಗ
ಸಾಗೈತಿ ನೋಡ ಜಾರಿ ಬೀಳದಂಗ

ಹೆಣ್ಣಿನ ಜನ್ಮ ಕೀಳಾಗಿ ತಿಳಿಯಬ್ಯಾಡ
ಹೆತ್ತು ಹೊತ್ತವಳೆಂಬುದು ಮರಿಯಬ್ಯಾಡ
ಹುಟ್ಟಿದ ಮನೆಯ ಬೆಳಗುವ ಜ್ಯೋತಿ
ಕೊಟ್ಟ ಮನೆಯ ನಂದಾದೀಪದ ಪಣತಿ

ಪುರುಷರ ಮಧ್ಯೆ ಮೂಲೆಗುಂಪಾದಾಕಿ
ಬಕಪಕ್ಷಿಯಂಗ ಪ್ರೀತಿಗೆ ಬಾಯಿತೆರೆದಾಕಿ
ಹೆಣ್ಣಾದರೆನು ಅವಳ ಜೀವ ತುಡಿತೈತಿ
ಹೆಣ್ಣಿಲ್ಲದ ಮನೆ ಬರಿ ಕರಿ ಕಗ್ಗತ್ತಲಾಗೈತಿ

ಜಗದ ಬೆಳಕು ತೋರಿಸಿ ಸಲುಹಿದಾಕೆ
ನಾಲ್ಕು ಗೊಡೆ ಮಧ್ಯೆ ಸೆರೆಯಾದಾಕೆ
ಪಂಜರದ ಗಿಣಿಯಂತೆ ಚಡಪಡಿಸುವಾಕೆ
ಅಂಧ ದುರಳರ ಮಧ್ಯ ನರುಳುವಾಕೆ

ನಮಗೆ ಎರಡು ಕಣ್ಣು ಆತ ಕೊಟ್ಟವನು
ಹೆಣ್ಣಿಗೆ ಎರಡು ಮನೆ ಬಾಳು ಇಟ್ಟಾನು
ಇಬ್ಬರ ಮನೆಯೊಳಗೆ ಹಾಸು ಹೊಕ್ಕವಳು
ಕರುಣೆ ಪ್ರೀತಿ ಹರಿಸಿ ಮನವ ಗೆದ್ದವಳು

ಹೆಣ್ಣಿಗ್ಯಾಕೆ ಈ ಲೋಕದಾ ಕಟ್ಟುಪಾಡ
ಅವಳಿಗೂ ನಿಮ್ಮಂತೆ ಬದುಕೈತಿ ನೋಡ
ನೆರಳಿಗೆ ಅಂಜಿ ಬದುಕ ಕಟ್ಟಿಕೊಂಡಾಳ
ಮತ್ಯಾಕೆ ಹೆಣ್ಣಿನ ಸುತ್ತ ಕಟ್ಯಾರ ಜಾಲಿ ಬೇಲ

ಕಲಿತು ಹೆಣ್ಣು ಜಗದ ಕಣ್ಣಾಗಿ ಕಂಡಾಳ
ಒಲಿದರೆ ನಾರಿ ಮುನಿದರೆ ಹೆಮ್ಮಾರಿ ಆಗ್ಯಾಳ
ದುರಂಹಕಾರಿಗಳ ಜಂಬ ಇಳಿಸಿ ನಡೆದಾಳ
ಕೈಮುಗಿದವರಿಗ ಮನತುಂಬ ಹರಸ್ಯಾಳ

ಎಲ್ಲ ರಂಗದೊಳು ಬೆರೆತುಹೋದಾಕಿ
ಪುರುಷಂಗೆ ಸಮನಾಗಿ ಎದೆತಟ್ಟಿನಿಂತಾಕಿ
ಅಂಜದ ಗುಂಡಿಗೆಯ ಹೆಣ್ಣಾಗಿ ಬದುಕಿ
ಎದುರಿನ ವೈರಿಗಳ ಬೆವರಾ ಇಳಿಸಿದಾಕಿ


Leave a Reply

Back To Top