ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ…
ಒಂದು ವಿಭಿನ್ನ ನೋಟ

ಹೆಣ್ಣಲ್ಲವೇ ನಮ್ಮನೆಲ್ಲ ಹಡೆದ ತಾಯಿ ಹೆಣ್ಣಲ್ಲವೇ ನಮ್ಮನೆಲ್ಲ ಪೊರೆದವಳು…. ಹೆಣ್ಣು ಹೆಣ್ಣೆಂದೇತಕ್ಕೆ ಬೀಳುಗೈವರು ಕಣ್ಣು ಕಾಣದ ಗಾವಿಲರು
ಎಂದು ಸಂಚಿಯ ಹೊನ್ನಮ್ಮ ತನ್ನ ಹದಿಬದೆಯ ಧರ್ಮ ಎಂಬ ಕೃತಿಯಲ್ಲಿ ಬರೆದಿದ್ದಾಳೆ.
ನಿಜ ಹೆಣ್ಣು ನಮ್ಮನ್ನೆಲ್ಲ ಹಡೆದ ತಾಯಿ, ಭೂಮಿ ತೂಕದ ಸಹನೆಯನ್ನು ಹೊಂದಿರುವ ಸಹನಶೀಲೆ,
ಮನದಲ್ಲಿ ಜ್ವಾಲಾಮುಖಿಯಷ್ಟು ನೋವುಗಳು ಇದ್ದರೂ ಕೂಡ ಹೊರಗೆ ನಸು ನಗುವ ಸುಹಾಸಿನಿ, ಗಂಡ ನೂರೊಂದು ತಪ್ಪು ಮಾಡಿದರೂ ಕ್ಷಮಿಸುವ ಕ್ಷಮಯಾಧರಿತ್ರಿ, ಮನೆಯ ಮತ್ತು ಹೊರಗಿನ ಹತ್ತು ಹಲವು ಕೆಲಸಗಳನ್ನು ಮಾಡುವ ಕಾರ್ಯೇಷು ದಾಸಿ,
ತನ್ನ ಕೈಯಲ್ಲಿ ಬಿಡಿಗಾಸನ್ನು ಉಳಿಸಿಕೊಳ್ಳದಿದ್ದರೂ
ಮನೆಯ ಎಲ್ಲಾ ಚಿಕ್ಕ ಪುಟ್ಟ ಆಯವ್ಯಯಗಳನ್ನು
ನಿಭಾಯಿಸಿಕೊಂಡು ಹೋಗುವ ಕರಣೇಶು ಮಂತ್ರಿ,
ತನ್ನ ಹೊಟ್ಟೆ ಹಸಿದಿದ್ದರೂ ಕೂಡ ಹಸಿವಿನ ಸಂಕಟದಿಂದ ತಲೆ ತಿರುಗುತ್ತಿದ್ದರೂ ಕೂಡ ಕುಟುಂಬದ ಎಲ್ಲ ಸದಸ್ಯರಿಗೂ, ಅತಿಥಿ, ಅಭ್ಯಾಗತರಿಗೂ ಉಣ ಬಡಿಸುವ ಭೋಜ್ಯೇಶು ಮಾತಾ, ಮನಸ್ಸು ಅದೆಷ್ಟೇ ನೋವಿನಲ್ಲಿ ಅದ್ದಿ ತೆಗೆದಂತಿದ್ದರೂ ಸುಂದರವಾಗಿ ಅಲಂಕರಿಸಿಕೊಂಡು ನೋಡುವವರ ಕಣ್ಣಿಗೆ ತಂಪನ್ನೆರೆಯುವ ರೂಪೇಶು ಲಕ್ಷ್ಮಿ. ಹೌದು ಈ ಎಲ್ಲವೂ ಹೆಣ್ಣಿನ ಗುಣಗಳು ನಿಜ….. ಆದರೆ ಜಗತ್ತಿನ ಇತರ ಜನರ ದೃಷ್ಟಿಯಲ್ಲಿ ಮಾತ್ರ.
ಖುದ್ದು ಆಕೆ ಏನು ಎಂಬುದರ ಅರಿವು ಆಕೆಗೆ ಇದ್ದಿದ್ದರೆ ಈ ಜಗತ್ತು ಈಗ ಇರುವಷ್ಟು ಆರಾಮವಾಗಿ ಇರುತ್ತಿರಲಿಲ್ಲ ಎಂಬುದು ಕೂಡ ಅಷ್ಟೇ ಸತ್ಯ.
ತಮ್ಮೆಲ್ಲ ಅನುಕೂಲತೆಗಳಿಗಾಗಿ ಹೆಣ್ಣು ಮಕ್ಕಳ ಮೇಲೆ ಅನಾದಿಕಾಲದಿಂದಲೂ ಈ ಎಲ್ಲಾ ಉಪಾಧಿಗಳನ್ನು ಹೇರಿ, ಆ ಎಲ್ಲವುಗಳನ್ನು ಆಕೆ ಅನೂಚಾನವಾಗಿ ನಡೆಸಿಕೊಂಡು ಬಂದರೆ ಮಾತ್ರ ಆಕೆ ಸದ್ಗೃಹಿಣಿ, ಗರತಿ ಸದಾಚಾರಿಣಿ, ಒಳ್ಳೆಯ ಮಹಿಳೆ ಎಂದೆನಿಸಿಕೊಳ್ಳುವಳು ಎಂಬ ಬೇಶರತ್ತಾದ ಅಗೋಚರ ಒತ್ತಾಯವನ್ನು ಸಾಮಾಜಿಕವಾಗಿ ಆಕೆಯ ಮೇಲೆ ಹೇರಿದ್ದು ನಮ್ಮ ಈ ಸಮಾಜವೇ.
ಖಂಡಿತವಾಗಿಯೂ ಇದಾವುದೂ ತಪ್ಪಲ್ಲ….. ಈ ಎಲ್ಲವನ್ನು ಆಕೆ ಯಾವುದೇ ರೀತಿಯ ಬಲವಂತವಿಲ್ಲದೆ
ಒಪ್ಪಿಕೊಂಡು ಬದುಕಿನಲ್ಲಿ ಅಪ್ಪಿಕೊಂಡರೆ ಅದನ್ನು ತಪ್ಪು ಎಂದು ಹೇಳುವ ದಾಷ್ಟಿಕತೆ ನನ್ನದಲ್ಲ. ಹೆಣ್ಣು ಮಗಳಾಗಿ ನಾನು ಕೂಡ ಈ ಎಲ್ಲಾ ಸಂಪ್ರದಾಯಗಳನ್ನು ಒಪ್ಪಿ ಅಪ್ಪಿಕೊಂಡಿರುವವಳು….. ಆದರೆ ನನ್ನ ಮನಸ್ಸಿಗೆ ಒಗ್ಗದ ಕೆಲ ವಿಚಾರಗಳನ್ನು ಬಹಳಷ್ಟು ಬಾರಿ ಸೌಮ್ಯವಾಗಿ, ಕೆಲವೊಮ್ಮೆ ನಿಷ್ಠುರವಾಗಿ ಮತ್ತೆ ಕೆಲವೊಮ್ಮೆ ಜೋರಾಗಿ ಕೂಗಿ ಹೇಳುವ ಅನಿವಾರ್ಯತೆ ಉಂಟಾದರೆ ಅದಕ್ಕೂ ಸಿದ್ಧ. ಶರಣರು ಹೇಳುವಂತೆ ‘ಬೇಕಾದರೆ ಬೆರೆತು ನಡೆ ಬೇಡವಾದರೆ ಸರಿದು ನಡೆ’ ಎಂಬಂತೆ ಹೆಣ್ಣು ಮಕ್ಕಳು ಬಿಡುಬೀಸಾಗಿ ತಮ್ಮ ಬದುಕಿನ ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಾದರೆ ಅದಕ್ಕಿಂತ ಹೆಚ್ಚಿನದೇನೂ ಇಲ್ಲ.
21ನೇ ಶತಮಾನದ ಅಂಚಿಗೆ ಬಂದರೂ ಕೂಡ ಹೆಣ್ಣು
ಮಕ್ಕಳ ಸ್ಥಾನಮಾನದಲ್ಲಿ, ಆರ್ಥಿಕ ಸ್ಥಿತಿಗತಿಗಳಲ್ಲಿ, ಸಾಮಾಜಿಕ ನೀತಿ ನಿಯಮಗಳಲ್ಲಿ ಕೇವಲ ಎರಡು ದಶಕಗಳಲ್ಲಿ ಅತಿ ಹೆಚ್ಚಿನ ಬದಲಾವಣೆಗಳನ್ನು ಕಂಡುಕೊಂಡಿರುವ ನಾವುಗಳು ಇನ್ನಾದರೂ ಹೆಣ್ಣು ಮಕ್ಕಳನ್ನು ನೋಡುವ ರೀತಿ ಬದಲಾಗಲೇಬೇಕು.
ಆಕೆಯ ಪಾಲಕರಾಗಿ ಆಕೆಯ ಅಭ್ಯುದಯವನ್ನು ನಾವು ಬಯಸಿದರೂ ಕೂಡ ಆಕೆ ಸ್ವಂತ ನಿರ್ಣಯಗಳನ್ನು ತೆಗೆದುಕೊಳ್ಳಲು ಇಂದಿಗೂ ಹಿಂಜರಿಯಲು ಕಾರಣ ನಮ್ಮ ವಿಪರೀತ ಕಾಳಜಿ ಮುಂಜಾಗ್ರತೆಗಳು. ಆಕೆಯನ್ನು ಮುಚ್ಚಟೆಯಿಂದ
ಬೆಳೆಸಿದರಷ್ಟೇ ಸಾಲದು, ಆಕೆಯ ಆಸೆ ಆಕಾಂಕ್ಷೆಗಳನ್ನು ಪೂರೈಸಿದರಷ್ಟೇ ಸಾಲದು ಬದಲಾಗಿ ಆಕೆಯನ್ನು ಓರ್ವ ಗಂಡು ಮಗನಿಗೆ ಕೊಡುವಷ್ಟೇ ಸ್ವತಂತ್ರವನ್ನು, ಆರ್ಥಿಕ ಸಾಮಾಜಿಕ ಹಕ್ಕು ಬಾಧ್ಯತೆಗಳನ್ನು, ಕರ್ತವ್ಯಗಳನ್ನು ಕೊಡಬೇಕು.
ನಮ್ಮ ದೇಶದ ಕಾನೂನಿನಲ್ಲಿ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲಿದೆ, ಆದರೆ ಇಂದಿಗೂ ತನ್ನ ತಂದೆಯ ಆಸ್ತಿಯಲ್ಲಿ ಪಾಲನ್ನು ಬೇಡುವ ಹೆಣ್ಣು ಮಕ್ಕಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ನಮಗಿದೆಯೇ?
ನಿಜ, ತಂದೆ ತಾಯಿಯ ಜವಾಬ್ದಾರಿಯನ್ನು ಅವರ ಮುಪ್ಪಿನ ಕಾಲದಲ್ಲಿ ಹೆಣ್ಣು ಮಕ್ಕಳು ಹೊರಲಿಕ್ಕಿಲ್ಲ. ಆಕೆಯ ಪತಿಯ ಮನೆಯ ಪರಿಸ್ಥಿತಿಗಳಲ್ಲಿ ಆಕೆಗೆ ಅದು ಸಾಧ್ಯವಾಗಲಿಕ್ಕಿಲ್ಲ ಮಗನಷ್ಟೇ ಸರಿಸಮನಾಗಿ ಮಗಳಿಗೆ ಆಸ್ತಿಯನ್ನು ಕೊಡಲು ಸಾಧ್ಯವಾಗದೇ ಹೋದರೂ ಕೂಡ ತನ್ನದು ಎಂದು ಹೇಳಿಕೊಳ್ಳಲು ಹಕ್ಕಿನಿಂದ ಬಳಸಲು ಸಾಧ್ಯವಾಗುವಷ್ಟು ಆಸ್ತಿಯನ್ನು ಆಕೆ ಪಡೆದ ಮೇಲೂ ಕೂಡ ಆಕೆಯನ್ನು ಮೊದಲಿನಷ್ಟೇ ಪ್ರೀತಿ ಆದರಗಳಿಂದ ನೋಡಿಕೊಳ್ಳುತ್ತೇವೆಯೇ? ಖಂಡಿತವಾಗಿಯೂ ಇಲ್ಲ. ಹೆಣ್ಣು ಮಕ್ಕಳಲ್ಲಿ ಪರಿಕೀಯ ಪ್ರಜ್ಞೆ ಹುಟ್ಟಿಸುವ ಇಂತಹ ಪಾಲಕರ, ಅಣ್ಣ ತಮ್ಮಂದಿರ ನಡೆಗಳು ಪ್ರಶ್ನಾರ್ಹವಾಗಿ ಉಳಿಯುವುದಿಲ್ಲವೇ?
ಹುಟ್ಟಿದ ಮನೆಯಲ್ಲಿ ಪ್ರೀತಿ ಮಮತೆಯಲ್ಲಿ ಬೆಳೆಯುವ ಹೆಣ್ಣು ಮಗಳು ಶೈಕ್ಷಣಿಕವಾಗಿ ಮುಂದುವರೆದು ತನ್ನ ಕಾಲ ಮೇಲೆ ತಾನು ನಿಂತರೂ ಕೂಡ ಮದುವೆಯಾದ ನಂತರ ಪತಿಯ ಮನೆಯವರು ಉದ್ಯೋಗ ಮಾಡುವುದು ಬೇಡ, ಮನೆ ಮಕ್ಕಳು ಕುಟುಂಬವನ್ನು ನೋಡಿಕೊಂಡು ಮನೆಯಲ್ಲಿಯೇ ಇರಲಿ ಎಂದಾಗ ಅದನ್ನು ಅನಿವಾರ್ಯವಾಗಿಯಾದರೂ ಒಪ್ಪುವ ಹೆಣ್ಣು ಮಕ್ಕಳು ನಮ್ಮಲ್ಲಿ ಇದ್ದಾರೆ…. ಆದರೆ ಇದೇ ಮಾತನ್ನು ಪುರುಷರಿಗೆ ಎಂದಾದರೂ ನಿನ್ನ ಪತ್ನಿ ಕೆಲಸ ಮಾಡಿಕೊಂಡಿರಲಿ ನೀನು ಮನೆ ಮತ್ತು ಮಕ್ಕಳನ್ನು ನೋಡಿಕೋ ಎಂದು ಹೇಳಿದ್ದಾರೆಯೇ? ಹಾಗೆ ಮನೆ ಮತ್ತು ಮಕ್ಕಳನ್ನು ನಿರ್ವಹಿಸಿದ ಗಂಡಸರ ನಡೆಯನ್ನು ಒಪ್ಪಿದ್ದಾರೆಯೇ? ಉದ್ಯೋಗಂ ಪುರುಷ ಲಕ್ಷಣಂ ಎಂದು ಹೆಮ್ಮೆಯಿಂದ ಹೇಳುವ ಅವರು ಗೃಹ ಕೃತ್ಯವನ್ನು ಮಾಡಿಕೊಂಡು ಹೋಗುವ ಹೆಣ್ಣು ಮಕ್ಕಳನ್ನು ನಿಕೃಷ್ಟವಾಗಿ ಕಾಣುವುದೇಕೆ? ಕೌಟುಂಬಿಕ ಜವಾಬ್ದಾರಿ, ಮನೆಯ ಎಲ್ಲಾ ಆಗು ಹೋಗುಗಳ ನಿರ್ವಹಣೆಯನ್ನು ಮಾಡುವುದು ಅಷ್ಟೇನೂ ಸುಲಭದ ಮಾತಲ್ಲ ಎಂಬ ಅರಿವಿದ್ದರೂ ಕೂಡ ಹೆಣ್ಣು ಮಕ್ಕಳಿಗೆ ಅವಹೇಳನ ಮಾಡುವುದು ತಪ್ಪಿಲ್ಲ. ತಮ್ಮ ಅನುಕೂಲಕ್ಕಾಗಿ ನೀನೇ ಕುಟುಂಬದ ಯಜಮಾನಿ ಎಂದು ಪೂಸಿ ಹೊಡೆಯುತ್ತಾರೆ. ಆದರೆ ಅಪ್ಪಿತಪ್ಪಿ ಆಕೆ ಏನಾದರೂ ತುಸು ಹಣವನ್ನು ಅಪೇಕ್ಷಿಸಿದಾಗ ಮನೆಯ ಹಿತ್ತಲಲ್ಲಿ ದುಡ್ಡಿನ ಗಿಡ ನೆಟ್ಟಿಲ್ಲ, ಹೊರಗೆ ಹೋಗಿ ದುಡಿದುಕೊಂಡು ಬಾ, ಆಗ ಗೊತ್ತಾಗುತ್ತದೆ ನಿನಗೆ! ಎಂದು ಎಷ್ಟು ಜನ ಗಂಡಸರು ಹೇಳಿಲ್ಲ.
ಮನೆಯ ಮತ್ತು ಕೌಟುಂಬಿಕ ಜವಾಬ್ದಾರಿಗಳಿಂದ ತುಸು ಹೊತ್ತು ಮುಕ್ತಳಾಗಿ ತನ್ನದೇ ಆದ ಸ್ನೇಹಿತರ ವಲಯವನ್ನು ಸೃಷ್ಟಿಸಿಕೊಂಡು ಕೆಲ ಸಮಯವನ್ನು ಆಕೆಯೂ ಕಳೆಯಲಿ ಎಂದು ಯಾರಾದರೂ ಹೆಣ್ಣು ಮಕ್ಕಳಿಗೆ ಹೇಳಿದ್ದಾರೆಯೇ? ತನ್ನ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಮನೆ ಮತ್ತು ಮಕ್ಕಳನ್ನು ನೋಡಿಕೊಂಡಿದ್ದಾರೆಯೇ? ಯಾರಾದರೂ ಏಕೆ! ಸ್ವತಹ ಆಕೆಯೇ ಎಂದಾದರೂ ತನ್ನ ವೈಯುಕ್ತಿಕ ಬದುಕಿನ ಕುರಿತು ಯೋಚಿಸಲು ಸಾಧ್ಯವಾಗಿದೆಯೇ?
ಮದುವೆಯಾಗುವವರೆಗೂ ತನ್ನ ವೈಯುಕ್ತಿಕತೆಯ ಕುರಿತು ಯೋಚಿಸುವ ಹೆಣ್ಣುಮಗಳು ಮದುವೆಯಾದ ನಂತರ ಗಂಡನ, ಕುಟುಂಬದ ಮತ್ತೆ ತನ್ನ ಮಕ್ಕಳ ಕುರಿತು ಯೋಚಿಸುವಲ್ಲಿಯೇ ಆಕೆಯ ಬದುಕಿನ ಬಹು ಭಾಗ ಮುಗಿದು ಹೋಗಿರುತ್ತದೆ….. ಗಂಡ ಸಹೃದಯಿಯಾಗಿದ್ದರೆ ಆಕೆಯ ಬಾಳು ಸಹನೀಯ. ಎಲ್ಲಾದರೂ ನಾಲ್ಕು ತೀರ್ಥಕ್ಷೇತ್ರಗಳು, ಪ್ರೇಕ್ಷಣೀಯ ಸ್ಥಳಗಳ ದರ್ಶನ ಮಾಡಿಸಿದ್ದರೆ ಸರಿ, ಇಲ್ಲವಾದರೆ ಎಲ್ಲವನ್ನು ದೂರದರ್ಶನದಲ್ಲಿಯೇ ನೋಡುವ ಭಾಗ್ಯ ಆಕೆಯದು.
ಇವೆಲ್ಲದರ ಮಧ್ಯದಲ್ಲಿ ಏನನ್ನಾದರೂ ಆಕೆ ಬಯಸಿದರೆ
ನಿಮ್ಮಪ್ಪನ ಮನೆಯಿಂದ ಗಂಟು ತಂದಿರುವೆಯ?
ನಿಮ್ಮ ಅಪ್ಪನ ಮನೆಯಿಂದ ತಗೊಂಡು ಬಾ ಎಂಬ ಮಾತನ್ನು ಮುದುಕಿಯಾದರೂ ಆಕೆ ಕೇಳಿಸಿಕೊಳ್ಳುವ ಸೌಭಾಗ್ಯ?
ಇನ್ನು ಮಕ್ಕಳಿಂದ ನಿರೀಕ್ಷಿಸುವ ಹೊತ್ತಿಗೆ ಅವರು ಮದುವೆಯಾಗಿ ಅವರ ಸಂಸಾರ ದೊಡ್ಡದಾಗಿ ತಾಯಿಯಾದಾಕೆ ಮಕ್ಕಳನ್ನು ನೋಡಿಕೊಳ್ಳಲು ಮಾತ್ರ ಬೇಕು, ಆಕೆಯ ಕಷ್ಟ ಸುಖಗಳು ನಮಗೆ ಬೇಡ ಎಂಬಂತಾದರೆ ಆಕೆ ಮತ್ತೆ ಅತಂತ್ರಳೇ.
ತಮಾಷೆಗಾಗಿಯಾದರೂ ಕೆಲವೊಮ್ಮೆ ಕೆಲವು ಮಾತುಗಳು ಆಕೆಯನ್ನು ನೋಯಿಸುತ್ತವೆ ಎಂಬ ಅರಿವನ್ನು ಹೊಂದಿರದ ಬಹಳಷ್ಟು ಜನರು ನಮ್ಮ ಸಮಾಜದಲ್ಲಿ ಕುಟುಂಬದಲ್ಲಿ ಇದ್ದೇ ಇರುತ್ತಾರೆ.
ಒಟ್ಟಿನಲ್ಲಿ ಹುಟ್ಟಿದ ಮನೆಯಲ್ಲಿ, ಮೆಟ್ಟಿದ ಮನೆಯಲ್ಲಿ ಆಕೆ ಅತಂತ್ರಳಾಗಿಯೇ ಬದುಕುವ ಪರಿಸ್ಥಿತಿ ಇದ್ದು, ಕೆಲಸ ಮಾಡಲು ಇಡೀ ಮನೆಯೇ ಆಕೆಯದಾದರೂ ಕೂಡ ವಾಸ್ತವದಲ್ಲಿ ಮನೆಯ ಒಂದೇ ಒಂದು ಭಾಗವೂ ಆಕೆಯದಲ್ಲ ಎಂಬ ನೋವು ಆಕೆಯನ್ನು ಸದಾ ಕಾಡುತ್ತದೆ.
ಹೆಣ್ಣು ಮಗಳನ್ನು ಅಬಲೆ, ಸಬಲೆ, ಕೋಮಲೆ ಎಂದೆಲ್ಲಾ ಕರೆದು ಆಕೆಯ ರಕ್ಷಣೆಗೆ ಧಾವಿಸುವ ಬದಲು
ನಮ್ಮ ಮನೆ ಮನಗಳಲ್ಲಿ ಆಕೆಯನ್ನು ಕೂಡ ಓರ್ವ ಮನುಷ್ಯಳು, ಆಕೆಗೂ ನಮ್ಮಂತೆಯೇ ಮನಸ್ಸಿದೆ, ಆಕೆಯ ಮನಸ್ಸಿನಲ್ಲಿಯೂ ಹತ್ತು ಹಲವು ತಾಕಲಾಟಗಳಿವೆ. ಆಕೆಯು ಕೂಡ ಪುರುಷರಷ್ಟೇ ಜೀವನದಲ್ಲಿ ಆರ್ಥಿಕ, ಶೈಕ್ಷಣಿಕ, ರಾಜಕೀಯ, ಸಾಮಾಜಿಕ, ಔದ್ಯೋಗಿಕ ಮತ್ತು ಸೇವಾ ವಲಯಗಳಲ್ಲಿ ಕಾರ್ಯನಿರ್ವಹಿಸಲು ಸನ್ನದ್ಧಳಾಗಿದ್ದಾಳೆ ಎಂದು ಏಕೆ ಯೋಚಿಸುವುದಿಲ್ಲ. ಈಗಿರುವಂತೆಯೇ ಹೆಣ್ಣು ಮಕ್ಕಳು ಮುಂದೆಯೂ ಇರುತ್ತಾರೆ ಎಂಬ ಯಾವುದೇ ಗ್ಯಾರಂಟಿಗಳನ್ನು ಸ್ವತಃ ಪಾಲಕರು ಕೊಡಲು ಸಾಧ್ಯವಾಗುತ್ತಿಲ್ಲ. ವಿದ್ಯಾವಂತ ಹೆಣ್ಣು ಮಕ್ಕಳು ತಮ್ಮ ಸುತ್ತಣ ಸಮಾಜದ ಆಗುಹೋಗುಗಳನ್ನು ನೋಡುತ್ತಿದ್ದು ಈಗಾಗಲೇ ವಿವಾಹವನ್ನು ತಮ್ಮೆಲ್ಲ ಸಂತೋಷಗಳಿಗೆ ಕಡಿವಾಣ ಹಾಕುವ ಬಂಧನ ಎಂಬಂತೆ ನೋಡುತ್ತಿದ್ದು ಮುಂಬರುವ/ಪ್ರಸ್ತುತ ದಿನಮಾನಗಳಲ್ಲಿ ತನ್ನ ವೈಯುಕ್ತಿಕ ಸ್ವಾತಂತ್ರ್ಯಕ್ಕಾಗಿ, ಸಾಮಾಜಿಕ ಸಮಾನತೆಗಾಗಿ ಕೂಗು ಹಾಕಬಹುದು.
ಹೆಣ್ಣು ಮಕ್ಕಳಿಗೆ ಕೇವಲ ಪ್ರೀತಿ, ವಿಶ್ವಾಸ, ಬಾಂಧವ್ಯ ಗಳ ಮಹತ್ವ, ಸಂವೇದನೆಗಳನ್ನು ಹೇಳಿಕೊಡುವ ಪಾಲಕರು ತಮ್ಮ ಗಂಡು ಮಕ್ಕಳಿಗೂ ಕೂಡ ಹೆಣ್ಣು ಮಕ್ಕಳೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಸೂಕ್ಷ್ಮ ಸಂವೇದನೆಗಳನ್ನು ಸಮಾನತೆಯ ಮನಸ್ಥಿತಿಯನ್ನು ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಪ್ರಜ್ಞೆಯನ್ನು ಕಲಿಸಿ ಕೊಡಲೇಬೇಕು.
ದಾಂಪತ್ಯ ಎಂಬುದು ಪತಿ ಹೇಳಿದ್ದನ್ನು ಸತಿಯು ಕೇಳುವ, ಪತಿಯ ಸಕಲ ಇಚ್ಛೆಗಳನ್ನು ಪತ್ನಿಯು ಪೂರೈಸುವ ಕೊಡುವ ತೆಗೆದುಕೊಳ್ಳುವ ವ್ಯವಹಾರವಾಗದೆ, ಬದುಕಿನ ಬಂಡಿಯನ್ನು ಸಾಗಿಸಲು ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಳ್ಳುವ, ಎಂತದ್ದೇ ತೊಂದರೆ ಇದ್ದರೂ ಕೂಡ ಜೊತೆಗೂಡಿ ಪರಿಹರಿಸಿಕೊಳ್ಳುವ, ನಾನು ನೀನು ಎಂಬ ಹೆಚ್ಚುಗಾರಿಕೆ ಇಲ್ಲದ ಬಾಂಧವ್ಯವಾಗಿ ಒಡ ಮೂಡಬೇಕು. ಒಬ್ಬರಿಗೊಬ್ಬರು ಪೂರಕವಾಗಿ ಬದುಕಿನಲ್ಲಿ ನೆಲೆ ನಿಲ್ಲಬೇಕು. ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಮಾನಸಿಕವಾಗಿ ಬೆಂಬಲವನ್ನು ನೀಡುವಂತಹ ವಾತಾವರಣವನ್ನು ಕಲ್ಪಿಸಬೇಕು. ಆಕೆ ಹೇಳದೆಯೂ ಕೂಡ ಆಕೆಯ ಬೇಕು ಬೇಡಗಳನ್ನು ಅರಿತು ಪೂರೈಸುವಂತಹ ಸೂಕ್ಷ್ಮ ಸಂವೇದನೆಗಳನ್ನುಳ್ಳ ಗಂಡು ಮಕ್ಕಳನ್ನು ಬೆಳೆಸಬೇಕು.
ಇಷ್ಟೆಲ್ಲಾ ಆದರೂ ತನ್ನಲ್ಲಿಲ್ಲದ ಗುಣಗಳನ್ನು ಮನೆಯವರ, ಸಮಾಜದ ಮತ್ತು ಜಗತ್ತಿನ ಜನರ ಒಪ್ಪುವಿಕೆಗಾಗಿ ಅಪ್ಪಿಕೊಳ್ಳುವುದರಿಂದಲೇ ಹೆಣ್ಣು ಮಕ್ಕಳನ್ನು ನಮ್ಮ ಸಂಸ್ಕೃತಿಯಲ್ಲಿ ಪೂಜಿಸುತ್ತಾರೆ, ಆರಾಧಿಸುತ್ತಾರೆ ಆದರೆ ಮನುಷ್ಯರಂತೆ ಅವರೊಂದಿಗೆ ವರ್ತಿಸುವುದಿಲ್ಲ.
ಹೆಣ್ಣು ಮಕ್ಕಳಿಗೆ ಮುಖ್ಯವಾಗಿ ಬೇಕಾಗಿರುವುದು ಆರಾಧನೆಯಲ್ಲ ತಮ್ಮನ್ನು ತಾವಿರುವಂತೆಯೇ ಸ್ವೀಕರಿಸುವ ಪ್ರೀತಿಸುವ ಒಡನಾಡುವ ಒಪ್ಪಿಕೊಳ್ಳುವ ಜಗತ್ತಿನಲ್ಲಿ ಆಕೆ ಬೆಚ್ಚಗೆ ಇರಲು ಬಯಸುತ್ತಾಳೆ.
ಅಂತಹ ಒಂದು ಸ್ವಸ್ಥ, ಸುಮಧುರ ಸಮಾಜದ ನಿರ್ಮಾಣಕ್ಕಾಗಿ ಕಾಯುತ್ತಿರುವ ಪ್ರತಿ ಹೆಣ್ಣು ಮಕ್ಕಳಿಗೂ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು
ವೀಣಾ ಹೇಮಂತಗೌಡ ಪಾಟೀಲ್
Super mam
Savita Deshmukh