ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ ಅವರ ಗಜಲ್

ಮಾತುಗಳೆಲ್ಲ ಮೌನದ ಮಡಿಲಲ್ಲಿ ಮಲಗಿಕೊಂಡಿವೆ
ಸ್ವರಗಳೆಲ್ಲ ಎಲ್ಲೋ ದೂರದಲಿ ಅಡಗಿಕೊಂಡಿವೆ
ಕೇಳದಾಗಿದೆಯಲ್ಲ ನನ್ನೆದೆಯ ದನಿಯು ನಿನಗೆ
ಕಂಬನಿ ಜಾರದಂತೆ ರೆಪ್ಪೆಗಳು ಮುಚ್ಚಿಕೊಂಡಿವೆ
ಕೂಡಿಟ್ಟ ಕನಸುಗಳ ರೆಕ್ಕೆಗಳು ಮುರಿದಿವೆ
ಚಿಗುರಿದ ಬಯಕೆಗಳು ಬಾಡಿ ಮುದುಡಿಕೊಂಡಿವೆ
ಒಳಗೊಳಗೆ ಬೆಂದು ಭಾವನೆಗಳು ಕುದಿಯುತಿವೆ
ಹೃದಯ ಬಟ್ಟಲಲಿ ನೋವಿನ ಹನಿಗಳು ತುಂಬಿಕೊಂಡಿವೆ
ಬೇಗಂಳ ಪ್ರೀತಿ ಜೇನಿನಲಿ ಗರಳವನು ಬೆರೆಸಿದೆ ನೀನು
ನನ್ನೊಲವ ಹೂಗಳು ವಿಷಮುಳ್ಳುಗಳಲಿ ಸಿಲುಕಿಕೊಂಡಿವೆ.
ಹಮೀದಾಬೇಗಂ ದೇಸಾಯಿ.ಸಂಕೇಶ್ವರ