ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
“ನೆಪ ಬೇಕೇನು ನಿನ್ನ ನೆನೆಯಲು”

ನೆಪ ಮಾತ್ರಕ್ಕೆ ನಿನ್ನ ನೆನೆಯುವುದಿಲ್ಲ ನಾನು
ಮರೆತರೆ ತಾನೆ ನೆನಪಾಗೋದು ಹೇಳು ನೀನು
ಎನ್ನ ಉಸಿರುಸಿರಲಿ ಬೆರೆತ ಭಾವ ನೀನು
ಸಪ್ತ ಜನ್ಮಕೂ ದೈವ ಬೆಸೆದ ಅನುರಾಗ ನೀನು
ಬುವಿಯಧರಕೆ ಮುತ್ತಿಡುವುದ ನೇಸರ ಮರೆವನೇನು
ಭಾನುವಿನುದಯಕೆ ನೈದಿಲೆಯರಳಲು ನೆಪ ಬೇಕೇನು
ಹೂ ಬನದ ದಾರಿಯ ಭೃಂಗ ಮರೆತು ಹುಡುಕುವುದೇನು
ಅರಳಿ ನಗುವ ಸುಮ ತಾ ಭ್ರಮರವ ಮರೆವುದೇನು
ನಿನ್ನ ನೆನೆಯಲು ಎನಗೆ ನೆಪ ಬೇಕಿಲ್ಲ ನೋಡು
ಎದೆಯಲಿ ಸದಾ ಪಲ್ಲವಿಸುತಿದೆ ನಿನ್ನೊಲವ ಹಾಡು
ಮನದಂಗಳದಿ ನಗುತಿದೆ ನಿನ್ನ ಪ್ರೀತಿಯ ಚಿತ್ತಾರ
ನಿನ್ನ ಮರೆಯದಂತೆ ಮಾರ್ದನಿಸುತಿದೆ ಕೋಗಿಲೆಯಿಂಚರ
ಮರೆತೂ ಮರೆಯಲಾರೆ ನಿನ್ನೊಲವ ಬೆಸುಗೆಯನು
ಪ್ರೇಮ ಜ್ಯೋತಿಯಲಿ ಬೆಳಗಿಸುವೆ ನೀ ಬರುವ ಹಾದಿಯನು
ನಿನ್ನ ನೆನೆಯಲು ಎನಗೆ ನೆಪ ಬೇಕಿಲ್ಲ ಪ್ರಿಯ ಗೆಳೆಯ
ಬ್ರಹ್ಮನೇ ಬರೆದಿರುವ ನಿನ್ನೊಂದಿಗೆ ನನ್ನ ಬಾಳ ಕಥೆಯ
ಮಧುಮಾಲತಿರುದ್ರೇಶ್ ಬೇಲೂರು

ಬರಹಗಾರರನ್ನು ಪ್ರೋತ್ಸಾಹಿಸುತ್ತಿರುವ ತಮಗೆ ತುಂಬು ಧನ್ಯವಾದಗಳು