
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
“ಹೇಳಿದಷ್ಟು ಯಾವುದು ಸುಲಭವಲ್ಲ”

ಚಿತ್ರಕೃಪೆ -ಶಿವಲೀಲಾ ಶಂಕರ್ ಫೇಸ್ ಬುಕ್
ಬದಲಾವಣೆ ಬರಬೇಕು ನಮ್ಮೊಳಗಿನ ಚಿಂತನೆಯನ್ನು ಹೊರಹಾಕಲು.
ಮನುಷ್ಯ ಜನ್ಮವೂ ಕೂಡ ಬದಲಾವಣೆಯ ರೂಪಾಂತರವೆಂದರೆ ತಪ್ಪಾಗಲಾರದು!.ಜೀವ ಜಗತ್ತಿನ ಅತಿ ದೊಡ್ಡ ಕೇಂದ್ರ ಬಿಂದು ಮಾನವ ಸಂಪನ್ಮೂಲ…. ಹೌದಾ? ಪ್ರಕೃತಿಯೇ ಅತಿ ದೊಡ್ಡ ಪ್ರಮಾಣದ ಸಂಪನ್ಮೂಲ… ಎಂದರೆ ಈಗಿನ ದಿನಮಾನದಲ್ಲಿ ಅದಕ್ಕೆ ಹೆಚ್ಚು ಪ್ರಸ್ತುತ ಭಾಗ ಎಂದು ಯಾರು ಕರೆಯಲು ಧೈರ್ಯ ಮಾಡಲಾರರು!. ವಾಸ್ತವ ಕೂಡ.ಕಣ್ತೆರೆದಷ್ಟು ದೂರ…ಕಾಂಕ್ರೀಟ್ ಕಾಡುಗಳು ಜಗದಗಲ ಆವರಿಸಿದಾಗ ನೈಜತೆಯ ಹಸಿರು ಎಲ್ಲಿ ಹುಡುಕುವುದು? ಹಾಗಾಗಿ ಜಗತ್ತು ವಿಸ್ಮಯ ರೀತಿಯಲ್ಲಿ ಬದಲಾಗುತ್ತಿದೆ.ಅದಕ್ಕೆ ತಕ್ಕಂತೆ ಜನಜೀವನವೂ ಕೂಡ ಬದಲಾಗುತ್ತಿದೆ.ವಿಚಾರಗಳು ವೈಚಾರಿಕತೆಯನ್ನು ಮೀರಿ ನಿಲ್ಲುತ್ತಿವೆ,ಹೀಗಾದಾಗ ತನಗಲ್ಲದ ರೀತಿಯಲ್ಲಿ ಬದುಕು ಕುರುಚಲು ಗಿಡದಂತೆ ಹಬ್ಬುತ್ತದೆ.ಇದನ್ನೆಲ್ಲ ಬದಿಗೊತ್ತಿ ಪ್ರಕೃತಿಯ ಸ್ವಾಧೀನಕ್ಕೆ ಒಗ್ಗುವುದಿದೆಯಲ್ಲ ಅದೇ ನಿಜವಾದ ಜೀವನ!. ಕಳೆದುಕೊಳ್ಳುವ ಮೊದಲು ಪಡೆದುಕೊಳ್ಳುವ ಮತ್ತು ಉಳಿಸಿ ಬೆಳೆಸಿಕೊಳ್ಳುವ ಮನಸ್ಥಿತಿ ಎಲ್ಲರಿಗೂ ಬಂದರೆ ಒಂದಿಷ್ಟು ಒಳಿತಾಗಬಹುದು.
ಕಳೆದದ್ದು ಕಳೆಯಿತು
ಉಳಿದಿದ್ದು ಉಳಿಯಿತು
ನಂಜಾಗಿದ್ದು ಸಜ್ಜಾಗಿತ್ತು
ನಂಟಿನೊಳಗೆ ಗಂಟಾಗಿತ್ತು
ಓದು ಓದಿದ್ದೆ ಬದುಕು
ಕಂಡುಕೊಂಡಷ್ಟು ಎಲ್ಲ ಸರುಕು..!
“ಮಸ್ತಕದ ತುಂಬ ಜ್ಞಾನ ತುಂಬಿರಬೇಕು”. ಅನುಭವದ ರೂಪ ತಾಳಿದಷ್ಟು ನೈಜ ಚಿಂತನೆ ತಾನಾಗಿ ಬೆಳೆದು ಬರುತ್ತದೆ ಎಂಬ ಅಂಶ ಗೊತ್ತಿದ್ದು,ನಾವುಗಳು ಕುಬ್ಜ ಪ್ರಪಂಚಕ್ಕೆ ನಾಂದಿ ಹಾಡುತ್ತಿರುವುದು ವಿಶೇಷವೆನಲ್ಲ.ಬಾಹ್ಯ ಜಗತ್ತು ಅಸ್ತಿತ್ವದಲ್ಲಿರುವುದು ಜ್ಞಾನದ ಹೊಂಬೆಳಕಲ್ಲಿ ಅಂದರೆ ತಪ್ಪಾಗದು.”ಹಣ ಆಸ್ತಿ ನನ್ನಲ್ಲಿಲ್ಲ,ಹತ್ತು ಸಾವಿರ ಪುಸ್ತಕಗಳಿವೆ” ಎಂಬ ಮಾತು ಫೇಸ್ ಬುಕ್ ನಲ್ಲಿ ಕಂಡಾಗ ವಿಡಿಯೋ ತುಂಬಾ ಇಷ್ಟ ಆತು…ಕಾರಣ ಪುಸ್ತಕ ಕೊಳ್ಳುವವರಿಲ್ಲ ಎಂಬ ಮಾತು ಆಗ್ಗಾಗ್ಗೆ ಕೇಳಿ ಬರುತ್ತಿರುತ್ತದೆ.ಪುಸ್ತಕದ ಅಂಗಡಿಯಲ್ಲಿ ಜನಜಂಗುಳಿ ಕಂಡಿದ್ದು ತುಂಬಾನೇ ಕಮ್ಮಿ!. ಹಾಗಂತ ಬರಹಗಾರರಿಗೇನು ಕಡಿಮೆಯಿಲ್ಲ.ಬರವಣಿಗೆ ನಮ್ಮ ಹಕ್ಕು…ಓದುಗರ ಮನಮೆಚ್ಚುವಂತೆ ಬರೆಯುವ ಕಲೆ ಒಲಿದವರ ಮಾತಿದು…ಓದುಗರು ಇರೋದ್ರಿಂದ ಲೇಖಕರಿಗೆ ಅದಮ್ಯ ಉತ್ಸಾಹ…ಕ್ಯಾಂಟೀನ್ ನಲ್ಲಿ ಪುಸ್ತಕ ಇಟ್ಟು ಹೋಟೆಲ್ ಗೆ ಬರುವವರು ಕಣ್ಣಾಡಿಸಿ,ಒಮ್ಮೆಯಾದರೂ ತಮಗಿಷ್ಟವಾದ ಪುಸ್ತಕ ಓದಲೆಂಬ ಸದಾಶಯ!. ಇದರೊಟ್ಟಿಗೆ ಕನ್ನಡ ಅಭಿಮಾನ,ಓದುಗರಿಗೆ ಉಚಿತ ಆಹ್ವಾನ!. ಇಂತಹ ಅಭಿಮಾನಿಗಳು ಕನ್ನಡ ಸಾಹಿತ್ಯದ ಪ್ರಚಾರದ ಜೊತೆಗೆ ಓದಿಗೆ ಪ್ರೇರಣೆ ನೀಡುವುದು ಹೆಮ್ಮೆಯ ಸಂಗತಿ…!.
ಮಕ್ಕಳಿಗೆ ಏನೆಲ್ಲ ಕೊಡಬಹುದು? ಪ್ರಪಂಚ ಅಂಗೈನಲ್ಲಿ ನಿಂತ ಅನುಭವ!. ಮಕ್ಕಳು ಈಗ ಮಕ್ಕಳಾಗಿ ಉಳಿದಿಲ್ಲ!. ಅವರು ರೋಬೋಟ್ ತರ,ಮಷೀನ್ ತರ,ಬಾಲ್ಯ ಅನುಭವಿಸುವ ಯಾವ ಸ್ವಾತಂತ್ರ್ಯ ಇಲ್ಲದ ರೀತಿಯಲ್ಲಿ ಬೆಳೆಸುತ್ತಿರುವುದು,ಆಘಾತಕಾರಿ ಸಂಗತಿ.ಎಷ್ಟೋ ಮಕ್ಕಳು ಮಾನಸಿಕ ಒತ್ತಡದಲ್ಲಿ ನಲುಗುತ್ತಿರುವುದು ಕಂಡು ಬಂದರೂ ಜಗತ್ತಿನ ಓಟದ ಮುಂದೆ ತಮ್ಮ ಮಕ್ಕಳು ಓಡಬೇಕು.ಜಯಿಸಬೇಕು ಎಂಬ ಧಾವಂತ..ತಪ್ಪಲ್ಲ..ಯಾವುದಾದರೂ ಅತಿಯಾದರೆ ಅದು ಒಳ್ಳೆಯದಲ್ಲ!. ” ಮನೆಯೆ ಮೊದಲ ಪಾಠ ಶಾಲೆ ಜನನಿ ತಾನೆ ಮೊದಲ ಗುರು” ಅಕ್ಷರಶಃ ಸತ್ಯ.”ಅಮ್ಮ” ಎಂಬ ಪದದ ಅರ್ಥ ಬದಲಾಗಿದೆ.ಪ್ರಪಂಚದ ಎಲ್ಲ ಅಸ್ತಿತ್ವ ಅಡಗಿರುವುದು ಈ ತಾಯಿಯ ಒಡಲಲ್ಲಿ. ಮಕ್ಕಳಿಗೆ ಅವಳ ಕೃಪಾಕಟಾಕ್ಷದ ಜೊತೆಗೆ ಜಗತ್ತನ್ನು ನೋಡುವ ಪರಿಕೂಡ ಬದಲಾಗಿದೆ.ಸಕಾರಾತ್ಮಕ ಬೆಳವಣಿಗೆ ಮಕ್ಕಳ ಭವಿಷ್ಯದ ಬುನಾದಿಯಾಗಬಲ್ಲದು…ಯಾಕೋ…ಎಲ್ಲವನ್ನೂ ನೋಡಿ ಅನುಭವಿಸುವ ಕ್ಷಣಗಳು ಮರೆಯಾಗುತ್ತಿವೆ..ನಾವು ನಮ್ಮೊಳಗೆ ಅಡಗಿರುವ ಮುಗ್ಧ ಮನಸ್ಸಿಗೆ ಒಂದಿಷ್ಟು ಜಾಗೃತಿ ತಂದಾಗ ಮಾತ್ರ..ತಲ್ಲಣಗಳ ನಡುವೆ ಚಿಂತನೆ ಒರೆಗೆ ಹಚ್ಚಬಹುದು..
ಒಟ್ಟಾರೆಯಾಗಿ ಹೇಳುವುದಾದರೆ,ಧರೆಯ ತುಂಬ ಝರಿಯ ಹರಿಸುವ ತಾಕತ್ತು ಆಗಸದ ತುಂಬ ಮೈಚಳಿಬಿಟ್ಟು ಹರವಿಕೊಂಡಿರುವ ಮೋಡಗಳಿಗೆ ಮಾತ್ರ.!ಯಾರು ಎಷ್ಟು ಹೇಳಿದರೂ,ಅದಕ್ಕೊಂದು ಬಣ್ಣ ಲೇಪನ,ಕೊನೆಗೊಂದು ಮೌನ. ಯಾರಿಗೂ ಪ್ರಪಂಚದ ಒಳಿತು ಬೇಕಿಲ್ಲ.ತನಗೊಂದು ಒಳಿತಾದರೆ ಸಾಕು…ತಾನು ಚೆನ್ನಾಗಿದ್ದರೆ ಸಾಕು!. ಈ ಸಾಕು ಎನ್ನುವ ಪದ ಅಂತ್ಯವಾಗುವುದೇ ಇಲ್ಲ. ಹೀಗಾಗಿ ದಿನದಿಂದ ದಿನಕ್ಕೆ ಮಂಜಿನಂತೆ ಪ್ರಕೃತಿ ಕರಗುತ್ತಿದೆ.ಕಾಂಕ್ರೀಟ್ ಕಾಡು ಮುಗಿಲಿನೆತ್ತರಕ್ಕೆ ಬೆಳೆದು ನಿಲ್ಲುತ್ತಿದೆ.ಟೇರಿಸ್ ಮೇಲೆ ಗಿಡ ಬೆಳೆಸುವ ಸಂಸ್ಕೃತಿ ದಾಪುಗಾಲಲ್ಲಿ ಬೆಳೆಯತ್ತಿದೆ.ನಮ್ಮ ಪೀಳಿಗೆ ಮುಂದೆ ಹೇಗೆಲ್ಲ ಬದುಕಬಹುದು ಎಂಬುದನ್ನು ಉಹಿಸಿದಷ್ಟು ನರಕ ವರ್ಗಾಯಿಸುತ್ತಿದ್ದೆವಲ್ಲ ಎಂಬ ನೋವು ಕಂಡು ಕಾಣದಂತೆ ಜೀವನ ಸವೆಸುತ್ತಿದ್ದೆವೆ.ಹೇಳಿದಷ್ಟು ಯಾವುದು ಸುಲಭವಲ್ಲ…ಪ್ರಯತ್ನ ನಮ್ಮದಾಗಬೇಕು ಅಷ್ಟೇ…
̲———————————–
ಶಿವಲೀಲಾ ಶಂಕರ್

ಶಿವಲೀಲಾ ಹುಣಸಗಿ ಶಿಕ್ಷಕಿಯಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸ.ಹಿ.ಪ್ರಾ ಶಾಲೆ ಅರಬೈಲ್ ದಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಣೆ.ಪ್ರಕಟಿತ ಕೃತಿಗಳು,ಬಿಚ್ಚಿಟ್ಟಮನ (ಕವನಸಂಕಲನ)ಬದುಕಂದ್ರೆ ಹೀಗೆನಾ? (ಕವನಸಂಕಲನ)ಗೋರಿಯ ಸುತ್ತ ಸಪ್ತಪದಿ ತುಳಿದಾಗ ( ಕಥಾಸಂಕಲನ)ಗಿರಿನವಿಲ ನೆನಪುಗಳು( ಪ್ರೇಮ ಲಹರಿಗಳು)
ಬಾಂಧವ್ಯದ ಮೆರಗು (ಅಂಕಣ ಬರಹ)ಬೊಗಸೆಯೊಳಗಿನ ಆಕಾಶ (ಅಂಕಣ ಬರಹ)ಸಂಕಲ್ಪೋತ್ಸವ ಕನ್ನಡ ನುಡಿಗವಿತೆಗಳು ( ಸಂಪಾದಕೀಯ ಕವನಸಂಕಲನ)ಚಿಣ್ಣರ ಕವಿತೆಗಳು ( ಸಂಪಾದಕೀಯ ಕವನ ಸಂಕಲನ)ಸಕಾಲ (ಅಂಕಣ ಬರಹ) ಬೇಲಿಯಾಚಿನ ಪಿಸುಮಾತು ( ಕವನ ಸಂಕಲನ).