*ಇಂಥವರು ನೆನಪಾದಾಗಲೆಲ್ಲ ನಿಟ್ಟುಸಿರೊಂದು ತಾನೇ ತಾನಾಗಿ ಹೊರಬರುತ್ತದೆ  ಸಾಕಿ
ಕಂಡಾಗಲೆಲ್ಲ ಗಂಟಲು ಕಟ್ಟಿ ಮಾತೆ ಮಥಿಸಿ ಮೌನ ಹೆಪ್ಪುಗಟ್ಟತ್ತದೆ ಸಾಕಿ

ಯಾರ ತಪ್ಪಿಗೆ ಯಾರ ಆಯುಷ್ಯಕ್ಕೆ ಯಾರು ಹೊಣೆ ಪಾಪ ಅವರು
ಕುಂಕುಮ ಹೂ ಬಳೆ ಕೊನೆಗೆ ನಸು ನಗೆಯು ಮರೀಚಿಕೆ ಯಾಗುತ್ತದೆ ಸಾಕಿ

ಸಂತೆಯಲ್ಲಿ ಮನೆಯ ಮಾಡಿ ಶಬ್ದಕ್ಕೆ ಹೆದರುವದು ಇದೆ ಯಲ್ಲ ಅದು ಕಡುಕಷ್ಟವದು
ಹದಿಬದೆಯ ಬಯಕೆಗಳ ತುಳಿದು ಹಸಿರುಟ್ಟು ಸಹ ಬರಡು ಬದುಕಾಗುತ್ತದೆ ಸಾಕಿ

ಫಲ ಪುಷ್ಪ ಹೂ ಬಿಡುವ ಹಸಿರು ಮನವು ಸಹ ಕಂಬನಿಗೆ ಕಾರಣವಾಗುತ್ತದೆ
ಅಮಾಯಕನಿಗೆ ಬದುಕೇಕೆ ಇಷ್ಟು ಕ್ರೂರವಾಗಿ ಪರಿಕ್ಷೆಗೊ ಡ್ಡುತ್ತದೆ ಸಾಕಿ

‘ಹೊನ್ನಸಿರಿ’ ಅಕ್ಕ ಮೀರಾಳಂತೆ ಬದುಕು ಅಂತ ಹೇಳುವದು ಬಹು ಸುಲಭ ಸಾಕಿ
ಬಯಕೆಗಳ ಅದುಮಿ ಬರೀ ಬಾನಂಗಳದ ಚುಕ್ಕಿ ನೋಡುವ ದು ಕಡುಕಷ್ಟವಾಗುತ್ತದೆ ಸಾಕಿ*

*****

 ನೊಂದವರ ನೋವಿಗೆ ಸಾಥಿಯಾಗುವ ಡಾ.ಸಿದ್ಧರಾಮ ಹೊನ್ಕಲ್‌ರ ಗಜಲ್

ಮನಕೆ ಮುಸುಕಿದ ಆ ಮಾಯೆಯ ತೆರೆ ನೀ ಸರಿಸಿಕೊ
ಭಾವದಲೇ ಬದುಕಿದ ಈ ಹೃದಯವ ನೀ ಉಳಿಸಿಕೊ

ಎಂದು ತಿಳಿವಿನ ಬೆಳಕು ಬೀರುವ ಸಾಲು ಬರೆಯುವ ಹಿರಿಯ ಸಾಹಿತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಸಿದ್ಧರಾಮ ಹೊನ್ಕಲ್ ಅವರು ಅಪಾರವಾದ ಸಾಹಿತ್ಯ ಸಾಧನೆ ಮಾಡಿದವರು.ಕಲ್ಯಾಣ ಕರ್ನಾಟಕದ ಶಹಾಪೂರದವರಾಗಿರುವ ಶ್ರೀಯುತರು ವಿಭಾಗೀಯ ಆರೋಗ್ಯ ಶಿಕ್ಷಣಾಧಿಕಾರಿಯಾಗಿ, ಅದರ ಸಮಾನಾಂತರ ಸಮಾಜಶಾಸ್ತ್ರ ಬೋಧಕರಾಗಿ ಕಾರ್ಯ ನಿರ್ವಹಿಸಿದವರು. ೬೫ ರಷ್ಟು ಕೃತಿಗಳನ್ನು ಕನ್ನಡಕ್ಕೆ ನೀಡಿದ ಡಾ.ಹೊನ್ಕಲ್ಲರು  ಕಾವ್ಯ, ಕಥೆ, ಜೀವನ ಕಥನಗಳು, ಪ್ರವಾಸಕಥನಗಳು, ಗಜಲ್, ಶಾಯಿರಿ, ಹೈಕು ,ಲಲಿತಪ್ರಬಂಧಗಳು, ವಿಮರ್ಶೆ, ಸಂಪಾದನೆ ಹೀಗೆ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಸಾಕಷ್ಟು ಕೃತಿಗಳನ್ನು ರಚಿಸಿದವರು.

    ಗುಲ್ಬರ್ಗಾವಿ.ವಿಯ ಕಥಾಸ್ಪರ್ಧೆಯಲ್ಲಿ ಚಿನ್ನದಪದಕ, ಸತತ ಆರು ಸಲ ಅದೇ ವಿ.ವಿ ಕಥೆ ಸ್ಪರ್ಧೆಯ ಪುರಸ್ಕಾರ, ಮೂರು ಬಾರಿ ತಮ್ಮ ಸಾಹಿತ್ಯ ಕೃತಿಗಳಿಗಾಗಿ ರಾಜ್ಯೋತ್ಸವ ಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀವಿಜಯ ,ಅತ್ತಿಮಬ್ಬೆ ಪ್ರಶಸ್ತಿ, ಸಂಚಯ, ಸಂಕ್ರಮಣ ಪ್ರಶಸ್ತಿ, ವಿಶ್ವ ಜ್ಯೋತಿ ಪ್ರಶಸ್ತಿ, ಅಮ್ಮ ಪುರಸ್ಕಾರ, ,ಸಾಹಿತ್ಯ ಸಾರಥಿ ಪುರಸ್ಕಾರ.. ಹೀಗೆ ಅಸಂಖ್ಯಾತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಇಷ್ಟೆಲ್ಲ ಇದ್ದರೂ ಗಜಲ್ ಅವರ ಪ್ರೀತಿಯ ಕಾವ್ಯ ಪ್ರಕಾರ. ಅವರನ್ನು ಹಿರಿಯ ಗಜಲ್ ಕವಿ ಹೈತೋ ಅವರು “ಗಜಲ್ ಲೋಕದ ದೈತ್ಯ ಪ್ರತಿಭೆ” ಎಂದು ಕರೆದಿರುವದು ಸರಿಯಾಗಿಯೆ ಇದೆ. ಅದಕ್ಕೆ ಕಾರಣ ಒಂದೆ ವರ್ಷದಲ್ಲಿ ನಾಲ್ಕು ಗಜಲ್ ಸಂಕಲನಗಳನ್ನು ಪ್ರಕಟಿಸಿದ ಸಾಹಸಿಗಳು ಅವರು. ಈಚೆಗೆ ಅವರ ಸಮಗ್ರ ಗಜಲ್ ಸಂಕಲನ ‘ನಿನ್ನ ಜೊತೆ ಜೊತೆಯಲಿ’ ಎಂಬುದು ಕೂಡ ಪ್ರಕಟವಾಗಿದೆ.   ಅವರ ಒಂದು ಗಜಲ್ ಇವತ್ತಿನ ಗಜಲ್ ಗಂಧ ಸಂಚಿಕೆಗಾಗಿ  ಇಲ್ಲಿದೆ.

*ಇಂಥವರು ನೆನಪಾದಾಗಲೆಲ್ಲ ನಿಟ್ಟುಸಿರೊಂದು ತಾನೇ ತಾನಾಗಿ ಹೊರಬರುತ್ತದೆ  ಸಾಕಿ
ಕಂಡಾಗಲೆಲ್ಲ ಗಂಟಲು ಕಟ್ಟಿ ಮಾತೆ ಮಥಿಸಿ ಮೌನ ಹೆಪ್ಪುಗಟ್ಟತ್ತದೆ ಸಾಕಿ

ಯಾರ ತಪ್ಪಿಗೆ ಯಾರ ಆಯುಷ್ಯಕ್ಕೆ ಯಾರು ಹೊಣೆ ಪಾಪ ಅವರು
ಕುಂಕುಮ ಹೂ ಬಳೆ ಕೊನೆಗೆ ನಸು ನಗೆಯು ಮರೀಚಿಕೆ ಯಾಗುತ್ತದೆ ಸಾಕಿ

ಸಂತೆಯಲ್ಲಿ ಮನೆಯ ಮಾಡಿ ಶಬ್ದಕ್ಕೆ ಹೆದರುವದು ಇದೆ ಯಲ್ಲ ಅದು ಕಡುಕಷ್ಟವದು
ಹದಿಬದೆಯ ಬಯಕೆಗಳ ತುಳಿದು ಹಸಿರುಟ್ಟು ಸಹ ಬರಡು ಬದುಕಾಗುತ್ತದೆ ಸಾಕಿ

ಫಲ ಪುಷ್ಪ ಹೂ ಬಿಡುವ ಹಸಿರು ಮನವು ಸಹ ಕಂಬನಿಗೆ ಕಾರಣವಾಗುತ್ತದೆ
ಅಮಾಯಕನಿಗೆ ಬದುಕೇಕೆ ಇಷ್ಟು ಕ್ರೂರವಾಗಿ ಪರಿಕ್ಷೆಗೊ ಡ್ಡುತ್ತದೆ ಸಾಕಿ

‘ಹೊನ್ನಸಿರಿ’ ಅಕ್ಕ ಮೀರಾಳಂತೆ ಬದುಕು ಅಂತ ಹೇಳುವದು ಬಹು ಸುಲಭ ಸಾಕಿ
ಬಯಕೆಗಳ ಅದುಮಿ ಬರೀ ಬಾನಂಗಳದ ಚುಕ್ಕಿ ನೋಡುವ ದು ಕಡುಕಷ್ಟವಾಗುತ್ತದೆ ಸಾಕಿ*

    ಬಾಳಿನ ಕ್ರೂರ ತಿರುವುಗಳಿಗೆ ಸಿಕ್ಕು ಬದುಕನ್ನು ಹಾಳುಮಾಡಿಕೊಂಡ ಅಮಾಯಕ ಸಂತತಿ ವೇಶ್ಯಾವಾಟಿಕೆ ಯಲ್ಲಿ ಬದುಕುವಂಥವರದು. ಅದು ಅವರು ಮಾಡಿದ ತಪ್ಪಿಗಾಗಿಯೋ ಅಥವ ಇನ್ಯಾರಾದರೂ  ದೂಡಿದ ತಪ್ಪಿನಿಂದಾಗಿಯೋ ತಿಳಿದೋ, ಅಥವಾ ತಿಳಿಯದೆಯೋ ಪಾಪಕೂಪಕ್ಕೆ ಬಿದ್ದ ಅಸಹಾಯಕರು ಅವರು. ಅಲ್ಲಿಂದ ಎದ್ದು ಬರಬೇಕೆಂದರೂ ಸಾಧ್ಯವಾಗದ ಅನಿವಾರ್ಯತೆ ಅವರದು. ಇಂಥಹ ನೋವಿಗೊಳಗಾದ ಜೀವಿಗಳನ್ನು ಕಂಡು ಮನಮಿಡಿದ ಗಜಲ್ ಕವಿ ಹೊನ್ಕಲ್‌ರು ‘ಇಂಥವರು ನೆನಪಾದಾಗಲೆಲ್ಲ ನಿಟ್ಟುಸಿರೊಂದು ತಾನೇ ತಾನಾಗಿ ಹೊರಬರುತ್ತದೆ ಸಾಕಿ’ ಎನ್ನುತ್ತಾರೆ. ಅವರನ್ನು ಕಂಡು ಕವಿಗೆ ಗಂಟಲು ಕಟ್ಟಿ ಅಳು ನುಗ್ಗಿ ಬರುತ್ತದೆ. ನೊಂದ ಜೀವಿಗಳಿಗೆ ಕವಿಯಲ್ಲದೇ ಇನ್ಯಾರು ಸಾಂತ್ವನ ತೋರಿಯಾರು?

  ನಿಜವಾಗಿ ಅವರ ಈ ಸ್ಥಿತಿಗೆ ಯಾರು ಕಾರಣರು? ಇದಕ್ಕೆ ಉತ್ತರ ಹುಡುಕುವದು ಕಷ್ಟ ಎನ್ನುವ ಡಾ.ಹೊನ್ಕಲ್‌ರು ‘ಯಾರ ತಪ್ಪಿಗೆ ಯಾರು ಹೊಣೆ ?’ ಎನ್ನುತ್ತ  ಅವರಿಗೆ ‘ಕುಂಕುಮ ಹೂ ಬಳೆ ಕೊನೆಗೆ ನಸು ನಗೆಯು ಮರೀಚಿಕೆಯಾಗುತ್ತದೆ’ ಎನ್ನುತ್ತಾರೆ. ಅಂದರೆ ಅವರು ಲೋಕದ ಕಣ್ಣಲ್ಲಿ ಸುಮಂಗಲಿಯರಾಗಿ ಬದುಕುವದು ಆಗುತ್ತಿಲ್ಲ ಎಂದು ನೋವು ವ್ಯಕ್ತ ಪಡಿಸುತ್ತಾರೆ.

ಲೋಕದ ಎದುರಿಗೆ ತಮ್ಮ ಮಾನ ಅಡವಿಟ್ಟ ಮೇಲೆ ಅವರು ಹೆದರಿದರೆ ಬಾಳು ನಡೆಯದು .ಆದ್ದರಿಂದಲೇ ‘ಸಂತೆಯಲ್ಲಿ ಮನೆಯ ಮಾಡಿದ ಮೇಲೆ ಶಬ್ದಕ್ಕೆ ನಾಚಿದರೆ ಹೇಗೆ ‘ಎಂಬ ಅಕ್ಕನ ವಚನದ ಒಂದು ಸಾಲು ಅರ್ಥಪೂರ್ಣವಾಗಿ  ಒಂದು ಮಿಶ್ರಾ ಆಗಿ ಬಳಸಿಕೊಳ್ಳುತ್ತಾರೆ .ಆದರೆ ಅದು ಕಷ್ಟ ಎನ್ನುವ ಗಜಲ್ ಕವಿ ಅದಕ್ಕೆ ಸೂಕ್ತ ಸಾಕ್ಷಿ ರೂಪದಲ್ಲಿ ‘ಹದಿಬದೆಯ ಬಯಕೆಗಳ ತುಳಿದು ಹಸಿರುಟ್ಟು ಸಹ ಬರಡು ಬದುಕಾಗುತ್ತದೆ’ ಎನ್ನುವದನ್ನು ಸಾಕ್ಷಿಯಾಗಿ ಬಳಸುತ್ತಾರೆ.  ಏಕೆಂದರೆ ಅಕ್ಕನ ಕಾಲಕ್ಕೆ ಹಾಗೆ ಬದುಕಬಹುದಿತ್ತೇನೋ .ಇವರು ಹದಿಬದೆಯಾಗಲು ತಕ್ಕವರು ಮತ್ತು ಆಗಬೇಕಾಗಿದ್ದವರು ಕೂಡ. ಆದರೆ ಇದು ಸದ ಮುತ್ತೈದೆಯರಾಗಿದ್ದರೂ ಮದುವೆಯಾದ ಸುಮಂಗಲಿಯರ ಸೌಭಾಗ್ಯ ಅವರಿಗೆ ದಕ್ಕದೆ ಅವರ ಬದುಕು ಯೌವನದ ಸುಖ ಅನುಭವಿಸಿದರೂ ಅದು ಬರುಡಾಗಿಯೇ ಉಳಿದು ಬಿಡುತ್ತದೆ,  ಗಜಲ್ ನ ಈ ಮಿಸ್ರಾ ಅವರ ಅಂತರಂಗದ ನೋವಿಗೆ ದ್ವನಿಯಾಗಿದೆ.

ಅವರ ಬಯಕೆಗಳೇ ಅವರಿಗೆ ನೋವು ಕೊಡುವ ಸಂಗತಿ ಗಳಾಗುವದನ್ನು ಗಜಲ್ಕಾರ ಎತ್ತಿ ಹೇಳುತ್ತಾರೆ . ಅಮಾಯಕ ರಾದ ಆ ಜೀವಗಳು ತಾವು ಅನುಭವಿಸಬೇಕೆಂದ ಸಂತೋಷವ ಬಯಸಲು  ಬಳಲಬೆಕಾಗುತ್ತದೆ ಅವರಿಗೆ ಸಮಾಜ ನೀಡುವ ‘ಫಲ ಪುಷ್ಪ ಹೂ ಬಿಡುವ ಹಸಿರು ಮರವು’  ಸಹ ಕಂಬನಿಗೆ ಕಾರಣವಾಗುತ್ತದೆ;.
ಅವರನ್ನು ಕುರಿತು  ‘ಅಮಾಯಕನಿಗೆ ಬದುಕೇಕೆ ಇಷ್ಟು ಕ್ರೂರವಾಗಿ ಪರಿಕ್ಷೆಗೊಡ್ಡುತ್ತದೆ ಸಾಕಿ’ಎಂದು ಪ್ರಶ್ನಿಸುವ ಮೂಲಕ ಗಜಲ್ ಅವರಿಗೆ ಇಂಥ ಬದುಕು ಏಕೆ  ದಕ್ಕಿತು ಎಂದು ವ್ಯಥೆ ಪಡುತ್ತದೆ.

ನಾವು ಬಹಳಷ್ಟು ಸಲ ಅಕ್ಕ ಮೀರಾಳಂತೆ ಕಾಲ್ಪನಿಕ ಪ್ರೀತಯನ್ನೇ ಮಹಾ ಎಂದು ತಿಳಿದು ಬಿಡುತ್ತೇವೆ. ಆದರೆ ಅದು ಎಲ್ಲರಿಗೂ ಅಸಾಧ್ಯ. ಬಯಕೆಗಳಿರುವ ಮಾನವರಿಗಂತೂ ಹಾಗೆ ಇರಲು ಅಶಾಧ್ಯ ಎನ್ನುವ ಗಜಲ; ಮಾನವೀಯ ನೆಲೆಯಲ್ಲಿ ಆಲೋಚಿಸಿದ ಕಾರಣ ಗಜಲ್  ತುಂಬ ಇಷ್ಟವಾಗುತ್ತದೆ. ಆದ್ದರಿಂದಲೆ ಗಜಲ್ ನ ಮಕ್ತಾದಲ್ಲಿ

‘ಹೊನ್ನಸಿರಿ’ ಅಕ್ಕ ಮೀರಾಳಂತೆ ಬದುಕು ಹೇಳುವದು ಬಹು ಸುಲಭ ಸಾಕಿ
ಬಯಕೆಗಳ ಅದುಮಿ ಬರೀ ಬಾನಂಗಳದ ಚುಕ್ಕಿನೋಡು ವದು ಕಡುಕಷ್ಟವಾಗುತ್ತದೆ ಸಾಕಿ

ಎಂದು ಹೇಳುತ್ತ ಬಯಕೆಗಳ ಅದುಮಿಡಲು ಸಾಮಾನ್ಯ ರಿಂದ ಅಸಾಧ್ಯ ಎಂಬ ಸತ್ಯದ ಪರ ನಿಲ್ಲುತ್ತಾರೆ. ಬಯಕೆಗಳ ಅದುಮಿ ಬಾನಂಗಳದ ಚುಕ್ಕಿ ನೋಡುವದು ಕಡುಕಷ್ಟ ಎನ್ನುವ ರೂಪಕ ಗಜಲ್ ಗೊಂದು ಅರ್ಥಪೂರ್ಣ ಮುಕ್ತಾಯ ಕೊಡುತ್ತದೆ.

    ಗಜಲ್ ಎನ್ನುವದು ಸಮಾಜದಲ್ಲಿ ನೊಂದಿರುವ ಜೀವಗಳಿಗೆ ಸಾಂತ್ವನ ಹೇಳುವ ಸಹಜೀವವಾಗಬೆಕು ಎಂದು ದೃಡವಾಗಿ ನಂಬಿರುವವರು ಡಾ.ಸಿದ್ಧರಾಮ  ಹೊನ್ಕಲ್ ಅವರು . ಆದ್ದರಿಂದಲೇ ಇಲ್ಲಿ ಸಮಾಜದಲ್ಲಿ ತುಂಬ ನೋವಿಗೆ ಒಳಗಾಗಿರುವ ವರ್ಗವೊಂದರ ನೋವನ್ನು ಅನುಭವಿಸಿ ಗಜಲಾಗಿಸಿದ ಅವರ ಸಹೃದಯತೆಗೆ ಓದುಗರದೊಂದು ಸಲಾಮು ಸಲ್ಲಲೇಬೇಕು.


Leave a Reply

Back To Top