ವ್ಯಕ್ತಿ ವಿಶೇಷ
ಕೇಂದ್ರ ಸಾಹಿತ್ಯ ಅಕಾಡೆಮಿ ಉತ್ಸವ.
ದೆಹಲಿಯಲ್ಲಿ ತಮ್ಮ ಕಥೆ
ಹೇಳಲಿರುವ
ಡಾ.ಸಿದ್ಧರಾಮ ಹೊನ್ಕಲ್.

ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಇಡೀ ಏಷಿಯಾ ಖಂಡದಲ್ಲಿಯೇ ಬಹುದೊಡ್ಡ ಪ್ರಮಾಣದಲ್ಲಿ ದಿನಾಂಕ 7-3-25 ರಿಂದ ದಿನಾಂಕ 12-3-25 ವರೆಗೆ ನಡೆವ 6 ದಿನದ ಅಂತರಾಷ್ಟೀಯ ಸಾಹಿತ್ಯ ಉತ್ಸವದಲ್ಲಿ ಕರ್ನಾಟಕದಿಂದ ಕಥೆಗಾರ ಡಾ.ಸಿದ್ಧರಾಮ ಹೊನ್ಕಲ್ ಅವರು ತಮ್ಮ ಕಥೆಯೊಂದನ್ನು ದಿನಾಂಕ 12-3-2025 ರಂದು ಮಧ್ಯಾಹ್ನ ನಡೆವ ಬಹುಭಾಷಾ ಕಥಾಗೋಷ್ಠಿಯಲ್ಲಿ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಓದಲು ಆಹ್ವಾನಿತರಾಗಿದ್ದಾರೆ. ಒಟ್ಟು ಆರು ದಿನ ನಡೆಯಲಿರುವ ಈ ಸಾಹಿತ್ಯ ಉತ್ಸವದಲ್ಲಿ ದೇಶ ವಿದೇಶದ ಎಲ್ಲಾ ಭಾಗಗಳಿಂದ ಖ್ಯಾತ ನಾಮರಾದ ಕೇವಲ 500 ಜನ ಲೇಖಕ ಲೇಖಕಿಯರು ಭಾಗವಹಿಸಲಿದ್ದಾರೆ.ಅನೇಕ ಮಹತ್ವದ ವಿಷಯಗಳ ಕುರಿತು ವಿಚಾರ ಸಂಕಿರಣ, ಕವಿಗೋಷ್ಠಿ, ಕಥಾ ಗೋಷ್ಠಿ ಹೀಗೆ ಹತ್ತಾರು ಬಗೆಯ ವೈವಿಧ್ಯಮಯ ಹಾಗೂ ಚಿಂತನಾ ಪೂರ್ಣ ಗೋಷ್ಠಿಗಳು ನಡೆಯಲಿವೆ.




ಡಾ.ಸಿದ್ಧರಾಮ ಹೊನ್ಕಲ್ ಅವರು ಮೂಲಭೂತವಾಗಿ ಒಬ್ಬ ಕಥೆಗಾರ ಆಗಿದ್ದು ನಾಲ್ಕು ಕಥಾ ಸಂಕಲನ,ಏಳು ಪ್ರವಾಸ ಕಥನ ಪ್ರಕಟಿಸಿದ್ದು ನಾಡಿನ ಪ್ರಮುಖ ಕಥೆಗಾರರಲ್ಲಿ ಒಬ್ಬರಾಗಿ ಗುರ್ತಿಸಿಕೊಂಡಿದ್ದಾರೆ. ಇವರ *ಕಾಡು, ಕತ್ತಲನೆಲದ ಕಪ್ಪುಕಥೆ, ಈ ಭೂಮಿ ಯಾರದು?, ಮತ್ತೆ ಮಳೆ ಹೋಯ್ಯುತ್ತಿದೆ ; ಭೂಮಿ ಕರೆಯುತ್ತಿದೆ. ಹೊಸದಿಕ್ಕಿನೆಡೆಗೆ..ಹೀಗೆ 5-6 ಕಥೆಗಳು ಗುಲ್ಬರ್ಗಾ ವಿವಿಯಲ್ಲಿ, ರಾಯಚೂರು ವಿವಿಯಲ್ಲಿ, ಕೃಷ್ಣದೇವರಾಯ ವಿವಿಯಲ್ಲಿ, ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ, ಶ್ರೀ ಶರಣಬಸವೇಶ್ವರ ವಿವಿಯಲ್ಲಿ ಮತ್ತು ಅನೇಕ ಸ್ವಾಯತ್ತ ಸರಕಾರಿ ಪದವಿ ಕಾಲೇಜಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಠ್ಯ ಆಗಿ ಬೋಧಿಸಲ್ಪಡುತ್ತಿವೆ.
ಕಥೆ, ಪ್ರವಾಸ ಕಥನ,ಜೀವನ ಕಥನ,ಲಲಿತ ಪ್ರಬಂಧ, ಕವನ, ಹನಿಗವನ, ಗಜಲ್, ಹೈಕು, ಶಾಯಿರಿ, ಸಂಶೋಧನೆ, ಸಂಪಾದನೆ ಒಳಗೊಂಡಂತೆ ಒಟ್ಟು 70 ಕ್ಕಿಂತ ಹೆಚ್ಚು ವೈವಿಧ್ಯಮಯ ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಇವರು ಮೂಲಭೂತವಾಗಿ ಕಲ್ಯಾಣ ಕರ್ನಾಟಕದವರು. ಇಂತಹ ಸರಳ ಸಾಮಾನ್ಯ ಜಾನಪದಿಯ ಹಿನ್ನೆಲೆಯ ಗ್ರಾಮೀಣ ಕಥೆಗಾರ,ಲೇಖಕನನ್ನು ಗುರುತಿಸಿ ಅವಕಾಶ ನೀಡಿದ ಕೇಂದ್ರ ಸಾಹಿತ್ಯ ಅಕಾಡೆಮಿಗೆ ಅಭಿನಂದನೆಗಳು ಎಂದು ಪತ್ರಿಕಾ ಹೇಳಿಕೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಕಾವೆಂಮ ಶ್ರೀ , ಡಾ.ಮಲ್ಲಿಕಾರ್ಜುನ ಮಾನ್ಪಡೆ, ಅಜ್ಮೀರ್ ನಂದಾಪುರ, ಮಹಾದೇವ ಬಸರಕೋಡ, ಲೇಖಕ ಪ್ರಭುಲಿಂಗ ನೀಲೂರೆ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ.ಎಚ್. ನಿರಗುಡಿ, ಡಾ.ಚಿ.ಸಿ.ನಿಂಗಣ್ಣ, ಕಸಾಪ ಶಹಾಪುರದ ನಿಕಟಪೂರ್ವ ಅಧ್ಯಕ್ಷರಾದ ಸಿದ್ಧಲಿಂಗಣ್ಣ ಆನೇಗುಂದಿ, ಬಸವರಾಜ ಶಿಣ್ಣೂರ, ಕಸಾಪ ಅಧ್ಯಕ್ಷರಾದ ಡಾ.ರವೀಂದ್ರ ಹೊಸಮನಿ, ಡಾ.ರಾಘವೇಂದ್ರ ಹಾರನಗೇರಾ, ಸಗರನಾಡು ಸಂಸ್ಥೆಯ ಪ್ರಕಾಶ್ ಅಂಗಡಿ ಕನ್ನೆಳ್ಳಿ, ಯಾದಗಿರಿ ಕಸಾಪ ಅಧ್ಯಕ್ಷರಾದ ಸಿದ್ದಪ್ಪ ಹೊಟ್ಟಿಯವರು ಮುಂತಾದ ಅನೇಕ ಲೇಖಕ ಮಿತ್ರರು ಅಭಿನಂದಿಸಿದ್ದಾರೆ.

