ಕಾವ್ಯ ಸಂಗಾತಿ
ಲೀಲಾಕುಮಾರಿ ತೊಡಿಕಾನ
ಮಗಳೆಂದರೆ ಅಷ್ಟೇ..ಸಾಕೇ?

ಕಿರುಚಾಟ ನರಳಾಟ ಒದ್ದಾಟದ
ವೇದನೆಗೆ ಮುಕ್ತಿ ನೀಡುತ್ತಾ
ಹುಟ್ಟಿದ್ದಾಳೆ ಮಗಳು..
ಮಗಳೆಂದರೆ ಅಷ್ಟೇ ಸಾಕೆ?
ಅರಳೋ ಮುಗುಳು
ಜೀವಕ್ಕೆ ಪುಷ್ಟಿ ನೀಡೋ ಅಗುಳು
ಬೇಗುದಿಯ ಬದುಕಿಗೆ ತಂಪನೀವ ಬೆಳದಿಂಗಳು
ಬಾನಂಗಳದ ಚುಕ್ಕಿಯೊಂದು
ಮಿನುಮಿನುಗುತಾ ನನ್ನೆದುರು
ಬಿದ್ದಂತೆ ಪುಳಕ!
ಕ್ಷಣದೊಳಗೆ ಎಳೆಕಂದನ ಕೈಲಿಡಿದು
ತಿರುತಿರುಗಿಸಿ ನೋಡೋ ತವಕ

ಮೆತ್ತಿಕೊಂಡಿದ್ದು ನೆತ್ತರಲ್ಲ
ಆಕೆ ಬದುಕಿಗೆ ಬಳಿದ ಬಣ್ಣ
ಅದರಲ್ಲೇ ಸಂಭ್ರಮದ ಜಳಕ
ಗೆಜ್ಜೆತೊಟ್ಟ ಪುಟ್ಟ ಪುಟ್ಟ ಹೆಜ್ಜೆಯ
ಝಲ್ ಝಲ್ ನಾದ
ಚೆಂದ ಚೆಂದದ ಉಡುಪು ಧರಿಸಿದ
ಕಂದನ ಅಂದಕೆ ಹದವಾಗಿ ಮುದಗೊಂಡು
ಕದ ತೆರೆದ ಹೃದಯ..
ಗೀಚುಗೀಚುತ್ತಾ ಗೋಡೆಯೆಲ್ಲ ಬಣ್ಣ
ನಿತ್ಯ ಹೋಳಿ; ಬದುಕೆಲ್ಲ ರಂಗು ರಂಗು
ಕಪ್ಪು ಬಿಳುಪು ದಿನಗಳೀಗ ವರ್ಣರಂಜಿತ!
ಆಕೆಗೋ ಎಲ್ಲವನ್ನು ಎಳೆದೆಳೆದು
ಮುಟ್ಟಿ ಮುಟ್ಟಿ ಪರೀಕ್ಷಿಸೋ ಹಂಬಲ
ಹೀಗೇ ಇರಲಿ ಕಲಿಯುವಿಕೆಯ ಕ್ರಿಯೆ
ನಿತ್ಯನಿರಂತರ..
ಮತ್ತೇ ಮಗುವಾಗಿದ್ದೇನೆ ನಾನೂ
ತೊದಲು ನುಡಿಯುತ್ತಾ
ಕಲಿತದ್ದು ಎಷ್ಟೋ..ಅವಳಿಂದ
ಮಗಳೆಂದರೆ ಅಷ್ಟೇ ಸಾಕೇ?
ಬಿದ್ದರೂ ಬಿಡದೆ ಮೇಲೇಳುವ
ಛಲ ಕಲಿಸಿದ ಗುರು ಈಕೆ!!
———————————————-
ಲೀಲಾಕುಮಾರಿ ತೊಡಿಕಾನ
