
ಅಂಕಣ ಸಂಗಾತಿ
ಚಿಂತನೆಯ ಚಿಟ್ಟೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಸಣ್ಣ ಸಣ್ಣ ಆಸೆಗಳನ್ನು ಈಡೇರಿಸಿಬಿಡಿ..!

“ಬದುಕು ಜಟಕಾಬಂಡಿ ; ವಿಧಿ ಅದರ ಸಾಹೇಬ..” ಬದುಕು ನಮ್ಮ ಕೈಯಲ್ಲಿಲ್ಲ. ಬದುಕು ಹೇಗೆ ಬರುತ್ತದೆಯೋ ಹಾಗೆಯೇ ಸ್ವೀಕರಿಸಬೇಕು ಎನ್ನುವ ಮಾತುಗಳು ಇಂದು ಪ್ರಸ್ತುತ. ನಮ್ಮ ಮಕ್ಕಳು ತಂದೆ ತಾಯಿ ಬಂಧುಗಳು ಕುಟುಂಬದ ನಡುವೆ ಪ್ರೀತಿಯಿಂದ ಬೆರೆಯುತ್ತಲೇ ಬದುಕಬೇಕು. ಹಾಗಂತ ನಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಮತ್ತು ನಮ್ಮ ಸಾಧನೆಗಳನ್ನು ಮರೆಯಬಾರದು..! ನಾವು ಚಿಕ್ಕವರಿದ್ದಾಗ ಏನೇನೋ ಕನಸು ಕಂಡಿರುತ್ತೇವೆ. “ಅದನ್ನು ತಿನ್ನಬೇಕು…ಇದನ್ನು ತಿನ್ನಬೇಕು.. ಈ ಆಟಿಕೆ ಸಮಾಗ್ರಿ ಬೇಕು, ಕಂಡುಕೊಂಡ ವಸ್ತುಗಳ ಬಗ್ಗೆ ವ್ಯಾಮೋಹವಿರುತ್ತದೆ..!!
ಆದರೆ ಅಂದು ಬಡತನದಲ್ಲಿರುವ ನಮ್ಮ ತಂದೆ ತಾಯಿಗಳು ಅದನ್ನು ಕೊಡಿಸದೆ ಹೋಗಿರಬಹುದು. ಇನ್ನೊಬ್ಬರು ಅದನ್ನು ಅನುಭವಿಸುವಾಗ ನಮಗೆ ತುಂಬಾ ನೋವಾಗಿರಬಹುದು. ಮತ್ತು “ನನಗೆ ಸಿಗಲಿಲ್ಲವಲ್ಲ..” ಎನ್ನುವ ಯಾತನೆ ನಮ್ಮನ್ನು ಕಾಡುತ್ತಿತ್ತು. ಅದನ್ನು ನಮ್ಮ ಮನಸ್ಸಿನೊಳಗೆ ಇಟ್ಟುಕೊಂಡೆ ಕೊರಗುತ್ತಿರುತ್ತೇವೆ. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಮಕ್ಕಳಿಗೆ ಸಣ್ಣ ಸಣ್ಣ ಆಸೆಗಳನ್ನು ಈಡೇರಿಸಲು ಪ್ರಯತ್ನಿಸಬೇಕು ಎನ್ನುವ ಒಂದು ಎಳೆಯ ಸಾಕಲ್ಲವೇ..? ನಮ್ಮ ಕೌಟುಂಬಿಕದಲ್ಲಿ ಅನೇಕ ಒತ್ತಡಗಳಿರುತ್ತವೆ. ಹಣಕಾಸಿನ ತೊಂದರೆ ಎಲ್ಲವೂ ಇದ್ದೇ ಇರುತ್ತದೆ. ಆದರೆ ಇವೆಲ್ಲದರ ನಡುವೆ…ಮಕ್ಕಳ ಚಿಕ್ಕ ಚಿಕ್ಕ ಆಸೆಗಳು ಅವರಿಗೆ ಮನದಲ್ಲಿ ಮೂಡಿರುತ್ತವೆ. ಚಾಕ್ಲೇಟ್ ಕೊಡಿಸುವ, ಸಿನಿಮಾ ತೋರಿಸುವ, ಅವರಿಗೆ ಇಷ್ಟವಾದ ಪುಸ್ತಕಗಳನ್ನು ಕೊಳ್ಳುವ, ಅವರ ಗೆಳೆಯ ಅಥವಾ ಗೆಳತಿಯರೊಡನೆ ಬೆರೆಯಲು ಬಿಡುವ, ಮುಂದಿನ ಬದುಕಿಗೆ ಆಧಾರವಾಗುವ ಸೈಕಲ್ ಕೊಡಿಸುವ, ಅವರಿಷ್ಟಪಡುವ ಬಟ್ಟೆಯನ್ನು ಕೊಡಿಸುವ ದೊಡ್ಡತನ ನಮ್ಮದಾಗಿರಬೇಕು. ಮಕ್ಕಳ ಒಂದೊಂದು ಸಣ್ಣ ಆಸೆಗಳನ್ನು ನಾವು ಈಡೇರಿಸಿದರೆ, ಮಕ್ಕಳು ತುಂಬಾ ಖುಷಿ ಖುಷಿಯಾಗಿ ಬೆಳೆಯುತ್ತಾರೆ. ಹಾಗಂತ ಮಕ್ಕಳು ಕೇಳಿದ್ದೆಲ್ಲವನ್ನು ಕೊಡಿಸಬೇಕೆಂಬ ಇರಾದೆಯಲ್ಲ..! ಯಾವುದೇ ಒಂದು ವಸ್ತುವನ್ನು ಕೊಡಿಸುವಾಗಲು, ನಾವು ಅವರಿಗೆ ಸಮಯವನ್ನು ಕಾಯಿಸುವ ಕಾಯಕ ಮಾಡಬೇಕು. ಕಾಯಿಸಿ, ಕಾಡಿಸಿ, ಕೊಡಿಸಿದ ಒಂದು ವಸ್ತುವಿಗೆ ಬೆಲೆ ಜಾಸ್ತಿ..! ಹೇಳಿದ ಕೂಡಲೇ ಸಿಕ್ಕರೆ ಅದಕ್ಕೆ ಬೆಲೆ ಇರುವುದಿಲ್ಲ..!! ಹಾಗಾಗಿ ವಸ್ತುವನ್ನು ಕೊಡಿಸುವಾಗಲು ಸ್ವಲ್ಪ ಸಮಯ ತೆಗೆದುಕೊಂಡು ಕೊಡಿಸಿದರೆ ಆ ವಸ್ತುವಿನ ಬೆಲೆಯು ಆ ಮಗುವಿಗೆ ಅರ್ಥವಾಗುತ್ತದೆ.
ಒಂದು ಪೆನ್ನು, ಪೆನ್ಸಿಲ್.. ಯಾವುದೇ ಇರಲಿ, ಕೇಳಿದ ತಕ್ಷಣ ಕೊಡಿಸಬಾರದು. ಮತ್ತು ಅವುಗಳನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬಳಸುವ ವ್ಯವಧಾನವನ್ನು ಕೂಡ ಹೇಳಿಕೊಡಬೇಕು. ತಿನಿಸುಗಳಾದರೆ, ಯಾವುದನ್ನೂ ವೇಸ್ಟ್ ಮಾಡಿದಂತೆ, ತಿನ್ನುವಂತೆ ತಿಳಿಸಬೇಕು. ಆಗ ಮಗು ಖುಷಿ ಖುಷಿಯಾಗಿ ಅದನ್ನು ಅನುಭವಿಸುತ್ತದೆ. ಅವರ ಆತ್ಮತೃಪ್ತಿಯ ಸಂತೋಷವನ್ನು ಅನುಭವಿಸುವಂತೆ ಮಾಡಿ, ನಮ್ಮ ಬಾಲ್ಯದಲ್ಲಿ ನಾವು ಕಳೆದುಕೊಂಡ ಕ್ಷಣಗಳನ್ನು ಅವರ ಮೂಲಕ ಅನುಭವಿಸಬೇಕು.
ಇನ್ನೂ ವೃದ್ಧಾಪ್ಯದಲ್ಲಿರುವ ತಂದೆ-ತಾಯಿಗಳು ದುಡಿಯಲು ಅಸಹಾಯಕರಾಗಿತ್ತಾರೆ. ಬದುಕಿನುದ್ದಕ್ಕೂ ದುಡಿದು ಕೆಲವು ಕಾಯಿಲೆಗಳಿಗೆ ತುತ್ತಾಗಿರುವುದು ಅವರ ಬದುಕಿನ ಬೆವರಿಗೆ ಸಂದ ಕಾಯಿಲೆಗಳು. ಅವರ ನಿವೃತ್ತಿ ಅಂಚಿನಲ್ಲಿ ಕೆಲವು ಸಣ್ಣ ಸಣ್ಣ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ. ಬಹುತೇಕವಾಗಿ ಈ ಯೌವ್ವನದ ಉತ್ತುಂಗದಲ್ಲಿರುವಾಗ ಮಕ್ಕಳ ಲಾಲನೆ ಪಾಲನೆ, ಅವರಿಗೆ ಶಿಕ್ಷಣ ಕೊಡಿಸುವ, ಅವರಿಗೆ ನೌಕರಿ ಕೊಡಿಸುವ, ಸಹೋದರ ಸಹೋದರಿಯರಿಗೆ ಮದುವೆ ಮಾಡುವ..ಹೀಗೆ ಹಲವು ಜಂಜಾಟಗಳ ನಡುವೆ ತಮ್ಮ ವೈಯಕ್ತಿಕ ಸಣ್ಣ ಸಣ್ಣ ಆಸೆಗಳನ್ನು ಕೂಡ ಅವರು ಈಡೇರಿಸಿಕೊಂಡಿರುವುದಿಲ್ಲ.
“ಮುಂದೆ ನಮ್ಮ ಮಕ್ಕಳು ನಮ್ಮ ಆಸೆಗಳನ್ನು ಈಡೇರಿಸುತ್ತಾರೆ ಬಿಡಿ..”
ಎನ್ನುವ ಹೃದಯದೊಡಲ ವಿಶಾಲವಾದ ದೊಡ್ಡ ಮಾತುಗಳು. ಅವರ ವಿಶಾಲವಾದ ಹೃದಯದೊಳಗೆ ಬೆಚ್ಚಗಿರುತ್ತವೆ. ವಯಸ್ಸು ಆಗುತ್ತಾ ಆಗುತ್ತಾ.. ವೃದ್ಧಾಪ್ಯಕ್ಕೆ ಬಂದ ಅವರನ್ನು ನಾವು ಜತನದಿಂದ ಕಾಪಾಡಬೇಕು ಅನ್ನುವ ಕಾಳಜಿ ನಮ್ಮೊಳಗಿರಬೇಕು. ಅವರ ಸಣ್ಣ ಸಣ್ಣ ಆಸೆಗಳನ್ನು ನಾವು ಈಡೇರಿಸಬೇಕು. ಅವರಿಗೇನು ದೊಡ್ಡ ಆಸೆಗಳಿರುವುದಿಲ್ಲ. ಅಕ್ಕಪಕ್ಕದ ದೇವಸ್ಥಾನಗಳನ್ನು ನೋಡುವ, ತಮಗಿಷ್ಟವಾದ ಪ್ರೇಕ್ಷಣೀಯ ಸ್ಥಳವನ್ನು ನೋಡುವ, ತಮಗಿಷ್ಟವಾದ ಬಂಧುಗಳ ಮನೆಗೆ ಭೇಟಿಯಾಗುವ, ಇಂತಹ ಸಣ್ಣ ಆಸೆಗಳು ಮೊಳಕೆಯೊಡೆದಿರುತ್ತವೆ, ಅವರ ಕಾಯಿಲೆಗೆ ಔಷಧಿ, ಚಿಕಿತ್ಸೆ ಕೊಡಿಸುವ, ಮತ್ತೆ ಮತ್ತೆ ಪುನಃ ಬಾಲ್ಯ ಬಂದ ಹಾಗೆ ಅವರ ಸಣ್ಣ ಸಣ್ಣ ಆಸೆಗಳನ್ನು ನಾವು ಪೂರೈಸಬೇಕು.
ಮಕ್ಕಳು ವಯಸ್ಸಿಗೆ ಬಂದ ತಕ್ಷಣವೇ, “ನಾವಾಯಿತು ನಮ್ಮ ಕುಟುಂಬವಾಯಿತು ಮತ್ತು ನಮ್ಮ ಬದುಕಾಯ್ತು..” ಎನ್ನುವ ಒತ್ತಡದಲ್ಲಿ ಸಿಲುಕಿಕೊಂಡು ಮಕ್ಕಳ ಆಸೆಗಳನ್ನು, ಹಿರಿಯರ ಆರೈಕೆಯನ್ನು ಮರೆತುಬಿಡುವ ಇವತ್ತಿನ ಯಾಂತ್ರಿಕೃತ ಬದುಕು ನಮ್ಮದಾಗಿದೆ. ಇಂತಹ ಬಾಳು ಅನೇಕ ತೊಂದರೆಗಳನ್ನು ತಂದು ಹಾಕುತ್ತದೆ. ಸಂತೋಷ ಎನ್ನುವುದು ಹಣವಲ್ಲ, ಸಂಪತ್ತಲ್ಲ, ಕೆಲಸವಲ್ಲ ಅದೊಂದು ಮನಸ್ಥಿತಿ. ಅದನ್ನು ಪಡೆಯುವುದು ದುಡ್ಡಿನಿಂದಲ್ಲ, ಕೆಲಸದಿಂದಲ್ಲ, ಒಬ್ಬರಿಗೊಬ್ಬರು ಪ್ರೀತಿಯಿಂದ ಮಾತನಾಡುತ್ತಾ ನಗು ನಗುತ್ತಾ ಒಬ್ಬರ ನೋವಿಗೆ ಇನ್ನೊಬ್ಬರು ಸ್ಪಂದಿಸುವ ಮನೋಭಾವವಿದ್ದರೆ ಎಂತಹ ಕಷ್ಟಗಳು ಕರಗಿ ಅವು ಸಂತೋಷ ತರಬಲ್ಲವು. ಮಕ್ಕಳನ್ನು ಓದಿಸುವ, ನೌಕರಿ ಪಡೆದುಕೊಳ್ಳಲು ಒತ್ತಡ ಹಾಕುವ ಧಾವಂತದಲ್ಲಿ ಹಿರಿಯರನ್ನು ಆರೈಕೆ ಮಾಡುವುದನ್ನು ಮರೆತುಬಿಡಬಹುದು..!!
ಇವೆರಡರ ಮಧ್ಯದಲ್ಲಿ ಬದುಕನ್ನು ಅತ್ಯಂತ ತಾಳ್ಮೆಯಿಂದ ಸ್ವೀಕರಿಸುವ ಮನೋಭಾವ ನಮ್ಮೊಳಗಿರಬೇಕು. ಕುಟುಂಬದ ಎಲ್ಲರ ಸಣ್ಣ ಸಣ್ಣ ಆಸೆಗಳನ್ನು ನಮ್ಮ ಆರ್ಥಿಕ ಮಿತಿಯೊಳಗೆ ಪೂರೈಸಬೇಕು. ಆಗ ಮಾತ್ರ ಬದುಕಿನ ಸಂತೋಷಕ್ಕೆ ಪರವೇ ಇಲ್ಲ. ಹಾಗಂತ ದುಡಿಯುವದು ಮತ್ತು ನಮಗೆ ಬರುವ ಆದಾಯ ಸ್ವಲ್ಪ ಪ್ರಮಾಣವಿದ್ದು, ಕುಟುಂಬಸ್ಥರ ಸದಸ್ಯರ ಎಲ್ಲಾ ಆಸೆಗಳನ್ನು ಪೂರೈಕೆ ಮಾಡಿಕೊಳ್ಳಲಾಗುವುದಿಲ್ಲ. ಇರಲಿ, ಎಲ್ಲರ ಆಸೆಗಳನ್ನು ಪೂರೈಸಿ ಬಿಡೋಣ ಎಂದು ನಮ್ಮ ಆದಾಯಕ್ಕಿಂತ ಮೀರಿ ಸಾಲ ಮಾಡಿದ್ದಾದರೆ, ಸಾಲದಲ್ಲಿ ನಮ್ಮ ಬದುಕನ್ನು ಕಳೆದು ಹೋಗಿಬಿಡುತ್ತದೆ. ಬಡ್ಡಿ ಕಟ್ಟುವ ಒತ್ತಡ, ಸಾಲಕೊಟ್ಟವರ ಒತ್ತಡದಲ್ಲಿ ನಮ್ಮ ಸಂತೋಷವನ್ನು ಕಳೆದುಕೊಂಡು ಬಿಡುತ್ತೇವೆ. ನಮ್ಮ ಕುಟುಂಬದವರ ಸಣ್ಣ ಸಣ್ಣ ಆಸೆಗಳನ್ನು ಈಡೇರಿಸಬೇಕಾದರೆ, ಒಂದು ವಿವರವಾದ ಯೋಚನೆಯಿರಬೇಕು. ನಂತರ ಯೋಜನೆಯನ್ನು ಹಾಕಿಕೊಳ್ಳಬೇಕು. ಆಮೇಲೆ ಅದನ್ನು ಕಾರ್ಯರೂಪಕ್ಕೆ ತರಬೇಕು. ಮೊದಲು ಯಾರ ಆಸೆಗಳನ್ನು ಅಥವಾ ಇಷ್ಟಗಳನ್ನು ಪೂರೈಸಬೇಕು ಎನ್ನುವುದನ್ನು ಪಟ್ಟಿ ಮಾಡಿಕೊಳ್ಳಬೇಕು. ಭೌತಿಕವಾಗಿ, ಒಂದು ಸಲ ಹಿರಿಯರಿಗೆ ಪ್ರಾಧಾನ್ಯತೆ ಕೊಟ್ಟರೆ, ಇನ್ನೊಂದು ಸಲ ಮಕ್ಕಳಿಗೆ ಪ್ರಾಧಾನ್ಯತೆ ನೀಡಬೇಕು. ಅದಕ್ಕೆ ಸಂಬಂಧಿಸಿದಂತೆ ಹಣಕಾಸಿನ ವ್ಯವಸ್ಥೆ ಹೊಂದಿಸಲು ಯಾವ ರೀತಿಯ ಯೋಜನೆಯನ್ನು ಹಾಕಿಕೊಳ್ಳಬೇಕು ಎನ್ನುವುದನ್ನು ಮನಗಾಣಬೇಕು. ಅತ್ಯಂತ ಸೂಕ್ತ ಸಮಯದಲ್ಲಿ ಪ್ರವಾಸವಾಗಿರಬಹುದು, ತಿಂಡಿ ತಿನಿಸುಗಳಾಗಿರಬಹುದು, ಬೇರೆ ಬೇರೆ ಊರುಗಳಿಗೆ ಹೋಗುವ ಪ್ರಯಾಣವಾಗಿರಬಹುದು, ಸೂಕ್ತ ಸಮಯವನ್ನು ನೋಡಿಕೊಂಡು ಎಲ್ಲರೂ ಭಾಗವಹಿಸಲು ಅನುಕೂಲವಾಗಿರುವಂತೆ ಸೂಕ್ತ ವಾಹನದಲ್ಲಿ ಪ್ರಯಾಣವನ್ನು ಮಾಡಬೇಕು. ಹಿರಿಯರಾದರೆ, ಅವರ ಅಭಿರುಚಿ ಆಸಕ್ತಿಗೆ ಅನುಗುಣವಾಗಿ ದೇವಸ್ಥಾನಗಳು, ಆಧ್ಯಾತ್ಮಿಕ ಕೇಂದ್ರಗಳ ಆಯ್ಕೆ ಮಾಡಿಕೊಂಡರೆ, ಮಕ್ಕಳು ಮೋಜಿನ ಕೂಟಗಳಾದ ರೆಸಾರ್ಟ್, ಸರ್ಕಸ್ ಕಂಪನಿ, ಪ್ರಾಣಿ ಸಂಗ್ರಾಲಯ, ಪಕ್ಷಿಧಾಮ, ವಾಟರ್ ಗೇಮ್ಸ್, ನಿಸರ್ಗ ಮಡಿಲು.. ಮುಂತಾದ ಸ್ಥಳಗಳನ್ನು ವೀಕ್ಷಿಸಬೇಕು. ಬದುಕೆಂದರೆ ಕೇವಲ ಆಸ್ತಿಗಳಿಕೆಯಲ್ಲ ಮತ್ತು ಕೇವಲ ನಮ್ಮ ಕರ್ತವ್ಯಗಳನ್ನು ಪೂರೈಸುವದಷ್ಟೇ ಅಲ್ಲ, ಕುಟುಂಬದ ಸದಸ್ಯರ ಸಣ್ಣ ಸಣ್ಣ ಸಂತೋಷಗಳನ್ನು ನಾವು ಈಡೇರಿಸುತ್ತಾ, ಅವರ ಸಂತೋಷವನ್ನು ನಾವು ಪ್ರೀತಿಯಿಂದಲೇ ಸ್ವಾಗತಿಸಬೇಕು.
ಆತ್ಮೀಯರೇ,
ಬದುಕು ತುಂಬಾ ಸಣ್ಣದು. ಅದನ್ನು ಸಾಧ್ಯವಾದಷ್ಟು ಸಂತೋಷದಿಂದ ಕಳೆಯೋಣ. ನಮ್ಮ ಕುಟುಂಬದ ಸದಸ್ಯರ ಜೊತೆ ಜೊತೆಗೆ ನೆರೆಹೊರೆಯವರ ಸಂತೋಷಕ್ಕೂ ಕಾರಣವಾಗೋಣ. ಬದುಕಿನಲ್ಲಿ ಸಣ್ಣ ಆಸೆಯೊಂದು ಚಿಗುರಲಿ. ಅದನ್ನು ಇಡೇರಿಸುವ ಭರವಸೆ ನಮ್ಮದಾಗಲೆಂದು ಬಯಸೋಣ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
